ETV Bharat / state

75ನೇ ಗಣರಾಜ್ಯೋತ್ಸವ: ಧ್ವಜಾರೋಹಣ ನೆರವೇರಿಸಿದ ಸಚಿವ‌ ಸತೀಶ ಜಾರಕಿಹೊಳಿ

author img

By ETV Bharat Karnataka Team

Published : Jan 26, 2024, 4:50 PM IST

Updated : Jan 26, 2024, 7:57 PM IST

republic day celebration in belagavi flag hoist by sathish jarakiholi
75ನೇ ಗಣರಾಜ್ಯೋತ್ಸವ: ಧ್ವಜಾರೋಹಣ ನೆರವೇರಿಸಿದ ಜಿಲ್ಲಾ ಉಸ್ತುವಾರಿ ಸಚಿವ‌ ಸತೀಶ ಜಾರಕಿಹೊಳಿ

ಬೆಳಗಾವಿ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್​ ಜಾರಕಿಹೊಳಿ ಧ್ವಜಾರೋಹಣ ನೆರವೇರಿಸಿ, ಗೌರವ ವಂದನೆ ಸ್ವೀಕರಿಸಿದರು.

75ನೇ ಗಣರಾಜ್ಯೋತ್ಸವ: ಧ್ವಜಾರೋಹಣ ನೆರವೇರಿಸಿದ ಜಿಲ್ಲಾ ಉಸ್ತುವಾರಿ ಸಚಿವ‌ ಸತೀಶ ಜಾರಕಿಹೊಳಿ

ಬೆಳಗಾವಿ: "ಡಾ.ಬಿ.ಆರ್.ಅಂಬೇಡ್ಕರ್ ಅವರ ದೂರದೃಷ್ಟಿ, ಚಿಂತನೆಯ ಫಲವಾಗಿ ನಾವಿಂದು ಜಗತ್ತಿಗೆ ಮಾದರಿಯಾದ ಸಂವಿಧಾನದ ವಾರಸುದಾರರಾಗಿದ್ದೇವೆ. ಪರಕೀಯರ ಆಡಳಿತದಲ್ಲಿದ್ದ ಭಾರತವು ಕೇವಲ 75 ವರ್ಷಗಳಲ್ಲಿ ಜಗತ್ತಿನ ಅತ್ಯಂತ ಬಲಿಷ್ಠ ಪ್ರಜಾತಂತ್ರ ರಾಷ್ಟ್ರವಾಗಿ ಹೊರಹೊಮ್ಮಲು ಈ ಸಂವಿಧಾನವೇ ಬುನಾದಿಯಾಗಿದೆ ಎಂದರೆ ತಪ್ಪಾಗಲಾರದು. ಸಾಮಾಜಿಕ ನ್ಯಾಯ, ಸಮಾನತೆ, ವ್ಯಕ್ತಿ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯಗಳು ನಮ್ಮ ಸಂವಿಧಾನ ನಮಗೆ ಕಲ್ಪಿಸಿಕೊಟ್ಟ ಬಹುದೊಡ್ಡ ಕೊಡುಗೆಗಳಾಗಿವೆ" ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ 75ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಹಾತ್ಮಾ ಗಾಂಧೀಜಿ ಹಾಗೂ ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಗೌರವ ಸಲ್ಲಿಸಿ, ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. "ಬೆಳಗಾವಿ ಜಿಲ್ಲೆ ಚಾರಿತ್ರಿಕವಾಗಿ ತನ್ನದೇ ಆದ ಮಹತ್ವವನ್ನು ದಾಖಲಿಸಿದೆ. ರಾಷ್ಟ್ರ ಭಕ್ತಿಯು ಜಿಲ್ಲೆಯ ಜನತೆಯ ನರನಾಡಿಗಳಲ್ಲಿ ಹರಿದಾಡುತ್ತಿದೆ. ಈ ನೆಲವು ಗಾಂಧೀಜಿ, ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರಂತಹ ಮಹಾತ್ಮರು ನಡೆದಾಡಿದ ನೆಲವಾಗಿದೆ. ಕಿತ್ತೂರು ಚನ್ನಮ್ಮ, ಸಂಗೊಳ್ಳಿ ರಾಯಣ್ಣರು ಸ್ವಾಭಿಮಾನಕ್ಕಾಗಿ ಆತ್ಮಸಮರ್ಪಣೆ ಮಾಡಿಕೊಂಡ ನೆಲ. ಶರಣರು ನಡೆದಾಡಿದ ತಪೋಭೂಮಿ ಇದು" ಎಂದು ಹೇಳಿದರು.

