ETV Bharat / state

ಭೀಕರ ಬರಗಾಲ; ಬಾಡಿಗೆ ಟ್ಯಾಂಕರ್ ನೀರು ಪಡೆದು ಅಡಿಕೆ ತೋಟ ಉಳಿಸಲು ರೈತರ ಶತಪ್ರಯತ್ನ - FARMERS PURCHASING WATER FOR CROP

author img

By ETV Bharat Karnataka Team

Published : Mar 31, 2024, 6:07 PM IST

Updated : Mar 31, 2024, 10:51 PM IST

Farmers supplying water to the areca nut plantation
ಬಾಡಿಗೆ ಟ್ಯಾಂಕರ್ ನೀರು ಪಡೆದು ಅಡಿಕೆ ತೋಟಕ್ಕೆ ನೀರು ಉಣಿಸುತ್ತಿರುವ ರೈತರು

ನದಿ, ಕೆರೆಗಳ ಒಡಲು ಬರಿದಾಗಿದ್ದು ಹಾವೇರಿ ಜಿಲ್ಲೆಯಲ್ಲಿ ಅಂತರ್ಜಲಮಟ್ಟವೂ ಸಹ ಕುಸಿದಿದೆ. ನೀರಿನ ಕೊರತೆಯಿಂದ ಅಡಿಕೆ ಮರಗಳು ಒಣಗಲಾರಂಭಿಸಿವೆ. ತೀವ್ರ ಆತಂಕಕ್ಕೆ ಸಿಲುಕಿರುವ ಹಾವೇರಿ ಜಿಲ್ಲೆಯ ರೈತರು ಬಾಡಿಗೆ ಟ್ಯಾಂಕರ್ ಪಡೆದು ಅಡಿಕೆ ಗಿಡಗಳಿಗೆ ನೀರು ಪೂರೈಸುತ್ತಿದ್ದಾರೆ.

ಅಡಿಕೆ ತೋಟ ಉಳಿಸಲು ರೈತರ ಶತಪ್ರಯತ್ನ

ಹಾವೇರಿ: ಪ್ರಸ್ತುತ ವರ್ಷ ರಾಜ್ಯಾದ್ಯಂತ ಭೀಕರ ಬರಗಾಲ ಆವರಿಸಿದೆ. ಈ ಹಿನ್ನೆಲೆ ಜಿಲ್ಲೆಯಲ್ಲಿ ಹರಿದಿರುವ ನಾಲ್ಕು ನದಿಗಳ ಒಡಲು ಬರಿದಾಗಿದೆ. ಹಳ್ಳಕೊಳ್ಳಗಳು ಕೆರೆಹೊಂಡಗಳಲ್ಲಿ ಸಹ ನೀರು ಖಾಲಿಯಾಗಿದ್ದು, ಇದರ ಜೊತೆಗೆ ಅಂತರ್ಜಲಮಟ್ಟವೂ ಸಹ ಕುಸಿದಿದೆ. ಕೇವಲ ನೂರು ಎರಡು ನೂರು ಅಡಿಗೆ ಕೊರೆದರೆ ನೀರು ಉಕ್ಕುತ್ತಿದ್ದ ಕೊಳವೆಬಾವಿಗಳು, ಇದೀಗ ಸಾವಿರ ಅಡಿ ಕೊರೆದರೂ ನೀರು ಬರುತ್ತಿಲ್ಲ. ಇದರ ಪರಿಣಾಮ ಇಲ್ಲಿನ ರೈತರು ಎಂದಿಗೂ ಕಾಣದಂತಹ ನೀರಿನ ಬರ ಪರಿಸ್ಥಿತಿ ಎದುರಿಸುತ್ತಿದ್ದಾರೆ.

ಇತ್ತೀಚೆಗೆ ಅಡಿಕೆ ಬೆಳೆಯಲು ಮುಂದಾಗಿರುವ ಜಿಲ್ಲೆಯ ರೈತರು ಬರಗಾಲದಿಂದಾಗಿ ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ. ವರ್ಷದಿಂದ ವರ್ಷಕ್ಕೆ ಅಡಿಕೆ ದರ ಗಗನಮುಖಿಯಾಗಿರುವುದನ್ನು ಕಂಡು ಹಾವೇರಿ ಜಿಲ್ಲೆಯ ಹಲವು ರೈತರು ಅಡಿಕೆ ತೋಟಗಳತ್ತ ಮುಖಮಾಡಿದ್ದರು. ಆದರೆ ಈ ಅಡಿಕೆ ಮರಕ್ಕೆ ಕನಿಷ್ಠ ಎಂಟು ದಿನಗಳಿಗೊಮ್ಮೆಯಾದರು ನೀರು ಬೇಕು. ಆದರೆ ಪ್ರಸ್ತುತ ಪರಿಸ್ಥಿತಿಯಲ್ಲಿ ಅಡಿಕೆ ಗಿಡಗಳಿಗೆ ನೀರು ಪೂರೈಸಲಾಗುತ್ತಿಲ್ಲ.

