ಕರ್ನಾಟಕ

karnataka

ವಿಶ್ವ ಅಥ್ಲೀಟ್ ಪ್ರಶಸ್ತಿಗೆ ನೀರಜ್​ ಚೋಪ್ರಾ ನಾಮನಿರ್ದೇಶನ: ಮತ ಹಾಕಿ ಭಾರತದ ಚಿನ್ನದ ಹುಡುಗನ ಗೆಲ್ಲಿಸಿ!

By ETV Bharat Karnataka Team

Published : Oct 13, 2023, 3:51 PM IST

ಗೋಲ್ಡನ್​ ಬಾಯ್​ ನೀರಜ್ ಚೋಪ್ರಾ 2023ರ ವರ್ಷದ ಪುರುಷರ ವಿಶ್ವ ಅಥ್ಲೀಟ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ.

Neeraj Chopra
Neeraj Chopra

ಹೈದರಾಬಾದ್: ಭಾರತದ 'ಚಿನ್ನದ ಹುಡುಗ' ಟೋಕಿಯೊ ಒಲಿಂಪಿಕ್ಸ್ ಜಾವೆಲಿನ್ ಥ್ರೋ ಚಾಂಪಿಯನ್ ನೀರಜ್ ಚೋಪ್ರಾ ಅವರನ್ನು ವಿಶ್ವ ಅಥ್ಲೆಟಿಕ್ಸ್ 2023ರ ವರ್ಷದ ಪುರುಷರ ವಿಶ್ವ ಅಥ್ಲೀಟ್ ಪ್ರಶಸ್ತಿಗೆ ಗುರುವಾರ ನಾಮನಿರ್ದೇಶನ ಮಾಡಲಾಗಿದೆ.

ಚೋಪ್ರಾ ಈ ವರ್ಷಾರಂಭದಲ್ಲಿ ಬುಡಾಪೆಸ್ಟ್‌ನಲ್ಲಿ ನಡೆದ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಡೈಮಂಡ್ ಲೀಗ್ 2023ರಲ್ಲಿ ಬೆಳ್ಳಿ ಗೆದ್ದರೆ, ಹ್ಯಾಂಗ್​ಝೌ ಏಷ್ಯನ್​ ಗೇಮ್ಸ್​ನಲ್ಲಿ ಚಿನ್ನ ಜಯಿಸಿದ್ದರು. ಇದಕ್ಕೂ ಮೊದಲು ವಿಶ್ವ ಚಾಂಪಿಯನ್‌ಶಿಪ್ ಮತ್ತು ಒಲಿಂಪಿಕ್ಸ್​​ನಲ್ಲಿ ಚಿನ್ನದ ಸಾಧನೆ ತೋರಿದ್ದರು. 2018ರ ಕಾಮನ್‌ವೆಲ್ತ್​ ಗೇಮ್ಸ್​​ ಮತ್ತು ಇಂಡೋನೇಷ್ಯಾದಲ್ಲಿ ನಡೆದ ಏಷ್ಯಾಡ್​ನಲ್ಲೂ ಬಂಗಾರಕ್ಕೆ ಮುತ್ತಿಕ್ಕಿದ್ದರು. ಏಸ್ ಶೂಟರ್ ಅಭಿನವ್ ಬಿಂದ್ರಾ ನಂತರ ಒಲಿಂಪಿಕ್ಸ್‌ನಲ್ಲಿ ವೈಯಕ್ತಿಕ ಚಿನ್ನದ ಪದಕ ಗೆದ್ದ ಎರಡನೇ ಭಾರತೀಯ ನೀರಜ್ ಚೋಪ್ರಾ.

