ETV Bharat / bharat

ಎರಡನೇ ವರ್ಷದ ಆನೆ ಗಣತಿಗೆ ದಕ್ಷಿಣ ಭಾರತದ 4 ರಾಜ್ಯಗಳು ಸಜ್ಜು - Elephant Census

author img

By ETV Bharat Karnataka Team

Published : May 16, 2024, 10:37 AM IST

ದಕ್ಷಿಣ ಭಾರತದ ಕಾಡುಗಳಲ್ಲಿರುವ ಆನೆಗಳನ್ನು ಲೆಕ್ಕ ಹಾಕಲು ನಾಲ್ಕು ರಾಜ್ಯಗಳ ಅರಣ್ಯ ಇಲಾಖೆಗಳು ಗಣತಿ ಕಾರ್ಯಕ್ಕೆ ಮುಂದಾಗಿವೆ.

ಆನೆ ಗಣತಿ
ಆನೆ ಗಣತಿ (IANS)

ಬೆಂಗಳೂರು: ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ ಮತ್ತು ಕೇರಳ ಒಳಗೊಂಡ ದಕ್ಷಿಣ ಭಾರತದ ನಾಲ್ಕು ರಾಜ್ಯಗಳು ಎರಡನೇ ಆನೆ ಗಣತಿಯನ್ನು ಇದೇ ಮೇ 23ರಿಂದ ಪ್ರಾರಂಭಿಸಲಿವೆ. ಮೂರು ದಿನ ನಡೆಯುವ ಈ ಗಣತಿಯಲ್ಲಿ ವಿವಿಧ ಮಾದರಿಗಳನ್ನು ಅನುಸರಿಸಿ ಆನೆಗಳ ಲೆಕ್ಕ ನಡೆಯಲಿದೆ.

ಈ ಮೊದಲು ಮೇ 17ರಂದು ಆನೆ ಗಣತಿಗೆ ಉದ್ದೇಶಿಸಲಾಗಿತ್ತು. ಆದರೆ, ಕೇರಳ ಸರ್ಕಾರದ ವಿನಂತಿಯ ಮೇರೆಗೆ ಒಂದು ವಾರ ವಿಸ್ತರಿಸಲಾಗಿದ್ದು, ಮೇ 23ರಿಂದ ನಾಲ್ಕು ರಾಜ್ಯದಲ್ಲಿ ಏಕಕಾಲದಲ್ಲಿ ಈ ಕಾರ್ಯ ಆರಂಭವಾಗಲಿದೆ.

ಮೊದಲ ದಿನ ನೇರ ಆನೆ ಗಣತಿ ಮಾಡಲಾಗುತ್ತದೆ. ಎರಡನೇ ದಿನ ಲದ್ದಿ ಗಣತಿ, ಮೂರನೇ ದಿನ ವಾಟರ್​ಹೋಲ್​ ಗಣತಿ ನಡೆಸಲು ತೀರ್ಮಾನಿಸಲಾಗಿದೆ. ನಾಲ್ಕು ರಾಜ್ಯಗಳ ಅರಣ್ಯ ಇಲಾಖೆಗಳ ಮುಖ್ಯಸ್ಥರು ಮಂಗಳವಾರ ಆನ್‌ಲೈನ್ ಮೂಲಕ ಸಭೆ ನಡೆಸಿ ಗಣತಿ ವಿಧಾನದ ಕುರಿತು ಚರ್ಚಿಸಿದ್ದಾರೆ.

