ETV Bharat / state

ರಾಜ್ಯ ಸರ್ಕಾರ ಹಿರೇಮಗಳೂರು ಕಣ್ಣನ್​ ಕ್ಷಮೆ ಕೇಳಬೇಕು: ಕೆ.ಎಸ್.ಈಶ್ವರಪ್ಪ

author img

By ETV Bharat Karnataka Team

Published : Jan 23, 2024, 10:50 PM IST

ಅರ್ಚಕ‌ ಹೀರೇಮಗಳೂರು ಕಣ್ಣನ್ ಅವರಿಗೆ ರಾಜ್ಯ ಸರ್ಕಾರ ಕ್ಷಮೆ ಕೇಳಬೇಕು ಎಂದು ಈಶ್ವರಪ್ಪ ಆಗ್ರಹಿಸಿದ್ದಾರೆ.

ಸರ್ಕಾರ ಹಿರೇಮಗಳೂರು ಕಣ್ಣನ್​ರ ಕ್ಷಮೆ ಕೇಳಬೇಕು
ಸರ್ಕಾರ ಹಿರೇಮಗಳೂರು ಕಣ್ಣನ್​ರ ಕ್ಷಮೆ ಕೇಳಬೇಕು

ರಾಜ್ಯ ಸರ್ಕಾರ ಕ್ಷಮೆ ಕೇಳಬೇಕು; ಕೆ.ಎಸ್.ಈಶ್ವರಪ್ಪ

ಶಿವಮೊಗ್ಗ: ರಾಜ್ಯ ಸರ್ಕಾರ ಹಿಂದೂ ಅರ್ಚಕರಿಗೆ ಅಪಮಾನ ಮಾಡಿದೆ. ತಕ್ಷಣ ಹಿಂದೂ ಅರ್ಚಕರ ಕ್ಷಮೆ ಕೇಳಬೇಕು ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಆಗ್ರಹಿಸಿದ್ದಾರೆ. ಶಿವಮೊಗ್ಗದಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಹುಚ್ಚು ಸರ್ಕಾರ ಎನ್ನುವುದಕ್ಕೆ ಮತ್ತೊಂದು ಉದಾಹರಣೆ ಎಂದರೆ ಚಿಕ್ಕಮಗಳೂರಿನ ಕೋದಂಡರಾಮ ದೇವಸ್ಥಾನದ ಅರ್ಚಕ‌ ಹೀರೇಮಗಳೂರು ಕಣ್ಣನ್ ಅವರಿಗೆ 10 ವರ್ಷದಿಂದ ಪಡೆದ ಸಂಬಳದಲ್ಲಿ ತಿಂಗಳಿಗೆ 4,500 ರೂಪಾಯಿಯಂತೆ ಹಣ ವಾಪಸ್ ಕಟ್ಟುವಂತೆ ಹೇಳಿದೆ.

ಸುಸಂಸ್ಕೃತ ಅರ್ಚಕರಾದ ಹಿರೇಮಗಳೂರು ಕಣ್ಣನ್ ಅವರಿಗೆ ಮಾಡಿದ ದೊಡ್ಡ ಅಪಚಾರವಾಗಿದೆ ಎಂದಿದ್ದಾರೆ. ಈ ರೀತಿ ನೋಟಿಸ್ ಬಂದರೆ ಅರ್ಚಕರ ಗತಿ ಏನು, ದೇವಾಲಯದ ಗತಿ ಏನು ಎಂದು ಪ್ರಶ್ನೆ ಮಾಡಿದರು. ಕಾಂಗ್ರೆಸ್ ಸರ್ಕಾರ ಆದಾಯದ ಮೇಲೆ ಸಂಬಳ ಫಿಕ್ಸ್ ಮಾಡೋದಾದರೆ ಅನೇಕ ದೇವಸ್ಥಾನಗಳಲ್ಲಿ ಅತಿ ಹೆಚ್ಚು ಆದಾಯ ಬರುತ್ತದೆ. ಆ ದೇವಾಲಯಗಳ ಆದಾಯದ ಮೇಲೆ ಸಂಬಳ ಕೊಡ್ತಾರಾ ಎಂದು ಪ್ರಶ್ನಿಸಿದರು. ಅರ್ಚಕರಿಗೆ ಇಂತಹ ಅಪಮಾನವನ್ನು ಹಿಂದು ಸಮಾಜ ಸಹಿಸಲ್ಲ.