ಭಾರತಕ್ಕಾಗಿ ಅನೇಕ ಐತಿಹಾಸಿಕ ಪ್ರಥಮಗಳನ್ನು ಸಾಧಿಸಿದ ಚೋಪ್ರಾ ಅವರೊಂದಿಗೆ 11 ಕ್ರೀಡಾಪಟುಗಳನ್ನು ವಿಶ್ವ ಅಥ್ಲೀಟ್ ಪ್ರಶಸ್ತಿಗೆ ಶಾರ್ಟ್​ಲಿಸ್ಟ್ ಆಗಿದ್ದಾರೆ. ಇದಕ್ಕೆ ವರ್ಲ್ಡ್ ಅಥ್ಲೆಟಿಕ್ಸ್ ಕೌನ್ಸಿಲ್ ಮತ್ತು ವರ್ಲ್ಡ್ ಅಥ್ಲೆಟಿಕ್ಸ್ ಫ್ಯಾಮಿಲಿ ಮತ ಹಾಕುತ್ತದೆ. ಅಷ್ಟೇ ಅಲ್ಲ, ಅಭಿಮಾನಿಗಳೂ ಮತ ಹಾಕಬಹುದು.

ಸ್ಪರ್ಧೆಯಲ್ಲಿ ಯಾರಿದ್ದಾರೆ?: ನೀರಜ್ ಚೋಪ್ರಾ, ಅಮೆರಿಕದ ಶಾಟ್‌ಪುಟ್‌ ವಿಶ್ವ ಚಾಂಪಿಯನ್‌ ರಯಾನ್ ಕ್ರೌಸರ್, ಸ್ವೀಡೆನ್​ನ ಪೋಲ್ ವಾಲ್ಟ್ ವಿಶ್ವ ಚಾಂಪಿಯನ್ ಮೊಂಡೋ ಡುಪ್ಲಾಂಟಿಸ್, ಮೊರಾಕೋದ ಸ್ಟೀಪಲ್‌ಚೇಸ್ ವಿಶ್ವ ಚಾಂಪಿಯನ್ ಸೌಫಿಯಾನ್ ಎಲ್ ಬಕ್ಕಲಿ, ನಾರ್ವೆಯ 5000 ಮೀ ವಿಶ್ವ ಚಾಂಪಿಯನ್ ಜಾಕೋಬ್ ಇಂಗೆಬ್ರಿಗ್ಟ್ಸೆನ್, ಕೀನ್ಯಾದ ಮ್ಯಾರಥಾನ್ ಚಾಂಪಿಯನ್ ಕೆಲ್ವಿನ್ ಕಿಪ್ಟಮ್, ಕೆನಡಾದ ಡೆಕಾಥ್ಲಾನ್ ವಿಶ್ವ ಚಾಂಪಿಯನ್ ಪಿಯರ್ಸ್ ಲೆಪೇಜ್, ಅಮೆರಿಕದ 100 ಮೀ ವಿಶ್ವ ಚಾಂಪಿಯನ್ ನೋಹ್ ಲೈಲ್ಸ್, ಸ್ಪೇನ್​​ನ ನಡಿಗೆ ವಿಶ್ವ ಚಾಂಪಿಯನ್ ಅಲ್ವಾರೊ ಮಾರ್ಟಿನ್, ಗ್ರೀಕ್​ನ ಮಿಲ್ಟಿಯಾಡಿಸ್ ಲಾಂಗ್ ಜಂಪರ್​ ಟೆಂಟೊಗ್ಲೋ ಮತ್ತು ನಾರ್ವೆಯ ಹರ್ಡಲ್ಸ್ ಅಥ್ಲೀಟ್​ ಕಾರ್ಸ್ಟನ್ ವಾರ್ಹೋಮ್.

