ETV Bharat / state

ವಿಧಾನಸಭೆಯ ಬಜೆಟ್ ಅಧಿವೇಶನದ ಅವಧಿ ಸೋಮವಾರದವರೆಗೆ ವಿಸ್ತರಣೆ

author img

By ETV Bharat Karnataka Team

Published : Feb 23, 2024, 11:43 AM IST

Updated : Feb 23, 2024, 11:54 AM IST

karnataka-budget-session-of-assembly-extended-till-monday
ವಿಧಾನಸಭೆಯ ಬಜೆಟ್ ಅಧಿವೇಶನದ ಆವಧಿ ಸೋಮವಾರದವರೆಗೆ ವಿಸ್ತರಣೆ

ವಿಧಾನಸಭೆಯ ಬಜೆಟ್ ಅಧಿವೇಶನದ ಅವಧಿಯನ್ನು ಸೋಮವಾರದವರೆಗೆ ವಿಸ್ತರಣೆ ಮಾಡಲಾಗಿದೆ.

ಬೆಂಗಳೂರು : ವಿಧಾನಸಭೆ ಬಜೆಟ್ ಅಧಿವೇಶನದ ಆವಧಿಯನ್ನು ಒಂದು ದಿನದ ಮಟ್ಟಿಗೆ ವಿಸ್ತರಿಸಲಾಗಿದೆ. ಇಂದು ಬೆಳಗ್ಗೆ ಸದನ ಆರಂಭವಾಗುತ್ತಿದ್ದಂತೆ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಅವರು ಈ ವಿಷಯವನ್ನು ಪ್ರಕಟಿಸಿದರು.

ತಮ್ಮ ಅಧ್ಯಕ್ಷತೆಯಲ್ಲಿ ಇಂದು ನಡೆದ ಸದನದ ಕಾರ್ಯಕಲಾಪಗಳ ಸಲಹಾ ಸಮಿತಿ ಸಭೆಯಲ್ಲಿ ಚರ್ಚಿಸಿ ತೀರ್ಮಾನವಾದಂತೆ ಆಧಿವೇಶನವನ್ನು ಫೆಬ್ರವರಿ 26 ರವರೆಗೆ ವಿಸ್ತರಿಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ನೀಡಬೇಕಾದ ಬಜೆಟ್ ಮೇಲಿನ ಚರ್ಚೆಗೆ ಉತ್ತರವನ್ನು ಸೋಮವಾರ ನೀಡಲಿದ್ದಾರೆ ಎಂದು ಸ್ಪೀಕರ್ ತಿಳಿಸಿದರು.

ಪೂರ್ವ ನಿಗದಿಯಂತೆ ಅಧಿವೇಶನ ಇಂದು ಮುಗಿಯಬೇಕಾಗಿತ್ತು. ಅಧಿವೇಶನ ವಿಸ್ತರಣೆ ನಿರ್ಣಯದ ಹಿನ್ನೆಲೆಯಲ್ಲಿ ಕಾರ್ಯಸೂಚಿಯಲ್ಲಿನ ಪಟ್ಟಿಯಂತೆ ನಡೆಸಬೇಕಾಗಿದೆ. ಹಾಗಾಗಿ, ಎಲ್ಲ ಶಾಸಕರು ಸಹಕರಿಸಬೇಕು ಎಂದು ಸ್ಪೀಕರ್ ಖಾದರ್ ಕೋರಿದರು.

ಸದ್ಯ ಸದನದಲ್ಲಿ ಬಜೆಟ್ ಮೇಲಿನ ಚರ್ಚೆ ನಡೆಯುತ್ತಿದೆ. ಇನ್ನೂ ಕೆಲವರು ಬಜೆಟ್ ಮೇಲೆ ಚರ್ಚೆ ನಡೆಸಬೇಕಾಗಿದೆ. ಇನ್ನು ಕೆಲ ಮಸೂದೆಗಳನ್ನು ಮಂಡಿಸಿ, ಪರ್ಯಾಲೋಚಿಸಿ, ಅಂಗೀಕಾರ ಪಡೆಯಬೇಕಾಗಿದೆ. ಹೀಗಾಗಿ ಒಂದು ದಿನ ಕಲಾಪವನ್ನು ವಿಸ್ತರಣೆ ಮಾಡಲಾಗಿದೆ.‌ ಬಜೆಟ್‌ ಮೇಲೆ ಸಿಎಂ ಉತ್ತರ ನೀಡುವ ನಿಟ್ಟಿನಲ್ಲಿ ಕಲಾಪವನ್ನು ವಿಸ್ತರಣೆ ಮಾಡಲಾಗಿದೆ. ಬಜೆಟ್ ಮೇಲಿನ ಚರ್ಚೆಗೆ ಸರ್ಕಾರದ ಪರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ಉತ್ತರಿಸಲಿದ್ದಾರೆ.

