ETV Bharat / state

ಬೆಂಗಳೂರಲ್ಲಿ ಹೆಚ್ಚುತ್ತಿದೆ ನಶೆಯ ಘಾಟು!; 4 ತಿಂಗಳಲ್ಲಿ ಜಪ್ತಿಯಾದ ಡ್ರಗ್ಸ್, ಬಂಧಿತ ವಿದೇಶಿಗರೆಷ್ಟು ಗೊತ್ತಾ? - Drug Racket in Bengaluru

author img

By ETV Bharat Karnataka Team

Published : May 17, 2024, 5:20 PM IST

ಬೆಂಗಳೂರಿನಲ್ಲಿ ಕಳೆದ 4 ತಿಂಗಳಲ್ಲಿ 18 ಕೋಟಿ ರೂಪಾಯಿ ಮೌಲ್ಯದ ಮಾದಕ ವಸ್ತುಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಈ ಸಂಬಂಧ 161 ಪ್ರಕರಣಗಳನ್ನು ದಾಖಲಿಸಿ, 27 ಮಂದಿ ವಿದೇಶಿ ಪ್ರಜೆಗಳು ಸೇರಿ 220 ಆರೋಪಿಗಳನ್ನು ಬಂಧಿಸಲಾಗಿದೆ.

Anti Narcotics Squad of CCB
ಸಿಸಿಬಿಯ ಮಾದಕ ದ್ರವ್ಯ ನಿಗ್ರಹ ದಳ (ಸಂಗ್ರಹ ಚಿತ್ರ) (ETV Bharat)

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ದಿನೇ‌ ದಿನೆ‌ ನಶೆಯ ಘಾಟು ಅಧಿಕವಾಗುತ್ತಿದೆ. ಜನರನ್ನು ಡ್ರಗ್ಸ್ ಎಂಬ ಮಾಯೆಯೊಳಗೆ ಸಿಲುಕಿಸಿ ಅಕ್ರಮವಾಗಿ‌ ಹಣ ಸಂಪಾದಿಸಲು ದಂಧೆಕೋರರು ಅವ್ಯಾಹತವಾಗಿ ತೊಡಗಿಸಿಕೊಂಡಿದ್ದಾರೆ.‌ ಮತ್ತೊಂದೆಡೆ, ಡ್ರಗ್ಸ್ ಮುಕ್ತ ಸಮಾಜದ‌ ಪಣ ತೊಟ್ಟಿರುವ ನಗರ ಪೊಲೀಸರು ನಿರಂತರ ಕಾರ್ಯಾಚರಣೆ ಕೈಗೊಳ್ಳುತ್ತಿದ್ದಾರೆ.

4 ತಿಂಗಳಲ್ಲಿ 437 ಕೆಜಿ ಡ್ರಗ್ಸ್ ಸೀಜ್​!: ಡ್ರಗ್ಸ್​ಗೆ ಕಡಿವಾಣ ಹಾಕಲು ಪಣತೊಟ್ಟಿರುವ ಪೊಲೀಸರು ಕಳೆದ ನಾಲ್ಕು ತಿಂಗಳಲ್ಲಿ 161 ಪ್ರಕರಣಗಳನ್ನು ದಾಖಲಿಸಿದ್ಧಾರೆ. ಸುಮಾರು 18 ಕೋಟಿ ರೂಪಾಯಿ ಮೌಲ್ಯದ ಮಾದಕ ವಸ್ತುಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ. ಏಪ್ರಿಲ್ ಅಂತ್ಯಕ್ಕೆ 161 ಡ್ರಗ್ಸ್ ಪ್ರಕರಣ ದಾಖಲಿಸಿ 220 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಈ ಪೈಕಿ 27 ಮಂದಿ ವಿದೇಶಿ ಪ್ರಜೆಗಳು ಸಹ ಸೇರಿದ್ದಾರೆ. ಗಾಂಜಾ ಸೇರಿದಂತೆ ಇನ್ನಿತರ ಸಿಂಥೆಟಿಕ್ ಡ್ರಗ್ಸ್ ಒಳಗೊಂಡಂತೆ 437 ಕೆಜಿ ಮಾದಕವಸ್ತುಗಳನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಈ ಪೈಕಿ ಗಾಂಜಾವೇ (416 ಕೆಜಿ) ಸಿಂಹಪಾಲು ಪಡೆದುಕೊಂಡಿದೆ.

