ETV Bharat / state

7ನೇ ವೇತನ ಆಯೋಗದ ಅಧ್ಯಕ್ಷರ ಜೊತೆ ಸಿಎಂ ಸಭೆ: ಬಜೆಟ್​​ನಲ್ಲಿ ಸರ್ಕಾರಿ ನೌಕರರಿಗೆ ಸಿಗಲಿದೆಯಾ ಸಿಹಿ ಸುದ್ದಿ?

author img

By ETV Bharat Karnataka Team

Published : Feb 13, 2024, 7:32 AM IST

ಫೆ. 16 ರಂದು ಸಿಎಂ ಸಿದ್ದರಾಮಯ್ಯ ಮಂಡಿಸಲಿರುವ ಬಜೆಟ್ ಮೇಲೆ ಸರ್ಕಾರಿ ನೌಕರರು ನಿರೀಕ್ಷೆ ಇಟ್ಟುಕೊಂಡಿದ್ದಾರೆ.

CM Budget Meeting
ಸಿಎಂ ಬಜೆಟ್ ಸಭೆ

ಬೆಂಗಳೂರು: ಬಜೆಟ್ ಮುನ್ನ ಸಿಎಂ ಸಿದ್ದರಾಮಯ್ಯ ಸೋಮವಾರ ವಿಧಾನಸೌಧದ ತಮ್ಮ ಕಚೇರಿಯಲ್ಲಿ ರಾಜ್ಯ 7ನೇ ವೇತನ ಆಯೋಗದ ಅಧ್ಯಕ್ಷರು ಹಾಗೂ ಸದಸ್ಯರನ್ನು ಭೇಟಿಯಾಗಿರುವುದು ಕತೂಹಲ ಮೂಡಿಸಿದೆ. ಶುಕ್ರವಾರ ಮಂಡಿಸಲಿರುವ ಬಜೆಟ್​​ನಲ್ಲಿ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ ನೀಡಲಿದ್ದಾರೆಯೇ ಎಂಬ ಕುತೂಹಲ ಮೂಡಿದೆ.

ವಿಧಾನಸೌಧದ ಮುಖ್ಯಮಂತ್ರಿಗಳ ಕಚೇರಿಯಲ್ಲಿ ಸಿಎಂ ಸಿದ್ದರಾಮಯ್ಯ ಕರ್ನಾಟಕ ರಾಜ್ಯ 7ನೇ ವೇತನ ಆಯೋಗದ ಅಧ್ಯಕ್ಷ ಕೆ.ಸುಧಾಕರ್ ಹಾಗೂ ಸದಸ್ಯರನ್ನು ಭೇಟಿಯಾಗಿ ಚರ್ಚೆ ನಡೆಸಿದರು. ವೇತನ ಪರಿಷ್ಕರಣೆ ಸಂಬಂಧ ಆಯೋಗದ ಅಧ್ಯಕ್ಷರ ಜೊತೆ ಸಿಎಂ ಚರ್ಚೆ ನಡೆಸಿದ್ದಾರೆ. ಆಯೋಗದ ಅಧ್ಯಕ್ಷರಿಂದ ಕೆಲ ಮಾಹಿತಿ ಪಡೆದುಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಶುಕ್ರವಾರ ಸಿಎಂ ಸಿದ್ದರಾಮಯ್ಯ 2024-25 ಸಾಲಿನ ಬಜೆಟ್ ಮಂಡಿಸಲಿದ್ದಾರೆ. ಈ ವೇಳೆ, ಏಳನೇ ವೇತನ ಆಯೋಗದ ಅಧ್ಯಕ್ಷರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದು, ಸರ್ಕಾರಿ ನೌಕರರ ನಿರೀಕ್ಷೆ ಹೆಚ್ಚಿಸಿದೆ. ಒಂದು ಮಾಹಿತಿ ಪ್ರಕಾರ ವೇತನ ಪರಿಷ್ಕರಣೆಯ ಕೆಲ ಅಂಶಗಳನ್ನು ಸಿಎಂ ಬಜೆಟ್​​​ನಲ್ಲಿ ಘೋಷಿಸಲಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಚಾಮರಾಜನಗರ ಜನರ ಬಜೆಟ್‌ ನಿರೀಕ್ಷೆಗಳೇನು? ಗಡಿಜಿಲ್ಲೆಗೆ ಸಿಗುತ್ತಾ ಭರಪೂರ ಕೊಡುಗೆ?

