ETV Bharat / state

ಪರಿಷತ್ ಚುನಾವಣೆಗೆ ಹೆಚ್ಚಿದ ಟಿಕೆಟ್ ಆಕಾಂಕ್ಷಿಗಳು: ಮೈತ್ರಿ ಮುಂದುವರೆಯುವುದೇ? - Parishad Election

author img

By ETV Bharat Karnataka Team

Published : May 4, 2024, 8:09 PM IST

ಲೋಕಸಭೆ ಚುನಾವಣೆ ಕಾವು ಮುಗಿಯುತ್ತ ಸಾಗುತ್ತಿದ್ದು, ಈಗ ಪರಿಷತ್​ ಚುನಾವಣೆ ಕಾವೇರುತ್ತಿದೆ. ಮೈಸೂರಿನಲ್ಲಿ ಕಾಂಗ್ರೆಸ್​ ಅಭ್ಯರ್ಥಿ ಬಹುತೇಕ ಖಚಿತವಾಗಿದ್ದು, ಬಿಜೆಪಿ ಮತ್ತು ಜೆಡಿಎಸ್​ ಮಧ್ಯೆ ಮೈತ್ರಿ ಮುಂದುವರಿಯುತ್ತಾ ಎಂಬುದು ಪ್ರಶ್ನೆಯಾಗಿದೆ.

TICKET ASPIRANTS  BJP JDS ALLIANCE  MYSURU
ಪರಿಷತ್ ಚುನಾವಣೆಗೆ ಹೆಚ್ಚಿದ ಟಿಕೆಟ್ ಆಕಾಂಕ್ಷಿಗಳು (Etv Bharat)

ಮೈಸೂರು: ಲೋಕಸಭಾ ಚುನಾವಣೆಯ 2 ನೇ ಹಂತದ ಮತದಾನ ಮುಗಿದ ತಕ್ಷಣ, ಪರಿಷತ್ ಚುನಾವಣೆ ಬರಲಿದೆ. ಈ ಬಾರಿ ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ಯಾರಿಗೆ ಟಿಕೆಟ್ ಎಂಬ ಚರ್ಚೆ ಆರಂಭವಾಗಿದ್ದು, ಕಾಂಗ್ರೆಸ್​ನಿಂದ ಟಿಕೆಟ್ ಈಗಾಗಲೇ ಬಹುತೇಕ ಫೈನಲ್ ಆಗಿದೆ. ಇದರ ನಡುವೆ ಜೆಡಿಎಸ್ ಹಾಗೂ ಬಿಜೆಪಿಯಿಂದ ಯಾರಿಗೆ ಟಿಕೆಟ್ ಸಿಗಲಿದೆ, ಇಲ್ಲಿಯೂ ಸಹ ಮೈತ್ರಿ ಮುಂದುವರೆಯುವುದೇ ಎನ್ನುವುದನ್ನ ಕಾದು ನೋಡಬೇಕಿದೆ.

ಈಗಾಗಲೇ ನಾಲ್ಕು ಬಾರಿ ಗೆದ್ದಿರುವ ಮರಿತಿಬ್ಬೇಗೌಡ ಕಾಂಗ್ರೆಸ್ ಅಭ್ಯರ್ಥಿ ಎಂಬುದು ಬಹುತೇಕ ಫಿಕ್ಸ್ ಆಗಿದೆ. ಈ ನಡುವೆ ಜೆಡಿಎಸ್​ನಿಂದ ಶ್ರೀಕಂಠೇಗೌಡ ಹಾಗೂ ವಿವೇಕಾನಂದ ಎಂಬುವರ ಹೆಸರು ಕೇಳಿ ಬರುತ್ತಿದೆ. ಬಿಜೆಪಿಯಿಂದ E.C. ನಿಂಗರಾಜೇಗೌಡ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಪರಿಷತ್ ಚುನಾವಣೆಯಲ್ಲೂ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯಾದರೆ ಜೆಡಿಎಸ್​ನ ಅಭ್ಯರ್ಥಿಗೆ ಟಿಕೆಟ್ ಸಿಗುವ ಸಾಧ್ಯತೆ ಇದೆ ಎನ್ನಲಾಗ್ತಿದೆ. ಈ ನಡುವೆ ಹಾಸನ ಪೆನ್​ಡ್ರೈವ್ ಪ್ರಕರಣ ದಳಪತಿಗಳಿಗೆ ತಲೆನೋವಾಗಿದೆ.