ಗುರುವಾರ ಪ್ರತಿಪಕ್ಷ ನಾಯಕ ಆರ್‌.ಅಶೋಕ್ ಬಜೆಟ್‌ ಮೇಲೆ ಭಾಷಣ ಮಾಡಿದ್ದರು. ಇನ್ನು ಹಲವು ನಾಯಕರು ಬಜೆಟ್‌ ಮೇಲೆ ಭಾಷಣ ಮಾಡಬೇಕಿದೆ. ಶುಕ್ರವಾರ ಸಿಎಂ ಸಿದ್ದರಾಮಯ್ಯ ಅವರು ಬಜೆಟ್‌ ಮೇಲೆ ಚರ್ಚೆಗೆ ಉತ್ತರ ನೀಡಬೇಕಿತ್ತು. ಆದರೆ ಸಮಯಾವಕಾಶದ ಕೊರತೆ ಹಿನ್ನೆಲೆಯಲ್ಲಿ ಅವಧಿಯನ್ನು ವಿಸ್ತರಣೆ ಮಾಡಲಾಗಿದೆ.

ಮಂಗಳವಾರ ರಾಜ್ಯಸಭೆ ಚುನಾವಣೆ ನಡೆಯಲಿದೆ. ಈ ನಿಟ್ಟಿನಲ್ಲಿ ಸೋಮವಾರವೇ ಅಧಿವೇಶನವನ್ನು ಮುಗಿಸಬೇಕಾಗಿದೆ. ಬಜೆಟ್‌ ಮೇಲಿನ ಚರ್ಚೆಗೆ ಸಿಎಂ ಸಿದ್ದರಾಮಯ್ಯ ವಿಧಾನಸಭೆ ಹಾಗೂ ವಿಧಾನಪರಿಷತ್‌ನಲ್ಲಿ ಸೋಮವಾರ ಉತ್ತರ ನೀಡಲಿದ್ದಾರೆ. ಬಳಿಕ ಅನಿರ್ದಿಷ್ಟಾವಧಿಗಳ ಕಾಲ ಸದನ ಮುಂದೂಡಲು ತೀರ್ಮಾನಿಸಲಾಗಿದೆ.

ಫೆಬ್ರವರಿ 12 ರಂದು ವಿಧಾನಮಂಡಲ ಅಧಿವೇಶನ ಆರಂಭಗೊಂಡಿತ್ತು. ಎರಡು ವಾರಗಳ ಕಾಲ ಅಧಿವೇಶನ ನಡೆಯುತ್ತದೆ. ಆದರೆ ಈ ಬಾರಿ ಮಸೂದೆಗಳು ಹಾಗೂ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಯ ಜೊತೆಗೆ ಬಜೆಟ್‌ ಚರ್ಚೆಯ ಹಿನ್ನೆಲೆಯಲ್ಲಿ ಕಾರ್ಯಕಲಾಪಗಳನ್ನು ಮುಗಿಸಲು ಸಮಯಾವಕಾಶದ ಕೊರತೆ ಎದುರಾಗಿದೆ. ಈ ನಿಟ್ಟಿನಲ್ಲಿ ಒಂದು ದಿನಗಳ ಕಾಲ ಮುಂದೂಡಲು ತೀರ್ಮಾನ ಕೈಗೊಳ್ಳಲಾಗಿದೆ. ಹೆಚ್ಚಿನ ಚರ್ಚೆಗೆ ಸಮಯಾವಕಾಶ ಸಿಗುವ ನಿಟ್ಟಿನಲ್ಲಿ ಬೆಳಗ್ಗೆ 9.30 ಗಂಟೆಗೆ ಕಲಾಪ ಆರಂಭಿಸಲಾಗುತ್ತಿತ್ತು. ಆದರೂ ಸಮಯಾವಕಾಶದ ಕೊರತೆ ಎದುರಾಗಿರುವ ಕಾರಣ ಒಂದು ದಿನಕ್ಕೆ ಕಲಾಪವನ್ನು ಮುಂದೂಡಲಾಗಿದೆ.

ಇದನ್ನೂ ಓದಿ: ಹಿಂದೂಗಳನ್ನು ನಮ್ಮ ಸರ್ಕಾರದ ವಿರುದ್ಧ ಎತ್ತಿಕಟ್ಟುವ ದುರುದ್ದೇಶದಿಂದ ಬಿಜೆಪಿಯಿಂದ ಕಪೋಲಕಲ್ಪಿತ ಆರೋಪ: ಸಿಎಂ

Last Updated :Feb 23, 2024, 11:54 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.