"ಈ ಗಣರಾಜ್ಯ ದಿನವು ದೇಶದ ನಾಗರಿಕರಿಗೆ ತನ್ನ ರಾಷ್ಟ್ರದ ಜವಾಬ್ದಾರಿಯನ್ನು ನೀಡಿದ ದಿನವಾಗಿದೆ. ನಮ್ಮ ಸಂವಿಧಾನವನ್ನು ಒಪ್ಪಿಕೊಂಡ ದಿನವಿದು. ಗಣತಂತ್ರ ವ್ಯವಸ್ಥೆಯು ಭಾರತೀಯರಿಗೆ ಸಾರ್ವಭೌಮಾಧಿಕಾರವನ್ನು ಕಲ್ಪಿಸಿಕೊಟ್ಟ ದಿನವಾಗಿದೆ. ಡಾ. ಬಿ.ಆರ್.ಅಂಬೇಡ್ಕರ್ ಅವರಂತಹ ಮಹಾನ್ ಮಾನವತಾವಾದಿಗಳು ರಾಷ್ಟ್ರದ ಅಭಿವೃದ್ಧಿಯ ಬಗೆಗೆ ಹಗಲಿರುಳು ಎನ್ನದೇ ಚಿಂತಿಸಿ ರಚಿಸಿದ ಸಂವಿಧಾನ ಭವ್ಯಭಾರತಕ್ಕೆ ದಾರಿದೀಪವಾಗಿದೆ" ಎಂದರು.

"ಗಣರಾಜ್ಯೋತ್ಸವದ ಹೊಸ್ತಿಲಿನಲ್ಲಿ ಜನವರಿ 18, 2024 ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ, ಇಡೀ ಜಗತ್ತಿಗೆ ಸಾಂಸ್ಕೃತಿಕ, ಸಾಮಾಜಿಕ ಮತ್ತು ರಾಜಕೀಯ ಚಿಂತನೆಗಳಿಗೆ ಹೊಸ ದಿಕ್ಕು ನೀಡಿದ ವಚನ ಚಳವಳಿಯ ನಾಯಕ ಬಸವಣ್ಣ ಅವರನ್ನು ನಮ್ಮ ಸರ್ಕಾರವು "ಕರ್ನಾಟಕದ ಸಾಂಸ್ಕೃತಿಕ ನಾಯಕ" ಎಂದು ಘೋಷಿಸಲಾಗಿದೆ. ಇದಲ್ಲದೇ ಸ್ವಾತಂತ್ರ್ಯದ ಬೆಳ್ಳಿಚುಕ್ಕಿ ಎಂದು ಗುರುತಿಸಲಾಗಿರುವ ಕಿತ್ತೂರು ರಾಣಿ ಚೆನ್ನಮ್ಮ ಅವರ ಗೌರವಾರ್ಥ ಕಿತ್ತೂರು ತಾಲೂಕನ್ನು "ಚನ್ನಮ್ಮನ ಕಿತ್ತೂರು" ಎಂದು ಮರು ನಾಮಕರಣ ಕೂಡ ಮಾಡಲಾಗಿದೆ."

"ಬೆಳಗಾವಿ ನಗರದಲ್ಲಿ ಸಂಚಾರ ದಟ್ಟಣೆ ಕಡಿಮೆಗೊಳಿಸಲು ರಾಷ್ಟ್ರೀಯ ಹೆದ್ದಾರಿ - 48 ಗಾಂಧಿ ನಗರದಿಂದ ರಾಣಿ ಚನ್ನಮ್ಮಾ ವೃತ್ತದವರೆಗೆ ಅಂದಾಜು 350 ಕೋಟಿ ರೂಪಾಯಿ ವೆಚ್ಚದಲ್ಲಿ ಫ್ಲೈ ಓವರ್ ನಿರ್ಮಿಸಲು ಯೋಜಿಸಲಾಗಿದೆ. ಪ್ರಸ್ತುತ ಜಿಲ್ಲಾಧಿಕಾರಿಗಳ ಕಚೇರಿಯ ಆವರಣದಲ್ಲಿರುವ ವಿವಿಧ ಇಲಾಖೆಗಳ ಕಟ್ಟಡಗಳನ್ನು ತೆರವುಗೊಳಿಸಿ ಒಂದು ಸುಸಜ್ಜಿತವಾದ ಜಿಲ್ಲಾ ಕಚೇರಿಗಳ ಸಂಕೀರ್ಣವನ್ನು ಅಂದಾಜು 200 ಕೋಟಿ ರೂಪಾಯಿ ವೆಚ್ಚದಲ್ಲಿ ಕಾಮಗಾರಿ ಅನುಷ್ಠಾನಗೊಳಿಸಲು ಕ್ರಮ ಕೈಕೊಳ್ಳಲಾಗುತ್ತಿದೆ. ಹುದಲಿ ಗ್ರಾಮದ ಬೈಪಾಸ್ ರಸ್ತೆಯಲ್ಲಿ ಇರುವ ಮ್ಯಾನುವಲ್ ರೈಲ್ವೆ ಗೇಟ್‌ನ್ನು, ರೈಲ್ವೆ ಮೇಲ್ಸೇತುವೆಯನ್ನಾಗಿ ಪರಿವರ್ತಿಸಲು ರೂ.35 ಕೋಟಿಗಳ ಅಂದಾಜು ಮೊತ್ತದ ಕಾಮಗಾರಿಯನ್ನು ಅನುಷ್ಠಾನಗೊಳಿಸಲಾಗುವುದು" ಎಂದು ಸತೀಶ ಜಾರಕಿಹೊಳಿ ಹೇಳಿದರು.

