ETV Bharat / health

ಗರ್ಭಕಂಠದ ಕ್ಯಾನ್ಸರ್ ಹೇಗೆ ಉಂಟಾಗುತ್ತದೆ?, ಅದರ ಲಕ್ಷಣಗಳೇನು?

author img

By ETV Bharat Karnataka Team

Published : Feb 2, 2024, 8:49 PM IST

Updated : Feb 3, 2024, 9:02 PM IST

cervical-cancer
ಗರ್ಭಕಂಠದ ಕ್ಯಾನ್ಸರ್

ಮಹಿಳೆಯರ ಪ್ರಾಣಕ್ಕೆ ಕಂಟಕವಾಗಿರುವ ಗರ್ಭಕಂಠದ ಕ್ಯಾನ್ಸರ್​ ಹೇಗೆ ಉಂಟಾಗುತ್ತದೆ ಮತ್ತು ಅದರ ಲಕ್ಷಣಗಳೇನು ಎಂಬ ಮಾಹಿತಿ ಇಲ್ಲಿದೆ.

ಮಹಿಳೆಯರನ್ನು ಬಲಿ ಪಡೆಯುವ ಅನೇಕ ಮಾರಕ ಕಾಯಿಲೆಗಳು ಇವೆ. ಇದರಲ್ಲಿ ಎರಡು ರೀತಿಯ ಕ್ಯಾನ್ಸರ್​ಗಳು ಪ್ರಮುಖವಾಗಿವೆ. ಒಂದನೆಯದು ಸ್ತನ ಕ್ಯಾನ್ಸರ್, ಎರಡನೆಯದು ಗರ್ಭಕಂಠದ ಕ್ಯಾನ್ಸರ್​. ಗರ್ಭಕಂಠದ ಕ್ಯಾನ್ಸರ್​ಗೆ ಇಂಗ್ಲಿಷ್‌ನಲ್ಲಿ ಸರ್ವಿಕಲ್ ಕ್ಯಾನ್ಸರ್ ಎಂದು ಕರೆಯಲಾಗುತ್ತದೆ. ಸ್ತನ ಕ್ಯಾನ್ಸರ್ ಬಗ್ಗೆ ಕೆಲವರಿಗೆ ಗೊತ್ತಿದೆ. ಆದರೆ, ಗರ್ಭಕಂಠದ ಕ್ಯಾನ್ಸರ್ ಕುರಿತು ಬಹುತೇಕ ಜನರಿಗೆ ಗೊತ್ತಿಲ್ಲ. ಆರಂಭದಲ್ಲೇ ಗರ್ಭಕಂಠದ ಕ್ಯಾನ್ಸರ್​ ​ಪತ್ತೆ ಹಚ್ಚದಿದ್ದರೆ, ಪ್ರಾಣ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚು ಎಂದು ತಜ್ಞರು ಎಚ್ಚರಿಸುತ್ತಾರೆ.

ಗರ್ಭಕಂಠದ ಕ್ಯಾನ್ಸರ್​ ಹೇಗೆ ಉಂಟಾಗುತ್ತದೆ?: ಹ್ಯೂಮನ್ ಪ್ಯಾಪಿಲೋಮವೈರಸ್​ನಿಂದ (Human Papillomavirus - HPV) ಗರ್ಭಕಂಠದ ಕ್ಯಾನ್ಸರ್​ ಸಂಭವಿಸುತ್ತದೆ. ಈ ಕಾಯಿಲೆಯು ಆನುವಂಶಿಕವಾಗಿ ಬರಬಹುದು. ಇದು ಗರ್ಭ ನಿರೋಧಕ ಮಾತ್ರೆಗಳನ್ನು ಹೆಚ್ಚಾಗಿ ಸೇವಿಸುವುದರಿಂದ ಉಂಟಾಗುತ್ತದೆ. ಈ ಸೋಂಕು ಅನೇಕ ಜನರೊಂದಿಗೆ ಲೈಂಗಿಕ ಕ್ರಿಯೆ ನಡೆಸುವುದರಿಂದ ದೇಹವನ್ನು ಪ್ರವೇಶಿಸಬಹುದು. ಇದರ ಹೊರತಾಗಿಯೂ ಇನ್ನು ಕೆಲವು ಕಾರಣಗಳಿಂದಲೂ ಸಹ ಕಾಯಿಲೆ ಬರುವ ಅವಕಾಶ ಇರುತ್ತದೆ ಎನ್ನುತ್ತಾರೆ ತಜ್ಞರು.