ಮತ ಹಾಕುವ ವಿಧಾನ: ವರ್ಲ್ಡ್ ಅಥ್ಲೆಟಿಕ್ಸ್ ಕೌನ್ಸಿಲ್ ಮತ್ತು ವರ್ಲ್ಡ್ ಅಥ್ಲೆಟಿಕ್ಸ್ ಫ್ಯಾಮಿಲಿ ಇಮೇಲ್ ಮೂಲಕ ತಮ್ಮ ಮತಗಳನ್ನು ಹಾಕಬೇಕಾಗುತ್ತದೆ. ವಿಶ್ವ ಅಥ್ಲೆಟಿಕ್ಸ್ ಸಾಮಾಜಿಕ ಜಾಲತಾಣ ವೇದಿಕೆಗಳ ಮೂಲಕವೂ ಆನ್‌ಲೈನ್‌ನಲ್ಲಿ ಮತ ಚಲಾಯಿಸಬಹುದು. ಪ್ರತಿ ನಾಮಿನಿಗೆ ವೈಯಕ್ತಿಕ ಗ್ರಾಫಿಕ್ಸ್ ಅನ್ನು ಅಧಿಕೃತ ಹ್ಯಾಂಡಲ್‌ಗಳಲ್ಲಿ Facebook, X, Instagram ಮತ್ತು YouTube ಚಾನಲ್‌ಗಳಲ್ಲಿ ಪೋಸ್ಟ್ ಮಾಡಲಾಗುತ್ತದೆ. ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್‌ನಲ್ಲಿ 'ಲೈಕ್' ಅಥವಾ ಎಕ್ಸ್‌ನಲ್ಲಿ ರಿಪೋಸ್ಟ್‌ ಮಾಡುವುದು ಒಂದು ಮತವಾಗಿ ಪರಿಗಣಿಸಲ್ಪಡುತ್ತದೆ ಎಂದು ಅಥ್ಲೆಟಿಕ್ಸ್ ಸಂಸ್ಥೆ ತಿಳಿಸಿದೆ.

ಮತಗಳ ಲೆಕ್ಕಾಚಾರ ಹೇಗೆ?: ವಿಶ್ವ ಅಥ್ಲೆಟಿಕ್ಸ್ ಕೌನ್ಸಿಲ್‌ನ ಮತವು ಫಲಿತಾಂಶದ ಶೇಕಡಾ 50ಕ್ಕೆ ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ. ವಿಶ್ವ ಅಥ್ಲೆಟಿಕ್ಸ್ ಕುಟುಂಬದ ಮತಗಳು ಮತ್ತು ಸಾರ್ವಜನಿಕ ಮತಗಳನ್ನು ಶೇ 25ರಷ್ಟು ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಈ ಆಧಾರದಲ್ಲಿ ಫಲಿತಾಂಶವನ್ನು ಪ್ರಕಟಿಸಲಾಗುತ್ತದೆ.

ನೆನಪಿಡಿ!: ವರ್ಷದ ವಿಶ್ವ ಅಥ್ಲೀಟ್‌ಗಳಿಗೆ ಮತದಾನ ಅಕ್ಟೋಬರ್ 28ರ ಶನಿವಾರ ಮಧ್ಯರಾತ್ರಿ ಮುಕ್ತಾಯವಾಗುತ್ತದೆ. ಮತದಾನ ಪ್ರಕ್ರಿಯೆಯ ಕೊನೆಯಲ್ಲಿ ಟಾಪ್​ ಐದು ಮಹಿಳೆ ಮತ್ತು ಪುರುಷ ಅಂತಿಮ ಸ್ಪರ್ಧಿಗಳನ್ನು ನವೆಂಬರ್ 13-14 ರಂದು ವಿಶ್ವ ಅಥ್ಲೆಟಿಕ್ಸ್ ಪ್ರಕಟಿಸಲಿದೆ ಎಂದು ಕ್ರೀಡಾ ಸಂಸ್ಥೆ ತಿಳಿಸಿದೆ. ವಿಜೇತರನ್ನು ಡಿಸೆಂಬರ್ 11 ರಂದು ವಿಶ್ವ ಅಥ್ಲೆಟಿಕ್ಸ್‌ನ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಬಹಿರಂಗಪಡಿಸಲಾಗುತ್ತದೆ.

ಇದನ್ನೂ ಓದಿ:ವಿಶ್ವಕಪ್​ ಟೂರ್ನಿಯಲ್ಲಿ ನಾವು ಇನ್ನೂ ತುಂಬಾ ದೂರ ಸಾಗಬೇಕಿದೆ: ದಕ್ಷಿಣ ಆಫ್ರಿಕಾದ ವೇಗಿ ಕಗಿಸೊ ರಬಾಡ

ABOUT THE AUTHOR

...view details