ETV Bharat / sports

ಗುಜರಾತ್ ಮಣಿಸಿದ ಆರ್‌ಸಿಬಿ: ಪ್ಲೇಆಫ್‌ ಘಟ್ಟ ತಲುಪುವುದೇ ಬೆಂಗಳೂರು? ಹೀಗಿದೆ ಲೆಕ್ಕಾಚಾರ - RCB Beat GT

author img

By PTI

Published : May 5, 2024, 7:13 AM IST

Updated : May 5, 2024, 7:53 AM IST

ಫಾಫ್ ಡುಪ್ಲೆಸಿಸ್
ಫಾಫ್ ಡುಪ್ಲೆಸಿಸ್(AP)

ನಿನ್ನೆ ರಾತ್ರಿ ನಡೆದ ಐಪಿಎಲ್​ ಪಂದ್ಯದಲ್ಲಿ ಗುಜರಾತ್​ ಟೈಟಾನ್ಸ್​ ವಿರುದ್ದ ಆರ್‌ಸಿಬಿ ಗೆಲುವು ಸಾಧಿಸಿದೆ.

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)​ನ 52ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ನಾಲ್ಕು ವಿಕೆಟ್‌ಗಳಿಂದ ಗುಜರಾತ್ ಟೈಟಾನ್ಸ್ (ಜಿಟಿ) ಅನ್ನು ಮಣಿಸಿದೆ. ಈ ಗೆಲುವಿನೊಂದಿಗೆ ಆರ್‌ಸಿಬಿ 8 ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಏಳನೇ ಸ್ಥಾನಕ್ಕೆ ತಲುಪಿದ್ದು, ಪ್ಲೇ ಆಫ್​ ಕನಸನ್ನು ಜೀವಂತವಾಗಿರಿಸಿಕೊಂಡಿದೆ. ಮತ್ತೊಂದೆಡೆ, ಗುಜರಾತ್ ಟೂರ್ನಿಯಲ್ಲಿ 7ನೇ ಸೋಲು ಕಂಡು ಒಂಭತ್ತನೇ ಸ್ಥಾನ ತಲುಪಿದೆ.

ಶನಿವಾರ ರಾತ್ರಿ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್​ ಸೋತು ಮೊದಲು ಬ್ಯಾಟ್​ ಮಾಡಿದ್ದ ಗುಜರಾತ್, ತಂಡದ ಆಟಗಾರರಾದ ಶಾರುಖ್ ​ಖಾನ್ (37), ಮಿಲ್ಲರ್​ (30), ರಾಹುಲ್​ ತೆವಾಟಿಯಾ (35) ಬ್ಯಾಟಿಂಗ್​ ನೆರವಿನಿಂದ 19.3 ಓವರ್​ಗಳಲ್ಲಿ​ 147 ರನ್​ಗಳಿಗೆ ಸರ್ವಪತನ ಕಂಡಿತು. ಈ ಸಾಧಾರಣ ಗುರಿ ಬೆನ್ನತ್ತಿದ ಆರ್​ಸಿಬಿ 13.4 ಓವರ್‌ಗಳಲ್ಲಿ ಆರು ವಿಕೆಟ್‌ ಕಳೆದುಕೊಂಡು ಗೆಲುವಿನ ದಡ ಸೇರಿತು.

ಕೊಹ್ಲಿ-ಫಾಫ್ ಸ್ಫೋಟಕ ಆರಂಭ: ಆರ್‌ಸಿಬಿ ಪರ ವಿರಾಟ್ ಕೊಹ್ಲಿ ಮತ್ತು ಫಾಫ್ ಡುಪ್ಲೆಸಿಸ್ ಸ್ಫೋಟಕ ಆರಂಭ ನೀಡಿದರು. ಮೊದಲ ವಿಕೆಟ್‌ಗೆ 92 ರನ್‌ಗಳ ಜೊತೆಯಾಟವಾಡಿದರು. ಫಾಪ್​ 23 ಎಸೆತಗಳಲ್ಲಿ 10 ಬೌಂಡರಿ ಮತ್ತು ಮೂರು ಸಿಕ್ಸರ್‌ಗಳ ಸಮೇತ 64 ರನ್ ಬಾರಿಸಿ ತಂಡದ ಗೆಲುವನ್ನು ಸುಲಭಗೊಳಿಸಿ ಪೆವಿಲಿಯನ್​ ಸೇರಿದರು.

