ETV Bharat / state

ನಾಗಸಂದ್ರ-ಮಾದಾವರ ನಡುವಿನ 'ನಮ್ಮ ಮೆಟ್ರೋ' ಕಾಮಗಾರಿ ಬಹುತೇಕ ಪೂರ್ಣ - Namma Metro

author img

By ETV Bharat Karnataka Team

Published : Apr 4, 2024, 8:13 PM IST

ನಾಗಸಂದ್ರ-ಮಾದಾವರ ನಡುವಿನ ನಮ್ಮ ಮೆಟ್ರೋ ಕಾಮಗಾರಿ ಬಹುತೇಕ ಪೂರ್ಣ
ನಾಗಸಂದ್ರ-ಮಾದಾವರ ನಡುವಿನ ನಮ್ಮ ಮೆಟ್ರೋ ಕಾಮಗಾರಿ ಬಹುತೇಕ ಪೂರ್ಣ

ನಾಗಸಂದ್ರ-ಮಾದಾವರ ನಡುವಿನ ನಮ್ಮ ಮೆಟ್ರೋ ಕಾಮಗಾರಿ ಮುಕ್ತಾಯ ಹಂತ ತಲುಪಿದ್ದು, ಸೆಪ್ಟೆಂಬರ್​ಗೆ ರೈಲು ಸಂಚಾರ ಆರಂಭವಾಗಲಿದೆ.

ಬೆಂಗಳೂರು: ನಮ್ಮ ಮೆಟ್ರೋ ಹಸಿರು ಮಾರ್ಗದ ನಾಗಸಂದ್ರ-ಮಾದಾವರ ನಡುವಿನ ಕಾಮಗಾರಿ ಬಹುತೇಕ ಪೂರ್ಣವಾಗಿದ್ದು, ಸುದೀರ್ಘ ಕಾಲದ ವಿಳಂಬದ ಬಳಿಕ 2024ರ ಸೆಪ್ಟೆಂಬರ್ ವೇಳೆಗೆ ಉದ್ಘಾಟನೆಯಾಗುವುದು ಖಚಿತವಾಗಿದೆ.

ನಾಗಸಂದ್ರ-ಮಾದಾವರ ನಡುವಿನ ಮೂರು ಕಿ.ಮೀ. ಮೆಟ್ರೋ ಕಾಮಗಾರಿ 2017ರಲ್ಲಿ ಪ್ರಾರಂಭವಾಗಿ 2019ರ ಮಧ್ಯದ ವೇಳೆಗೆ ಮುಗಿಸುವ ಗುರಿ ಇತ್ತು. ನೈಸ್ ರಸ್ತೆಯ ಭೂಮಿ ಸ್ವಾಧೀನ ವಿಳಂಬ ಹಾಗೂ ಕೋವಿಡ್‌ನಿಂದಾಗಿ ಕಾರ್ಮಿಕರ ಕೊರತೆಯ ಕಾರಣ ಕಾಮಗಾರಿ ಪೂರ್ಣಗೊಳ್ಳಲು ಸಮಯ ಹಿಡಿಯಿತು. ವಿಳಂಬದಿಂದಾಗಿ ಮೊದಲು ನಿಗಮ ನಿಗದಿಪಡಿಸಿದ್ದ ಹಲವು ದಿನಾಂಕಗಳು ಮುಂದೆ ಹೋಗಿ ಅಂತಿಮವಾಗಿ ಮುಕ್ತಾಯದ ಹಂತ ತಲುಪಿದೆ.

ನಮ್ಮ ಮೆಟ್ರೋ ಅಧಿಕಾರಿಗಳು ಈ ಕುರಿತು ಮಾತನಾಡಿ, "ನಾಗಸಂದ್ರ ಮತ್ತು ಮಾದಾವರ ನಡುವಿನ ಮೆಟ್ರೋ ಮಾರ್ಗದ ಕಾಮಗಾರಿ ಬಹುತೇಕ ಮುಕ್ತಾಯವಾಗಿದೆ. ಕೇವಲ ಟ್ರ್ಯಾಕ್ ಹಾಕುವ ಕೆಲಸ ಬಾಕಿಯಿದ್ದು, ಈ ಕೆಲಸ ಮುಕ್ತಾಯವಾಗಲು ಸುಮಾರು ಎರಡು ತಿಂಗಳು ಸಮಯ ತೆಗೆದುಕೊಳ್ಳಲಿದೆ. ಈ ಮಾರ್ಗ ಸೆಪ್ಟೆಂಬರ್ ವೇಳೆಗೆ ಸಂಪೂರ್ಣವಾಗಿ ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ" ಎಂದಿದ್ದಾರೆ.

"ನಾಗಸಂದ್ರದಿಂದ ಮಾದಾವರದ ನಡುವೆ ಮೂರು ನಿಲ್ದಾಣಗಳನ್ನು ನಿರ್ಮಿಸಲಾಗಿದೆ. ಮಂಜುನಾಥನಗರ, ಚಿಕ್ಕಬಿದರಕಲ್ಲು ಮತ್ತು ಮಾದಾವರ ನಿಲ್ದಾಣಗಳನ್ನು ಹೆಸರಿಸಲಾಗಿದೆ. ಹಸಿರು ಮಾರ್ಗದ ವಿಸ್ತರಣೆಯಿಂದ ನಗರದ ಪ್ರಮುಖ ಪ್ರದರ್ಶನ ಕೇಂದ್ರವಾದ ಬೆಂಗಳೂರು ಇಂಟರ್‌ನ್ಯಾಷನಲ್ ಎಕ್ಸಿಬಿಷನ್ ಸೆಂಟರ್‌ಗೆ ಸಂಪರ್ಕ ಸುಲಭವಾಗಲಿದೆ. ಮಂಜುನಾಥನಗರ, ಚಿಕ್ಕಬಿದರಕಲ್ಲು, ಮಾದಾವರ, ತುಮಕೂರು ರಸ್ತೆ, ಅಂಚೆಪಾಳ್ಯ, ಜಿಂದಾಲ್ ನಗರದ ನಾಗರಿಕರು ಮೆಟ್ರೋದಲ್ಲಿ ಪ್ರಯಾಣಿಸಲು ನಾಗಸಂದ್ರ ನಿಲ್ದಾಣಕ್ಕೆ ಬರಬೇಕಾಗಿತ್ತು, ಈಗ ಈ ಮಾರ್ಗ ಸಂಪೂರ್ಣವಾದ ಬಳಿಕ ಐದು ಕಿ.ಮೀ. ಗಳಷ್ಟು ನಮ್ಮ ಮೆಟ್ರೋ ಪ್ರಯಾಣ ಹೆಚ್ಚಲಿದೆ" ಎಂದು ಅವರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಬೆಂಗಳೂರು: ಮೈಕೋ ಸಿಗ್ನಲ್​ನಿಂದ ಆನೆಪಾಳ್ಯ ಜಂಕ್ಷನ್​ವರೆಗೆ 1 ವರ್ಷ ವಾಹನ ಸಂಚಾರ ಬಂದ್ - Namma Metro

ETV Bharat Logo

Copyright © 2024 Ushodaya Enterprises Pvt. Ltd., All Rights Reserved.