ETV Bharat / business

4 ದೊಡ್ಡ ಸವಾಲುಗಳ ನಡುವೆ 2030ಕ್ಕೆ 7 ಟ್ರಿಲಿಯನ್​ ಡಾಲರ್​ ಆರ್ಥಿಕ ಗುರಿಯತ್ತ ಭಾರತ

author img

By ETV Bharat Karnataka Team

Published : Feb 27, 2024, 7:35 AM IST

2030ಕ್ಕೆ 7 ಟ್ರಿಲಿಯನ್​ ಡಾಲರ್​ ಆರ್ಥಿಕ ಬೆಳವಣಿಗೆ ಗುರಿ ಹಾಕಿಕೊಂಡಿರುವ ಭಾರತಕ್ಕೆ ನಾಲ್ಕು ದೊಡ್ಡ ಸವಾಲುಗಳಿವೆ. ಏನು ಆ ಸವಾಲುಗಳು ಎಂಬ ಬಗ್ಗೆ ಆರ್ಥಿಕ ತಜ್ಞೆ ರಾಧಾ ರಘುರಾಮಪಾತ್ರುಣಿ ಅವರು ಇಲ್ಲಿ ವಿಶ್ಲೇಷಿಸಿದ್ದಾರೆ.

7 ಟ್ರಿಲಿಯನ್​ ಡಾಲರ್​ ಆರ್ಥಿಕ ಗುರಿ
7 ಟ್ರಿಲಿಯನ್​ ಡಾಲರ್​ ಆರ್ಥಿಕ ಗುರಿ

ಪ್ರಧಾನಿ ನರೇಂದ್ರ ಮೋದಿ ಅವರು ಮುಂದಿನ ಅವಧಿಗೆ ಭಾರತ ವಿಶ್ವದಲ್ಲಿಯೇ ಮೂರನೇ ದೊಡ್ಡ ಆರ್ಥಿಕ ರಾಷ್ಟ್ರವನ್ನಾಗಿ ಮಾಡುವ ಗುರಿ ಹೊಂದಿದ್ದಾರೆ. ಜೊತೆಗೆ ಮುಂದಿನ 6-7 ವರ್ಷಗಳಲ್ಲಿ ಅಂದರೆ 2030 ರಲ್ಲಿ ದೇಶ 7 ಟ್ರಿಲಿಯನ್​ ಡಾಲರ್​ ಆರ್ಥಿಕ ಬೆಳವಣಿಗೆ ಸಾಧಿಸಲಿದೆ ಎಂದು ಅಂದಾಜಿಸಲಾಗಿದೆ.

ಕೇಂದ್ರ ಹಣಕಾಸು ಸಚಿವಾಲಯ ಮಧ್ಯಂತರ ಬಜೆಟ್​ಗೂ ಮುನ್ನ ಮಂಡಿಸಿರುವ 'ಭಾರತದ ಆರ್ಥಿಕ ಸಮೀಕ್ಷೆ'ಯು ಕಳೆದ 10 ವರ್ಷಗಳಲ್ಲಿ ಭಾರತ ಪಡೆದ ಆರ್ಥಿಕ ವೇಗದ ಬಗ್ಗೆ ಮುನ್ನೋಟ ನೀಡಿದೆ. ರಾಜಕೀಯ ವಿರೋಧ ಮತ್ತು ಜಾಗತಿಕ ಸವಾಲುಗಳ ಹೊರತಾಗಿಯೂ ದೇಶದ ಆರ್ಥಿಕತೆಯ ಬೆಳವಣಿಗೆಯು ವೇಗವನ್ನು ಕಾಯ್ದುಕೊಂಡಿದೆ ಎಂದು ವಿಮರ್ಶೆಯಲ್ಲಿ ಹೇಳಲಾಗಿದೆ.

ಇದರ ಜೊತೆಗೆ ಮುಂದಿನ 2030 ರ ವೇಳೆಗೆ ಭಾರತದ ಆರ್ಥಿಕತೆಯು 7 ಟ್ರಿಲಿಯನ್ ಡಾಲರ್ ದಾಟಲಿದೆ. 2024ನೇ ಆರ್ಥಿಕ ವರ್ಷದಲ್ಲಿ ಶೇಕಡಾ 7 ರಷ್ಟು ಅಥವಾ ಅದಕ್ಕಿಂತ ಹೆಚ್ಚಿನ ಬೆಳವಣಿಗೆಯನ್ನು ಸಾಧಿಸಲಿದೆ ಎಂದು ವರದಿ ಅಂದಾಜಿಸಿದೆ. ಸೇವಾ ವಲಯದಲ್ಲಿ ಕೃತಕ ಬುದ್ಧಿಮತ್ತೆಯ(ಎಐ) ಸವಾಲು, ಇಂಧನ ಭದ್ರತೆ ಮತ್ತು ವ್ಯಾಪಾರ ಮತ್ತು ಕೌಶಲ್ಯಾಧರಿತ ಉದ್ಯೋಗಿಗಳ ಲಭ್ಯತೆಯೂ ಆರ್ಥಿಕತೆಗೆ ಇರುವ ನಾಲ್ಕು ದೊಡ್ಡ ಸವಾಲುಗಳನ್ನು ವರದಿ ಗುರುತಿಸಿದೆ.

