ETV Bharat / state

ಗೋಪಾಲಯ್ಯಗೆ ಕೊಲೆ ಬೆದರಿಕೆ ಹಾಕಿದ ಮಾಜಿ ಕಾರ್ಪೊರೇಟರ್ ಪದ್ಮರಾಜ್ ಬಂಧನ: ಜಿ.ಪರಮೇಶ್ವರ್

author img

By ETV Bharat Karnataka Team

Published : Feb 14, 2024, 6:38 PM IST

G. Parameshwar
ಗೃಹ ಸಚಿವ ಡಾ.ಜಿ.ಪರಮೇಶ್ವರ್

ಶಾಸಕರಿಗೆ ಬೆದರಿಕೆ ಹಾಕಿರುವುದು ಗಂಭೀರ ವಿಚಾರ. ಇಂತಹ ವ್ಯಕ್ತಿಗಳಿಗೆ ಕಠಿಣ ಸಂದೇಶ ನೀಡಬೇಕಿದೆ ಎಂದು ಸ್ಪೀಕರ್ ಯು.ಟಿ.ಖಾದರ್ ಹೇಳಿದರು.

ಬೆಂಗಳೂರು: ಮಾಜಿ ಸಚಿವ, ಬಿಜೆಪಿ ಶಾಸಕ ಕೆ.ಗೋಪಾಲಯ್ಯ ಅವರಿಗೆ ಕೊಲೆ ಬೆದರಿಕೆ ಹಾಕಿರುವ ಆರೋಪಿಯನ್ನು ಬಂಧಿಸಲಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಇಂದು ವಿಧಾನಸಭೆಯಲ್ಲಿ ತಿಳಿಸಿದರು. ಇದಕ್ಕೂ ಮುನ್ನ ಶೂನ್ಯವೇಳೆಯಲ್ಲಿ ಕೊಲೆ ಬೆದರಿಕೆ ಹಾಕಿರುವ ವಿಚಾರ ಪ್ರಸ್ತಾಪಕ್ಕೆ ಸಂಬಂಧಿಸಿದಂತೆ ಇಡೀ ಸದನ ಗೋಪಾಲಯ್ಯನವರ ಬೆನ್ನಿಗೆ ನಿಂತು, ಆರೋಪಿಯನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿತು.

ಸ್ಪೀಕರ್ ಯು.ಟಿ.ಖಾದರ್ ಕೂಡ ಶಾಸಕರಿಗೆ ಕೊಲೆ ಬೆದರಿಕೆ ಹಾಕಿರುವುದು ಗಂಭೀರ ವಿಚಾರ. ಬೆದರಿಕೆ ಹಾಕಿರುವ ವ್ಯಕ್ತಿಗೆ ಕಠಿಣ ಸಂದೇಶ ಹೋಗಬೇಕು. ಕೂಡಲೇ ಆತನನ್ನು ಬಂಧಿಸಿ ಇಲ್ಲವೇ ಸಂಬಂಧಪಟ್ಟ ಇನ್ಸ್‌ಪೆಕ್ಟರ್ ಅಮಾನತು ಮಾಡುವಂತೆ ರೂಲಿಂಗ್ ನೀಡಿದರು.

ಶಾಸಕರ ಕೊಲೆ ಬೆದರಿಕೆ ವಿಚಾರ ಕಾವೇರಿದ ಚರ್ಚೆ ನಡೆದ ನಂತರ ಸದನಕ್ಕೆ ಆಗಮಿಸಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಶಾಸಕ ಗೋಪಾಲಯ್ಯರಿಗೆ ಕೊಲೆ ಬೆದರಿಕೆ ಹಾಕಿರುವ ಬಿಬಿಎಂಪಿಯ ಮಾಜಿ ಸದಸ್ಯ ಪದ್ಮರಾಜ್ ಎಂಬ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಸದನಕ್ಕೆ ತಿಳಿಸಿದರು.

