ETV Bharat / state

ಮೇವು, ನೀರಿನ ಕೊರತೆ: ಕೊಪ್ಪಳದಿಂದ ಹಾವೇರಿಗೆ ಸಾವಿರಾರು ಹಸುಗಳೊಂದಿಗೆ ಗವಳಿಗರ ವಲಸೆ - Gavaligas Migration

author img

By ETV Bharat Karnataka Team

Published : May 24, 2024, 9:01 AM IST

ಕೊಪ್ಪಳ ಜಿಲ್ಲೆಯಲ್ಲಿ ಹಸುಗಳಿಗೆ ಮೇವು, ನೀರು ಸಿಗುತ್ತಿಲ್ಲ. ಹೀಗಾಗಿ ಗವಳಿಗರು ತಮ್ಮ ಹಸುಗಳೊಂದಿಗೆ ಹಾವೇರಿ ಜಿಲ್ಲೆಗೆ ಕಾಲ್ನಡಿಗೆಯಲ್ಲೇ ವಲಸೆ ಹೋಗಿ, ಅಲ್ಲಿನ ರೈತರ ಜಮೀನಿನಲ್ಲಿ ಮೇಯಿಸುತ್ತಿದ್ದಾರೆ.

ಜವಾರಿ ತಳಿ ಹಸುಗಳು
ಜವಾರಿ ತಳಿಯ ಹಸುಗಳು (ETV Bharat)

ಸಾವಿರಾರು ಹಸುಗಳೊಂದಿಗೆ ಗವಳಿಗರ ವಲಸೆ (ETV Bharat)

ಹಾವೇರಿ: ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ತುಂಗಭದ್ರಾ ನದಿ ತಟದ ಭತ್ತದ ಗದ್ದೆಗಳಲ್ಲಿ ಈಗ ಎಲ್ಲಿ ನೋಡಿದರೂ ಹಸುಗಳೇ ಹಸುಗಳು!. ನದಿ ತಟದಲ್ಲಿರುವ ಭತ್ತದ ಗದ್ದೆಗಳಲ್ಲಿ ಸಾವಿರಾರು ಹಸುಗಳು ಮೇಯುತ್ತಿರುವುದನ್ನು ಕಾಣಬಹುದು. ಶ್ವೇತವರ್ಣದ ಈ ಹಸುಗಳು ಜವಾರಿ ತಳಿಯವು. ಇವುಗಳನ್ನು ಕಾಯಲು 10ಕ್ಕೂ ಅಧಿಕ ಜನರಿದ್ದು ಮುಂಜಾನೆ 9ರಿಂದ ಸಂಜೆ 7ರವರೆಗೆ ಮೇಯಿಸುತ್ತಿದ್ದಾರೆ.

ಈ ಹಸುಗಳು ಕೊಪ್ಪಳ ಜಿಲ್ಲೆಯ ನಾಗೇನಹಳ್ಳಿಯವು. ಅಲ್ಲಿ ಮೇವು, ಕುಡಿಯಲು ನೀರಿಲ್ಲ. ಹೀಗಾಗಿ ಗವಳಿಗರು ಹಾವೇರಿ ಜಿಲ್ಲೆಗೆ ಬಂದಿದ್ದಾರೆ. ಪ್ರತೀ ಬಾರಿ ಬರಗಾಲ ಬಂದಾಗ ಕೊಪ್ಪಳ ಜಿಲ್ಲೆಯಲ್ಲಿ ಮೇವು, ನೀರಿಗೆ ಕೊರತೆ ಉಂಟಾಗುತ್ತದೆ. ಅಂಥ ಸಂದರ್ಭಗಳಲ್ಲಿ ಗವಳಿಗರು ದನಗಳೊಂದಿಗೆ ಬಳ್ಳಾರಿ, ಆಂಧ್ರಪ್ರದೇಶದ ಜಿಲ್ಲೆಗಳಲ್ಲಿ ಮೇಯಿಸಿಕೊಂಡು ಮಳೆಗಾಲಕ್ಕೆ ಮತ್ತೆ ತಮ್ಮೂರಿಗೆ ತೆರಳುತ್ತಾರೆ. ಕಳೆದ ಎರಡು ದಶಕಗಳಲ್ಲಿ ಇದೇ ಮೊದಲ ಬಾರಿ ಹಾವೇರಿ ಜಿಲ್ಲೆಗೆ ಆಗಮಿಸಿದ್ದಾರೆ.