ದೇಹಕ್ಕೆ ಪ್ರವೇಶ ತುಂಬಾ ನಿಧಾನ: ಹ್ಯೂಮನ್ ಪ್ಯಾಪಿಲೋಮವೈರಸ್ ದೇಹವನ್ನು ಪ್ರವೇಶಿಸಿದ ನಂತರ ಕ್ಯಾನ್ಸರ್ ಆಗಿ ಬದಲಾಗುತ್ತದೆ. ಆದರೆ, ಇದು ಬಹಳ ಸಮಯ ತೆಗೆದುಕೊಳ್ಳುತ್ತದೆ. ಅಂದರೆ, ಸುಮಾರು 15 ರಿಂದ 20 ವರ್ಷಗಳಲ್ಲಿ ಕ್ಯಾನ್ಸರ್​ ರೂಪ ಪಡೆಯುತ್ತದೆ. ಇದರ ನಂತರವೇ ರೋಗಲಕ್ಷಣಗಳು ಕಾಣಿಸಿಕೊಳ್ಳುತ್ತವೆ ಎಂಬುದು ತಜ್ಞರ ಮಾಹಿತಿ.

ಗರ್ಭಕಂಠದ ಕ್ಯಾನ್ಸರ್ ಲಕ್ಷಣಗಳು:

  • ಈ ಕ್ಯಾನ್ಸರ್ ಬಂದವರಿಗೆ ಪಿರಿಯಡ್ಸ್ ಸಮಯದಲ್ಲಿ ಭಾರೀ ರಕ್ತಸ್ರಾವ ಉಂಟಾಗುತ್ತದೆ.
  • ಹೊಟ್ಟೆಯ ಕೆಳಭಾಗದಲ್ಲಿ ನೋವು ಬರುತ್ತದೆ.
  • ಆಗಾಗ್ಗೆ ಮೂತ್ರ ವಿಸರ್ಜನೆಯ ಸಮಯದಲ್ಲೂ ನೋವಾಗುತ್ತದೆ.
  • ಸಂಭೋಗದ ನಂತರ ಯೋನಿಯಲ್ಲಿ ನೋವು ಮತ್ತು ಉರಿಯೂತದ ಅನುಭವವಾಗುತ್ತದೆ.
  • ಮುಟ್ಚು ನಿಲ್ಲುವ ಸಮಯದಲ್ಲಿ ಲೈಂಗಿಕ ಕ್ರಿಯೆ ಹೊಂದಿದ್ದರೆ, ಸಂಭೋಗದ ನಂತರ ರಕ್ತಸ್ರಾವವಾಗುತ್ತದೆ.
  • ದುರ್ವಾಸನೆಯುಳ್ಳ ಯೋನಿ ಸ್ರಾವವಾಗುತ್ತದೆ.
  • ಆಯಾಸ, ಆಲಸ್ಯ ಮತ್ತು ಅತಿಸಾರದಿಂದ ಹೆಚ್ಚಿನ ತೊಂದರೆಯಾಗುತ್ತದೆ.
  • ಈ ರೋಗಲಕ್ಷಣಗಳಲ್ಲಿ ಯಾವುದಾದರೂ ಒಂದು ಕಾಣಿಸಿಕೊಂಡರೂ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು.