ಇದಕ್ಕೂ ಮುನ್ನ ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಶಾಸಕ ಕೆ.ಗೋಪಾಲಯ್ಯ, ನಿನ್ನೆ ರಾತ್ರಿ 11ಕ್ಕೆ ಮಾಜಿ ಬಿಬಿಎಂಪಿ ಸದಸ್ಯರಾದ ಪದ್ಮರಾಜ್ ಅವರು ತಮಗೆ ದೂರವಾಣಿ ಕರೆ ಮಾಡಿ ಹಣ ನೀಡುವಂತೆ ಒತ್ತಾಯಿಸಿದ್ದರು. ನಾನು ನಿನಗೆ ಹಣ ಕೊಡಲು ನೀನೇನೂ ನನ್ನ ಚಿಕ್ಕಪ್ಪ, ದೊಡ್ಡಪ್ಪನಾ ಎಂದು ಹೇಳಿದೆ. ಆಗ ಪದ್ಮರಾಜ್ ನನ್ನ ಬಗ್ಗೆ ಹಾಗೂ ನನ್ನ ಕುಟುಂಬದ ಬಗ್ಗೆ ಅವಾಚ್ಯವಾಗಿ, ಕೆಟ್ಟದಾಗಿ ಮಾತನಾಡಿದರು. ಆ ಶಬ್ದಗಳನ್ನು ಇಲ್ಲಿ ಹೇಳಲು ಸಾಧ್ಯವಿಲ್ಲ. ಹಾಗೆಯೇ ಹುಡುಗರನ್ನು ಕಳುಹಿಸಿ ಮನೆ ಲೂಟಿ ಮಾಡುತ್ತೇನೆ, ಕೊಲೆ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ ಎಂದು ಸದನಕ್ಕೆ ತಿಳಿಸಿದರು.

ಈತನಿಗೆ ಬಸವೇಶ್ವರನಗರದಲ್ಲಿ ಕ್ಲಬ್ ಇದೆ. ಆ ಹಣದಲ್ಲಿ ಕುಡಿದು ಈ ರೀತಿ ಕೊಲೆ ಬೆದರಿಕೆ ಹಾಕಿದ್ದಾನೆ. ಈತ ನನಗಷ್ಟೇ ಅಲ್ಲ, ಈ ಹಿಂದೆ ಹಿರಿಯ ಶಾಸಕ ಸುರೇಶ್‌ಕುಮಾರ್ ಅವರಿಗೂ ಅನೇಕ ಬಾರಿ ಈ ರೀತಿ ಕೆಟ್ಟದ್ದಾಗಿ ಮಾತನಾಡಿದ್ದಾನೆ. ಅವರು ದೂರು ಕೊಟ್ಟಿಲ್ಲ ಅಷ್ಟೇ. ನನಗೆ ಕೊಲೆ ಬೆದರಿಕೆ ಹಾಕಿರುವ ಪದ್ಮರಾಜ್‌ನನ್ನು ಗಡಿಪಾರು ಮಾಡಿ ಸಮಾಜಘಾತಕ ಶಕ್ತಿಗಳನ್ನು ಸರ್ಕಾರ ಮಟ್ಟ ಹಾಕಬೇಕು ಎಂದು ಆಗ್ರಹಿಸಿದರು‌.