ಸೇವಾ ವಲಯದಲ್ಲಿ ಎಐ ಸವಾಲು: ಕೃತಕ ಬುದ್ಧಿಮತ್ತೆ (ಎಐ)ಯು ಸೇವಾ ವಲಯದಲ್ಲಿ ದೊಡ್ಡ ಸವಾಲಾಗಲಿದೆ ಎಂದು ಹಣಕಾಸು ವರದಿ ಹೇಳಿದೆ. ವಿಶ್ವದ ಎಲ್ಲ ಸರ್ಕಾರಗಳಿಗೆ ಕೃತಕ ಬುದ್ಧಿಮತ್ತೆಯು ಅತಿ ದೊಡ್ಡ ಹೊಡೆತ ನೀಡಿದೆ. ಸೇವಾ ವಲಯದ ಉದ್ಯೋಗದ ಮೇಲೆ ಇದು ಪರಿಣಾಮ ಬೀರಲಿದೆ. ಭಾರತದ ಜಿಡಿಪಿಗೆ ಸೇವಾ ವಲಯದಿಂದಲೇ ಶೇಕಡಾ 50 ಕ್ಕಿಂತ ಹೆಚ್ಚಿನ ಕೊಡುಗೆ ಇದೆ. ಆದಾಗ್ಯೂ, ಭಾರತದ ಜಿಡಿಪಿ ಬೆಳವಣಿಗೆಯು ಕುಂಠಿತವಾಗುವುದಿಲ್ಲ. ಶೇಕಡಾ 7 ರಷ್ಟು ಅಥವಾ ಅದಕ್ಕಿಂತ ಹೆಚ್ಚಿನ ಬೆಳವಣಿಗೆಯನ್ನು ನಿರೀಕ್ಷಿಸಲಾಗಿದೆ. ಕೆಲವು ವಿಶ್ಲೇಷಕರು 2025ನೇ ಹಣಕಾಸು ವರ್ಷದಲ್ಲೂ ಇದೇ ಬೆಳವಣಿಗೆ ದರವನ್ನು ಊಹಿಸಿದ್ದಾರೆ.

ಹವಾಮಾನ ಬದಲಾವಣೆಯೂ ವಿಶ್ವ ರಾಷ್ಟ್ರಗಳ ಮೇಲೆ ಪರಿಣಾಮ ಬೀರಲಿದೆ ಎಂದು ನೀತಿ ನಿರೂಪಕರು ಅಂದಾಜಿಸಿದ್ದಾರೆ. ಭಾರತವು 2070 ರ ವೇಳೆಗೆ ಸಂಪೂರ್ಣವಾಗಿ ನವೀಕರಿಸಬಹುದಾದ ಇಂಧನ ಸಾಮರ್ಥ್ಯಕ್ಕೆ ಬದಲಾಗುವ ಗುರಿಯನ್ನು ಹೊಂದಿದೆ. ಇಂಧನ ಭದ್ರತೆ ಸಾಧಿಸುವ ಮೂಲಕ ವ್ಯಾಪಾರ ವಹಿವಾಟನ್ನು ಉತ್ತೇಜಿಸಬೇಕಿದೆ.

ಕೌಶಲ್ಯಾಧರಿತ ಉದ್ಯೋಗಿಗಳ ಲಭ್ಯತೆ: ಉದ್ಯಮಗಳಲ್ಲಿ ಪ್ರತಿಭಾನ್ವಿತ ಮತ್ತು ನುರಿತ ಉದ್ಯೋಗಿಗಳ ಲಭ್ಯತೆಯು ಆರ್ಥಿಕ ಬೆಳವಣಿಗೆಗೆ ಪೂಕರವಾಗಿದೆ. ಇದು ಇಲ್ಲವಾದಲ್ಲಿ ಹಲವು ಕ್ಷೇತ್ರಗಳು ಬೆಳವಣಿಗೆ ಸಾಧಿಸದೇ ಆರ್ಥಿಕ ಕ್ಷೇತ್ರಕ್ಕೂ ಪೆಟ್ಟು ನೀಡಲಿವೆ. ಹೀಗಾಗಿ ಉದ್ಯಮಗಳಿಗೆ ಬೇಕಾದ ಪ್ರತಿಭೆ, ಉದ್ಯೋಗಗಳಲ್ಲಿ ಕೌಶಲ್ಯತೆ ಬೆಳೆಸುವುದು, ಶಾಲಾ ಹಂತಗಳಲ್ಲಿ ವಯಸ್ಸಿಗೆ ತಕ್ಕನಾಗಿ ಕಲಿಕೆ ಮತ್ತು ಆರೋಗ್ಯವನ್ನು ಕಾಪಾಡುವುದೂ ಪ್ರಮುಖ ಆದ್ಯತೆಯಾಗಿದೆ.

