ETV Bharat / sports

3ನೇ ಟೆಸ್ಟ್​: ರೋಹಿತ್​ ಆಕರ್ಷಕ ಶತಕ, ಸಿಕ್ಸರ್​ನಲ್ಲಿ ಧೋನಿ ಹಿಂದಿಕ್ಕಿದ ಹಿಟ್​ಮ್ಯಾನ್​

author img

By ANI

Published : Feb 15, 2024, 3:46 PM IST

ರಾಜ್​ಕೋಟ್​ನ ಸೌರಾಷ್ಟ್ರ ಮೈದಾನದಲ್ಲಿ ಇಂದಿನಿಂದ ನಡೆಯುತ್ತಿರುವ ಇಂಗ್ಲೆಂಡ್​ ವಿರುದ್ಧದ ಮೂರನೇ ಟೆಸ್ಟ್​ ಪಂದ್ಯದಲ್ಲಿ ನಾಯಕ ರೋಹಿತ್​ ಶರ್ಮಾ ಆಕರ್ಷಕ ಶತಕ ಸಿಡಿಸಿದರು.

rohit-jadeja-propel-india-to-respectability-at-tea-on-day-1-of-3rd-test-against-england
3ನೇ ಟೆಸ್ಟ್​ ಪಂದ್ಯ: ರೋಹಿತ್​ ಆಕರ್ಷಕ ಶತಕ, ಸಿಕ್ಸರ್​ನಲ್ಲಿ ಧೋನಿ ದಾಖಲೆ ಹಿಂದಿಕ್ಕಿದ ಹಿಟ್​ಮ್ಯಾನ್​

ರಾಜ್​ಕೋಟ್(ಗುಜರಾತ್​): ಭಾರತ ಮತ್ತು ಇಂಗ್ಲೆಂಡ್​ ನಡುವಿನ ಮೂರನೇ ಟೆಸ್ಟ್​ ಪಂದ್ಯದಲ್ಲಿ ನಾಯಕ ರೋಹಿತ್ ಶರ್ಮಾ ಭರ್ಜರಿ ಶತಕ ಹಾಗೂ ಆಲ್​ರೌಂಡರ್​ ರವೀಂದ್ರ ಜಡೇಜಾ ಆಕರ್ಷಕ ಅರ್ಧಶತಕ ದಾಖಲಿಸಿದರು. ಇದರಿಂದಾಗಿ ಆರಂಭಿಕ ಆಘಾತ ಅನುಭವಿಸಿದ್ದ ಟೀಂ ಇಂಡಿಯಾ ಚೇತರಿಸಿಕೊಳ್ಳುವುದರೊಂದಿಗೆ ಆಂಗ್ಲರ ವಿರುದ್ಧ ಹೋರಾಟ ಮುಂದುವರೆಸಿದೆ.

ಇಲ್ಲಿನ ಸೌರಾಷ್ಟ್ರ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್​ ಗೆದ್ದ ಭಾರತ ತಂಡದ ನಾಯಕ ರೋಹಿತ್​ ಮೊದಲು ಬ್ಯಾಟಿಂಗ್​​ ಆಯ್ದುಕೊಂಡರು. ಇಂಗ್ಲೆಂಡ್​ ತಂಡಕ್ಕೆ ಮರಳಿರುವ ಮಾರ್ಕ್​ವುಡ್ ಟೀಂ ಇಂಡಿಯಾ ನಾಯಕನ ಈ ನಿರ್ಧಾರವನ್ನು ತಲೆಕೆಳಗಾಗುವಂತೆ ಮಾಡಿದರು. ಆರಂಭದಲ್ಲೇ ಅಗ್ರ ಕ್ರಮಾಂಕದ ಇಬ್ಬರು ಬ್ಯಾಟರ್​ಗಳನ್ನು ವುಡ್​ ಪೆವಿಲಿಯನ್​ಗೆ ಕಳುಹಿಸುವಲ್ಲಿ ಯಶಸ್ವಿಯಾದರು. ಯುವ ಆಟಗಾರರಾದ ಯಶಸ್ವಿ ಜೈಸ್ವಾಲ್​ ಕೇವಲ 10 ರನ್​ಗಳಿಗೆ ವಿಕೆಟ್​​ ಒಪ್ಪಿಸಿದರೆ,​ ಶುಭಮನ್​ ಗಿಲ್​ ಶೂನ್ಯಕ್ಕೆ ನಿರ್ಗಮಿಸಿದರು. ಇದರ ಬೆನ್ನಲ್ಲೇ ಮತ್ತೊಬ್ಬ ಯುವ ಬ್ಯಾಟರ್​ ರಜತ್​ ಪಾಟಿದಾರ್ ಸಹ 5 ರನ್ ಗಳಿಸಿ ಟಾಮ್ ಹಾರ್ಟ್ಲಿ ಬೌಲಿಂಗ್​ನಲ್ಲಿ ಕ್ಯಾಚಿತ್ತರು. ಇದರಿಂದಾಗಿ 9 ಓವರ್​ಗಳಲ್ಲಿ ಟೀಂ ಇಂಡಿಯಾ ಕೇವಲ 33 ರನ್​ಗಳಿಗೆ ಪ್ರಮುಖ ಮೂರು ವಿಕೆಟ್​ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.