ನದಿ, ಕೆರೆಗಳ ಒಡಲು ಬರಿದಾಗಿದ್ದು ಅಡಿಕೆ ಗಿಡಗಳು ಒಣಗಲಾರಂಭಿಸಿವೆ. ಇದರಿಂದ ತೀವ್ರ ಆತಂಕಕ್ಕೆ ಸಿಲುಕಿರುವ ಬ್ಯಾಡಗಿ ತಾಲೂಕಿನ ಅಣೂರು ಗ್ರಾಮದ ಅಡಿಕೆ ಬೆಳೆಗಾರರು ಇದೀಗ ಬಾಡಿಗೆ ಟ್ಯಾಂಕರ್ ಪಡೆದು ಅಡಿಕೆ ಮರಗಳಿಗೆ ನೀರು ಪೂರೈಸುತ್ತಿದ್ದಾರೆ.

ಅಡಿಕೆ ತೋಟ ಉಳಿಸಲು ರೈತರ ಹರಸಾಹಸ: ಅಡಿಕೆ ಗಿಡಗಳನ್ನು ಎರಡು ವರ್ಷಗಳ ಹಿಂದೆ ನೆಡಲಾಗಿತ್ತು. ಮಳೆ ಮೇಲೆ ನಂಬಿಕೆಯಿಟ್ಟು ಅಡಿಕೆ ಕೃಷಿಗೆ ರೈತರು ಮುಂದಾಗಿದ್ದರು. ನಂತರದ ವರ್ಷ ಸಹ ನೀರಿನ ಕೊರತೆ ಅಷ್ಟು ಕಾಣಿಸಿರಲಿಲ್ಲ. ಆದರೆ ಇದೀಗ ಮೂರು ವರ್ಷದ ಅಡಿಕೆ ಗಿಡಗಳಾಗಿದ್ದು, ಅಧಿಕ ನೀರು ಬಯಸುತ್ತಿವೆ. ಆದರೆ ಕೊಳವೆಬಾವಿಗಳಲ್ಲಿ ನೀರು ಇಲ್ಲ. ಅಲ್ಪಾವಧಿ ಬೆಳೆ ಬಿಟ್ಟು ದೀರ್ಘಾವಧಿ ಬೆಳೆಯಲು ಮುಂದಾದ ತಮಗೆ ಇನ್ನಿಲ್ಲದ ಸಂಕಷ್ಟ ತಂದಿದೆ. ಒಂದು ಕಡೆ ನೀರಿಲ್ಲದೆ ಗಿಡಗಳು ಒಣಗುತ್ತಿವೆ. ನೀರು ಪೂರೈಸಲು ಕೊಳವೆ ಬಾವಿಗಳಲ್ಲಿ ಅಂತರ್ಜಲಮಟ್ಟ ಕುಸಿದಿದೆ. ಇಂತಹ ಸಮಯದಲ್ಲಿ ಅಡಿಕೆ ಗಿಡಗಳನ್ನು ಉಳಿಸಿಕೊಳ್ಳಲು ಗ್ರಾಮದಲ್ಲಿರುವ ಟ್ರ್ಯಾಕ್ಟರ್ ಟ್ಯಾಂಕರ್ ಬಾಡಿಗೆ ಪಡೆದು ನೀರು ತುಂಬಿಸಿಕೊಂಡು ಎರಡು ದಿನಕ್ಕೊಮ್ಮೆ ಪ್ರತಿ ಗಿಡಕ್ಕೆ ಐದು ಲೀಟರ್ ನೀರನ್ನು ಹಾಕುತ್ತಿದ್ದೇವೆ ಎನ್ನುತ್ತಾರೆ ರೈತ ಬಸವರಾಜ್.

ಕೆಲಸ ಕಡಿಮೆಯಾಗುತ್ತೆ ಒಬ್ಬರೇ ತೋಟ ನೋಡಿಕೊಂಡು ಹೋಗಬಹುದು. ಅಧಿಕ ಆದಾಯ ಬರುತ್ತೆ ಎಂದು ಅಡಿಕೆ ಬೆಳೆಯಲು ಮುಂದಾಗಿದ್ದೆವು. ಆದರೆ ಮಳೆ ಕಡಿಮೆಯಾಗಿದ್ದು ದಿನನಿತ್ಯ ಗಿಡಗಳಿಗೆ ನೀರು ಹಾಕುವುದೇ ತಮ್ಮ ಕಾಯಕವಾಗಿದೆ. ನನ್ನ ಸಹೋದರ ಸೇರಿದಂತೆ ಮನೆಯ ಸದಸ್ಯರು ಸೇರಿಕೊಂಡು ಚಿಕ್ಕ ಚಿಕ್ಕ ಬಕೆಟ್ ಹಿಡಿದು ಗಿಡಗಳ ಬೇರುಗಳಿಗೆ ನೀರುಣಿಸುತ್ತಿದ್ದೇವೆ. ಅಡಿಕೆ ಗಿಡಕ್ಕೆ ತಾಯಿಬೇರು ಇರುವುದಿಲ್ಲಾ ತಂತು ಬೇರುಗಳಿರುವದರಿಂದ ಎರಡು ದಿನಕ್ಕೊಮ್ಮೆ ನೀರು ಪೂರೈಸುತ್ತಿದ್ದೇವೆ ಎಂದು ರೈತ ಬಸವರಾಜ ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.

