ETV Bharat / state

ಮಹಿಳೆಯರ ಮೇಲೆ ಅನ್ಯಾಯ ಆದಾಗ ಪ್ರಧಾನಿ ಏಕೆ ಮೌನ ವಹಿಸುತ್ತಾರೆ: ಕಾಂಗ್ರೆಸ್​ ನಾಯಕಿ ಪ್ರಶ್ನೆ - Hassan Pendrive Case

author img

By ETV Bharat Karnataka Team

Published : Apr 30, 2024, 1:43 PM IST

CONGRESS LEADER SUPRIYA SRINETI  PM REMAIN SILENT  BELAGAVI
ಕಾಂಗ್ರೆಸ್​ ನಾಯಕಿ ಸುಪ್ರೀಯಾ ಶ್ರಿನೇಟಿ ಹೇಳಿಕೆ

ಸಾಧನೆ ಕೀರ್ತಿ ಪಡೆಯುವ ಮೋದಿ ಮಹಿಳೆಯರ ಮೇಲೆ ಅನ್ಯಾಯ ಆದಾಗ ಏಕೆ ಮೌನ ವಹಿಸುತ್ತಾರೆ ಎಂದು ಕಾಂಗ್ರೆಸ್​ ನಾಯಕಿ ಸುಪ್ರೀಯಾ ಶ್ರಿನೇಟಿ ಪ್ರಶ್ನಿಸಿದ್ದಾರೆ.

ಕಾಂಗ್ರೆಸ್​ ನಾಯಕಿ ಸುಪ್ರೀಯಾ ಶ್ರಿನೇಟಿ ಹೇಳಿಕೆ

ಬೆಳಗಾವಿ: ದೇಶದಲ್ಲಿ ಮಹಿಳೆಯರ ಮೇಲೆ ಅತ್ಯಾಚಾರ, ದೌರ್ಜನ್ಯ, ಶೋಷಣೆ ಮತ್ತು ಅನ್ಯಾಯ ನಡೆದರೆ ಅದರಲ್ಲಿ ಮೋದಿ ತಪ್ಪು ಇರೋದಿಲ್ಲ. ಚಂದ್ರಯಾನ ಯಶಸ್ವಿಯಾದರೆ, ಕೊರೊನಾ ಲಸಿಕೆಯಲ್ಲಿ ಸಾಧನೆ ಮೆರೆದರೆ, ಕಾಮನವೆಲ್ತ್ ಕ್ರೀಡಾಕೂಟದಲ್ಲಿ ವಿಜೇತರಾದರೆ ಅದರ ಶ್ರೇಯಸ್ಸು ಮೋದಿ ಪಡೆಯುತ್ತಾರೆ. ಸಾಧನೆ ಕೀರ್ತಿ ಪಡೆಯುವ ಪ್ರಧಾನಿ ಇಂಥ ಘಟನೆಗಳು ನಡೆದಾಗ ಏಕೆ ನುಣುಚಿಕೊಳ್ಳುತ್ತಾರೆ ಎಂದು ಎಐಸಿಸಿ ಸಾಮಾಜಿಕ ಜಾಲತಾಣದ ಅಧ್ಯಕ್ಷೆ ಸುಪ್ರೀಯಾ ಶ್ರಿನೇಟಿ ಪ್ರಶ್ನಿಸಿದರು.

ಬೆಳಗಾವಿಯಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಹಾಸನ ಪೆನ್​ಡ್ರೈ ಪ್ರಕರಣ ಪ್ರಧಾನಿ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಮೊದಲೇ ತಿಳಿದಿದ್ದರೂ ಹಾಸನ ಟಿಕೆಟ್ ನೀಡಿದ್ದು ದುರ್ದೈವದ ಸಂಗತಿ. ಅವರಿಗೆ ಹಾಸನ ಟಿಕೆಟ್ ಕೊಟ್ಟು ಮೈಸೂರಿನಲ್ಲಿ ಬಿಜೆಪಿ ನಡೆಸಿದ ಸಮಾವೇಶದಲ್ಲಿ ಪ್ರಜ್ವಲ್ ರೇವಣ್ಣನ ಬೆನ್ನು ತಟ್ಟಿ ಮತ ನೀಡುವಂತೆ ಯಾವ ಮುಖ ಇಟ್ಟುಕೊಂಡು ಮತಯಾಚನೆ ಮಾಡಿದರು ಎಂದು ಪ್ರಶ್ನಿಸಿದರು.

