ETV Bharat / state

ಉತ್ತರ ಕನ್ನಡದಲ್ಲಿ ಮಂಗನ ಕಾಯಿಲೆ ಭೀತಿ: 21 ಮಂದಿಯಲ್ಲಿ ಸೋಂಕು ಪತ್ತೆ

author img

By ETV Bharat Karnataka Team

Published : Feb 3, 2024, 4:48 PM IST

Updated : Feb 3, 2024, 5:20 PM IST

21-kfd-cases-detected-in-uttara-kannadas-siddapur
ಉತ್ತರ ಕನ್ನಡದಲ್ಲಿ ಹೆಚ್ಚುತ್ತಿರುವ ಮಂಗನ ಕಾಯಿಲೆ ಪ್ರಕರಣಗಳು: 21 ಮಂದಿಯಲ್ಲಿ ಸೋಂಕು ಪತ್ತೆ

ಉತ್ತರ ಕನ್ನಡ ಜಿಲ್ಲೆಯಲ್ಲಿ ಮಂಗನ ಕಾಯಿಲೆ ಆತಂಕ ಹುಟ್ಟಿಸಿದ್ದು, ಈವರೆಗೆ 21 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ.

ಉತ್ತರ ಕನ್ನಡದಲ್ಲಿ ಮಂಗನ ಕಾಯಿಲೆ ಭೀತಿ

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕು ಮಂಗನ ಕಾಯಿಲೆಯ ಹಾಟ್​ಸ್ಪಾಟ್ ಆಗಿದ್ದು, ಈವರೆಗೆ 21 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಒಂದೇ ದಿನದಲ್ಲಿ 8 ಜನರಲ್ಲಿ ಮಂಗನ ಕಾಯಿಲೆ ಪತ್ತೆಯಾಗಿದ್ದು, ಕೇವಲ ಎರಡು ವಾರದ ಅವಧಿಯಲ್ಲಿ ಕೆಎಫ್‌ಡಿ ಪ್ರಕರಣಗಳ ಸಂಖ್ಯೆ 21ಕ್ಕೆ ಏರಿದೆ. ಈ ಸೋಂಕಿನಿಂದಾಗಿ 10 ವರ್ಷದ ಓರ್ವ ಮಗುವಿನ ಸ್ಥಿತಿ ಗಂಭೀರವಾಗಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.

ಸಿದ್ದಾಪುರದ ಕೊರ್ಲಕೈ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯ ಜಿಡ್ಡಿಯಲ್ಲಿ 7 ಪ್ರಕರಣಗಳು ವರದಿಯಾಗಿದೆ. ಉಳಿದಂತೆ ಇತರೆ ಭಾಗದಲ್ಲಿ 9 ಪ್ರಕರಣ ಪತ್ತೆಯಾಗಿವೆ. ಉತ್ತರ ಕನ್ನಡ ಜಿಲ್ಲಾಡಳಿತ ಆರೋಗ್ಯ ಇಲಾಖೆಯ ಮೂಲಕ ಪೂರಕ ಔಷಧಿಗಳನ್ನು ಕೂಡಾ ವಿತರಿಸಲಾರಂಭಿಸಿದ್ದು, ಶಿರಸಿ- ಸಿದ್ದಾಪುರದ ಶಾಸಕರು ಕೂಡಾ ಮುಂಜಾಗ್ರತಾ ಸಭೆಗಳನ್ನು ನಡೆಸಿ ಜನರಿಗೆ ಕೆಎಫ್​ಡಿ ರೋಗದ ಬಗ್ಗೆ ಅರಿವು ಮೂಡಿಸಲು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ಸೂಚಿಸಿದ್ದಾರೆ.

ಜಿಲ್ಲಾ ಆರೋಗ್ಯಾಧಿಕಾರಿ ಡಾ ನೀರಜ್ ಮಾತನಾಡಿ, "ಮಂಗನ ಕಾಯಿಲೆ ಪ್ರಕರಣಗಳು ಸಿದ್ದಾಪುರ ತಾಲೂಕಿನಲ್ಲಿ ಕಂಡುಬರುತ್ತಿವೆ. ತಾಲೂಕಿನ ಕೊರ್ಲಕೈ ಸೇರಿದಂತೆ ಸುತ್ತಮುತ್ತಿನ ಹಳ್ಳಿಗಳಲ್ಲಿ ಪ್ರಕರಣಗಳು ಕಂಡುಬರುತ್ತಿವೆ. ಈವರೆಗೆ ಒಟ್ಟು 21 ಮಂಗನ ಕಾಯಿಲೆ ಪ್ರಕರಣಗಳು ಕಂಡುಬಂದಿವೆ. ಆ ಪೈಕಿ ಕೊರ್ಲಕೈ ವ್ಯಾಪ್ತಿಯಲ್ಲಿ 16 ಪ್ರಕರಣಗಳು ಪತ್ತೆಯಾಗಿವೆ. ಆರೋಗ್ಯ ಇಲಾಖೆಯ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು ಮತ್ತು ಅಂಗನವಾಡಿ ಕಾರ್ಯಕರ್ತೆಯರು ಮನೆ ಮನೆಗೆ ಭೇಟಿ ನೀಡಿ ಜನರಿಗೆ ಮಂಗನ ಕಾಯಿಲೆ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದಾರೆ" ಎಂದರು.

