ETV Bharat / state

ಗಂಗಾವತಿ: ಆರ್​ಸಿಬಿ ಕ್ರಿಕೆಟ್ ತಂಡದ ಗೆಲುವಿಗಾಗಿ ರಕ್ತದಾನ ಮಾಡಿದ ಅಭಿಮಾನಿಗಳು - Indian Premier League

author img

By ETV Bharat Karnataka Team

Published : May 18, 2024, 8:29 PM IST

ಗಂಗಾವತಿ ತಾಲೂಕಿನ ಆಗೋಲಿ ಗ್ರಾಮದ ಶರಣು ಮತ್ತು ಹಂಪದದುರ್ಗ ಗ್ರಾಮದ ಮಾರುತಿ ಎಂಬ ಇಬ್ಬರು ಯುವಕರು, ಆರ್​ಸಿಬಿ ಕ್ರಿಕೆಟ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಗೆಲುವು ಸಾಧಿಸಲಿ ಎಂದು ರಕ್ತದಾನ ಮಾಡಿ ಗಮನಸೆಳೆದರು.

RCB fans who donated blood
ರಕ್ತದಾನ ಮಾಡಿದ ಆರ್​ಸಿಬಿ ಅಭಿಮಾನಿಗಳು (ETV Bharat)

ಗಂಗಾವತಿ: ಕ್ರಿಕೆಟ್ ಪ್ರೇಮಿಗಳಿಗೆ ಕಳೆದ ಒಂದೂವರೆ ತಿಂಗಳಿಂದ ರಸದೌತಣ ನೀಡಿದ್ದ ಇಂಡಿಯನ್ ಪ್ರಿಮಿಯರ್ ಲೀಗ್ (ಐಪಿಎಲ್) ಕೊನೆಯ ಘಟ್ಟಕ್ಕೆ ತಲುಪಿದೆ. ಈ ಹಂತದಲ್ಲಿ ತಮ್ಮ ನೆಚ್ಚಿನ ತಂಡಗಳು ಗೆಲುವು ಸಾಧಿಸಿ ಅಂತಿಮ ಹಂತಕ್ಕೆ ತಲುಪಬೇಕೆಂಬ ಅಭಿಲಾಷೆ ಪ್ರತಿಯೊಬ್ಬ ಅಭಿಮಾನಿಗಳಲ್ಲಿ ಇರುತ್ತದೆ.

ಆದರೆ, ರಾಯಲ್ ಚಾಲೆಂಜರ್ಸ್ (ಆರ್ಸಿಬಿ) ತಂಡವು ಶನಿವಾರ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ನಡೆಯುವ ಪಂದ್ಯದಲ್ಲಿ ಗೆಲುವು ದಾಖಲಿಸಿ ಪ್ಲೇ ಆಫ್ ಹಂತಕ್ಕೆ ತಲುಪಲಿ ಎಂದು ಗಂಗಾವತಿಯಲ್ಲಿ ಆರ್​ಸಿಬಿ ಅಭಿಮಾನಿಗಳು ರಕ್ತದಾನ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.

ಗಂಗಾವತಿ ತಾಲೂಕಿನ ಆಗೋಲಿ ಗ್ರಾಮದ ಶರಣು ಮತ್ತು ಹಂಪದದುರ್ಗ ಗ್ರಾಮದ ಮಾರುತಿ ಎಂಬ ಇಬ್ಬರು ಆರ್​ಸಿಬಿ ತಂಡದ ಯುವ ಅಭಿಮಾನಿಗಳು ಸ್ಥಳೀಯ ಅಂಜನಾದ್ರಿ ರಕ್ತ ಭಂಡಾರದಲ್ಲಿ ಶನಿವಾರ ರಕ್ತದಾನ ಮಾಡುವ ಮೂಲಕ ಮೆಚ್ಚುಗೆಗೆ ಪಾತ್ರರಾದರು.

ಈ ಸಂದರ್ಭದಲ್ಲಿ ಯುವಕ ಶರಣು ಮಾತನಾಡಿ, ನಾವು ಆರ್​ಸಿಬಿ ತಂಡದ ಅಪ್ಪಟ ಅಭಿಮಾನಿಗಳು. ಅತ್ಯಂತ ಪ್ರತಿಭಾವಂತರಿಂದ ಕೂಡಿರುವ ತಂಡವದು. ಇದುವರೆಗೂ ಅಂತಿಮ ಹಂತದಲ್ಲಿ ಗೆಲುವು ದಾಖಲಿಸಿಲ್ಲ. ಹೀಗಾಗಿ ಈ ಬಾರಿಯಾದರೂ ಪ್ಲೇ ಆಫ್ ಹಂತ ತಲುಪಲಿ ಎಂಬ ಆಶಯದೊಂದಿಗೆ ರಕ್ತದಾನ ಮಾಡಿದ್ದೇವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ರಕ್ತ ಕೇಂದ್ರದ ಮುಖ್ಯಸ್ಥೆ ಸವಿತಾ ಮಾತನಾಡಿ, ಯಾರಿಗಾದರೂ ತುರ್ತು ಸಂದರ್ಭದಲ್ಲಿ ರಕ್ತದ ಅಗತ್ಯಯುಳ್ಳವರಿಗೆ ನೆರವಾಗುವ ಉದ್ದೇಶಕ್ಕಾಗಿ ಬಹುತೇಕರು ರಕ್ತದಾನ ಮಾಡಲು ಮುಂದೆ ಬರುತ್ತಾರೆ. ಆದರೆ ಈ ಯುವಕರು ಕ್ರಿಕೆಟ್ ಮೇಲಿನ ತಮ್ಮ ಅಭಿಮಾನಕ್ಕಾಗಿ ರಕ್ತದಾನ ಮಾಡಿ ಗಮನ ಸೆಳೆದಿದ್ದಾರೆ ಎಂದರು.

ಇದನ್ನೂಓದಿ:ನಾನ್​ ಸ್ಟಿಕ್​ ಪಾತ್ರೆಯಲ್ಲಿ ಅಡುಗೆ ಮಾಡುವ ಮುನ್ನ ಒಮ್ಮೆ ಯೋಚಿಸಿ; ಸದ್ದಿಲ್ಲದೇ ಸೇರುತ್ತಿದೆ ಹಾನಿಕಾರಕ ರಾಸಾಯನಿಕ!! - WHY NOT USE NON STICK COOKWARE

ETV Bharat Logo

Copyright © 2024 Ushodaya Enterprises Pvt. Ltd., All Rights Reserved.