ETV Bharat / state

ಬೆಂಗಳೂರು: ಇಸ್ಕಾನ್‌ನಿಂದ ಭವ್ಯ ಬ್ರಹ್ಮ ರಥೋತ್ಸವ - ISCON Brahma Rathotsava

author img

By ETV Bharat Karnataka Team

Published : May 1, 2024, 8:29 PM IST

ಇಸ್ಕಾನ್ ಬೆಂಗಳೂರಿನಿಂದ ಭವ್ಯ ಬ್ರಹ್ಮ ರಥೋತ್ಸವ
ಇಸ್ಕಾನ್ ಬೆಂಗಳೂರಿನಿಂದ ಭವ್ಯ ಬ್ರಹ್ಮ ರಥೋತ್ಸವ

ಇಸ್ಕಾನ್ ಬೆಂಗಳೂರಿನಿಂದ ಇಂದು ಭವ್ಯ ಬ್ರಹ್ಮ ರಥೋತ್ಸವ, ರಜತ ಮಹೋತ್ಸವ ಆಚರಣೆಯ ನಿಮಿತ್ತ ರಾಧಾ ಕೃಷ್ಣಚಂದ್ರರನ್ನು ವಿಶೇಷವಾಗಿ ಅಲಂಕರಿಸಿ, 108 ರೀತಿಯ ವಿವಿಧ ಬಗೆಯ ವಿಶೇಷ ನೈವೇದ್ಯ ಅರ್ಪಿಸಲಾಯಿತು.

ಬೆಂಗಳೂರು: ವಾರ್ಷಿಕ ಬ್ರಹ್ಮೋತ್ಸವದ ಅಂಗವಾಗಿ ಇಸ್ಕಾನ್ ಬುಧವಾರ ಬ್ರಹ್ಮರಥೋತ್ಸವ ಆಚರಿಸಿತು. ಇಂದು ಹರೇ ಕೃಷ್ಣಗಿರಿಯ ಮೇಲೆ ವಿಗ್ರಹಗಳ ಪ್ರತಿಷ್ಠಾಪನೆಯ ದಿನವೂ ಕೂಡ ಆಗಿದ್ದು, ರಾಧಾ ಕೃಷ್ಣಚಂದ್ರ, ಕೃಷ್ಣ ಬಲರಾಮ ಮತ್ತು ನಿತಾಯ್ ಗೌರಂಗ ವಿಗ್ರಹಗಳನ್ನು ಬ್ರಹ್ಮರಥದಲ್ಲಿ ದೇವಾಲಯದ ಸುತ್ತಲೂ ಮೆರವಣಿಗೆ ಮಾಡಲಾಯಿತು.

ಬ್ರಹ್ಮೋತ್ಸವ ಇಸ್ಕಾನ್ ಬೆಂಗಳೂರಿನ ಪ್ರಮುಖ ಉತ್ಸವ. ಈ ದಿನವೇ ಹರೇ ಕೃಷ್ಣಗಿರಿಯ ಮೇಲೆ ದೇವಾಲಯದ ಎಲ್ಲಾ ವಿಗ್ರಹಗಳನ್ನು 1997ರಲ್ಲಿ ಚೈತ್ರ ಮಾಸದ ಪೂರ್ವಾಷಾಢ ನಕ್ಷತ್ರದ ಅಷ್ಟಮಿ ದಿನ ಪ್ರತಿಷ್ಠಾಪಿಸಲಾಗಿತ್ತು. ದೇವಾಲಯದ ರಜತ ಮಹೋತ್ಸವದ ನೆನಪಿಗಾಗಿ ಈ ವರ್ಷ ಬ್ರಹ್ಮೋತ್ಸವವನ್ನು ಬಹಳ ವೈಭವದಿಂದ ಆಚರಿಸಲಾಗಿದೆ.

ಇಸ್ಕಾನ್ ಬೆಂಗಳೂರಿನಿಂದ ಭವ್ಯ ಬ್ರಹ್ಮ ರಥೋತ್ಸವ
ಇಸ್ಕಾನ್ ಬೆಂಗಳೂರಿನಿಂದ ಭವ್ಯ ಬ್ರಹ್ಮ ರಥೋತ್ಸವ

13 ದಿನಗಳ ಕಾರ್ಯಕ್ರಮದಲ್ಲಿ ಭಾರತದಾದ್ಯಂತ ಆಧ್ಯಾತ್ಮಿಕ ನಾಯಕರು, ಅತಿಥಿಗಳು ಮತ್ತು ಲಕ್ಷಾಂತರ ಭಕ್ತರು ಭಾಗವಹಿಸಿದ್ದಾರೆ. ಏ.21ರಂದು ಧ್ವಜಾರೋಹಣ ಅಥವಾ ಗರುಡ ಪಟ ಆರೋಹಣದೊಂದಿಗೆ ರಥೋತ್ಸವ ಪ್ರಾರಂಭವಾಗಿತ್ತು. ಪ್ರತಿದಿನ ಸಂಜೆ ರಾಧಾ ಕೃಷ್ಣಚಂದ್ರರರ ಉತ್ಸವ ಮೂರ್ತಿಗಳನ್ನು ವಿಶೇಷ ಅಲಂಕಾರದಲ್ಲಿ ಅಲಂಕರಿಸಿ ವಿವಿಧ ವಾಹನಗಳಲ್ಲಿ ದೇವಾಲಯದ ಸುತ್ತಲೂ ಮೆರವಣಿಗೆ ಮಾಡಲಾಗಿತ್ತು. ಭಗವಂತನ ಪ್ರಸನ್ನತೆಗಾಗಿ ಪ್ರಸಿದ್ಧ ಕಲಾವಿದರಿಂದ ನೃತ್ಯ ಸೇವೆ ಮತ್ತು ಸಂಗೀತ ಸೇವೆಯಂತಹ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಇದರ ನಂತರ, ವಿಗ್ರಹಗಳಿಗೆ ಡೋಲೋತ್ಸವ ಸೇವೆಯ ನಡೆಸಲಾಗಿತ್ತು. ಈ ಸಂದರ್ಭದಲ್ಲಿ ದೇವರನ್ನು ಭಜನೆಗಳೊಂದಿಗೆ ಉಯ್ಯಾಲೆಯಲ್ಲಿ ತೂಗಲಾಯಿತು.

