ETV Bharat / state

'ಜಾತಿ, ಧರ್ಮಗಳಂತಹ ಭಾವನಾತ್ಮಕ ವಿಷಯಗಳ ದುರ್ಬಳಕೆ ಸಂವಿಧಾನಕ್ಕೆ ಬಗೆವ ದ್ರೋಹ'

author img

By ETV Bharat Karnataka Team

Published : Jan 26, 2024, 2:27 PM IST

Etv Bharat
Etv Bharat

ಜಾತಿ, ಧರ್ಮಗಳಂತಹ ಭಾವನಾತ್ಮಕ ವಿಷಯಗಳನ್ನು ದುರ್ಬಳಕೆ ಮಾಡುವುದು ಪ್ರಜಾಪ್ರಭುತ್ವದ ಆಶಯಗಳಿಗೆ ವಿರುದ್ದವಾದುದು ಎಂದು ಸಿಎಂ ಸಿದ್ದರಾಮಯ್ಯ ಗಣರಾಜ್ಯೋತ್ಸವದ ಸಂದೇಶ ನೀಡಿದ್ದಾರೆ.

ಬೆಂಗಳೂರು: ಚುನಾಯಿತ ಸರ್ಕಾರ ಇಲ್ಲವೇ ಜನಪ್ರತಿನಿಧಿಗಳು ತಮ್ಮ ವೈಫಲ್ಯವನ್ನು ಮುಚ್ಚಿಹಾಕಲು ಜಾತಿ, ಧರ್ಮಗಳಂತಹ ಭಾವನಾತ್ಮಕ ವಿಷಯಗಳನ್ನು ದುರ್ಬಳಕೆ ಮಾಡುವುದು ಪ್ರಜಾಪ್ರಭುತ್ವದ ಆಶಯಗಳಿಗೆ ವಿರುದ್ದವಾದುದು ಮತ್ತು ಸಂವಿಧಾನಕ್ಕೆ ಬಗೆವ ದ್ರೋಹವಾಗಿದೆ‌ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

75ನೇ ಗಣರಾಜ್ಯೋತ್ಸವದ ಅಂಗವಾಗಿ ನಾಡಿನ ಜನತೆಗೆ ನೀಡಿದ ಸಂದೇಶದಲ್ಲಿ ಸಿಎಂ ಸಿದ್ದರಾಮಯ್ಯ, ಭಾರತವು ತನ್ನನ್ನು ತಾನು ಆಳಿಕೊಳ್ಳಲು ರಚಿಸಿಕೊಂಡ ಸಂವಿಧಾನ ಜಾರಿಗೆ ಬಂದು 2023ರ ಜನವರಿ 26ಕ್ಕೆ 75 ವರ್ಷಗಳು ತುಂಬುತ್ತಿವೆ. ಭಾರತದ ಎಲ್ಲ ನಾಗರಿಕರಿಗೆ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯವನ್ನು, ಚಿಂತನೆ, ಅಭಿವ್ಯಕ್ತಿ ನಂಬಿಕೆ ಮತ್ತು ಆರಾಧನೆಯ ಸ್ವಾತಂತ್ರ್ಯವನ್ನು, ಸ್ಥಾನಮಾನ ಮತ್ತು ಅವಕಾಶಗಳಲ್ಲಿ ಸಮಾನತೆಯನ್ನು ಖಾತರಿಪಡಿಸಿ ಎಲ್ಲರ ನಡುವೆ ಭಾತೃತ್ವವನ್ನು ಉದ್ದೀಪನಗೊಳಿಸುವುದೇ ಸಂವಿಧಾನದ ಮೂಲ ಆಶಯ. ವಿಶ್ವಕ್ಕೆ ಮಾದರಿ ಸ್ವರೂಪದ ಇಂತಹದ್ದೊಂದು ಸಂವಿಧಾನವನ್ನು ನಮಗೆ ನೀಡಿದ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಈ ಸಂದರ್ಭದಲ್ಲಿ ನೆನಪು ಮಾಡಿಕೊಂಡು ಗೌರವ ಸಲ್ಲಿಸುವುದು ನಮ್ಮೆಲ್ಲರ ಕರ್ತವ್ಯ ಎಂದಿದ್ದಾರೆ.

