ETV Bharat / state

ಇಂಡಿಯಾ ಗೆದ್ದರೆ ಮೇಕೆದಾಟು ತಡೆಯುತ್ತೇವೆ ಎನ್ನುವ ಡಿಎಂಕೆ ನಡೆ ಖಂಡನಾರ್ಹ: ಮುಖ್ಯಮಂತ್ರಿ ಚಂದ್ರು - AAP SUPPORTS MEKEDATU PROJECT

author img

By ETV Bharat Karnataka Team

Published : Mar 21, 2024, 3:46 PM IST

Dr mukhyamantri Chandru
ಆಮ್‌ ಆದ್ಮಿ ಪಾರ್ಟಿ ಮುಖಂಡ ಡಾ ಮುಖ್ಯಮಂತ್ರಿ ಚಂದ್ರು

ಒಂದೆಡೆ ಕೇಂದ್ರ ಬಿಜೆಪಿ ಸರ್ಕಾರ ಮೇಕೆದಾಟು ಜಲಾಶಯ ನಿರ್ಮಾಣಕ್ಕೆ ಕಾನೂನು ಸಮ್ಮತಿ ಸಿಕ್ಕರೂ, ಕೇಂದ್ರ ಪರಿಸರ ಇಲಾಖೆ ಒಪ್ಪಿಗೆ ನೀಡದೆ ಸತಾಯಿಸುತ್ತಿದೆ. ಈ ವೇಳೆ ಡಿಎಂಕೆ ಮಿತ್ರ ಪಕ್ಷವಾಗಿದ್ದು ನಮ್ಮ ಆಶಯಕ್ಕೆ ತೊಡಕುಂಟು ಮಾಡುತ್ತಿರುವುದು ದುರಾದೃಷ್ಟಕರ ಎಂದು ಆಮ್‌ ಆದ್ಮಿ ಪಾರ್ಟಿ ರಾಜ್ಯಾಧ್ಯಕ್ಷ ಡಾ ಮುಖ್ಯಮಂತ್ರಿ ಚಂದ್ರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು: ಇಂಡಿಯಾ ಮೈತ್ರಿಕೂಟದ ಭಾಗವಾಗಿರುವ ತಮಿಳುನಾಡಿನ ಆಡಳಿತಾರೂಢ ಡಿಎಂಕೆ ಮೇಕೆದಾಟು ಜಲಾಶಯ ನಿರ್ಮಾಣಕ್ಕೆ ತಡೆಯೊಡ್ಡುವುದಾಗಿ ಹೇಳಿರುವುದು ಬೇಸರದ ಸಂಗತಿ. ಸಿಎಂ ಎಂ ಕೆ ಸ್ಟಾಲಿನ್‌ ನಡೆ ಖಂಡನಾರ್ಹ ಎಂದು ಆಮ್‌ ಆದ್ಮಿ ಪಾರ್ಟಿ ರಾಜ್ಯಾಧ್ಯಕ್ಷ ಡಾ. ಮುಖ್ಯಮಂತ್ರಿ ಚಂದ್ರು ಅಸಮಾಧಾನ ವ್ಯಕ್ತಪಡಿಸಿದರು.

ಲೋಕಸಭೆ ಚುನಾವಣೆ ಹಿನ್ನೆಲೆ ಎಂ ಕೆ ಸ್ಟಾಲಿನ್‌ ನೇತೃತ್ವದ ಡಿಎಂಕೆ ಬಿಡುಗಡೆ ಮಾಡಿರುವ ಪ್ರಣಾಳಿಕೆ ಕುರಿತು ಗುರುವಾರ ನಗರದಲ್ಲಿ ಸುದ್ದಿಗಾರರಿಗೆ ಮುಖ್ಯಮಂತ್ರಿ ಚಂದ್ರು ಪ್ರತಿಕ್ರಿಯಿಸಿ, ಮೇಕೆದಾಟು ಯೋಜನೆಯನ್ನು ಬೆಂಗಳೂರು ನಗರಕ್ಕೆ ಕುಡಿಯುವ ನೀರು ಪೂರೈಕೆ ಮಾಡುವ ಉದ್ದೇಶದಿಂದ ನಿರ್ಮಾಣ ಮಾಡಲಾಗುತ್ತಿದೆ.

ಮೇಕೆದಾಟು ಪರಿಸರದಲ್ಲಿ ಜಲಾಶಯ ನಿರ್ಮಾಣ ಮಾಡಿ, ಮಳೆಗಾಲದ ಸಂದರ್ಭದಲ್ಲಿ ಸಮುದ್ರ ಪಾಲಾಗುವ 65-66 ಟಿಎಂಸಿ ಹೆಚ್ಚುವರಿ ನೀರನ್ನು ಸಂಗ್ರಹಿಸಬೇಕು ಎಂಬುದು ನಮ್ಮ ರಾಜ್ಯದ ಉದ್ದೇಶವಾಗಿದೆ. ಅಷ್ಟೇ ಅಲ್ಲದೆ ರಾಜ್ಯಕ್ಕೆ ಅಗತ್ಯವಿರುವ ವಿದ್ಯುತ್‌ ಉತ್ಪಾದನೆಗೆ ಈ ಯೋಜನೆಯಿಂದ ಅನುಕೂಲವಾಗಲಿದೆ. ಇಂತಹ ಜನಪರ ಯೋಜನೆಗೆ ರಾಜಕೀಯ ಉದ್ದೇಶದಿಂದ ಡಿಎಂಕೆ ಅಡ್ಡಗಾಲು ಹಾಕುತ್ತಿದೆ. ಈ ವಿಚಾರವಾಗಿ ಸ್ಟಾಲಿನ್‌ ಅವರ ನಡೆ ಸರಿಯಲ್ಲ ಎಂದರು.