ರೋಹಿತ್​-ಜಡೇಜಾ ಆಸರೆ: ತಂಡ ಸಂಕಟದ ಸಮಯದಲ್ಲಿದ್ದಾಗ ಜೊತೆಯಾದ ರೋಹಿತ್​ ಶರ್ಮಾ ಮತ್ತು ಆಲ್​ರೌಂಡರ್​ ರವೀಂದ್ರ ಜಡೇಜಾ ಜವಾಬ್ದಾರಿಯುತ ಆಟ ಪ್ರದರ್ಶಿಸಿದರು. ನಾಲ್ಕನೇ ವಿಕೆಟ್‌ಗೆ​ಜೊತೆಯಾಟ ನೀಡಿದ ಈ ಜೋಡಿ ಮೊದಲ ಸೆಷನ್ ಮುಗಿದು ಎರಡನೇ ಸೆಷನ್‌ ಆರಂಭವಾದ ಮೇಲೂ ಯಾವುದೇ ತಪ್ಪು ಮಾಡಲಿಲ್ಲ.

ರೋಹಿತ್​ ಮತ್ತು ಜಡೇಜಾ ಅವರ ಸಾಂದರ್ಭೋಚಿತ ಆಟದಿಂದ ತಂಡದ ಮೊತ್ತವು 26 ಓವರ್‌ನಲ್ಲಿ 100 ರನ್ ಗಡಿ ದಾಟಿತು. ಅದರಲ್ಲೂ, ಹಿಟ್​ಮ್ಯಾನ್​ ಖ್ಯಾತಿಯ ರೋಹಿತ್​ ಅವಕಾಶ ಸಿಕ್ಕಾಗಲೆಲ್ಲ ಚೆಂಡನ್ನು ಬೌಂಡರಿ ಗೆರೆ ದಾಟಿಸುವ ಮೂಲಕ ರನ್ ​ಗಳಿಕೆಗೆ ಹೆಚ್ಚಿನ ವೇಗ ನೀಡಿದರು. ಮತ್ತೊಂದೆಡೆ, ಜಡೇಜಾ ಕೂಡ ನಾಯಕನಿಗೆ ಉತ್ತಮ ಸಾಥ್​ ನೀಡುತ್ತಾ ಸ್ಕೋರ್ ಹೆಚ್ಚಿಸುವಲ್ಲಿ ನೆರವಾದರು.