ಮಾರಾಟಗಾರರ ವಿರುದ್ಧ ಮಾತ್ರ ಕೇಸ್: ಡ್ರಗ್ಸ್ ವಿರುದ್ಧ ಸಮರ ಸಾರಿರುವ ಪೊಲೀಸರು ಕಳೆದ ಜನವರಿಯಲ್ಲಿ 36, ಫೆಬ್ರವರಿಯಲ್ಲಿ 46, ಮಾರ್ಚ್​ನಲ್ಲಿ 37 ಹಾಗೂ ಏಪ್ರಿಲ್​ನಲ್ಲಿ 42 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಡ್ರಗ್ಸ್ ಮಾರಾಟ ಪ್ರಕರಣದಲ್ಲಿ ಮಾತ್ರ ಆರೋಪಿಗಳನ್ನು ಬಂಧಿಸಲಾಗುತ್ತಿದೆ. ಡ್ರಗ್ಸ್‌ ಖರೀದಿಸಿ ಸೇವನೆ ಮಾಡುವವರ ವಿರುದ್ಧ ಈ ವರ್ಷ ಯಾರ ವಿರುದ್ಧ ಪ್ರಕರಣ ದಾಖಲಾಗಿಲ್ಲ. ಡ್ರಗ್ಸ್ ಸೇವನೆ ಮಾಡಿದ ಆರೋಪದಡಿ ಕೆಲವರನ್ನು ಸುಖಾಸುಮ್ಮನೆ ಠಾಣೆಗೆ ಕರೆದುಕೊಂಡು ದಿನಗಟ್ಟಲೇ ಕೂರಿಸಿ, ಅವರಿಂದ ಹಣಕ್ಕೆ ಬೇಡಿಕೆಯಿಡುತ್ತಿರುವ ನಿರಂತರ ದೂರುಗಳು ಬರುತ್ತಿವೆ. ಆದ್ದರಿಂದ ಈ ಕ್ರಮ‌ ಕೈಗೊಂಡಿರುವುದಾಗಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರು: ವಿದೇಶಿ ಪ್ರಜೆಗಳ ಸಹಿತ ನಾಲ್ವರು ಡ್ರಗ್ ಪೆಡ್ಲರ್‌ಗಳ ಬಂಧನ; 2.35 ಕೋಟಿ ಮೌಲ್ಯದ ಮಾದಕ ವಸ್ತು ಜಪ್ತಿ

ಪದೇ ಪದೆ ಡ್ರಗ್ಸ್ ಚಟುವಟಿಕೆಯಲ್ಲಿ ಭಾಗಿಯಾಗಿರುವ ಹಾಗೂ ಸಾಲು - ಸಾಲು ಡ್ರಗ್ಸ್ ಪ್ರಕರಣಗಳಲ್ಲಿ ಆರೋಪಿಯಾಗಿರುವ ವಿದೇಶಿ ಪ್ರಜೆ ಒಳಗೊಂಡಂತೆ ಇಬ್ಬರನ್ನು ಪಿಟ್​ ಎನ್​ಡಿಪಿಎಸ್ (Prevention of Illicit Traffic in Narcotic Drugs and Psychotropic Substances Act) ಕಾಯ್ದೆಯಡಿ ಬಂಧಿಸಲಾಗಿದೆ. ಗೂಂಡಾ ಕಾಯ್ದೆಯಂತೆ ಒಮ್ಮೆ ಬಂಧಿಸಿದರೆ ಒಂದು ವರ್ಷದವರೆಗೂ ಜಾಮೀನು‌ ಸಿಗುವುದಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಗಾಂಜಾವೇ ಹೆಚ್ಚು ಸಾಗಾಟ: ಪ್ರಕರಣ ದಾಖಲಿಸಿಕೊಂಡು ಜಪ್ತಿ ಮಾಡಿಕೊಂಡಿರುವ ಮಾದಕ ವಸ್ತುಗಳಲ್ಲಿ ಗಾಂಜಾವೇ ಪ್ರಧಾನವಾಗಿದೆ. ಒಡಿಶಾ, ಆಂಧ್ರಪ್ರದೇಶ, ತೆಲಂಗಾಣ, ಪಶ್ಚಿಮ ಬಂಗಾಳ ಹಾಗೂ ಗೋವಾದಿಂದ ರಾಜ್ಯಕ್ಕೆ ತಂದು ನಗರಗಳಲ್ಲಿ ಯುವ ಜನಾಂಗವನ್ನು ಗುರಿಯಾಗಿಸಿಕೊಂಡು ಗಾಂಜಾ ಮಾರಾಟ ಮಾಡಿ ಅಕ್ರಮವಾಗಿ ದಂಧೆಕೋರರು ಲಕ್ಷಾಂತರ ಹಣ ಸಂಪಾದಿಸುತ್ತಿದ್ದಾರೆ. ರೈಲು, ಬಸ್, ಕಾರು ಸೇರಿದಂತೆ ವಿವಿಧ ವಾಹನಗಳಲ್ಲಿ ಬರುವ ಮಾದಕವಸ್ತುಗಳ ನಿರಂತರ ಸರಬರಾಜು ಮಾಡುವವರ ಮೇಲೆ‌ ಸಿಸಿಬಿ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ.

ಇದನ್ನೂ ಓದಿ: ಬೆಂಗಳೂರು: ಮನೆಯಲ್ಲಿ ಸಂಗ್ರಹಿಸಿ ಡ್ರಗ್ಸ್‌ ಮಾರಾಟ ಮಾಡುತ್ತಿದ್ದ ವಿದೇಶಿಗ ಅರೆಸ್ಟ್, ₹4 ಕೋಟಿಯ ಮಾಲು ವಶಕ್ಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.