ರಾಣೆಬೆನ್ನೂರು ತಾಲೂಕಿನ ಮೆಡ್ಲೇರಿ, ಸೋಮಲಾಪುರ, ಅರೇಮಲ್ಲಾಪುರ, ಹಿರೇಬಿದರಿ, ಕೋಣನತಂಬಿಗೆ ಸೇರಿದಂತೆ ತುಂಗಭದ್ರಾ ನದಿ ಹಾದು ಹೋಗಿರುವ ನದಿತಟಗಳಲ್ಲಿರುವ ಭತ್ತದ ಗದ್ದೆಯಲ್ಲಿ ಗವಳಿಗರು ತಮ್ಮ ಹಸುಗಳನ್ನು ಮೇಯಿಸುತ್ತಿದ್ದಾರೆ. ಸದ್ಯ ಈ ಗದ್ದೆಗಳಲ್ಲಿ ಭತ್ತ ಕಟಾವು ಮಾಡಲಾಗಿದೆ. ಅಲ್ಲಿರುವ ಹಸಿರು ಮೇವು ಹಾಗು ನದಿಗುಂಡಿಗಳಲ್ಲಿರುವ ನೀರು ಕುಡಿಸಿಕೊಂಡು ಹಸುಗಳ ಪಾಲನೆಯಲ್ಲಿ ಗವಳಿಗರು ತೊಡಗಿದ್ದಾರೆ.

ಕೊಪ್ಪಳ ಜಿಲ್ಲೆಯ ನಾಗೇನಹಳ್ಳಿ, ಕಾಮನೂರು ಮತ್ತು ಬೊಮ್ಮಸಾಗರ ತಾಂಡಾದ ಮೂರು ಕುಟುಂಬಗಳ 10 ಮಂದಿಯ ಗೋಪಾಲಕರ ತಂಡ ದನಕರುಗಳೊಂದಿಗೆ ವಲಸೆ ಬಂದಿದೆ. ರಾಣೆಬೆನ್ನೂರು ತಾಲೂಕಿನ ಸೋಮಲಾಪುರ ಬಳಿ ಗದ್ದೆ ಬಯಲಿನಲ್ಲಿ ಇವರು ಬೀಡುಬಿಟ್ಟಿದ್ದಾರೆ. ನಮ್ಮ ದನಕರುಗಳನ್ನು ಉಳಿಸಿಕೊಳ್ಳುವುದೇ ದೊಡ್ಡ ಸಮಸ್ಯೆಯಾಗಿದೆ ಎಂಬುದು ಗವಳಿಗರ ಮಾತು. ಇದಲ್ಲದೇ, ಇಲ್ಲಿ ಕುರಿ ಮೇಯಿಸುವವರು ಜಮೀನಿನಲ್ಲಿ ಹಸು ಮೇಯಿಸದಂತೆ ತಾಕೀತು ಮಾಡುತ್ತಿದ್ದಾರೆ ಎಂದು ತಮ್ಮ ಸಮಸ್ಯೆ ತೋಡಿಕೊಂಡಿದ್ದಾರೆ.