ಕಳೆದ ನವೆಂಬರ್‌ನಲ್ಲಿ 7ನೇ ರಾಜ್ಯ ವೇತನ ಆಯೋಗದ ಅವಧಿ ಅಂತ್ಯಗೊಂಡಿತ್ತು.‌ ಆ ವೇಳೆ, ಆಯೋಗದ ಅಧ್ಯಕ್ಷ ಕೆ. ಸುಧಾಕರ್ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಹಲವಾರು ವಿಚಾರಗಳ ಕುರಿತು ಚರ್ಚೆ ನಡೆಸಿ, ಅವಧಿ ವಿಸ್ತರಣೆಗೆ ನಿರ್ಧರಿಸಲಾಗಿತ್ತು. ಬಳಿಕ ಕರ್ನಾಟಕ ರಾಜ್ಯ 7ನೇ ವೇತನ ಆಯೋಗದ ಅವಧಿಯನ್ನು ಮಾಚ್​ 15, 2024ರ ತನಕ ವಿಸ್ತರಣೆ ಮಾಡಲಾಗಿದೆ. ಆಯೋಗದ ಅವಧಿ ಅಂತ್ಯಗೊಳ್ಳುವ ಮಾರ್ಚ್ 15ರ ಹೊತ್ತಿಗೆ ಲೋಕಸಭೆ ಚುನಾವಣೆ ನೀತಿ ಸಂಹಿತೆ ಜಾರಿಗೆ ಬಂದಿರುವ ನಿರೀಕ್ಷೆ ಇದೆ. ಈ ಹಿನ್ನೆಲೆಯಲ್ಲಿ ಬಜೆಟ್‌ನಲ್ಲಿ ವೇತನ ಆಯೋಗದ ವರದಿ ಕುರಿತು ಯಾವುದಾದರೂ ಘೋಷಣೆ ಮಾಡುವ ಸಾಧ್ಯತೆಯ ನಿರೀಕ್ಷೆ ಹುಟ್ಟು ಹಾಕಿದೆ.

ಕಳೆದ ತಿಂಗಳು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ ನೇತೃತ್ವದ ನಿಯೋಗ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿತ್ತು. ಈ ವೇಳೆ, 7ನೆ ವೇತನ ಆಯೋಗ ರಚನೆಯಾಗಿ 12 ತಿಂಗಳಾಗಿದೆ. ಮಾರ್ಚ್​ವರೆಗೆ ಕಾಲಾವಧಿ ವಿಸ್ತರಣೆ ಆಗಿದ್ದು, ಚುನಾವಣಾ ನೀತಿ ಸಂಹಿತೆ ಘೋಷಣೆಯಾಗುವ ಮೊದಲೇ ವೇತನ ಪರಿಷ್ಕರಣೆ ಮಾಡಿ ಘೋಷಣೆ ಮಾಡಬೇಕು ಎಂದು ಮನವಿ ಮಾಡಲಾಗಿತ್ತು. ಇದೀಗ ಏಳನೇ ವೇತನ ಆಯೋಗದ ಅಧ್ಯಕ್ಷರನ್ನು ಭೇಟಿಯಾಗಿ ಚರ್ಚಿಸಿರುವುದು ಸರ್ಕಾರಿ ನೌಕರರ ಕುತೂಹಲ ಕೆರಳಿಸಿದೆ.

ಇದನ್ನೂ ಓದಿ:ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ರಾಜ್ಯ ಸರ್ಕಾರ ಜನಪ್ರಿಯ ಬಜೆಟ್ ನೀಡುತ್ತದೆಯೇ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.