"ನಿಲಜಿಯಿಂದ ಸಾಂಬ್ರಾ ವಿಮಾನ ನಿಲ್ದಾಣವರೆಗೆ ದ್ವಿಪಥದಿಂದ ಚತುಷ್ಪಥ ರಸ್ತೆಯನ್ನಾಗಿ ಅಭಿವೃದ್ಧಿ ಪಡಿಸಲು ರೂ. 58 ಕೋಟಿಗಳ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಿದ್ದು, ಶೀಘ್ರವಾಗಿ ಅನುಮೋದನೆ ಪಡೆದುಕೊಂಡು ಕಾರ್ಯಗತಗೊಳಿಸಲಾಗುವುದು. ಬೆಳಗಾವಿ ನಗರದಲ್ಲಿ ಒಂದು ಸುಸಜ್ಜಿತ ಜಿಲ್ಲಾ ಕ್ರೀಡಾಂಗಣ ನಿರ್ಮಿಸಲು ರೂ.60 ಕೋಟಿ ಅಂದಾಜು ಮೊತ್ತದ ವಿಸ್ತೃತ ಯೋಜನೆ ತಯಾರಿಸಲಾಗಿದ್ದು, ಪ್ರಸಕ್ತ 2023-24ನೇ ಸಾಲಿನಲ್ಲಿ ರೂ.10 ಕೋಟಿಗಳಲ್ಲಿ ಕಾಮಗಾರಿಯನ್ನು ಕೈಗೊಂಡು ಮುಂಬರುವ ಸಾಲಿನಲ್ಲಿ ಹಂತ ಹಂತವಾಗಿ ಸುಸಜ್ಜಿತ ಜಿಲ್ಲಾ ಕ್ರೀಡಾಂಗಣ ನಿರ್ಮಿಸಲಾಗುವುದು." ಎಂದು ತಿಳಿಸಿದರು.

ಸಿಎಆರ್, ಡಿಎಆರ್, ಅಗ್ನಿಶಾಮಕ, ಅಬಕಾರಿ ಇಲಾಖೆ ಸೇರಿದಂತೆ ವಿವಿಧ ಶಾಲೆಗಳ ತಂಡದಿಂದ ಆಕರ್ಷಕ ಪಥಸಂಚಲನ ನಡೆಯಿತು. ತೆರೆದ ವಾಹನದಲ್ಲಿ ಪರಿವೀಕ್ಷಿಸಿದ ಸಚಿವ ಸತೀಶ ಜಾರಕಿಹೊಳಿ ಅವರು ಗೌರವ ವಂದನೆ ಸ್ವೀಕರಿಸಿದರು. ಈ ವೇಳೆ ಶಾಸಕರಾದ ಆಸೀಫ್ ಸೇಠ್, ಮಹೇಂದ್ರ ತಮ್ಮನ್ನವರ, ಜಿಲ್ಲಾಧಿಕಾರಿ ನಿತೇಶ ಪಾಟೀಲ, ಜಿಪಂ ಸಿಇಒ ರಾಹುಲ ಶಿಂಧೆ, ನಗರ ಪೊಲೀಸ್ ಆಯುಕ್ತ ಎಸ್.ಎನ್.ಸಿದ್ದರಾಮಪ್ಪ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ, ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ ಸೇರಿ ಮತ್ತಿತರರು ಇದ್ದರು.

ಇದನ್ನೂ ಓದಿ: 'ಜಾತಿ, ಧರ್ಮಗಳಂತಹ ಭಾವನಾತ್ಮಕ ವಿಷಯಗಳ ದುರ್ಬಳಕೆ ಸಂವಿಧಾನಕ್ಕೆ ಬಗೆವ ದ್ರೋಹ'

Last Updated :Jan 26, 2024, 7:57 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.