ಸಂವಿಧಾನವೇ ನಮ್ಮ ಧರ್ಮ ಮತ್ತು ಸಂವಿಧಾನದ ಆಶಯಗಳನ್ನು ಸಾಕಾರಗೊಳಿಸುವುದೇ ನಮ್ಮ ರಾಜಧರ್ಮ ಎಂದು ತ್ರಿಕರಣಪೂರ್ವಕವಾಗಿ ನಂಬಿಕೊಂಡು ಬಂದಿರುವ ನಮ್ಮ ಸರ್ಕಾರ, ಜಾತಿ-ಧರ್ಮಗಳ ಭೇದವಿಲ್ಲದೆ ಸಂಪತ್ತು, ಅವಕಾಶ ಮತ್ತು ಅಧಿಕಾರದಲ್ಲಿ ಸರ್ವರಿಗೂ ಸಮಪಾಲು ಸಿಗಬೇಕೆಂಬ ಸರ್ವೋದಯದ ಉದಾತ್ತ ಉದ್ದೇಶ ಹೊಂದಿದೆ. ಸಂವಿಧಾನ ಎನ್ನುವುದು ಪ್ರಜಾಪ್ರಭುತ್ವದ ಆತ್ಮ. ಸಂವಿಧಾನ ಇಲ್ಲದ ಪ್ರಜಾಪ್ರಭುತ್ವ, ಆತ್ಮ ಇಲ್ಲದ ಜೀವ. ಇತ್ತೀಚೆಗೆ ಸಂವಿಧಾನ ಬದಲಾವಣೆಯ ಕೂಗು ಅಲ್ಲಲ್ಲಿ ಕೇಳಿಬರುತ್ತಿದೆ. ಇದನ್ನು ಪ್ರಜಾಪ್ರಭುತ್ವ ಪ್ರೇಮಿಗಳೆಲ್ಲರೂ ಒಕ್ಕೊರಲಿನಿಂದ ಖಂಡಿಸಬೇಕಾಗಿದೆ. ಈ ಖಂಡನೆಗೆ ನಾನೂ ದನಿಗೂಡಿಸುತ್ತೇನೆ ಎಂದು ತಿಳಿಸಿದ್ದಾರೆ.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪಾಲ್ಗೊಳ್ಳುವ ಪ್ರತಿಯೊಬ್ಬರಿಗೂ ಸಂವಿಧಾನದ ಬಗ್ಗೆ ಗೌರವ ಮತ್ತು ಅದರ ಆಶಯಗಳ ಬಗ್ಗೆ ಬದ್ಧತೆ ಇರಲೇಬೇಕು. ಸಂವಿಧಾನೇತರ ಶಕ್ತಿಗಳಿಗೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜಾಗ ಇಲ್ಲ. ಸಂವಿಧಾನದ ಬಗ್ಗೆ ಭಿನ್ನಾಭಿಪ್ರಾಯ ಇಟ್ಟುಕೊಂಡು ಸಂಸದೀಯ ಪ್ರಜಾಪ್ರಭುತ್ವದ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬಾರದು. ಇದು ಸಂವಿಧಾನಕ್ಕೆ ಮಾಡುವ ಅಪಚಾರ ಮಾತ್ರವಲ್ಲ, ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕ ಕೂಡಾ ಹೌದು. ಇಂತಹವರನ್ನು ತಿರಸ್ಕರಿಸುವುದು ಪ್ರತಿಯೊಬ್ಬ ಪ್ರಜೆಯ ಧರ್ಮವಾಗಿದೆ. ಜಾತ್ಯತೀತತೆ ಸಂವಿಧಾನದ ಮುಖ್ಯ ಆಶಯಗಳಲ್ಲಿ ಒಂದು. ಇದು ಅನ್ಯಧರ್ಮವನ್ನು ದ್ವೇಷಿಸದೆ ಸ್ವಂತ ಧರ್ಮವನ್ನು ಪ್ರೀತಿಸುವ ಉದಾತ್ತ ಮಾನವೀಯ ಗುಣ. ಜಾತಿ, ಧರ್ಮವನ್ನು ಮೀರಿ 'ಮನುಷ್ಯ ಜಾತಿ ತಾನೊಂದೆ ವಲಂ' ಎಂಬ ಕವಿವಾಣಿ ಕೂಡಾ ಸಂವಿಧಾನದ ಈ ಆಶಯವನ್ನೇ ನೆನಪು ಮಾಡಿಕೊಡುತ್ತದೆ ಎಂದು ಹೇಳಿದ್ದಾರೆ.

