ETV Bharat / state

ವನ್ಯಜೀವಿಗಳ ಕುರಿತ ವಸ್ತುಗಳಿದ್ದರೆ ಹಿಂದಿರುಗಿಸಲು ಅರಣ್ಯ ಇಲಾಖೆ ನೋಟಿಸ್ : ಹೈಕೋರ್ಟ್ ಮಧ್ಯಂತರ ತಡೆ

author img

By ETV Bharat Karnataka Team

Published : Feb 20, 2024, 10:58 PM IST

ವನ್ಯಜೀವಿಗಳ ಕುರಿತ ವಸ್ತುಗಳಿದ್ದರೆ ಹಿಂದಿರುಗಿಸುವಂತೆ ಅರ್ಜಿದಾರರಿಗೆ ಅರಣ್ಯ ಇಲಾಖೆ ನೀಡಿದ್ದ ನೋಟಿಸ್​ಗೆ ಹೈಕೋರ್ಟ್​ ಮಧ್ಯಂತರ ತಡೆ ನೀಡಿದೆ.

ಹೈಕೋರ್ಟ್
ಹೈಕೋರ್ಟ್

ಬೆಂಗಳೂರು : ವನ್ಯಜೀವಿಗಳಿಗೆ ಸಂಬಂಧಿಸಿದ ಮತ್ತು ಅವುಗಳ ದೇಹದ ಯಾವುದೇ ಭಾಗ ಅಥವಾ ವಸ್ತುಗಳ ಸಂಗ್ರಹ ಕಾನೂನು ಬಾಹಿರವಾಗಿದ್ದು, ಅಂತಹ ವಸ್ತುಗಳು ಇದ್ದಲ್ಲಿ ಅವುಗಳನ್ನು ಸ್ಥಳೀಯ ಅರಣ್ಯಾಧಿಕಾರಿಗಳ ವಶಕ್ಕೆ ಒಪ್ಪಿಸಬೇಕು ಎಂದು ಘೋಷಿಸಿ ರಾಜ್ಯ ಸರ್ಕಾರ ಹೊರಡಿಸಿದ್ದ ಅಧಿಸೂಚನೆ ಹಾಗೂ ಈ ಸಂಬಂಧ ಅರಣ್ಯಾಧಿಕಾರಿಗಳು ಅರ್ಜಿದಾರರಿಗೆ ನೀಡಿದ್ದ ನೋಟಿಸ್‌ಗೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.

ಅಧಿಸೂಚನೆ ಮತ್ತು ನೋಟಿಸ್ ಪ್ರಶ್ನಿಸಿ ಕೊಡಗು ಜಿಲ್ಲೆ ವಿರಾಜಪೇಟೆಯ ಪಿ. ಎ ರಂಜಿ ಪೂಣಚ್ಚ ಮತ್ತು ನಾಪೋಕ್ಲುವಿನ ಕೆ. ಎ ಕುಟ್ಟಪ್ಪ ಸಲ್ಲಿಸಿದ್ದ ರಿಟ್ ಅರ್ಜಿಯನ್ನ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ನ್ಯಾಯಪೀಠ, ಅರಣ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಸೇರಿದಂತೆ ಒಟ್ಟು ಏಳು ಜನ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೆ ಆದೇಶಿಸಿ, ವಿಚಾರಣೆಯನ್ನು ಮಾರ್ಚ್ 18ಕ್ಕೆ ಮುಂದೂಡಿದೆ.

