ETV Bharat / state

ಯಾರೇ ವಿರೋಧ ಮಾಡಿದರೂ ಬಗ್ಗುವ ಜಾಯಮಾನ ನನ್ನದಲ್ಲ; ಕೇಂದ್ರ ಸಚಿವರಿಗೆ ಎಚ್ಚರಿಕೆ ನೀಡಿದ ದಿಂಗಾಲೇಶ್ವರ ಶ್ರೀ - Dingaleshwar seer warned

author img

By ETV Bharat Karnataka Team

Published : Apr 9, 2024, 4:32 PM IST

ಕೇಂದ್ರ ಸಚಿವರಿಗೆ ಎಚ್ಚರಿಕೆ ನೀಡಿದ ದಿಂಗಾಲೇಶ್ವರ ಶ್ರೀ
ಕೇಂದ್ರ ಸಚಿವರಿಗೆ ಎಚ್ಚರಿಕೆ ನೀಡಿದ ದಿಂಗಾಲೇಶ್ವರ ಶ್ರೀ

ಪ್ರಹ್ಲಾದ ಜೋಶಿ ಅವರ ಕುಮ್ಮಕ್ಕಿನಿಂದಲೇ ಕೆಲ ಮಠಾಧೀಶರು ನನ್ನ ವಿರುದ್ಧ ಹೇಳಿಕೆ ಕೊಡುತ್ತಿದ್ದಾರೆ. ಇದು ನಿಲ್ಲದೇ ಹೋದರೆ ಮುಂದಿನ ದಿನದಲ್ಲಿ ಅದರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಕೇಂದ್ರ ಸಚಿವರಿಗೆ ದಿಂಗಾಲೇಶ್ವರ ಶ್ರೀಗಳು ಎಚ್ಚರಿಕೆ ನೀಡಿದರು.

ಕೇಂದ್ರ ಸಚಿವರಿಗೆ ಎಚ್ಚರಿಕೆ ನೀಡಿದ ದಿಂಗಾಲೇಶ್ವರ ಶ್ರೀ

ದಾವಣಗೆರೆ: ಜೋಶಿಯವರು ಕೆಲ ಮಠಾಧೀಶರನ್ನು ಹೆದರಿಸಿ ಬೆದರಿಸಿ ನನ್ನ ವಿರುದ್ಧ ಹೇಳಿಕೆ ಕೊಡಿಸುತ್ತಿದ್ದಾರೆ, ಅವರ ಕುಮ್ಮಕ್ಕಿನಿಂದ ಕೆಲ ಮಠಾಧೀಶರು ನನ್ನ ವಿರುದ್ಧ ಹೇಳಿಕೆ ಕೊಡುತ್ತಿದ್ದಾರೆ. ಇದು ನಿಲ್ಲದೇ ಹೋದರೆ ಅದರ ವ್ಯತಿರಿಕ್ತ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿಗೆ ದಿಂಗಾಲೇಶ್ವರ ಶ್ರೀ ಎಚ್ಚರಿಕೆ ನೀಡಿದರು.

ಹರಿಹರದ ಪಂಚಮಸಾಲಿ ಮಠಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ಸಮಾಜ ರಾಜಕೀಯ ಹೊರತುಪಡಿಸಿ ಇಲ್ಲ, ಸಮಾಜ ಸೇವೆಗೆ ಅವಕಾಶ ಸಿಕ್ಕಿದೆ, ಅದನ್ನು ಭಕ್ತರು ವಹಿಸಿದ್ದಾರೆ, ನಾವು ನಿಭಾಯಿಸುತ್ತೇವೆ ಅಷ್ಟೇ. ಲಿಂಗಾಯತ ನಾಯಕರನ್ನು ತುಳಿಯುವ ಕೆಲಸ ಜೋಶಿ ಮಾಡಿದ್ದಾರೆ. ಕೇವಲ ಲಿಂಗಾಯತರಲ್ಲ ಬ್ರಾಹ್ಮಣರು ಸೇರಿ ಆ ಭಾಗದ ಎಲ್ಲ ಸಮಾಜದವರು ನನ್ನ ರಾಜಕೀಯ ಪ್ರವೇಶ ಸ್ವಾಗತಿಸಿದ್ದಾರೆ. ನಾನು ಬಿಜೆಪಿ ಆಗಲಿ, ಕಾಂಗ್ರೆಸ್ ಆಗಲಿ ಬಂಡಾಯ ಅಲ್ಲವೇ ಅಲ್ಲ. ಎರಡು ಪಕ್ಷದ ಭಕ್ತರು ನಮಗೆ ಸ್ವಾಗತ ಮಾಡಿದ್ದಾರೆ. ಇದೊಂದು ಎಲೆಕ್ಷನ್ ಫಿಕ್ಸಿಂಗ್. ಜೋಶಿಯವರೇ ಕಾಂಗ್ರೆಸ್ ಅಭ್ಯರ್ಥಿಯನ್ನು ಹಾಕಿಸಿಕೊಂಡು ಬಂದಿದ್ದಾರೆ ಎಂಬ ಆರೋಪ ಆ ಭಾಗದ ಜನರು ಮಾಡುತ್ತಿದ್ದಾರೆ. ಲಿಂಗಾಯತ ಸಮಾಜದ ಸ್ವಾಮೀಜಿಗಳನ್ನು, ನಾಯಕರನ್ನು, ಮುಖಂಡರ ಬಗ್ಗೆ ಜೋಶಿಯವರು ಅಪಪ್ರಚಾರ ಮಾಡುವುದನ್ನು ಹಿಂದಿನಿಂದಲೂ ಮಾಡಿಕೊಂಡು ಬಂದಿದ್ದಾರೆ ಎಂದು ಆರೋಪಿಸಿದರು.