ಬಸವರಾಜ್ ಒಂದು ಎಕರೆ ತೋಟದಲ್ಲಿ ಸುಮಾರು 600 ಅಡಿಕೆ ಗಿಡಗಳನ್ನು ನೆಟ್ಟಿದ್ದು, ಎರಡು ವರ್ಷ ಕಷ್ಟಪಟ್ಟು ಅಡಿಕೆ ಗಿಡ ಬೆಳೆಸಿದ್ದಾರೆ. ಆದರೆ ಪ್ರಸ್ತುತ ವರ್ಷ ನೀರಿಲ್ಲದೆ ಗಿಡ ಒಣಗುತ್ತಿರುವದನ್ನು ನನಗೆ ನೋಡಲಾಗಲಿಲ್ಲ. ಕೊನೆಯ ಪಕ್ಷ ಬಾಡಿಗೆ ನೀರು ಪಡೆದು ತೋಟ ಉಳಿಸಿಕೊಳ್ಳಬೇಕು ಎಂದು ನಿರ್ಧಾರ ಮಾಡಿ ಈ ರೀತಿ ನೀರು ಪೂರೈಸುತ್ತಿದ್ದೇವೆ ಎಂದರು.

ಎರಡು ದಿನಕ್ಕೊಮ್ಮೆ ನೀರಿಗಾಗಿ 7 ಸಾವಿರ ರೂ. ಖರ್ಚು; ಪ್ರತಿ ಎರಡು ದಿನಕ್ಕೊಮ್ಮೆ 7000 ರೂಪಾಯಿ ನೀಡಿ 10 ಟ್ಯಾಂಕರ್ ನೀರು ತರಿಸಿಕೊಂಡು ಅಡಿಕೆ ಗಿಡಗಳಿಗೆ ನೀರು ಪೂರೈಸುತ್ತಿದ್ದೇವೆ. ಮಳೆಗಾಲದವರೆಗೆ ನಮಗೆ ಈ ಕಾರ್ಯ ಅನಿವಾರ್ಯ, ಗಿಡ ಉಳಿಸಿಕೊಳ್ಳಬೇಕಾದರೆ ಈ ರೀತಿ ಹಣ ವೆಚ್ಚ ಮಾಡಬೇಕಾಗಿದೆ ಎಂದು ರೈತ ಬಸವರಾಜ್​ ತಿಳಿಸಿದ್ದಾರೆ.

ಈ ರೀತಿ ಟ್ಯಾಂಕರ್​ನಿಂದ ಹಾಕುತ್ತಿರುವ ನೀರಿನಿಂದ ಗಿಡಗಳು ಮಳೆಗಾಲದವರೆಗೆ ಜೀವ ಹಿಡಿದುಕೊಳ್ಳುತ್ತವೆ. ನಂತರ ಉತ್ತಮ ಮಳೆಯಾದರೆ ನಮ್ಮ ಈ ಶ್ರಮ ಸಾರ್ಥಕವಾಗುತ್ತದೆ ಎಂದು ಬಸವರಾಜ್ ಆಶಾಭಾವನೆ ವ್ಯಕ್ತಪಡಿಸಿದರು.

ಆಣೂರು ಅಕ್ಕಪಕ್ಕದಲ್ಲಿ ದೊಡ್ಡದಾದ ಕೆರೆಗಳಿವೆ. ಆದರೆ ಅವುಗಳಿಗೆ ನೀರು ತುಂಬಿಸುವ ಕಾರ್ಯವಾಗಿಲ್ಲ. ಇದರಿಂದ ಆಣೂರು ಸೇರಿದಂತೆ ಸುತ್ತಮುತ್ತಲಿನ ಕೊಳವೆ ಬಾವಿಗಳಲ್ಲಿ ನೀರು ಪಾತಾಳ ಸೇರಿದೆ. ಮುಂದಿನ ಮಳೆಗಾಲದಲ್ಲಾದರೂ ಸರ್ಕಾರ ಕೆರೆಗಳನ್ನು ತುಂಬಿಸಲು ಪ್ರಯತ್ನಿಸಿದರೆ, ಕೊಳವೆಬಾವಿಗಳು ರಿಚಾರ್ಜ್​ ಆಗುತ್ತವೆ ಎನ್ನುತ್ತಾರೆ ಇಲ್ಲಿನ ರೈತರು.

ಇದನ್ನೂಓದಿ:ಕಪ್ಪುತಲೆ ಹುಳು ಕಾಟಕ್ಕೆ ಒಣಗುತ್ತಿವೆ ತೆಂಗಿನ ಮರಗಳು : ಒಟ್ಟು 2600 ಹೆಕ್ಟೇರ್ ತೆಂಗು ನಾಶ

Last Updated :Mar 31, 2024, 10:51 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.