ಗವಳಿಗರಿಗೆ ದಿನಕ್ಕೆ ₹5 ಸಾವಿರದಿಂದ 6 ಸಾವಿರ ನೀಡುವ ರೈತರು: ಈ ರೀತಿ ಹಸುಗಳನ್ನು ತಮ್ಮ ಗದ್ದೆಗಳಲ್ಲಿ ನಿಲ್ಲಿಸಿಕೊಳ್ಳಲು ಇಲ್ಲಿಯ ರೈತರು ಗವಳಿಗರಿಗೆ ದಿನಕ್ಕೆ 5 ಸಾವಿರದಿಂದ 6 ಸಾವಿರ ರೂಪಾಯಿವರೆಗೂ ಹಣ ನೀಡುತ್ತಿದ್ದಾರೆ. ಯಾಕೆಂದರೆ ಇವೆಲ್ಲಾ ಜವಾರಿ ಹಸುಗಳು. ಇವುಗಳ ಸಗಣಿ ಮತ್ತು ಮೂತ್ರ ಜಮೀನಿನ ಫಲವತ್ತತೆ ಹೆಚ್ಚಿಸುತ್ತದೆ. ಕಳೆದ ಹಲವು ವರ್ಷಗಳಿಂದ ರಸಾಯನಿಕ ಗೊಬ್ಬರ ಹಾಕಿ ಹಾಕಿ ರೈತರ ಗದ್ದೆಗಳಲ್ಲಿ ಶಕ್ತಿ ಇಲ್ಲದಂತಾಗಿತ್ತು. ಈ ರೀತಿ ಹಸುಗಳನ್ನು ಒಂದು ದಿನ ನಿಲ್ಲಿಸಿದರೆ ತಮ್ಮ ಗದ್ದೆಗಳಲ್ಲಿ ಫಲವತ್ತತೆ ಹೆಚ್ಚುತ್ತದೆ ಎನ್ನುವುದು ರೈತರ ಅಭಿಪ್ರಾಯ.

ಜವಾರಿ ತಳಿ ಹಸುಗಳು
ಜವಾರಿ ತಳಿಯ ಹಸುಗಳು (ETV Bharat)

ಈ ಕುಟುಂಬಗಳು ಪ್ರತೀ ವರ್ಷ ಡಿಸೆಂಬರ್‌ನಿಂದ ಮೇ ತಿಂಗಳವರೆಗೆ ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಯ ಅರಣ್ಯ, ಹುಲ್ಲುಗಾವಲು, ಗೋಮಾಳಗಳಿಗೆ ಹೋಗಿ ದನಗಳನ್ನು ಮೇಯಿಸುತ್ತಿದ್ದರು. ಈ ಬಾರಿ ಕೊಪ್ಪಳದಲ್ಲಿ ಕಾಲುವೆಗಳಲ್ಲಿ ಸರಿಯಾಗಿ ನೀರು ಹರಿಯದೆ ಬೆಳೆಗಳು ಒಣಗಿವೆ. ದನಕರುಗಳು ಬೊಗಸೆ ನೀರಿಗೆ, ಹಿಡಿ ಮೇವಿಗೆ ಗೋಳಿಡುತ್ತಿವೆ. ಹೀಗಾಗಿ ಹಾವೇರಿ ಜಿಲ್ಲೆಗೆ ಆಗಮಿಸಿರುವುದಾಗಿ ಕುಟುಂಬಗಳು ತಿಳಿಸಿವೆ. ಮೂರು ಗವಳಿಗ ಕುಟುಂಬಗಳು ಒಗ್ಗಟ್ಟಾಗಿ ನೂರಾರು ಕಿ.ಮೀ. ದೂರದಿಂದ ಕಾಲ್ನಡಿಗೆಯಲ್ಲೇ ದನಕರುಗಳೊಂದಿಗೆ ಹಾವೇರಿ ಜಿಲ್ಲೆಗೆ ವಲಸೆ ಬಂದಿದ್ದಾರೆ.

ಇದನ್ನೂ ಓದಿ: ರಾಮನಗರ: ನಿರಂತರ ಸುರಿದ ಮಳೆಗೆ ನೆಲಕಚ್ಚಿದ ತರಕಾರಿ ರಾಗಿ ಬೆಳೆ, ಸಂಕಷ್ಟದಲ್ಲಿ ರೈತರು - KARNATAKA RAIN UPDATE

ETV Bharat Logo

Copyright © 2024 Ushodaya Enterprises Pvt. Ltd., All Rights Reserved.