ತಮಿಳುನಾಡು ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿ, ಕಳೆದ ವರ್ಷದ ವಿಧಾನವನ್ನೇ ಈ ಬಾರಿಯೂ ಅನುಸರಿಸಲಾಗುವುದು. ಗಣತಿಯಲ್ಲಿ ಭಾಗಿಯಾಗುತ್ತಿರುವ ಅರಣ್ಯ ಸಿಬ್ಬಂದಿ ಮತ್ತು ಸ್ವಯಂ ಕಾರ್ಯಕರ್ತರ ಸಂಖ್ಯೆಯನ್ನು ಮುಂದಿನ ದಿನಗಳಲ್ಲಿ ಗುರುತಿಸಲಾಗುತ್ತದೆ. ನಿಗದಿತ ಪ್ರದೇಶದಲ್ಲಿ ಸುಮಾರು 15 ಕಿ.ಮೀ ದೂರವನ್ನು ತಂಡದ ನಾಲ್ಕರಿಂದ ಐದು ಸದಸ್ಯರು ಕ್ರಮಿಸಿ ಗಣತಿ ಮಾಡಲಿದ್ದಾರೆ. ಬೆಳಗ್ಗೆ 6ರಿಂದ ಸಂಜೆ 6ರವರೆಗೆ ಕಾಲ್ನಡಿಗೆಯಲ್ಲೇ ಈ ಕಾರ್ಯ ನಡೆಸುತ್ತಾರೆ. ಈ ವೇಳೆ ಆನೆಯ ವಯಸ್ಸು ಮತ್ತು ಲಿಂಗವನ್ನು ನೇರವಾಗಿ ನಿರ್ಣಯಿಸಲಿದ್ದಾರೆ. ಆನೆಗಳ ಬಾಹ್ಯ ಗಾಯಗಳು, ದಂತದ ಗಾತ್ರ ಮತ್ತು ಅದರ ಮುಖ್ನಾ (ದಂತವಿಲ್ಲದ ಗಂಡು ಆನೆ) ಸಂಖ್ಯೆಯನ್ನೂ ಪತ್ತೆ ಮಾಡಲಿದ್ದಾರೆ. ಆನೆಗಳ ನಡುವಿನ ವ್ಯತ್ಯಾಸವನ್ನು ಲದ್ದಿಯ ಮೂಲಕ ನಿರ್ಣಯಿಸಲಾಗುತ್ತದೆ. ಈ ತಂಡವು ಆನೆಯ ನಡವಳಿಕೆ ಮತ್ತು ಚಲನವಲನಗಳನ್ನೂ ಸಹ ಅಧ್ಯಯನ ಮಾಡುತ್ತದೆ.

ಕಳೆದ ವರ್ಷ ದಕ್ಷಿಣ ರಾಜ್ಯಗಳು ಒಟ್ಟಾಗಿ ಮೊದಲ ಬಾರಿಗೆ ಆನೆ ಗಣತಿ ನಡೆಸಿದ್ದವು. ಈ ಗಣತಿ 2023ರ ಮೇ 17ರಿಂದ ಮೇ 19ರವರೆಗೆ ಸಾಗಿತ್ತು. ಒಟ್ಟು 2,961 ಆನೆಗಳು ಕಂಡುಬಂದಿದ್ದವು. 2017ರ ಗಣತಿಗೆ ಹೋಲಿಸಿದಾಗ ಆನೆಗಳ ಸಂಖ್ಯೆ ಹೆಚ್ಚಾಗಿತ್ತು. ಇದಾದ ಬಳಿಕ ನಾಲ್ಕು ರಾಜ್ಯಗಳು ತಮ್ಮ ರಾಜ್ಯದಲ್ಲಿರುವ ಆನೆಗಳ ಸಂಖ್ಯೆಯನ್ನು ಬಿಡುಗಡೆ ಮಾಡಿದ್ದವು ಎಂದು ಮಾಹಿತಿ ನೀಡಿದ್ದಾರೆ. (ಐಎಎನ್ಎಸ್​)

ಇದನ್ನೂ ಓದಿ: ನಾಗರಹೊಳೆಯಲ್ಲಿ ಆನೆ ಗಣತಿ ಮುಕ್ತಾಯ, ಗಣತಿಯಲ್ಲಿ ಕಾಣಿಸಿಕೊಂಡ 400ಕ್ಕೂ ಹೆಚ್ಚು ಆನೆಗಳು..!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.