ಆರೋಗ್ಯಕರ, ವಿದ್ಯಾವಂತ ಮತ್ತು ಕೌಶಲ್ಯಾಧರಿತ ಜನಸಂಖ್ಯೆಯು ಆರ್ಥಿಕವಾಗಿ ಉತ್ಪಾದಕ ಕಾರ್ಯಪಡೆ ಹೆಚ್ಚಿಸುತ್ತದೆ. ಭಾರತದ ಜನಸಂಖ್ಯೆಯ ಶೇಕಡಾ 65 ರಷ್ಟು ಮಂದಿ 35 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದರೆ 2056 ರವರೆಗೆ ಉತ್ಪಾದನಾ ಲಾಭಾಂಶ ಹೆಚ್ಚಿರುತ್ತದೆ. ಇದು 2041 ರ ಅವಧಿಯಲ್ಲಿ ಅತ್ಯಂತ ಉಚ್ಛ್ರಾಯ ಸ್ಥಿತಿಯಲ್ಲಿರುತ್ತದೆ. ಆಗ ದುಡಿಯುವ ವರ್ಗವು 20 ರಿಂದ 59 ವರ್ಷಗಳ ನಡುವೆ ಇರುತ್ತದೆ. ಶೇಕಡಾವಾರು ಇದು 59 ಪ್ರತಿಶತದಷ್ಟು ಇರಲಿದೆ.

ದೊಡ್ಡ ಆರ್ಥಿಕ ರಾಷ್ಟ್ರಗಳ ಸ್ಥಿತಿ: ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್​) ನೀಡಿದ ವರದಿಯಂತೆ ವಿಶ್ವದ ಐದು ದೊಡ್ಡ ರಾಷ್ಟ್ರಗಳಲ್ಲಿ ಭಾರತ ಒಂದಾಗಿದೆ. ಅಮೆರಿಕ 27,974 ಟ್ರಿಲಿಯನ್​ ಡಾಲರ್​, ಚೀನಾ 18,566 ಟ್ರಿಲಿಯನ್​ ಡಾಲರ್​, ಜಪಾನ್ 4,291 ಟ್ರಿಲಿಯನ್​ ಡಾಲರ್​, ಜರ್ಮನಿ 4,730 ಟ್ರಿಲಿಯನ್​ ಡಾಲರ್​ ಆರ್ಥಿಕತೆ ಹೊಂದಿ ಮೊದಲ ನಾಲ್ಕು ಸ್ಥಾನದಲ್ಲಿದ್ದರೆ, ಭಾರತವು 4,112 ಟ್ರಿಲಿಯನ್​ ಡಾಲರ್​ನೊಂದಿಗೆ 5 ನೇ ಅತಿದೊಡ್ಡ ಆರ್ಥಿಕತೆಯಾಗಿದೆ. 2024 ರ ಹಣಕಾಸು ವರ್ಷದಲ್ಲಿ 4.2 ಟ್ರಿಲಿಯನ್‌ ಡಾಲರ್​ ಗುರಿ ಹಾಕಿಕೊಳ್ಳಲಾಗಿದೆ. ಅಂದರೆ, ಶೇಕಡಾ 10.5 ಬೆಳವಣಿಗೆ ದಾಖಲಿಸಬೇಕಿದೆ.

2027 ರ ವೇಳೆಗೆ ಮೂರನೇ ಅತಿದೊಡ್ಡ ಆರ್ಥಿಕ ರಾಷ್ಟ್ರವಾಗಲು 9.1 ಪ್ರತಿಶತ ಸರಾಸರಿ ಬೆಳವಣಿಗೆಯನ್ನು ಸಾಧಿಸುವ ಅಗತ್ಯವಿದೆ. ಆಗ 5 ಟ್ರಿಲಿಯನ್ ಡಾಲರ್​ ತಲುಪಲು ಸಾಧ್ಯವಾಗುತ್ತದೆ. ಜಪಾನ್​ ಮತ್ತು ಜರ್ಮನಿಯನ್ನು ಹಿಂದಿಕ್ಕಲಿದೆ.

ಇದನ್ನೂ ಓದಿ: 2030ರ ವೇಳೆಗೆ ಭಾರತ ವಿಶ್ವದ 3ನೇ ಅತಿದೊಡ್ಡ ಆರ್ಥಿಕ ರಾಷ್ಟ್ರ: ಎಸ್‌&ಪಿ ರೇಟಿಂಗ್‌

ETV Bharat Logo

Copyright © 2024 Ushodaya Enterprises Pvt. Ltd., All Rights Reserved.