ETV Bharat / state

ಜಗದೀಶ್ ಶೆಟ್ಟರ್ ಘರ್​ ವಾಪ್ಸಿಗೆ ಪ್ರಹ್ಲಾದ್ ಜೋಶಿ ಮೊದಲ ಪ್ರತಿಕ್ರಿಯೆ

author img

By ETV Bharat Karnataka Team

Published : Jan 27, 2024, 8:07 PM IST

Updated : Jan 27, 2024, 10:59 PM IST

ಪ್ರಹ್ಲಾದ್ ಜೋಶಿ
ಪ್ರಹ್ಲಾದ್ ಜೋಶಿ

ಧಾರವಾಡ ಲೋಕಸಭೆ ಚುನಾವಣೆ ಟಿಕೆಟ್ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಜೋಶಿ ಬಿಟ್ಟರೆ ಇನ್ಯಾರು ಅನ್ನೋ ಮೂಲಕ ಪರೋಕ್ಷವಾಗಿ ನಾನೇ ಅಭ್ಯರ್ಥಿ ಎಂದು ಹೇಳಿಕೊಂಡರು.

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

ಹುಬ್ಬಳ್ಳಿ: ಜಗದೀಶ್ ಶೆಟ್ಟರ್ ಬಿಜೆಪಿಗೆ ಬಂದಿರುವುದು ಸಂತೋಷವಾಗಿದೆ. ಈ ವಿಷಯ ಕೇಳಿ ಬಹಳ ಖುಷಿ ಕೂಡ ಆಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.

ನಗರದ ವಿಮಾನ ನಿಲ್ದಾಣದಲ್ಲಿಂದು ಮಾತನಾಡಿದ ಅವರು, ಜಗದೀಶ್ ಶೆಟ್ಟರ್ ಬಿಜೆಪಿ ಸೇರ್ಪಡೆ ವೇಳೆ ಅನುಪಸ್ಥಿತಿಗೆ ವಿಶೇಷ ಅರ್ಥ ಬೇಕಿಲ್ಲ. ಇನ್ನೊಂದು ಅರ್ಧ ಗಂಟೆಯಲ್ಲಿ ಜಗದೀಶ್ ಶೆಟ್ಟರ್ ಪಕ್ಷ ಸೇರ್ಪಡೆ ಆಗುತ್ತಾರೆ ಎಂದು ರಾಷ್ಟ್ರೀಯ ಅಧ್ಯಕ್ಷರು ಫೋನ್ ಮಾಡಿ ಹೇಳಿದ್ದರು. ನಾನು ಉಪರಾಷ್ಟ್ರಪತಿಗಳ ಜೊತೆಗಿನ ಸಭೆಯಲ್ಲಿದ್ದ ಕಾರಣ ಆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಿರಲಿಲ್ಲ. ಶೆಟ್ಟರ್ ಬಿಜೆಪಿಯಲ್ಲೇ ಇದ್ದವರು. ಅವರು ಬಂದಿದ್ದು ಪಕ್ಷಕ್ಕೆ ಒಳ್ಳೆಯದಾಗುತ್ತದೆ, ನನಗೂ ಸಂತಸವಾಗಿದೆ. ಆದರೆ, ಷರತ್ತುಗಳ ಬಗ್ಗೆ ನನಗೆ ತಿಳಿದಿಲ್ಲ. ಅವರು ಆಗಮನಕ್ಕೆ ನನ್ನ ವಿರೋಧವಿಲ್ಲ. ಇದ್ದಿದ್ದರೆ ಹೇಳುತ್ತಿದೆ ಎಂದು ಮಾಧ್ಯಮದವರ ಕೆಲವು ಪ್ರಶ್ನೆಗಳಿಗೆ ಜೋಶಿ ಉತ್ತರಿಸಿದರು.

