ಕರ್ನಾಟಕ

karnataka

ಸರ್ಕಾರಿ ಕೆಲಸ ಕೊಡಿಸುವುದಾಗಿ ವಿಶೇಷ ಅಧಿಕಾರಿ ಸೋಗಿನಲ್ಲಿ ಕೋಟ್ಯಂತರ ರೂ. ವಂಚನೆ.. ಆರೋಪಿ ಅರೆಸ್ಟ್​

By

Published : Dec 16, 2021, 10:51 AM IST

ಸಚಿವಾಲಯದ ವಿಶೇಷ ಅಧಿಕಾರಿ ಎಂದು ಹೇಳಿಕೊಂಡು ಐಎಎಸ್, ಐಪಿಎಸ್, ಕೆಎಎಸ್ ಸೇರಿದಂತೆ ನಾನಾ ಅಧಿಕಾರಿಗಳ ವರ್ಗಾವಣೆ ಮಾಡಿಸಿಕೊಡುವುದು ಹಾಗೂ ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ ಸಾರ್ವಜನಿಕರಿಂದ ಕೋಟ್ಯಂತರ ರೂಪಾಯಿ ವಸೂಲಿ ಮಾಡಿ ವಂಚಿಸುತ್ತಿದ್ದವನನ್ನು ಕೆಂಗೇರಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

fake officer arrested
ವಂಚಕನ ಬಂಧನ

ಬೆಂಗಳೂರು:ಸಚಿವಾಲಯದ ವಿಶೇಷ ಅಧಿಕಾರಿ ಎಂದು ಹೇಳಿಕೊಂಡು ಐಎಎಸ್, ಐಪಿಎಸ್, ಕೆಎಎಸ್ ಸೇರಿದಂತೆ ನಾನಾ ಅಧಿಕಾರಿಗಳ ವರ್ಗಾವಣೆ ಮಾಡಿಸಿಕೊಡುವುದು ಹಾಗೂ ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ ಸಾರ್ವಜನಿಕರಿಂದ ಕೋಟ್ಯಂತರ ರೂಪಾಯಿ ವಸೂಲಿ ಮಾಡಿ ವಂಚಿಸುತ್ತಿದ್ದವನನ್ನು ಕೆಂಗೇರಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಸಿಸಿಬಿ ವಿಭಾಗದ ಪೊಲೀಸ್ ಇನ್ಸ್​ಪೆಕ್ಟರ್ ಭರತ್ ನೀಡಿದ ದೂರಿನ ಮೇರೆಗೆ ನಕಲಿ ವಿಶೇಷ ಅಧಿಕಾರಿ ಆರ್.ಆರ್. ನಗರದ ಬಿಇಎಂಎಲ್ ಲೇಔಟ್‍ನ ಉದಯ ಪ್ರಭು(34) ಎನ್ನುವವನನ್ನು ಬಂಧಿಸಲಾಗಿದೆ. ಆರೋಪಿಯಿಂದ 1.20 ಲಕ್ಷ ರೂಪಾಯಿ ನಗದು, 1 ಲ್ಯಾಪ್​ಟಾಪ್​, 4 ಐ- ಫೋನ್, ನಕಲಿ ಗುರುತಿನ ಚೀಟಿ, 1 ಇನ್ನೋವಾ ಕಾರು, ಜಾಗ್ವಾರ್ ಕಾರನ್ನು ವಶಕ್ಕೆ ಪಡೆಯಲಾಗಿದೆ.

ಆರೋಪಿಯು ಚಿಕ್ಕಬಳ್ಳಾಪುರ ಮೂಲದ ಮೈಲಸಂದ್ರದಿಂದ ಬಂದು ಆರ್.ಆರ್ ಬಿಇಎಂಎಲ್ ಲೇಔಟ್‍ನ 7ನೇ ಹಂತದ ವಾಟರ್ ಟ್ಯಾಂಕ್ ಬಳಿ ವಾಸವಿದ್ದ. ಜೀವನ ನಿರ್ವಹಣೆಗಾಗಿ ಉದಯ್ ಪ್ರಭು ಕಾಟನ್‍ಪೇಟೆಯಲ್ಲಿ ಬಾಳೆಕಾಯಿ ಮಂಡಿ ನಡೆಸುತ್ತಿದ್ದ. ಹಲವು ಇಲಾಖೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ನೌಕರರಿಗೆ ವರ್ಗಾವಣೆ ಮಾಡಿಸಿ ಕೊಡುವುದಾಗಿ ನಂಬಿಸುತ್ತಿದ್ದ ಎಂದು ಹೇಳಿದ್ದಾರೆ.