ಇದನ್ನು ಪತ್ತೆ ಹಚ್ಚುವುದು ಹೇಗೆ?: ಗರ್ಭಕಂಠದ ಕ್ಯಾನ್ಸರ್ ಪತ್ತೆ ಮಾಡಲು ಪ್ಯಾಪ್ ಸ್ಮೀಯರ್ ಟೆಸ್ಟ್​ ಎಂಬ ಪರೀಕ್ಷೆಯನ್ನು ಮಾಡಲಾಗುತ್ತದೆ. ಮೇಲೆ ತಿಳಿಸಿದ ರೋಗಲಕ್ಷಣಗಳ ಆಧಾರದ ಮೇಲೆ ವೈದ್ಯರು ಈ ಪರೀಕ್ಷೆಯನ್ನು ನಡೆಸುತ್ತಾರೆ. ಗರ್ಭಕಂಠದಿಂದ ಕೆಲವು ಕಣಗಳನ್ನು ಸಂಗ್ರಹಿಸಿ ಅವುಗಳನ್ನು ಪರೀಕ್ಷಿಸುವ ಮೂಲಕ ಈ ಕ್ಯಾನ್ಸರ್​​ಅನ್ನು ಪತ್ತೆ ಹಚ್ಚಲಾಗುತ್ತದೆ. ಅಲ್ಲದೇ, ಈ ಕ್ಯಾನ್ಸರ್ ಅನ್ನು ಪೆಲ್ವಿಕ್ ಪರೀಕ್ಷೆ ಮತ್ತು ಬಯಾಪ್ಸಿ ಮಾದರಿ ಸಂಗ್ರಹದ ಮೂಲಕ ಕಂಡು ಹಿಡಿಯಲಾಗುತ್ತದೆ.

ಮುಂಜಾಗ್ರತೆ ಅಗತ್ಯ: ಕ್ಯಾನ್ಸರ್ ನಮ್ಮ ಜೀವವನ್ನು ಕೊಂಚ, ಕೊಂಚ ಹೇಗೆ ತಿನ್ನುತ್ತದೆ ಎಂಬುದು ಈಗಾಗಲೇ ಜನರಿಗೆ ಗೊತ್ತಿದೆ. ಹೀಗಾಗಿಯೇ ಚಿಕಿತ್ಸೆಗಿಂತ ಅದನ್ನು ಬರದಂತೆ ತಡೆಗಟ್ಟುವಿಕೆಯೇ ಉತ್ತಮ ಕ್ರಮ ಎಂದು ತಜ್ಞರು ಹೇಳುತ್ತಾರೆ. ಇಂತಹ ಸೋಂಕಿಗೆ ಒಳಗಾಗುವುದನ್ನು ತಪ್ಪಿಸಲು ಆರಂಭಿಕ ಲಸಿಕೆಗಳನ್ನು ತೆಗೆದುಕೊಳ್ಳಬೇಕೆಂದು ಮಹಿಳೆಯರಿಗೆ ಸಲಹೆ ನೀಡಲಾಗುತ್ತದೆ.

ಈ ವೈರಸ್ ತಡೆಗಟ್ಟಲು 9ರಿಂದ 26 ವರ್ಷ ವಯಸ್ಸಿನ ಮಹಿಳೆಯರಿಗೆ ಪೂರ್ವ ಲಸಿಕೆ ಇವೆ. ಅದೇ ರೀತಿಯಾಗಿ 21 ವರ್ಷ ಮೇಲ್ಪಟ್ಟ ಮಹಿಳೆಯರು ಪ್ಯಾಪ್ ಪರೀಕ್ಷೆ ಮಾಡಿಸಬಹುದು. ಇದರಿಂದ ಈ ಕ್ಯಾನ್ಸರ್​ಅನ್ನು ಆರಂಭದಲ್ಲೇ ಪತ್ತೆ ಹಚ್ಚಿ ಚಿಕಿತ್ಸೆ ಪಡೆಯಬಹುದು. ಇದಲ್ಲದೆ, ಅಸುರಕ್ಷಿತ ಲೈಂಗಿಕ ಕ್ರಿಯೆಯಲ್ಲಿ ತೊಡಗಿಸಿಕೊಳ್ಳಬಾರದು ಮತ್ತು ಗರ್ಭನಿರೋಧಕ ಮಾತ್ರೆಗಳನ್ನು ಅಧಿಕವಾಗಿ ತೆಗೆದುಕೊಳ್ಳಬಾರದು ಎಂದು ತಜ್ಞರು ಸಲಹೆ ನೀಡುತ್ತಾರೆ.

ಇದನ್ನೂ ಓದಿ: ಗರ್ಭಕಂಠ ಕ್ಯಾನ್ಸರ್​ನಿಂದ ಸಾವನ್ನಪ್ಪುವುದನ್ನು ತಡೆಗಟ್ಟಬಹುದಾ?.. ಈ ಬಗ್ಗೆ ವೈದ್ಯರ ಸಲಹೆ ಏನು?

Last Updated :Feb 3, 2024, 9:02 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.