ಸ್ಥಳೀಯರಾದ ಪ್ರವೀಣ ಮಾತನಾಡಿ, "ಆರೋಗ್ಯ ಇಲಾಖೆಯವರು ಬಂದು ಮಂಗನ ಕಾಯಿಲೆ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಎಲ್ಲೂ ಹೊರಗೆ ಹೋಗಬೇಡಿ ಎಂದು ಹೇಳುತ್ತಿದ್ದಾರೆ, ಆದರೆ ನಮ್ಮ ಜೀವನ ನಡೆಯಬೇಕು ಎಂದರೆ ಧನ - ಕರು, ತೋಟ ನೋಡಿಕೊಂಡಿರಬೇಕು. ಧನ - ಕರುಗಳಿಗೆ ಮೇವು ತರಲು ಹೋಗಲೇಬೇಕು. ಜಿಲ್ಲೆಯಲ್ಲಿ ಮಂಗನ ಕಾಯಿಲೆ ಪ್ರಕರಣಗಳ ಸಂಖ್ಯೆ 20 ದಾಟಿರುವುದು ಆತಂಕ ಮೂಡಿಸಿದೆ. ಲಸಿಕೆ ಕೂಡುವ ಬಗ್ಗೆ ಇನ್ನೂ ಯಾರು ಏನು ಹೇಳಿಲ್ಲ. ಆರೋಗ್ಯ ಇಲಾಖೆ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕು" ಎಂದು ಒತ್ತಾಯಿಸಿದರು.

ಇನ್ನು, ಈ ಹಿಂದೆ ಮಂಗನ ಕಾಯಿಲೆ ಜಿಲ್ಲೆಯ ಸಿದ್ದಾಪುರ ಭಾಗದಲ್ಲಿ ಉಲ್ಬಣಗೊಂಡು 7 ಜನರನ್ನು ಬಲಿ ಪಡೆದುಕೊಂಡಿತ್ತು. ಅಂತಹ ಪರಿಸ್ಥಿತಿ ಮತ್ತೆ ಬರಬಾರದು ಎಂಬ ಉದ್ದೇಶದಿಂದ ಜಿಲ್ಲಾಡಳಿತ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾರಂಭಿಸಿದೆ. ಮಂಗನ ಕಾಯಿಲೆ ಕಾಣಿಸಿಕೊಂಡ ಪ್ರದೇಶಗಳಲ್ಲೆಲ್ಲಾ ಡೆಫಾ ಎಂಬ ದ್ರವಣವನ್ನು ವಿತರಿಸಲಾಗುತ್ತಿದೆ. ಕಳೆದ 2 ವರ್ಷಗಳ ಹಿಂದೆ ಸರ್ಕಾರ ಮಂಗನಕಾಯಿಲೆಯ ಲಸಿಕೆಯನ್ನು ಬಂದ್ ಮಾಡಿದ್ದು, ಸದ್ಯಕ್ಕೆ ಯಾವುದೇ ಹೊಸ ಲಸಿಕೆಯನ್ನಾಗಲೀ ಅಥವಾ ಹೊಸ ಔಷಧವನ್ನಾಗಲೀ ಆರೋಗ್ಯ ಇಲಾಖೆ ಇದಕ್ಕೆ ಸೂಚಿಸಿಲ್ಲ. ಇದರಿಂದ ರೋಗ ಮತ್ತಷ್ಟು ಉಲ್ಬಣವಾಗೋ ಸಾಧ್ಯತೆಗಳಿದ್ದು, ಜನರು ಸಾಕಷ್ಟು ಭೀತಿಯಲ್ಲೇ ದಿನದೂಡುವಂತಾಗಿದೆ.

ಇದನ್ನೂ ಓದಿ: ಶಿವಮೊಗ್ಗ: ಮಂಗನ ಕಾಯಿಲೆಯಿಂದ 18 ವರ್ಷದ ಯುವತಿ ಸಾವು, ವರ್ಷದ ಮೊದಲ ಸಾವು

Last Updated :Feb 3, 2024, 5:20 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.