ಮಂತ್ರಿಗಳ ಸಂಬಳ ಹಿಂತಿರುಗಿಸಿ ಅಂದ್ರೆ ಏನಾಗುತ್ತದೆ ಎಂದು ಪ್ರಶ್ನಿಸಿದರು. ಕಣ್ಣನ್ ಅವರು 44 ವರ್ಷದಿಂದ ಗೌರವಯುತವಾಗಿ ಪೂಜೆ ಮಾಡುತ್ತಾ ಬಂದಿದ್ದಾರೆ. ಅರ್ಚಕರಿಗೆ ಅಪಮಾನ ಮಾಡಿರುವುದನ್ನು ಸಚಿವ ರಾಮಲಿಂಗಾರೆಡ್ಡಿ ಅವರು ಇದು ಸಣ್ಣ ವಿಷಯ ಸರಿ ಮಾಡ್ತೇನಿ ಎಂದಿದ್ದಾರೆ. ಮಂತ್ರಿಗೆ ಈ ರೀತಿ ಮಾಡಿದ್ರೆ ಸುಮ್ಮನಿರುತ್ತಿದ್ದಾರಾ ಎಂದು ಪ್ರಶ್ನಿಸಿದರು. ನಮ್ಮ ಸಂಸ್ಕೃತಿಗೆ ಮಾಡಿದ ಅಪಮಾನ ಎಂದರು. ಅಧಿಕಾರಿಗಳ ಗಮನಕ್ಕೆ ಬಾರದೇ ತಹಶೀಲ್ದಾರ್ ನೋಟಿಸ್ ಕೊಟ್ಟಿದ್ದಾರೋ, ಇಲ್ಲವೇ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.

ಮುಜರಾಯಿ ಸಚಿವರು ರಾಜ್ಯದ ಜನರ ಕ್ಷಮೆ ಕೋರಬೇಕು: ಕಣ್ಣನ್ ಅವರಿಗೆ ಅಪಮಾನ ಮಾಡಿದ್ದಲ್ಲಾ, ಹಿಂದು ಬಾಂಧವರಿಗೆ ಮಾಡಿದ ಅವಮಾನವಾಗಿದೆ. ಇದರಿಂದ ಮುಜರಾಯಿ ಸಚಿವರು ಕ್ಷಮೆ ಕೇಳಬೇಕು ಎಂದರು. ರಾಜ್ಯ ಬಿಜೆಪಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ‌ಮಾಡುವ ಬಗ್ಗೆ ಚಿಂತನೆ ನಡೆಸಲಿದೆ ಎಂದರು. ರಾಜ್ಯದಲ್ಲಿ 50 ಸಾವಿರ ಅರ್ಚಕರು ಇದ್ದಾರೆ. ಯಾವ ದೇವಸ್ಥಾನದಲ್ಲಿ ಎಷ್ಟು ಆದಾಯ ಇದೆ ಎಂಬ ಬಗ್ಗೆ ಪಟ್ಟಿ ನೀಡಬೇಕು ಎಂದರು. ಕಣ್ಣನ್ ಅವರಿಗೆ ಮಾಡಿದ ಅಪಮಾನದ ಬಗ್ಗೆ ರಾಜ್ಯ ಸರಕಾರ ಕ್ಷಮೆ ಕೇಳಬೇಕು. ನಿನ್ನೆ ತಾನೇ ಅಯೋಧ್ಯೆಯಲ್ಲಿ ಪ್ರಾಣ ಪ್ರತಿಷ್ಠಾಪನೆ ನಡೆದಿದೆ. ಹಬ್ಬದ ರೀತಿ ಆಚರಣೆ ನಡೆದಿದೆ. ಈ ಸಂದರ್ಭದಲ್ಲಿ ನೋಟಿಸ್ ಕೊಟ್ಟಿರುವುದು ಬೇಸರ ತರಿಸಿದೆ ಎಂದಿದ್ದಾರೆ.

ಇದನ್ನೂ ಓದಿ: ನಿವೃತ್ತಿ ಸರ್ಕಾರಿ ಅಧಿಕಾರಿ, ನೌಕರರನ್ನು ಸೇವೆಯಿಂದ ಬಿಡುಗಡೆಗೊಳಿಸುವಂತೆ ಸಿಎಸ್ ಸೂಚನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.