ನನಗೆ ಹಾಗೂ ನನ್ನ ಕುಟುಂಬಕ್ಕೆ ರಕ್ಷಣೆ ಕೊಡಬೇಕು. ಪದ್ಮರಾಜ್ ಹುಡುಗರನ್ನು ಕಳುಹಿಸಿ ನನ್ನ ಕುಟುಂಬದವರ ಮೇಲೆ ಹಲ್ಲೆ ಮಾಡಬಹುದು. ಹಾಗಾಗಿ ಸೂಕ್ತ ರಕ್ಷಣೆ ನೀಡುವಂತೆಯೂ ಒತ್ತಾಯಿಸಿದರು. ಬೆದರಿಕೆ ಬಗ್ಗೆ ನಿನ್ನೆ ರಾತ್ರಿಯೇ ನಾನು ಸಂಬಂಧಪಟ್ಟ ಡಿಸಿಪಿ, ಎಸಿಪಿಗಳ ಜೊತೆ ಮಾತನಾಡಿದ್ದೇನೆ. ಅವರು ಪದ್ಮರಾಜ್ ಮನೆಗೆ ಹೋಗಿ ಹೊರಗೆ ಕಾಯುತ್ತಿದ್ದಾರೆ‌. ಆತ ಹೊರಗೆ ಬಂದಿಲ್ಲ. ಮನೆಯೊಳಗೆ ಇದ್ದರೂ ಅದೇನು ಮಾಡಿಕೊಳ್ಳುತ್ತಿರೋ ಮಾಡಿಕೊಳ್ಳಿ ಎಂದು ಹೇಳಿದ್ದಾನೆ. ಹೀಗಾದರೆ ಹೇಗೆ?. ನನಗೆ ರಕ್ಷಣೆ ಬೇಕು ಎಂದು ಹೇಳಿದರು.

ಶಾಸಕರ ಗೋಪಾಲಯ್ಯ ಅವರ ಬೆಂಬಲಕ್ಕೆ ನಿಂತ ಬಿಜೆಪಿ ಶಾಸಕ ಸುನೀಲ್‌ ಕುಮಾರ್, ಒಬ್ಬ ಶಾಸಕನಿಗೆ ರಕ್ಷಣೆ ಇಲ್ಲ ಅಂದ್ರೆ ಹೇಗೆ? ಗೋಪಾಲಯ್ಯ ಅವರು ಮಾಜಿ ಸಚಿವರು, ಇಲ್ಲಿ ರಾಜಕಾರಣ ಬೇಡ. ಶಾಸಕರಿಗೆ ಕೊಲೆ ಬೆದರಿಕೆ ಹಾಕಿರುವ ವ್ಯಕ್ತಿಯ ಬಂಧನ ಇದುವರೆಗೂ ಏಕೆ ಆಗಿಲ್ಲ ಎಂದು ಪ್ರಶ್ನಿಸಿದರು.

ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, ಗೋಪಾಲಯ್ಯ ಸಜ್ಜನರಿದ್ದಾರೆ. ಈ ರೀತಿ ಅವರಿಗೆ ಕೊಲೆ ಬೆದರಿಕೆ ಹಾಕಿರುವುದು ಖಂಡನೀಯ. ಕೂಡಲೇ ಕೊಲೆ ಬೆದರಿಕೆ ಹಾಕಿರುವವರನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು.

ಬಿಜೆಪಿಯ ಸುರೇಶ್‌ಕುಮಾರ್ ಅವರು ಸಹ ಗೋಪಾಲಯ್ಯ ಅವರ ಬೆಂಬಲಕ್ಕೆ ನಿಂತು ಗೋಪಾಲಯ್ಯನವರಿಗೆ ಕೊಲೆ ಬೆದರಿಕೆ ಹಾಕಿರುವ ವ್ಯಕ್ತಿಯ ಬೆದರಿಕೆಯ ಫಲಾನುಭವಿಗಳಲ್ಲಿ ನಾನು, ಆರ್.ಅಶೋಕ್ ಸಹ ಇದ್ದೇವೆ. ಆತನ ಅಟ್ಟಹಾಸ ಹೆಚ್ಚಿದೆ. ಅವರ ಕಟ್ಟಡದಲ್ಲೇ ಕ್ಲಬ್ ನಡೆಯುತ್ತದೆ. ಬೇರೆಡೆ ಎಲ್ಲ ಕ್ಲಬ್ ಬಂದ್ ಆಗುತ್ತದೆ. ಇಲ್ಲಿ ಮಾತ್ರ ಕ್ಲಬ್ ಬಂದ್ ಆಗಿಲ್ಲ. ಬೆದರಿಕೆ ಹಾಕಿರುವ ಆತನ ಬಂದನವೂ ಆಗಿಲ್ಲ. ಮನೆಯೊಳಗೆ ಕುಳಿತು ಆತ ಫೋನ್ ಮೂಲಕ ಪೊಲೀಸ್ ಅಧಿಕಾರಿಗಳಿಗೆ ಹೇಳುತ್ತಿದ್ದಾನೆ. ಇದು ಸರಿಯಲ್ಲ ಅಂಥ, ತಕ್ಷಣ ಪದ್ಮರಾಜ್‌ನನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.