ಧಾರ್ಮಿಕ ರಾಷ್ಟ್ರೀಯತೆಯ ಮೂಲಕ ದೇಶ ಕಟ್ಟಲು ಸಾಧ್ಯವಾಗದು. ಇದು ಬಹುಧರ್ಮ, ಬಹುಭಾಷೆ ಮತ್ತು ಬಹುಸಂಸ್ಕೃತಿಯನ್ನು ಪ್ರತಿಪಾದಿಸುವ ಪ್ರಜಾಪ್ರಭುತ್ವಕ್ಕೆ ಮಾರಕವಾದುದು. ಪ್ರಜಾಪ್ರಭುತ್ವವನ್ನು ನಂಬಿರುವ ಯಾರೂ ಇದನ್ನು ಒಪ್ಪಲು ಸಾಧ್ಯ ಇಲ್ಲ. ಸ್ವಾತಂತ್ರ್ಯ ಎನ್ನುವುದು ಕೇವಲ ರಾಜಕೀಯ ಕ್ಷೇತ್ರಕ್ಕೆ ಸೀಮಿತವಾಗಿಲ್ಲ, ಆರ್ಥಿಕ ಮತ್ತು ಸಾಮಾಜಿಕ ಸ್ವಾತಂತ್ರ್ಯ ಸಾಕ್ಷಾತ್ಕಾರಗೊಂಡಾಗ ಮಾತ್ರ ಪ್ರಜಾಪ್ರಭುತ್ವ. ಇದನ್ನೇ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಾಮಾಜಿಕ ಪ್ರಜಾಪ್ರಭುತ್ವ ಎಂದು ಹೇಳಿದ್ದು. ಸಂವಿಧಾನದ ಈ ಆಶಯವನ್ನು ಸಾಕಾರಗೊಳಿಸುವುದು ಚುನಾಯಿತ ಸರ್ಕಾರದ ಕರ್ತವ್ಯವಾಗಿದೆ. ನಮ್ಮ ಯೋಚನೆಗಳು ಮತ್ತು ಯೋಜನೆಗಳು ಸಂವಿಧಾನದ ಆಶಯಗಳೇ ಆಗಿವೆ. ನಮ್ಮ ಆಡಳಿತದ 'ಕರ್ನಾಟಕ ಮಾದರಿ' ಬಗ್ಗೆ ಇಡೀ ದೇಶ ಮಾತ್ರ ಅಲ್ಲ ವಿಶ್ವಶ್ರೇಷ್ಠ ಆರ್ಥಿಕ ತಜ್ಞರು ಕೂಡಾ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ಇದು ಕನ್ನಡಿಗರೆಲ್ಲರಿಗೂ ಅಭಿಮಾನದ ಸಂಗತಿ.