ಪ್ರಕರಣದ ಹಿನ್ನೆಲೆ : ಹುಲಿ ಉಗುರು ಧರಿಸಿದ ವ್ಯಕ್ತಿಗಳ ವಿರುದ್ಧ ಕ್ರಮಕ್ಕೆ ಮುಂದಾಗಿದ್ದ ರಾಜ್ಯ ಸರ್ಕಾರ 2024ರ ಜನವರಿ 10ರಂದು ಅಧಿಸೂಚನೆ ಹೊರಡಿಸಿತ್ತು. ‘ವನ್ಯಜೀವಿಗಳಿಗೆ ಸಂಬಂಧಿಸಿದ ಮತ್ತು ಅವುಗಳ ದೇಹದ ಯಾವುದೇ ಭಾಗ ಅಥವಾ ವಸ್ತುಗಳ ಸಂಗ್ರಹ ವನ್ಯಜೀವಿ ಸಂರಕ್ಷಣಾ ಕಾಯ್ದೆ- 1972 ರ ಪ್ರಕಾರ ಶಿಕ್ಷಾರ್ಹ ಅಪರಾಧ. ಒಂದು ವೇಳೆ ಯಾರಾದರೂ ತಮ್ಮ ಬಳಿ ವನ್ಯಜೀವಿಗಳ ದೇಹದ ಭಾಗಗಳನ್ನು ಒಳಗೊಂಡ ವಿಜಯ ಸಂಕೇತದ ಸ್ಮಾರಕಗಳು ಅಥವಾ ಸಂಸ್ಕರಿಸಿದ ಸ್ಮಾರಕಗಳು ಇದ್ದಲ್ಲಿ ಅವುಗಳನ್ನು ಸಮೀಪದ ಅರಣ್ಯಾಧಿಕಾರಿ ವಶಕ್ಕೆ ಒಪ್ಪಿಸಬೇಕು. ಇವುಗಳ ನಿಖರತೆ ಮತ್ತು ಕಾನೂನು ಬದ್ಧತೆಯನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ಅಧಿಸೂಚನೆಯಲ್ಲಿ ವಿವರಿಸಲಾಗಿತ್ತು.

ಇದೇ ವಿಚಾರವಾಗಿ ಮಡಿಕೇರಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಉಪ ಅರಣ್ಯ ಸಂರಕ್ಷಣಾಧಿಕಾರಿ ನೋಟಿಸ್ ನೀಡಿ, ‘ನೀವು ಮುಖ್ಯ ಸಮಾರಂಭಗಳಲ್ಲಿ ಸಾಂಪ್ರದಾಯಿಕ ಉಡುಗೆ-ತೊಡುಗೆ ಜೊತೆಗೆ ಸಾಲು ಸಾಲು ಹುಲಿ ಉಗುರುಗಳನ್ನು ಹೊಂದಿರುವ ಕತ್ತಿಯನ್ನು ನಿಮ್ಮ ಬಳಿ ಹೊಂದಿರುತ್ತೀರಿ. ಈ ಕುರಿತಂತೆ ಸಾರ್ವಜನಿಕರಿಂದ ದೂರುಗಳು ಬಂದಿದ್ದು, ಅದಕ್ಕೆ ಸಂಬಂಧಿಸಿದ ಛಾಯಾಚಿತ್ರಗಳೂ ನಮ್ಮ ಬಳಿ ಇವೆ. ಆದ್ದರಿಂದ, ನೀವು ಧರಿಸಿರುವ ಹುಲಿ ಉಗುರುಗಳನ್ನು ತಕ್ಷಣವೇ ಅರಣ್ಯ ಇಲಾಖೆ ಕಚೇರಿಗೆ ತಂದು ಒಪ್ಪಿಸಬೇಕು. ನಿಮ್ಮ ಬಳಿ ಹುಲಿ ಉಗುರುಗಳು ಇಲ್ಲವೆಂಬುದೇ ನಿಮ್ಮ ನಿಲುವಾದಲ್ಲಿ, ಕಚೇರಿಗೆ ಹಾಜರಾಗಿ ಛಾಯಾಚಿತ್ರಗಳ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ನೋಟಿಸ್‌ನಲ್ಲಿ ತಿಳಿಸಿದ್ದರು. ಇದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್​ ಮೆಟ್ಟಿಲೇರಿದ್ದರು.

ಇದನ್ನೂ ಓದಿ: ಆಕ್ಷೇಪಾರ್ಹ ಹೇಳಿಕೆಗೆ ಬೇಷರತ್ ಕ್ಷಮೆ: ವಕೀಲರ ವಿರುದ್ಧದ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಹಿಂಪಡೆದ ಹೈಕೋರ್ಟ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.