ಕುತಂತ್ರದಿಂದ ನಮ್ಮ ವಿರುದ್ಧ ಅಪಪ್ರಚಾರ: ಜೋಶಿಯವರ ಕುತಂತ್ರದಿಂದಲೇ ನಮ್ಮ ವಿರುದ್ಧ ಅಪಪ್ರಚಾರಗಳು ನಡೆಯುತ್ತವೆ ಅನ್ನೋದರಲ್ಲಿ ಎರಡು ಮಾತಿಲ್ಲ. ಯಾರೇ ವಿರೋಧ ಮಾಡಿದರೂ ಬಗ್ಗುವ, ಕುಗ್ಗುವ ಜಾಯಮಾನ ನನ್ನದಲ್ಲ. ಅಂದು ನಾನು ಮಾಡಿದ ಶೇ 40ರಷ್ಟು ಆರೋಪವನ್ನು ಸಾಬೀತು ಮಾಡುವೆ. ಅದರಿಂದ ಹಿಂದೆ ಸರಿಯುವುದಿಲ್ಲ. ಅಂದು ಸತ್ಯ ಹೇಳಿದ್ದೆ, ಈ ಸತ್ಯಕ್ಕಾಗಿ ನೊಂದವರ ಧ್ವನಿಯಾಗಿ ಹೊರ ಬಂದಿದ್ದೇನೆ. ಬಹಳ ವಿಶೇಷ ಎಂದರೆ ನಮ್ಮ ವಿರುದ್ಧ ಎತ್ತಿಕಟ್ಟಿ ಷಡ್ಯಂತ್ರ ನಡೆಯುತ್ತಿದೆ. ಲಿಂಗಾಯತರ ತುಳಿಯುವ ಪರಂಪರೆಯನ್ನು ಜೋಶಿಯವರು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಧಾರವಾಡ ಕ್ಷೇತ್ರದ ಮತದಾರರು ಎಚ್ಚರಗೊಂಡಿದ್ದಾರೆ. ಜೋಶಿಯವರಿಗೆ ಉತ್ತರ ಕೊಡಲಿದ್ದಾರೆ ಎಂದರು.

ಯಾವುದೇ ಪಕ್ಷದಿಂದ ನನಗೆ ಆಫರ್ ಮಾಡಿಲ್ಲ, ಯಾರನ್ನೂ ಸಂಪರ್ಕ ಮಾಡಿಲ್ಲ, ಯಾರೇ ಕರೆದರೂ ಭಕ್ತರ ಮುಂದೆ ಇಟ್ಟು, ಭಕ್ತರಿಂದಲೇ ನಿರ್ಧಾರ ತೆಗೆದುಕೊಳ್ಳತ್ತೇನೆ. ರಾಜಕೀಯ ಪ್ರವೇಶಕ್ಕೆ ನಮ್ಮ ಗುರುಗಳ ಆಶೀರ್ವಾದ ಪಡೆದು ಹೊರ ಬಂದಿದ್ದೇವೆ. ಎರಡು ಪಕ್ಷದವರು ನನ್ನ ರಾಜಕೀಯ ಪ್ರವೇಶವನ್ನು ಸ್ವಾಗತಿಸಿದ್ದಾರೆ ಎಂದರು.