ಪ್ರತಿಪಕ್ಷ ನಾಯಕ ಆರ್.ಅಶೋಕ್ ಮಾತನಾಡಿ, ಕೊಲೆ ಬೆದರಿಕೆ ಹಾಕಿರುವ ವ್ಯಕ್ತಿಯ ಬಂಧನ ಆಗದ ಬಗ್ಗೆ ಆಕ್ರೋಶ ಹೊರಹಾಕಿದರು. ಕುಡಿದು ನಶೆ ಇಳಿದ ಮೇಲೆ ಆತನ ವಿರುದ್ಧ ಕ್ರಮ ಕೈಗೊಳ್ಳಬೇಕು. ಆತನ ವಿರುದ್ಧ ಪ್ರಕರಣ ದಾಖಲಿಸದೇ, ರಾಜಾತಿಥ್ಯ ನೀಡಲಾಗುತ್ತಿದೆ ಎಂದು ಪ್ರಶ್ನಿಸಿದ ಅವರು, ಜನಪ್ರತಿನಿಧಿಗಳಿಗೆ ಈ ರೀತಿ ಬೆದರಿಕೆ ಹಾಕಿರುವ ವ್ಯಕ್ತಿಯನ್ನು ತಕ್ಷಣ ಬಂಧಿಸಿ ಗಡಿಪಾರು ಮಾಡಬೇಕು. ಈತನಿಗೆ ನೀಡುವ ಶಿಕ್ಷೆ ಇಡೀ ರಾಜ್ಯಕ್ಕೆ ಮಾದರಿಯಾಗಿ ಮುಂದೆ ಈ ರೀತಿ ಯಾರೂ ಬೆದರಿಕೆ ಹಾಕದಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಸದಸ್ಯರ ಪ್ರಸ್ತಾಪಕ್ಕೆ ಸರ್ಕಾರದ ಪರವಾಗಿ ಉತ್ತರ ನೀಡಿದ ಸಮಾಜ ಕಲ್ಯಾಣ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಅವರು, ಗೃಹ ಸಚಿವರು ವಿಧಾನ ಪರಿಷತ್‌ನಲ್ಲಿದ್ದಾರೆ. ಅವರು ಈ ಬಗ್ಗೆ ಉತ್ತರ ಕೊಡುತ್ತಾರೆ. ಕಾನೂನು ಎಲ್ಲರಿಗೂ ಸಮಾನ. ಪಕ್ಷಪಾತವಾಗಲಿ, ತಾರತಮ್ಯವಾಗಲಿ ಮಾಡುವ ಉದ್ದೇಶ ನಮಗಿಲ್ಲ. ಕೊಲೆ ಬೆದರಿಕೆ ಹಾಕಿರುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ಪದ್ಮರಾಜ್ ಮತ್ತು ನಾನು ಹಾಗೂ ಗೋಪಾಲಯ್ಯ ಹಿಂದೆ ಒಂದೇ ಪಕ್ಷದಲ್ಲಿ ಇದ್ದೇವು. ಈಗ ಎಲ್ಲಿದ್ದಾನೋ ಗೊತ್ತಿಲ್ಲ. ಏನೇ ಇರಲಿ ಈತನ ವಿರುದ್ಧ ಕ್ರಮ ಆಗುತ್ತದೆ ಎಂದರು.

ಇದನ್ನೂಓದಿ: ರಾಜ್ಯದ ರೈತರನ್ನು ಸುರಕ್ಷಿತವಾಗಿ ಕರೆತರಲು ಸರ್ಕಾರ ಕ್ರಮ ತೆಗೆದುಕೊಳ್ಳಬೇಕು; ಸ್ಪೀಕರ್ ಸೂಚನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.