ಅವರು ಪಕ್ಷಕ್ಕೆ ವಾಪಸ್​ ಆಗುವ ಬಗ್ಗೆ 6 ತಿಂಗಳ ಹಿಂದೆಯೇ ಹೇಳಿದ್ದೆ. ನಾನು ಇದನ್ನು ಯಾವುದೇ ವ್ಯಂಗ್ಯದಿಂದ ಹೇಳುತ್ತಿಲ್ಲ. ಶೆಟ್ಟರ್ ಆಗಮನ ವಿಚಾರದಲ್ಲಿ ಸ್ಥಳೀಯ ನಾಯಕರನ್ನು ನಿರ್ಲಕ್ಷ್ಯ ಮಾಡಿಲ್ಲ, ಇದನ್ನು ಅವರ ಗಮನಕ್ಕೂ ತಂದಿದ್ದೇನೆ. ಸದ್ಯ ಅವರ ಆಗಮನ ಖುಷಿ ತರಿಸಿದೆ. ಭಾಗದಲ್ಲಿ ಎಲ್ಲರೂ ಒಂದುಗೂಡಿ ಪಕ್ಷ ಬಲವರ್ಧನೆ ಮಾಡುತ್ತೇವೆ. ನಮಗೆ ಲಿಂಗಾಯತ ಸೇರಿದಂತೆ ಎಲ್ಲ ಸಮುದಾಯಗಳೂ ಬೇಕು. ಇನ್ನು ಲಕ್ಷ್ಮಣ ಸವದಿ ಅವರಲ್ಲಿ ಬಿಜೆಪಿಯ ವೈಚಾರಿಕ ರಕ್ತವಿದೆ. ಅವರು ಪಕ್ಷಕ್ಕೆ ಬಂದ್ರೆ ಖುಷಿ. ಗಾಲಿ ಜನಾರ್ದನರೆಡ್ಡಿ‌ ಕೂಡಾ ಓರಿಜನಲ್ ಬಿಜೆಪಿಯಾಗಿದ್ದು, ಅವರು ಕೂಡ ಬರಬಹುದು. ಇವತ್ತಿನ ಕಾರ್ಯಕಾರಿಣಿಯಲ್ಲಿ ಜಗದೀಶ್ ಶೆಟ್ಟರ್ ಅವರಿಗೆ ವೆಲಕಮ್ ಬ್ಯಾಕ್ ಹೇಳಿದ್ದೇನೆ ಎಂದರು.

ಧಾರವಾಡ ಲೋಕಸಭೆ ಚುನಾವಣೆ ಟಿಕೆಟ್ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಜೋಶಿ ಬಿಟ್ಟರೆ ಇನ್ಯಾರು ಅನ್ನೋ ಮೂಲಕ ಪರೋಕ್ಷವಾಗಿ ನಾನೇ ಅಭ್ಯರ್ಥಿ ಎಂದು ಹೇಳಿಕೊಂಡರು. ನಮ್ಮ ಪಕ್ಷ ಈಗಾಗಲೇ ಚುನಾವಣೆ ತಯಾರಿ ನಡೆಸಿದೆ. ಅಭ್ಯರ್ಥಿ ಹೆಸರು ಘೋಷಣೆ ಮುನ್ನ ನಾನ ಏನೂ ಮಾತಾಡಲ್ಲ. ಆದರೆ ನಾನು ಚುನಾವಣೆ ತಯಾರಿ ನಡೆಸಿದ್ದೇನೆ. ಧಾರವಾಡ ಲೋಕಸಭೆ ಚುನಾವಣೆಗೆ ನಾನೇ ಅಭ್ಯರ್ಥಿ ಎಂದು ಹೇಳುವ ಮೂಲಕ ರಾಜ್ಯ ಕಾಂಗ್ರೆಸ್​ ಸರ್ಕಾರದ ವಿರುದ್ಧ ಇದೇ ವೇಳೆ ವಾಗ್ದಾಳಿ ನಡೆಸಿದರು.

ಶಾಸಕ ಅರವಿಂದ ಬೆಲ್ಲದ

ಜೋಶಿ ಪರ ಬ್ಯಾಟ್ ಮಾಡಿದ ಬೆಲ್ಲದ: ಹೈಕಮಾಂಡ್ ಯಾವುದೇ ನಿರ್ಧಾರ ತೆಗೆದುಕೊಂಡರು ನಾವು ಅದನ್ನು ಸ್ವಾಗತ ಮಾಡುತ್ತೇವೆ. ಧಾರವಾಡ ಲೋಕಸಭೆ ಟಿಕೆಟ್ ವಿಚಾರದಲ್ಲಿ ಯಾವುದೇ ಉಹಾಪೋಹ ಇಲ್ಲ. ಜೋಶಿ ಸಾಹೇಬರೇ ನಮ್ಮ ನಾಯಕರು, ಅವರೇ ನಮ್ಮ ಲೋಕಸಭೆ ಅಭ್ಯರ್ಥಿ. ಟಿಕೆಟ್ ಅವರಿಗೆ ಸಿಗಲಿದೆ ಎಂಬ ವಿಶ್ವಾಸವಿದೆ. ದೊಡ್ಡ ಅಂತರದಿಂದ ಅವರು ಗೆಲ್ಲಲ್ಲಿದ್ದಾರೆ ಎಂದು ಶಾಸಕ ಅರವಿಂದ ಬೆಲ್ಲದ ಭವಿಷ್ಯ ನುಡಿದರು.