ಆರ್​ಸಿಬಿ ಬ್ಯಾಟಿಂಗ್​ ಅಬ್ಬರ 10 ಓವರ್​ಗಳಲ್ಲಿ ಪಂದ್ಯ ಮುಕ್ತಾಯವಾಗುವ ಸೂಚನೆ ಕಂಡುಬಂದಿತ್ತು. ಆದರೆ ಫಾಪ್​ ನಿರ್ಗಮದ ಬಳಿಕ ತಂಡ ದಿಢೀರ್​ ಕುಸಿತ ಕಂಡಿತು. ಸ್ಕೋರ್​ 117ಕ್ಕೆ ತಲುಪುವಷ್ಟರಲ್ಲೇ ಐದು ವಿಕೆಟ್ ಉರುಳಿದವು. ವಿಲ್​ ಜಾಕ್ಸ್ ​(1), ರಜತ್​ ಪಾಟಿದಾರ್​ (2), ಗ್ಲೆನ್​ ಮ್ಯಾಕ್ಸ್​ವೆಲ್​ (4), ಗ್ರೀನ್​ (1) ಪೆವಿಲಿಯನ್​ ಪರೇಡ್​ ಮಾಡಿದರು. ಮತ್ತೊಂದೆಡೆ, ಆರಂಭಿಕವಾಗಿ ಕ್ರೀಸ್​ಗಿಳಿದಿದ್ದ ಕೊಹ್ಲಿ 27 ಎಸೆತಗಳಲ್ಲಿ 42 ರನ್ ಗಳಿಸಿ ಪೆವಿಲಿಯನ್​ಗೆ ಮರಳಿದ್ದರಿಂದ ತಂಡ ಸೋಲಿನ ಸುಳಿಗೆ ಸಿಲುಕಿತ್ತು. ಈ ವೇಳೆ ಕಾರ್ತಿಕ್​ (21*) ಮತ್ತು ಸ್ವಪ್ನೀಲ್​ ಸಿಂಗ್​ (15*) ಸಮಯೋಚಿತ ಪ್ರದರ್ಶನ ತೋರಿ ತಂಡವನ್ನು ಸೋಲಿನ ಸುಳಿಯಿಂದ ಪಾರು ಮಾಡಿ ವಿಜಯ ಪತಾಕೆ ಹಾರಿಸಿದರು. ಗುಜರಾತ್​ ಪರ ಲಿಟ್ಲ್ 4, ನೂರ್​ ಅಹ್ಮದ್​ 2 ವಿಕೆಟ್​ ಪಡೆದರು.

ಪ್ಲೇ ಆಫ್​ ಲೆಕ್ಕಾಚಾರ ಹೀಗಿದೆ: ಸತತ ಮೂರು ಪಂದ್ಯಗಳಲ್ಲಿ ಗೆಲುವು ಸಾಧಿಸುವ ಮೂಲಕ ರನ್​ ರೇಟ್​ನಲ್ಲೂ ಸುಧಾರಣೆ ಕಂಡಿರುವ ಆರ್​​ಸಿಬಿ 8 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 7ನೇ ಸ್ಥಾನಕ್ಕೆ ತಲುಪಿದೆ. ಮುಂದಿನ ಮೂರು ಪಂದ್ಯಗಳಲ್ಲೂ ಗೆಲುವು ಸಾಧಿಸಿದರೆ 12 ಅಂಕಗಳನ್ನು ಕಲೆ ಹಾಕಲಿದೆ. ಅಂಕಪಟ್ಟಿಯ ಮೇಲಿನ ತಂಡಗಳು ಸೋಲನುಭವಿಸಿ ಆರ್​ಸಿಬಿ ಪರ ಫಲಿತಾಂಶ ಬಂದದ್ದೇ ಆದಲ್ಲಿ ಪ್ಲೇ ಆಫ್​ಗೇರುವ ಅದೃಷ್ಟ ಒಲಿಯಲಿದೆ.

ಇದನ್ನೂ ಓದಿ: ಟಿ20 ವಿಶ್ವಕಪ್​ಗೆ ಆಯ್ಕೆಯಾದ ಟೀಂ ಇಂಡಿಯಾದಲ್ಲಿ IPL​ ತಂಡಗಳ ಪ್ರಾತಿನಿಧ್ಯವೆಷ್ಟು? - T20 World Cup 2024

Last Updated :May 5, 2024, 7:53 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.