ಬೆಂಬಲಿಸುವಂತೆ ಸಭೆ: ಹರಿಹರ ಪಂಚಮಸಾಲಿ ಪೀಠದ ವಚನಾನಂದ ಶ್ರೀಗಳ ಭೇಟಿ ಕುರಿತು ಪ್ರತಿಕ್ರಿಯಿಸಿದ ದಿಂಗಾಲೇಶ್ವರ ಸ್ವಾಮೀಜಿ, ನಾನು ಮತ್ತು ಪಂಚಮಸಾಲಿ ಶ್ರೀ ಇಬ್ಬರು ಬಾಲ್ಯ ಸ್ನೇಹಿತರು. ಈ ವೇಳೆ, ರಾಜಕೀಯ ಬಣ್ಣ ಬರಬಹುದು. ನಾವು ಸ್ವಾಮೀಜಿಗಳಾಗಿದ್ದರಿಂದ ಹೋಟೆಲ್, ಕ್ಲಬ್, ಬಾರ್​ಗೆ ಹೋಗಲು ಬರುವುದಿಲ್ಲ. ಅದಕ್ಕೆ ಸ್ವಾಮೀಜಿಯವರು ಇದ್ದಲ್ಲಿಗೆ ಬಂದು ಭೇಟಿಯಾಗಿದ್ದೇನೆ. ರಾಜಕೀಯದಲ್ಲೂ ನಾವು ಪ್ರವಚನ ಮಾಡುತ್ತೇವೆ. ನಮಗೆ ಸಪೋರ್ಟ್ ಮಾಡ್ತಾರೋ ಇಲ್ವೋ ಗೊತ್ತಿಲ್ಲ. ಅದನ್ನು ಪಂಚಮಸಾಲಿ ಶ್ರೀಯವರು ಅವರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅವರ ಅಭಿಪ್ರಾಯದ ಮಧ್ಯೆ ನಾನು ಪ್ರವೇಶ ಮಾಡುವುದಿಲ್ಲ. ಈಗಾಗಲೇ ದೊಡ್ಡ ದೊಡ್ಡ ಸಮಾಜದ ಶ್ರೀಗಳನ್ನು ಭೇಟಿಯಾಗಿದ್ದೇನೆ. ಅವರು ಹರುಷ ವ್ಯಕ್ತಪಡಿಸಿದ್ದಾರೆ. ನನ್ನನ್ನು ಒಪ್ಪಿಸಲು ಮನವೊಲಿಸಲು ಬಂದರೆ ನಾನು ಬಗ್ಗುವುದಿಲ್ಲ, ಹಿಂದೆ ಸರಿಯುವುದಿಲ್ಲ ಎಂದರು.

ಶ್ರೀಗಳ ಸ್ಪರ್ಧೆ ಸ್ವಾಗತಿಸಿದ ವಚನಾನಂದ ಶ್ರೀ: ದಿಂಗಾಲೇಶ್ವರ ಸ್ವಾಮೀಜಿ ರಾಜಕೀಯ ಪ್ರವೇಶವನ್ನು ತಾವು ಸ್ವಾಗತಿಸುವುದಾಗಿ ಹರಿಹರ ಪಂಚಮಸಾಲಿ ಪೀಠದ ವಚನಾನಂದ ಶ್ರೀಗಳು ಇದೇ ವೇಳೆ ಹೇಳಿದರು. ಉತ್ತರ ಭಾರತದಂತೆ ಕರ್ನಾಟಕದಲ್ಲಿ ಮಠಾಧೀಶರು ರಾಜಕಾರಣಕ್ಕೆ ಬರಬೇಕು. ರಾಜಕಾರಣದಲ್ಲಿ ಅಶುದ್ಧಿಯನ್ನ ಶುದ್ಧಿ ಮಾಡಲಿಕ್ಕೆ ಪರಮ ಪೂಜ್ಯರು ಬಹಳ ಯೋಗ್ಯರು ಅಂತ ನನಗೆ ಅನಿಸುತ್ತೆ. ‌ಪ್ರಹ್ಲಾದ ಜೋಶಿ ಅವರು ಆ ಭಾಗದ ಲಿಂಗಾಯತ ನಾಯಕರನ್ನ ತುಳಿಯುವಂತ ಕೆಲಸ ಮಾಡಿದ್ದಾರೆ ಎಂಬ ವಿಚಾರವೂ ನಮ್ಮ ಗಮನಕ್ಕೆ ಬಂದಿದೆ. ಈ ವಿಚಾರವಾಗಿ ನಾವು ಸದ್ಯದರಲ್ಲೆ ಸಭೆ ನಡೆಸಿ ನಮ್ಮ ನಿರ್ಧಾರ ತಿಳಿಸುತ್ತೇವೆ. ಪರಮ ಪೂಜ್ಯರು ಬಹಳ ವರ್ಷದಿಂದ ಪರಿಚಯಸ್ಥರು. ಅದು ಅವರ ವೈಯಕ್ತಿಕ ನಿರ್ಧಾರವಲ್ಲ, ಭಕ್ತರ ಅಭಿಪ್ರಾಯ ಕೇಳಿಕೊಂಡು ಚುನಾವಣೆ ಸ್ಪರ್ಧೆ ಮಾಡಿದ್ದಾರೆ. ಶ್ರೀಗೆ ಬೆಂಬಲ ನೀಡುವ ವಿಚಾರವಾಗಿ ಸದ್ಯದಲ್ಲೇ ಅಲ್ಲೊಂದು ಸಭೆ ಮಾಡಿ ನಮ್ಮ ನಿರ್ಧಾರ ತಿಳಿಸುತ್ತೇವೆ ಎಂದರು.

ಇದನ್ನೂ ಓದಿ: ದಿಂಗಾಲೇಶ್ವರ ಸ್ವಾಮೀಜಿ ಬೆಂಬಲಿಸುವ ಬಗ್ಗೆ ಸ್ಥಳೀಯರೊಂದಿಗೆ ಚರ್ಚಿಸುತ್ತೇನೆ: ಡಿ.ಕೆ.ಶಿವಕುಮಾರ್ - D K Shivakumar

ETV Bharat Logo

Copyright © 2024 Ushodaya Enterprises Pvt. Ltd., All Rights Reserved.