ಶೆಟ್ಟರು ನಿಮ್ಮ ನಾಯಕರ ಅಲ್ಲವೇ? ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ‌ನೀಡಿದ ಅವರು, ನಾನು ಹಾಗೆ ಹೇಳಿಲ್ಲ. ಆದರೆ, ನಾನು ಹೇಳುವುದು ಪ್ರಹ್ಲಾದ್​ ಜೋಶಿ ಅವರನ್ನು ಬಿಟ್ಟರೆ ಯಾರೂ ಇಲ್ಲ ಅಂತ. ಶೆಟ್ಟರ್ ಸೇರ್ಪಡೆಯಿಂದ ನನಗೆ ಯಾವುದೇ ಅಸಮಾಧಾನ ಇಲ್ಲ. ಪಕ್ಷದ ಹೈಕಮಾಂಡ್ ತೀರ್ಮಾನಕ್ಕೆ ನಾವು ಬದ್ಧ. ಶೆಟ್ಟರ್ ಘರ್​ ವಾಪ್ಸಿ ನಂತರ ಯಾವ ಬಣಗಳು ಆಗುವುದಿಲ್ಲ. ಅವರು ಪಕ್ಷಕ್ಕೆ ಬರುವ ಬಗ್ಗೆ ನಾವು ಯೋಚನೆ ಮಾಡಿರಲಿಲ್ಲ. ಆದರೆ, ನಮ್ಮ ನಾಯಕರು ಹೇಳಿದ ಬಳಿಕ ಗೊತ್ತಾಯಿತು ಎಂದರು.

ಮಾಜಿ ಸಚಿವ ಹಾಲಪ್ಪ ಆಚಾರ

ಹಾಲಪ್ಪ ಆಚಾರ ಹೇಳಿಕೆ: ಬಹಳ ವರ್ಷಗಳ ಕಾಲ ಶೆಟ್ಟರ್ ಅವರು ಬಿಜೆಪಿಯಲ್ಲಿ ಕೆಲಸ ಮಾಡಿದ್ದಾರೆ. ಬಿಜೆಪಿ ಪ್ರಭಾವ ಅವರ ಮೇಲೆ ಬಹಳಷ್ಟಿದೆ. ಅದಕ್ಕಾಗಿ ಮರಳಿ ಬಂದಿದ್ದಾರೆ. ಬಿಜೆಪಿಯಲ್ಲಿ ಅವರು ಸಾಕಷ್ಟು ಜವಾಬ್ದಾರಿಯುತ ಕೆಲಸ ನಿಭಾಯಿಸಿದ್ದಾರೆ. ಬಿಜೆಪಿಯಲ್ಲಿರುವ ಬಳಗ ಕಾಂಗ್ರೆಸ್‌ನಲ್ಲಿ ಅವರಿಗೆ ಸಿಗಲಿಲ್ಲ. ಬಿಜೆಪಿ ಮೊದಲಿಂದಲೂ ಅವರ ರಕ್ತದಲ್ಲಿ ಕೂಡಿ ಬಂದಿದೆ ಎಂದು ಮಾಜಿ ಸಚಿವ ಹಾಲಪ್ಪ ಆಚಾರ ಕೂಡ ಜಗದೀಶ್​ ಶೆಟ್ಟರ್​ ಘರ್ ವಾಪ್ಸಿ ಬಗ್ಗೆ ಖುಷಿ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಶೆಟ್ಟರ್ ಬೆಳೆಗಾವಿಯಿಂದ ಸ್ಪರ್ಧಿಸಿದರೆ, ಅಲ್ಲಿ ವ್ಯಕ್ತಿ ಮುಖ್ಯವಲ್ಲ, ಪಕ್ಷ ಪ್ರಮುಖವಾಗುತ್ತೆ: ಸತೀಶ್ ಜಾರಕಿಹೊಳಿ

Last Updated :Jan 27, 2024, 10:59 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.