ಬಡತನ ಎನ್ನುವುದು ಅಪರಾಧ ಅಲ್ಲ. ಇದು ಸಂಪತ್ತು ಮತ್ತು ಅವಕಾಶಗಳ ಅಸಮಾನ ಹಂಚಿಕೆಯ ಫಲ ಎನ್ನುವುದನ್ನು ನಾವು ಮರೆಯಬಾರದು. ನಮ್ಮ ಸಂಪತ್ತು ಮತ್ತು ಅವಕಾಶದ ಸಮಾನ ಹಂಚಿಕೆಯಾದಾಗ ಮಾತ್ರ ಸಮೃದ್ಧ, ಬಲಿಷ್ಠ ಮತ್ತು ಕ್ರಿಯಾಶಾಲಿಯಾದ ಸಮಾಜ ನಿರ್ಮಾಣ ಸಾಧ್ಯ ಎನ್ನುವದನ್ನು ನಾನು ಬಲವಾಗಿ ನಂಬಿದ್ದೇನೆ. ಈ ನಂಬಿಕೆಯ ಆಧಾರದಲ್ಲಿಯೇ ಸಾರ್ವತ್ರಿಕ ಮೂಲ ಆದಾಯದ (Universal basic income ) ಪರಿಕಲ್ಪನೆಯಡಿ ರೂಪುಗೊಂಡದ್ದು ನಮ್ಮ ಪಂಚ ಗ್ಯಾರಂಟಿ ಯೋಜನೆಗಳು. ಇಂದು ಇಡೀ ದೇಶ ಗ್ಯಾರಂಟಿ ಯೋಜನೆಗಳ ಬಗ್ಗೆ ಮಾತನಾಡುತ್ತಿವೆ. ಹಲವಾರು ರಾಜ್ಯಗಳು ಇದನ್ನು ಅನುಷ್ಠಾನಕ್ಕೆ ತರುತ್ತಿವೆ.

ವಚನ ಭಂಗಕ್ಕಿಂತ ದೊಡ್ಡ ದೇಶದ್ರೋಹ ಮತ್ತೊಂದಿಲ್ಲ ಎಂದು ನಾನು ಬಲವಾಗಿ ನಂಬಿದವನು. ಇದು ನಮ್ಮ ಪಕ್ಷದ ಬದ್ಧತೆ ಕೂಡಾ ಆಗಿದೆ. ಭರವಸೆಗಳನ್ನು ನೀಡಿ ಚುನಾವಣೆಯಲ್ಲಿ ಗೆದ್ದು ಬಂದಿರುವ ನಮಗೆ ಅದನ್ನು ಉಳಿಸಿಕೊಳ್ಳುವ ಜವಾಬ್ದಾರಿಯೂ ಇದೆ. ಇದನ್ನು ನಾವು ಮರೆತಿಲ್ಲ. ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿರುವ ಗ್ಯಾರಂಟಿ ಯೋಜನೆಗಳ ಭರವಸೆಯ ಈಡೇರಿಕೆಗೆ ಮೊದಲ ಸಚಿವ ಸಂಪುಟದಲ್ಲಿಯೇ ತಾತ್ವಿಕ ಅಂಗಿಕಾರ ಪಡೆದು ಜಾರಿ ಪ್ರಕ್ರಿಯೆಗೆ ಚಾಲನೆ ನೀಡಿದ್ದೆವು. ಇದರ ಫಲವಾಗಿ ಇಂದು ಐದು ಗ್ಯಾರಂಟಿ ಯೋಜನೆಗಳು ಅನುಷ್ಠಾನಗೊಂಡಿವೆ ಎನ್ನುವುದನ್ನು ನಿಮ್ಮ ಮುಂದೆ ಹೇಳಲು ಹೆಮ್ಮೆ ಪಡುತ್ತೇನೆ. ದೇಶದ ಯಾವುದೇ ರಾಜ್ಯ ಸರ್ಕಾರ ಕೂಡಾ ಇಂತಹದ್ದೊಂದು ಸಾಧನೆ ಮಾಡಿಲ್ಲ ಎನ್ನುವುದನ್ನು ವಿಶ್ವಾಸಪೂರ್ವಕವಾಗಿ ಹೇಳಬಲ್ಲೆ. ಇದು ರಾಜ್ಯದ ಜನತೆ ನಮ್ಮ ಸರ್ಕಾರಕ್ಕೆ ಕೊಟ್ಟಿರುವ ಶಕ್ತಿ ಎನ್ನುವುದನ್ನು ನಾವು ಮರೆತಿಲ್ಲ.