ಬಿಜೆಪಿ ಸರ್ಕಾರದಿಂದ ದ್ವೇಷ ರಾಜಕಾರಣ: ಒಂದೆಡೆ ಕೇಂದ್ರ ಬಿಜೆಪಿ ಸರ್ಕಾರ ಕರ್ನಾಟಕದ ವಿರುದ್ಧ ದ್ವೇಷ ರಾಜಕಾರಣ ನಡೆಸುತ್ತಿದೆ. ಮೇಕೆದಾಟು ಜಲಾಶಯ ನಿರ್ಮಾಣಕ್ಕೆ ಕಾನೂನು ಸಮ್ಮತಿ ಸಿಕ್ಕರೂ, ಕೇಂದ್ರ ಪರಿಸರ ಇಲಾಖೆ ಒಪ್ಪಿಗೆ ನೀಡದೆ ಸತಾಯಿಸುತ್ತಿದೆ. ಇಂತಹ ಸಂದರ್ಭದಲ್ಲಿ ಡಿಎಂಕೆ ಮಿತ್ರ ಪಕ್ಷವಾಗಿದ್ದುಕೊಂಡು ನಮ್ಮ ಆಶಯಕ್ಕೆ ತೊಡಕುಂಟು ಮಾಡುತ್ತಿರುವುದು ದುರಾದೃಷ್ಟಕರ. ಸ್ಟಾಲಿನ್‌ ರಿಂದ ಇದನ್ನು ನಿರೀಕ್ಷಿಸಿರಲಿಲ್ಲ ಎಂದು ಮುಖ್ಯಮಂತ್ರಿ ಚಂದ್ರು ಹೇಳಿದರು.

ಮೇಕೆದಾಟು ಯೋಜನೆ ನಮ್ಮ ರಾಜ್ಯದ ಹಕ್ಕು. ಸಾಮಾನ್ಯ ಸಂದರ್ಭಗಳಲ್ಲಿ ಕರ್ನಾಟಕವು ತಮಿಳುನಾಡಿಗೆ ಎಷ್ಟು ಟಿಎಂಸಿ ನೀರು ಬಿಡಬೇಕು ಎಂಬುದನ್ನು ಕಾವೇರಿ ತೀರ್ಪಿನಲ್ಲಿ ಸ್ಪಷ್ಟಪಡಿಸಲಾಗಿದೆ. ಸಂಕಷ್ಟದ ವರ್ಷದಲ್ಲಿ ಸಂಗ್ರಹವಾದ ನೀರನ್ನು ನಾವು ಬಳಸಬಹುದಾಗಿದೆ. ಪ್ರವಾಹ ಮತ್ತು ಸಂಕಷ್ಟದ ವರ್ಷಗಳಲ್ಲಿ ನೀರು ಬಳಕೆಗೆ ಇದು ಕರ್ನಾಟಕ ಮತ್ತು ತಮಿಳುನಾಡು ಎರಡು ರಾಜ್ಯಗಳಿಗೆ ಅನುಕೂಲವಾಗಲಿದೆ ಎಂದು ಅವರು ಒತ್ತಿ ಹೇಳಿದರು.

ಇಂಡಿಯಾ ಮೈತ್ರಿಕೂಟ ಬಂದ್ರೆ ಮೇಕೆದಾಟು ತೊಡಕು ನಿವಾರಣೆ: ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಪಕ್ಷವು ಇಂಡಿಯಾ ಒಕ್ಕೂಟದ ಮಿತ್ರ ಪಕ್ಷವಾಗಿರುವ ಡಿಎಂಕೆ ಪಕ್ಷಕ್ಕೆ ಈ ಬಗ್ಗೆ ಮನವರಿಕೆ ಮಾಡಿಕೊಡಬೇಕಾಗಿದೆ. ಉಭಯ ರಾಜ್ಯಗಳ ನಡುವೆ ಗೊಂದಲಗಳಿಗೆ ಅವಕಾಶ ನೀಡದಂತೆ ಶೀಘ್ರ ಕ್ರಮ ಜರುಗಿಸಬೇಕು ಎಂದು ರಾಜ್ಯ ಸರ್ಕಾರವನ್ನು ಮುಖ್ಯಮಂತ್ರಿ ಚಂದ್ರು ಒತ್ತಾಯಿಸಿದರು.

ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಮೇಕೆದಾಟು ಯೋಜನೆಯಾಗಿರುವ ತೊಡಕು ನಿವಾರಣೆಯಾಗಲಿದೆ. ಉಭಯ ರಾಜ್ಯಗಳಿಗೂ ಅನುಕೂಲಕರವಾಗಿರುವ ಮೇಕೆದಾಟು ಯೋಜನೆಯನ್ನು ಆರಂಭಿಸುವ ನಿಟ್ಟಿನಲ್ಲಿ ಎಲ್ಲರೂ ಒಗ್ಗಟ್ಟಾಗಿ ಮೈತ್ರಿಕೂಟವನ್ನು ಅಧಿಕಾರಕ್ಕೆ ತರಲು ಶ್ರಮಿಸಬೇಕಿದೆ ಎಂದು ಅವರು ಸಲಹೆ ನೀಡಿದರು.

ಇದನ್ನೂಓದಿ:'38 ವರ್ಷ ಸಂಸಾರ ನಡೆಸಿದ್ದಕ್ಕಿಂತ ಹೆಚ್ಚು ಅನುಭವ ಬೇಕೇ?': ಪತ್ನಿ ಗೀತಾ ಪರ ಶಿವರಾಜ್​​ಕುಮಾರ್ ಮತ ಪ್ರಚಾರ - Geetha Shivarajkumar

ETV Bharat Logo

Copyright © 2024 Ushodaya Enterprises Pvt. Ltd., All Rights Reserved.