ETV Bharat / state

ಆಕ್ಷೇಪಾರ್ಹ ಹೇಳಿಕೆಗೆ ಬೇಷರತ್ ಕ್ಷಮೆ: ವಕೀಲರ ವಿರುದ್ಧದ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಹಿಂಪಡೆದ ಹೈಕೋರ್ಟ್

author img

By ETV Bharat Karnataka Team

Published : Feb 20, 2024, 7:30 AM IST

ಬೇಷರತ್ ಕ್ಷಮೆಯಾಚಿಸಿದ ಹಿನ್ನೆಲೆಯಲ್ಲಿ ವಕೀಲರೊಬ್ಬರ ವಿರುದ್ಧದ ನ್ಯಾಯಾಂಗ ನಿಂದನೆ ಪ್ರಕ್ರಿಯೆಯನ್ನು ಹೈಕೋರ್ಟ್ ಹಿಂಪಡೆದಿದೆ

Etv Bharat High court
ಹೈಕೋರ್ಟ್

ಬೆಂಗಳೂರು: ತಾವು ಪ್ರತಿನಿಧಿಸುತ್ತಿದ್ದ ಕಕ್ಷಿದಾರರ ಅರ್ಜಿ ತಿರಸ್ಕರಿಸಿದ್ದಕ್ಕೆ ಕೋಪಗೊಂಡು ನ್ಯಾಯಮೂರ್ತಿಗಳ ವಿರುದ್ಧ ಮಾತನಾಡಿ ಕಡತಗಳನ್ನು ಎಸೆದ ಆರೋಪಕ್ಕೆ ಸಂಬಂಧಿಸಿದಂತೆ ವಿಷಾದ ವ್ಯಕ್ತಪಡಿಸಿ ಬೇಷರತ್ ಕ್ಷಮೆಯಾಚಿಸಿದ ಹಿನ್ನೆಲೆಯಲ್ಲಿ ವಕೀಲ ಎಂ.ವೀರಭದ್ರಯ್ಯ ವಿರುದ್ಧ ಸ್ವಯಂಪ್ರೇರಿತ ನ್ಯಾಯಾಂಗ ನಿಂದನೆ ಪ್ರಕ್ರಿಯೆಯನ್ನು ಹೈಕೋರ್ಟ್ ಹಿಂಪಡೆದಿದೆ.

ಘಟನೆ ಕುರಿತಂತೆ ಬೇಷರತ್ ಕ್ಷಮೆಯಾಚಿಸಿ, ತಮ್ಮ ವಿರುದ್ಧ ಸ್ವಯಂ ಪ್ರೇರಿತ ಕ್ರಿಮಿನಲ್ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಆರಂಭಿಸಲು ಹೈಕೋರ್ಟ್ ನ್ಯಾಯಾಂಗ ವಿಭಾಗದ ರಿಜಿಸ್ಟ್ರಾರ್‌ಗೆ ಸೂಚಿಸಿ 2024ರ ಫೆ.5ರಂದು ಹೊರಡಿಸಿರುವ ಆದೇಶವನ್ನು ಹಿಂಪಡೆಯಬೇಕು ಎಂದು ಕೋರಿ ವಕೀಲ ವೀರಭದ್ರಯ್ಯ ಮಧ್ಯಂತರ ಅರ್ಜಿ ಸಲ್ಲಿಸಿದ್ದರು. ಈ ಮಧ್ಯಂತರ ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಮೂರ್ತಿ ಕೆ.ಎಸ್. ಹೇಮಲೇಖಾ ಅವರ ಪೀಠ, ಫೆ.5ರ ಆದೇಶವನ್ನು ಹಿಂಪಡೆಯಿತು.