ಮೇ 2ರಂದು ಮೂಲ ವಿಗ್ರಹಗಳಿಗೆ ಮಹಾ ಕುಂಭಾಭಿಷೇಕ ನಡೆಯುತ್ತದೆ. ಇದು 12 ವರ್ಷಗಳಿಗೊಮ್ಮೆ ನಡೆಸಲಾಗುವ ವಿಸ್ತಾರವಾದ ಅಭಿಷೇಕ. ಮರುದಿನ ದೇವರಿಗೆ ಕಲ್ಯಾಣಿಯಲ್ಲಿ ಅದ್ಧೂರಿಯಾಗಿ ತೆಪ್ಪೋತ್ಸವ ನಡೆಸಲಾಗುತ್ತದೆ. ಉತ್ಸವವು ಮೇ 3 ರಂದು ಧ್ವಜಾವರೋಹಣ ಸಮಾರಂಭದೊಂದಿಗೆ ಕೊನೆಗೊಳ್ಳಲಿದೆ.

ಇಸ್ಕಾನ್ ಬೆಂಗಳೂರಿನಿಂದ ಭವ್ಯ ಬ್ರಹ್ಮ ರಥೋತ್ಸವ
ಇಸ್ಕಾನ್ ಬೆಂಗಳೂರಿನಿಂದ ಭವ್ಯ ಬ್ರಹ್ಮ ರಥೋತ್ಸವ

ಇಸ್ಕಾನ್ ಬೆಂಗಳೂರು ಅಧ್ಯಕ್ಷ ಮಧು ಪಂಡಿತ್ ದಾಸರು ಕಾರ್ಯಕ್ರಮದ ಕುರಿತು ಮಾತನಾಡಿ, ವಾರ್ಷಿಕ ಬ್ರಹ್ಮೋತ್ಸವ ಮತ್ತು ರಜತ ಮಹೋತ್ಸವ ಆಚರಣೆಯಲ್ಲಿ ಲಕ್ಷಾಂತರ ಭಕ್ತರು ಭಾಗವಹಿಸುವುದನ್ನು ನೋಡಿ ಅಪಾರ ಸಂತೋಷವಾಗಿದೆ. ಶ್ರೀ ರಾಧಾ ಕೃಷ್ಣಚಂದ್ರ ಎಲ್ಲರಿಗೂ ತಮ್ಮ ಕರುಣೆ ನೀಡಲು ಹರೇ ಕೃಷ್ಣ ಗಿರಿಯ ಮೇಲೆ ನೆಲೆಸಿದರು. ದೇವರ ಪ್ರತಿಷ್ಠಾಪನೆಯ ಶುಭ ವಾರ್ಷಿಕೋತ್ಸವದ ಅಂಗವಾಗಿ ನಾವು ಇಂದು ಬ್ರಹ್ಮ ರಥೋತ್ಸವವನ್ನು ನಡೆಸಿದ್ದೇವೆ. ನಾಳೆ, ಮಹಾ ಕುಂಭಾಭಿಷೇಕವನ್ನು ನಡೆಸಲಿದ್ದೇವೆ. 12 ವರ್ಷಗಳಿಗೊಮ್ಮೆ ಮಾತ್ರ ಸಾಕ್ಷಿಯಾಗಬಹುದಾದ ದೈವಿಕ ಸಮಾರಂಭದಲ್ಲಿ ಭಾಗವಹಿಸಲು ಈ ಅವಕಾಶವನ್ನು ಬಳಸಿಕೊಳ್ಳುವಂತೆ ನಾನು ಎಲ್ಲರಿಗೂ ಆಹ್ವಾನ ನೀಡುತ್ತೇನೆ. ನಮ್ಮೆಲ್ಲರಿಗೂ ಉತ್ತಮ ಆರೋಗ್ಯ, ಮನಸ್ಸಿನ ಶಾಂತಿ, ಭಕ್ತಿ ಮತ್ತು ಸಂತೋಷವನ್ನು ಕರುಣಿಸಲಿ ಎಂದು ರಾಧಾ ಕೃಷ್ಣಚಂದ್ರನನ್ನು ಪ್ರಾರ್ಥಿಸುತ್ತೇನೆ ಎಂದು ನುಡಿದರು.

ಇದನ್ನೂ ಓದಿ: ಬೆಂಗಳೂರು: ಇಸ್ಕಾನ್​ನಲ್ಲಿ 39ನೇ ಶ್ರೀಕೃಷ್ಣ, ಬಲರಾಮರ ವಾರ್ಷಿಕ ರಥಯಾತ್ರೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.