ಕಾಂಗ್ರೆಸ್ ನಿಂದ ಮರಿತಿಬ್ಬೇಗೌಡ ಅಭ್ಯರ್ಥಿ?: ಜೆಡಿಎಸ್​ನಿಂದ ಕಾಂಗ್ರೆಸ್​ಗೆ ಬಂದಿರುವ ಮರಿತಿಬ್ಬೇಗೌಡ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಎಂದು ನಿಶ್ಚಯವಾಗಿದ್ದು, ಘೋಷಣೆ ಒಂದೇ ಬಾಕಿಯಿದೆ. ಈಗಾಗಲೇ 2 ಸುತ್ತು ಪ್ರಚಾರ ಕೈಗೊಂಡಿರುವ ಮರಿತಿಬ್ಬೇಗೌಡ ನಾಲ್ಕು ಬಾರಿ ಪರಿಷತ್​ಗೆ ಶಿಕ್ಷಕರ ಕ್ಷೇತ್ರದಿಂದ ಆಯ್ಕೆ ಆಗಿದ್ದಾರೆ. 2000 ದಲ್ಲಿ ಕಾಂಗ್ರೆಸ್​ನಿಂದ, 2006 ರಲ್ಲಿ ಪಕ್ಷೇತರರಾಗಿ ಹಾಗೂ 2012 ಮತ್ತು 2018 ನಲ್ಲಿ ಜಾತ್ಯತೀತ ಜನತಾದಳದಿಂದ ಆಯ್ಕೆ ಆಗಿದ್ದು, 5 ನೇ ಬಾರಿ ಪರಿಷತ್​ಗೆ ಸ್ಪರ್ಧೆ ಮಾಡುತ್ತಿದ್ದಾರೆ. ಆದರೆ ಈ ಬಾರಿ ಸ್ಪರ್ಧೆ ಮಾಡುತ್ತಿರುವುದು ಮಾತ್ರ ಕಾಂಗ್ರೆಸ್​ನಿಂದ ಎಂಬುದು ವಿಶೇಷ.

ದಕ್ಷಿಣ ಶಿಕ್ಷಕ ಕ್ಷೇತ್ರದಲ್ಲಿ ಮತದಾರರು ಎಷ್ಟು?: ದಕ್ಷಿಣ ಶಿಕ್ಷಕ ಕ್ಷೇತ್ರ ಮೈಸೂರು, ಮಂಡ್ಯ, ಚಾಮರಾಜನಗರ ಹಾಗೂ ಹಾಸನ ಜಿಲ್ಲೆಯ ಮತದಾರರನ್ನ ಒಳಗೊಂಡಿದೆ. ಡಿಸೆಂಬರ್ ಒಳಗಡೆಗೆ ಪರಿಷ್ಕರಣೆ ಆದ ಮತದಾರರ ಒಟ್ಟು ಸಂಖ್ಯೆ 18,365 ಆಗಿದೆ. ಅದರಲ್ಲಿ ಮೈಸೂರು ಜಿಲ್ಲೆಯಲ್ಲಿ 8,267, ಚಾಮರಾಜನಗರದಲ್ಲಿ 2,084, ಮಂಡ್ಯ ದಕ್ಷಿಣ 4,900 ಹಾಗೂ ಹಾಸನದಲ್ಲಿ 3,300 ಮತದಾರರು ಇದ್ದು. ಅಧಿಸೂಚನೆ ಪ್ರಕಟವಾಗುವ ಸಂದರ್ಭದಲ್ಲಿ ಅಂತಿಮ ಹಂತದ ಮತದಾರರ ಪಟ್ಟಿಯನ್ನ ಪ್ರಕಟಿಸಲಾಗುವುದು ಎಂದು ತಿಳಿದು ಬಂದಿದೆ.

ಮೇ 09ಕ್ಕೆ ಅಧಿಸೂಚನೆ ಪ್ರಕಟ: ಮೇ 9ಕ್ಕೆ ಚುನಾವಣಾ ಅಧಿಕಾರಿಯಿಂದ ಅಧಿಸೂಚನೆ ಪ್ರಕಟವಾಗಲಿದೆ. ಅಂದಿನಿಂದಲೇ ನಾಮಪತ್ರ ಸಲ್ಲಿಕೆ ಆರಂಭವಾಗಲಿದ್ದು, ಮೇ 16ಕ್ಕೇ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನಾಂಕ ಆಗಿರುತ್ತದೆ. ಮೇ 17 ನಾಮಪತ್ರ ಪರಿಶೀಲನೆ, ಮೇ 20ಕ್ಕೆ ನಾಮಪತ್ರ ವಾಪಸ್​ ತೆಗೆದುಕೊಳ್ಳಲು ಕೊನೆ ದಿನಾಂಕ, ಜೂನ 3ಕ್ಕೆ ಬೆಳಗ್ಗೆ 8 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಮತದಾನ ನಡೆಯಲಿದ್ದು, ಜೂನ್ 6ಕ್ಕೆ ಮತ ಎಣಿಕೆ ಹಾಗೂ ಜೂನ್ 12 ಕ್ಕೆ ಈ ಚುನಾವಣಾ ಪ್ರಕ್ರಿಯೆ ಮುಕ್ತಾಯವಾಗಲಿದೆ.

ಓದಿ: ಸಿಬಿಐ ಬ್ಲೂ ಕಾರ್ನರ್ ನೋಟಿಸ್ ಹೊರಡಿಸುವ ಸಾಧ್ಯತೆ ಇದೆ, ಶೀಘ್ರ ಪ್ರಜ್ವಲ್​ ಬಂಧಿಸಲು ಕ್ರಮ: ಸಿಎಂಗೆ ಎಸ್​ಐಟಿ ಮಾಹಿತಿ - HASSAN PEN DRIVE CASE

ETV Bharat Logo

Copyright © 2024 Ushodaya Enterprises Pvt. Ltd., All Rights Reserved.