ನ್ಯಾಯಾಲಯದ ಬಗ್ಗೆ ತಮಗೆ ಅಪಾರವಾದ ಗೌರವ ಇದೆ. 38 ವರ್ಷಗಳ ಕಾಲ ಕಳಂಕರಹಿತವಾಗಿ ವಕೀಲಿ ವೃತ್ತಿ ಪೂರೈಸಿದ್ದೇನೆ. ನ್ಯಾಯಾಲಯಕ್ಕೆ ಧಕ್ಕೆ ತರುವಂತೆ ನಡೆದುಕೊಳ್ಳುವ ಯಾವುದೇ ಉದ್ದೇಶ ತಮಗೆ ಇರಲಿಲ್ಲ. ಆಕಸ್ಮಿಕವಾಗಿ ಅಂತಹ ಸನ್ನಿವೇಶ ನಡೆದಿದೆ. ತಮ್ಮ ನಡತೆ ಕುರಿತು ಈಗಲೂ ಚಿಂತೆ ಮಾಡುತ್ತಿದ್ದೇನೆ ಹಾಗೂ ವಿಷಾದ ವ್ಯಕ್ತಪಡಿಸತ್ತಿದ್ದೇನೆ. ಘಟನೆಯ ಬಗ್ಗೆ ನ್ಯಾಯಾಲಯಕ್ಕೆ ಬೇಷರತ್ ಕ್ಷಮೆ ಕೋರುತ್ತಿದ್ದೇನೆ. ಭವಿಷ್ಯದಲ್ಲಿ ಅಂತಹದ್ದೇ ವರ್ತನೆ ಪುನರಾವರ್ತನೆಯಾಗದಂತೆ ಎಲ್ಲಾ ಎಚ್ಚರಿಕೆ ವಹಿಸಲಾಗುವುದು ಎಂದು ಪ್ರಮಾಣ ಪತ್ರ ಸಲ್ಲಿಸುತ್ತಿದ್ದೇನೆ. ಈ ಪ್ರಮಾಣ ಪತ್ರ ಪರಿಗಣಿಸಬೇಕು ಎಂದು ಮನವಿ ಮಾಡಿದ್ದರು.

ಇದನ್ನೂ ಓದಿ: ನಿತ್ಯಾನಂದ ನೆಲೆಸಿದ ಕೈಲಾಸದ ಸಾಂವಿಧಾನಿಕ ನ್ಯಾಯಾಧೀಶರು ಯಾರು? : ಹೈಕೋರ್ಟ್

ಪ್ರಕರದ ಹಿನ್ನೆಲೆ : ಬೆಂಗಳೂರಿನ ಅಣ್ಣಾದೊರೈ (ವೀರಭದ್ರಯ್ಯ ಅವರ ಕಕ್ಷಿದಾರರ) ಎಂಬುವರು ಕೇಂದ್ರ ಸರ್ಕಾರ, ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್) ವಿರುದ್ಧ ತಕರಾರು ಅರ್ಜಿ ಸಲ್ಲಿಸಿದ್ದರು. ಅರ್ಜಿದಾರ ಯಾವುದೇ ಅರ್ಜಿ ದಾಖಲಿಸಿದರೂ ತಮ್ಮ ಗಮನಕ್ಕೆ ತರಬೇಕು ಎಂದು ಬಿಇಎಲ್ ಪರವಾಗಿ ಅದರ ವ್ಯವಸ್ಥಾಪಕ ನಿರ್ದೇಶಕರು ಕೇವಿಯಟ್ ಸಲ್ಲಿಸಿದ್ದರು. ಈ ಕೇವಿಯಟ್ ಅನ್ನು ಆಕ್ಷೇಪಿಸಿ ಅರ್ಜಿದಾರ ಅಣ್ಣಾದೊರೈ ಮಧ್ಯಂತರ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಪೀಠ, ಅರ್ಜಿ ತಿರಸ್ಕರಿಸಿತ್ತು. ಜೊತೆಗೆ, 10 ಸಾವಿರ ರೂ. ದಂಡ ಪಾವತಿಗೆ ಸೂಚನೆ ನೀಡಿತ್ತು. ಇದರಿಂದ ಅಸಮಾಧಾನಗೊಂಡಿದ್ದ ವಕೀಲರು ಆಕ್ಷೇಪಾರ್ಹವಾಗಿ ಮಾತನಾಡಿದ್ದರು. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲು ಹೈಕೋರ್ಟ್ ಆದೇಶಿಸಲಾಗಿತ್ತು. ಇದೀಗ ವಕೀಲರು ಬೇಷರತ್ ಕ್ಷಮೆಯಾಚಿಸಿ ಪ್ರಮಾಣ ಪತ್ರ ಸಲ್ಲಿಸಿದ ಹಿನ್ನೆಲೆಯಲ್ಲಿ ಪ್ರಕ್ರಿಯೆಯನ್ನು ಕೋರ್ಟ್ ಹಿಂಪಡೆದಿದೆ.

ಇದನ್ನೂ ಓದಿ: ತೆರಿಗೆ ಪಾವತಿಸದ ಆರೋಪ : ರಾಕ್‌ಲೈನ್ ಮಾಲ್‌ಗೆ ಹಾಕಿದ್ದ ಬೀಗ ತಕ್ಷಣ ತೆರವಿಗೆ ಹೈಕೋರ್ಟ್ ಸೂಚನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.