11ನೇ ಶತಕ ಸಿಡಿಸಿದ ರೋಹಿತ್‌ ಶರ್ಮಾ: ತಮ್ಮ ಆಕರ್ಷಕ ಬ್ಯಾಟಿಂಗ್​ನಿಂದ ರೋಹಿತ್ ಶರ್ಮಾ 11ನೇ ಶತಕ ಬಾರಿಸಿದರು. ಇದಕ್ಕಾಗಿ ಅವರು 157 ಎಸೆತಗಳನ್ನು ಎದುರಿಸಿದರು. ಇಂಗ್ಲೆಂಡ್​ ವಿರುದ್ಧ ಟೀಂ ಇಂಡಿಯಾ ಪರ ಆರಂಭಿಕರಾಗಿ ಶತಕ ದಾಖಲಿಸಿದ ಆಟಗಾರರಲ್ಲಿ ರೋಹಿತ್ ಒಬ್ಬರು ಎಂಬ ಹೆಗ್ಗಳಿಕೆಗೂ ಪಾತ್ರರಾದರು. ದಿಗ್ಗಜ ಆಟಗಾರ ಸುನಿಲ್​ ಗಾವಸ್ಕರ್​ ಆರಂಭಿಕರಾಗಿ ಆಂಗ್ಲರ ವಿರುದ್ಧ ನಾಲ್ಕು ಶತಕ ಬಾರಿಸಿದ ದಾಖಲೆ ಹೊಂದಿದ್ದಾರೆ. ಇವರ ನಂತರದಲ್ಲಿ ವಿಜಯ್ ಮರ್ಚೆಂಟ್, ಮುರಳಿ ವಿಜಯ್​, ಕೆ.ಎಲ್​.ರಾಹುಲ್​ ಇದ್ದಾರೆ. ಇದೀಗ ಈ ಪಟ್ಟಿಗೆ ಹೊಸ ಸೇರ್ಪಡೆ ರೋಹಿತ್ ಶರ್ಮಾ.

ಸಿಕ್ಸರ್​ನಲ್ಲೂ ರೋಹಿತ್​ ದಾಖಲೆ: ಇದೇ ಪಂದ್ಯದಲ್ಲಿ ರೋಹಿತ್​ ಎರಡನೇ ಅತೀ ಹೆಚ್ಚು ಸಿಕ್ಸರ್ ಬಾರಿಸಿ​ದ ಭಾರತೀಯ ಆಟಗಾರ ಎಂಬ ಕೀರ್ತಿಗೂ ಭಾಜನರಾದರು. ಇಂದಿನ ಪಂದ್ಯದಲ್ಲಿ ಎರಡು ಸಿಕ್ಸರ್​ ಸಿಡಿಸುವ ಮೂಲಕ ಇವರ ಒಟ್ಟಾರೆ ಸಿಕ್ಸರ್​ಗಳ ಸಂಖ್ಯೆ 79ಕ್ಕೆ ಏರಿಕೆಯಾಗಿದೆ.

ಭಾರತ ಪರ ಹೆಚ್ಚು ಸಿಕ್ಸರ್​ ಬಾರಿಸಿದ ಆಟಗಾರರಲ್ಲಿ ವಿರೇಂದ್ರ ಸೆಹ್ವಾಗ್ (90 ಸಿಕ್ಸರ್​) ಮೊದಲ ಸ್ಥಾನದಲ್ಲಿದ್ದಾರೆ. ಮಾಜಿ ನಾಯಕ ಎಂ.ಎಸ್​.ಧೋನಿ 78 ಸಿಕ್ಸರ್​ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದರು. ಇದೀಗ ಧೋನಿ ಅವರನ್ನು ರೋಹಿತ್​ ಹಿಂದಿಕ್ಕಿದ್ದಾರೆ. ಮತ್ತೊಂದೆಡೆ, ದಿಗ್ಗಜ ಆಟಗಾರ ಸಚಿನ್​ ತೆಂಡೂಲ್ಕರ್ (69), ರವೀಂದ್ರ ಜಡೇಜಾ (61), ಕಪಿಲ್​ ದೇವ್​ (61) ಹೆಚ್ಚಿನ ಸಿಕ್ಸರ್​ ಸಿಡಿಸಿದ ಆಟಗಾರರಾಗಿದ್ದಾರೆ.

ಇದನ್ನೂ ಓದಿ: ಕೊನೆಗೂ 'ಟೆಸ್ಟ್​' ಪಾಸ್​ ಆದ ಸರ್ಫರಾಜ್​; ಮೈದಾನದಲ್ಲಿ ಭಾವುಕ ಅಪ್ಪನಿಗೆ ಮಗನ ಅಪ್ಪುಗೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.