ಅಧಿಕಾರಿಗಳ ವರ್ಗಾವಣೆ:

ರಾಜ್ಯ ಸರ್ಕಾರದ ವಿಶೇಷ ಅಧಿಕಾರಿ ಎಂದು ಹೇಳಿಕೊಳ್ಳುತ್ತಿದ್ದ ಉದಯ್ ಪ್ರಭು, ಐಎಎಸ್, ಐಪಿಎಸ್, ಕೆಎಎಸ್ ಅಧಿಕಾರಿಗಳ ವರ್ಗಾವಣೆ ಮಾಡಿಸಿಕೊಡುವುದು ಹಾಗೂ ಆಯಕಟ್ಟಿನ ಸ್ಥಳದಲ್ಲಿ ಉತ್ತಮ ಸ್ಥಾನ ಕೊಡಿಸುವುದಾಗಿ ವಂಚಿಸುತ್ತಿದ್ದ. ಅಲ್ಲದೇ, ಸರ್ಕಾರದ ಕೆಲಸ ಕೊಡಿಸುವುದಾಗಿ ನಂಬಿಸಿ ಕೋಟ್ಯಂತರ ರೂ. ವಂಚಿಸಿದ್ದಾನೆ ಎಂದು ತಿಳಿದುಬಂದಿದೆ.

ಕರ್ನಾಟಕ ಸರ್ಕಾರದ ಫಲಕವಿರುವ ಕಾರು ಬಳಕೆ

ಜನರನ್ನು ವಂಚಿಸಲೆಂದೇ ಬಿಳಿ ಇನ್ನೋವಾ ಕಾರಿಗೆ ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಕರ್ನಾಟಕ ಸರ್ಕಾರ ಎಂದು ಫಲಕ ಹಾಕಿಕೊಂಡಿದ್ದ. ಅಲ್ಲದೇ, ಕರ್ನಾಟಕ ಸರ್ಕಾರ ಲಾಂಛನ ಕೂಡ ಹಾಕಿಕೊಂಡು ಓಡಾಡುತ್ತಿದ್ದ. ಸರ್ಕಾರ ಅಧಿಕಾರಿಗಳನ್ನು ನಂಬಿಸಲು ಸರ್ಕಾರ ವಿಶೇಷ ಅಧಿಕಾರಿ ಎಂಬ ನಕಲಿ ಗುರುತಿನ ಚೀಟಿ ತೋರಿಸುತ್ತಿದ್ದ.

ಆರೋಪಿಯ ಬಂಧನ

ಆರೋಪಿ ಸಾರ್ವಜನಿಕರಿಗೆ ವಂಚಿಸುತ್ತಿರುವ ಬಗ್ಗೆ ತಿಳಿದಿದ್ದ ಸಿಸಿಬಿ ಇನ್‍ಸ್ಪೆಕ್ಟರ್ ಭರತ್, ತನ್ನ ನೇತೃತ್ವದ ತಂಡದೊಂದಿಗೆ ಡಿಸೆಂಬರ್ 14ರಂದು ಉದಯ್ ಪ್ರಭು ಮನೆಗೆ ತೆರಳಿ ಪರಿಶೀಲಿಸಿದ್ದರು. ಈ ಬಗ್ಗೆ ವಿಚಾರಿಸಿದಾಗ ಇದು ತನ್ನ ಸ್ವಂತ ವಾಹನವಾಗಿದ್ದು, ಪತ್ನಿ ಹೆಸರಿನಲ್ಲಿ ಇರುವುದಾಗಿ ಹೇಳಿದ್ದ. ಆತನ ಬಳಿಯಿದ್ದ ನಕಲಿ ಗುರುತಿನ ಚೀಟಿಯನ್ನು ತೋರಿಸಿ, ತಾನು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ವಿಶೇಷ ಅಧಿಕಾರಿ ಎಂದು ಹೇಳಿದ್ದ.

ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಕೇಳಿದಾಗ ಸಮರ್ಪಕವಾಗಿ ಉತ್ತರಿಸದೇ ಗೊಂದಲದ ಹೇಳಿಕೆ ಕೊಟ್ಟಿದ್ದ. ಖಾಸಗಿ ವಾಹನದಲ್ಲಿ ಕರ್ನಾಟಕ ಸರ್ಕಾರ ಎಂದು ಬರೆಯಿಸಿ, ಲಾಂಛನ ಹಾಕಿಸಿಕೊಂಡಿರುವ ಬಗ್ಗೆ ಸಕ್ಷಮ ಪ್ರಾಧಿಕಾರದಿಂದ ಅನುಮತಿ ಪಡೆದಿರುವ ದಾಖಲೆಗಳನ್ನು ಹಾಜರುಪಡಿಸುವಂತೆ ಸೂಚಿಸಿದ್ದೆವು ಎಂದು ಹೇಳಿದ್ದಾರೆ.

ಇದನ್ನೂ ಓದಿ: ಲೈಂಗಿಕ ದೌರ್ಜನ್ಯ ಆರೋಪ.. ಗೋವಾ ಸಚಿವ ಮಿಲಿಂದ್ ನಾಯ್ಕ್ ರಾಜೀನಾಮೆ

ಆದರೆ, ಆತನ ಬಳಿ ಯಾವುದೇ ದಾಖಲೆಗಳು ಇರಲಿಲ್ಲ. ಅಲ್ಲದೇ, ಸಿಸಿಬಿ ಪೊಲೀಸರು ಆರೋಪಿಯ ಇನೋವಾ ಕಾರಿನ ಡ್ಯಾಷ್‍ಬೋರ್ಡ್ ಪರಿಶೀಲಿಸಿದಾಗ ಅದರಲ್ಲಿ 1.20 ಲಕ್ಷ ರೂ ನಗದು, 3 ಆ್ಯಪಲ್ ಕಂಪನಿ ಮೊಬೈಲ್‍ಗಳು, 1 ಲ್ಯಾಪ್‍ಟಾಪ್ ಪತ್ತೆಯಾಗಿತ್ತು ಎಂದು ಮಾಹಿತಿ ನೀಡಿದ್ದಾರೆ.

ತಪ್ಪಿಸಿಕೊಳ್ಳಲು ಯತ್ನ

ಸಿಸಿಬಿ ಪೊಲೀಸರು ಉದಯ್ ಪ್ರಭುನನ್ನು ವಶಕ್ಕೆ ಪಡೆದಿದ್ದರು. ವಿಚಾರಣೆ ವೇಳೆ ಮಾಜಿ ಸಿಎಂ ಒಬ್ಬರ ತಂಗಿ ಮಗನ ಸ್ನೇಹಿತ ಎಂದು ಸುಳ್ಳು ಹೇಳಿ ಪ್ರಕರಣದಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದ. ಸಿಸಿಬಿ ಪೊಲೀಸರು ಹೆಚ್ಚಿನ ತನಿಖೆಗಾಗಿ ಕೆಂಗೇರಿ ಒಪ್ಪಿಸಿದ್ದರು. ಆರೋಪಿಯನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದ್ದು, ಎಷ್ಟು ಜನರಿಂದ ಹಣ ಪಡೆದು ವಂಚಿಸಿದ್ದಾನೆ? ಎಷ್ಟು ಜನ ಆರೋಪಿಗೆ ಹಣ ನೀಡಿದ್ದಾರೆ? ಎಂಬ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಇನ್​ಸ್ಪೆಕ್ಟರ್​ ಒಬ್ಬರಿಗೂ ವಂಚನೆ

ಆರೋಪಿ ಉದಯ್ ಪ್ರಭು, ಸಿಸಿಬಿ ವಿಭಾಗದ ಇನ್​ಸ್ಪೆಕ್ಟರ್​ ಒಬ್ಬರನ್ನೂ ವರ್ಗಾವಣೆ ಮಾಡಿಸಿಕೊಡುವುದಾಗಿ ಹಣ ಪಡೆದು ವಂಚಿಸಿರುವುದು ಬೆಳಕಿಗೆ ಬಂದಿದೆ. ಅಲ್ಲದೇ, ಇದೇ ರೀತಿ 8 ರಿಂದ 10 ಮಂದಿಗೆ ವಂಚಿಸಿ ಕೋಟ್ಯಂತರ ರೂ. ಹಣ ವಸೂಲಿ ಮಾಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ABOUT THE AUTHOR

...view details