ನಮ್ಮ ನಡೆ ಅಭಿವೃದ್ಧಿಯ ಕಡೆಗೆ ಸಾಗುತ್ತಿದ್ದರೂ ನಮ್ಮ ಕನಸಿನ ಭಾರತದ ಗುರಿಯನ್ನು ತಲುಪಲು ಸಾಧ್ಯವಾಗಿಲ್ಲ ಎನ್ನುವುದನ್ನು ವಿಷಾದದಿಂದಲೇ ಒಪ್ಪಬೇಕಾಗಿದೆ. ಅಭಿವೃದ್ದಿಯ ದಾರಿಯಲ್ಲಿ ಹೊಸ ಸವಾಲುಗಳು ಎದುರಾಗಿವೆ. ಮುಖ್ಯವಾಗಿ ಇತ್ತೀಚೆಗೆ ಹೆಡೆ ಎತ್ತಿರುವ ಕೋಮುವಾದ, ನಮ್ಮ ಜಾತ್ಯತೀತ ಸಮಾಜಕ್ಕೆ ಅಪಾಯವನ್ನುಂಟು ಮಾಡುವ ಆತಂಕವನ್ನು ಅನುಭವಿಸುತ್ತಿದ್ದೇವೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕನ್ನಡಿಗರು ನೀಡಿರುವ ಜನಮತದಲ್ಲಿ, ಸಂವಿಧಾನದ ಆಶಯವಾದ ಜಾತ್ಯತೀತ ಸಮಾಜದ ರಕ್ಷಣೆಯ ಸಂದೇಶವೂ ಇದೆ ಎನ್ನುವುದನ್ನು ನಮ್ಮ ಸರ್ಕಾರ ಅರ್ಥಮಾಡಿಕೊಂಡಿದೆ. ನಮ್ಮ ಸರ್ಕಾರ ಕೋಮುವಾದಿ ಶಕ್ತಿಗಳ ಹುಟ್ಟಡಗಿಸಲು ಸರ್ವ ಸನ್ನದ್ಧವಾಗಿದೆ. ಸಮಾಜವನ್ನು ಧರ್ಮಗಳ ಆಧಾರದಲ್ಲಿ ವಿಭಜಿಸುವ ಹುನ್ನಾರಕ್ಕೆ ಜನತೆ ಬಲಿಯಾಗಬಾರದು.

ಸಹೃದಯಿ ಕನ್ನಡಿಗರು ಇಂತಹ ಹುನ್ನಾರಗಳಿಗೆ ಬಲಿಯಾಗದೆ ಪ್ರಜಾಪ್ರಭುತ್ವದ ರಕ್ಷಣೆಯಲ್ಲಿ ತೊಡಗಿರುವ ನಮ್ಮ ಸರ್ಕಾರದ ಜೊತೆ ದೃಡಚಿತ್ತದಿಂದ ನಿಲ್ಲಬೇಕು ಎಂದು ಮನವಿ ಮಾಡಿಕೊಳ್ಳುತ್ತಿದ್ದೇನೆ. ಸಂವಿಧಾನವನ್ನು ನಾವು ರಕ್ಷಿಸಿದರೆ ಸಂವಿಧಾನವು ನಮ್ಮನ್ನು ರಕ್ಷಿಸುತ್ತದೆ ಎಂಬ ತತ್ವವನ್ನು ಮರೆಯದಿರೋಣ. ಈ ಮೂಲಕ ಭಾರತದ ಗಣರಾಜ್ಯದ ಅಮೃತ ಮಹೋತ್ಸವವನ್ನು ಅರ್ಥಪೂರ್ಣವಾಗಿಸೋಣ ಎಂದು ಸಿಎಂ ಆಶಿಸಿದ್ದಾರೆ.

ಇದನ್ನೂ ಓದಿ: ಸರ್ಕಾರ ನೀಡಿದ ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಿ, ಬದ್ಧತೆ ಮೆರೆದಿದೆ: ರಾಜ್ಯಪಾಲ ಗೆಹ್ಲೋಟ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.