''ಇನ್ನು ರಾಷ್ಟ್ರೀಯ ಮಹಿಳಾ ಆಯೋಗ ಕೂಡ ಇದರ ಬಗ್ಗೆ ಧ್ವನಿ ಎತ್ತುತ್ತಿಲ್ಲ. ಸ್ಮೃತಿ ಇರಾನಿ ಸೇರಿ ಎಲ್ಲರೂ ಮೌನ ವಹಿಸಿದ್ದಾರೆ. ಇಂಥ ವಿಚಾರದಲ್ಲಿ ರಾಜಕೀಯ ಲಾಭ ಪಡೆದುಕೊಳ್ಳಲು ಮುಂದಾಗಿದ್ದಾರೆ. ಮಣಿಪುರ, ಹತ್ರಾಸ್ ಈಗ ಹಾಸನ ಪೆನ್​ಡ್ರೈವ್​ ಪ್ರಕರಣವನ್ನೂ ಯಾವ ರಾಷ್ಟ್ರೀಯ ಮಾಧ್ಯಮಗಳಲ್ಲಿ ಪ್ರಸಾರ ಮಾಡುತ್ತಿಲ್ಲ. ಯಾವುದೇ ರೀತಿ ಚರ್ಚೆ ಆಗುತ್ತಿಲ್ಲ. ಅಲ್ಲದೇ ಕೇಂದ್ರ ಸರ್ಕಾರದ ಸಹಕಾರದಿಂದ ಪ್ರಜ್ವಲ್ ರೇವಣ್ಣ ದೇಶ ಬಿಟ್ಟು ಓಡಿ ಹೋಗಿದ್ದಾರೆ'' ಎಂದು ಆರೋಪಿಸಿದರು.

''ಮನೆ ಕೆಲಸದವರು, ಜಿ.ಪಂ ಸದಸ್ಯೆ ಸೇರಿ ಯಾರನ್ನೂ ಈ ರಾಕ್ಷಸ ಬಿಟ್ಟಿಲ್ಲ. ಸಾವಿರಾರು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ರಾಜ್ಯ ಮಹಿಳಾ ಆಯೋಗ ದೂರು ಕೊಟ್ಟ ತಕ್ಷಣ ರಾಜ್ಯ ಸರ್ಕಾರ ಎಸ್ಐಟಿ ರಚನೆ ಮಾಡಿ ತನಿಖೆ ಆರಂಭಿಸಿದೆ. ಶೀಘ್ರವೇ ತನಿಖೆ ಪೂರ್ಣಗೊಳಿಸಿ ಆರೋಪಿಗೆ ಕಠಿಣ ಶಿಕ್ಷೆ ಆಗಬೇಕು'' ಎಂದು ಸುಪ್ರೀಯಾ ಶ್ರಿನೇಟಿ ಆಗ್ರಹಿಸಿದರು.

ಮಾಧ್ಯಮಗೋಷ್ಟಿಯಲ್ಲಿ ಉನ್ನತ ಶಿಕ್ಷಣ ಸಚಿವ ಡಾ. ಎಂ. ಸಿ. ಸುಧಾಕರ್, ಕೆಪಿಸಿಸಿ‌ ಕಾರ್ಯಾಧ್ಯಕ್ಷ ವಿನಯ ಕುಲಕರ್ಣಿ, ಶಾಸಕರಾದ ಆಸೀಫ್ ಸೇಠ್, ನಯನಾ ಮೋಟಮ್ಮ ಸೇರಿ ಮತ್ತಿತರರು ಇದ್ದರು.

ಓದಿ: ಹಾಸನ ವಿಡಿಯೋ ಪ್ರಕರಣ: ಜೆಡಿಎಸ್​ನಿಂದ ಪ್ರಜ್ವಲ್ ರೇವಣ್ಣ ಅಮಾನತು - JDS Suspends Prajwal Revanna

ETV Bharat Logo

Copyright © 2024 Ushodaya Enterprises Pvt. Ltd., All Rights Reserved.