ETV Bharat / state

ರಾಮನಗರ: ನಿರಂತರ ಸುರಿದ ಮಳೆಗೆ ನೆಲಕಚ್ಚಿದ ತರಕಾರಿ ರಾಗಿ ಬೆಳೆ, ಸಂಕಷ್ಟದಲ್ಲಿ ರೈತರು - KARNATAKA RAIN UPDATE

author img

By ETV Bharat Karnataka Team

Published : May 23, 2024, 7:58 PM IST

ಸುರುಳಿ ರೋಗ ಬಾಧೆಯಿಂದ ಬಸವಳಿದಿದ್ದ ಟೊಮೆಟೊ ಬೆಳೆಗಾರರು ಈಗ ಸತತ ಮಳೆಯಿಂದ ಬೆಳೆ ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ. ಕಟಾವಿಗೆ ಬಂದಿರುವ ರಾಗಿ ಬೆಳೆಯೂ ಹಾನಿಯಾಗುವ ಸಂಭವವಿದೆ.

ನಿರಂತರ ಮಳೆಗೆ ಕಪ್ಪಾದ ರಾಗಿ ಬೆಳೆ
ನಿರಂತರ ಮಳೆಗೆ ಕಪ್ಪಾದ ರಾಗಿ ಬೆಳೆ (ETV Bharat)

ರಾಮನಗರ: ಬಿರು ಬಿಸಿಲಿನ ತಾಪಕ್ಕೆ ಬಸವಳಿದಿದ್ದ ರೈತರು ಈಗ ಸತತ ಸುರಿಯುತ್ತಿರುವ ಮಳೆಯಿಂದಾಗಿ ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿದ್ದಾರೆ.

ಒಂದೆಡೆ ತೋಟಗಾರಿಕೆ, ತರಕಾರಿ ಬೆಳೆಗಳು ಮಳೆಯಿಂದಾಗಿ ಕೊಳೆಯುವ ಸ್ಥಿತಿಗೆ ತಲುಪಿದರೆ, ಮತ್ತೊಂದೆಡೆ ರಾಸುಗಳನ್ನು ಸಾಕಿರುವ ಹೈನುಗಾರರು ಮುಂದಿನ ದಿನಗಳಲ್ಲಿ ಮೇವಿನ ಕೊರತೆ ಎದುರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.

ಈಗಾಗಲೇ ಸುರುಳಿ ರೋಗ ಬಾಧೆಯಿಂದ ಬಸವಳಿದಿದ್ದ ಟೊಮೆಟೊ ಬೆಳೆಗಾರರು ಈಗ ಸತತ ಮಳೆಯಿಂದ ಬೆಳೆ ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ. ಕಳೆದ ಒಂದು ವಾರದಿಂದ ಮಳೆ ಸುರಿಯುತ್ತಿರುವುದರಿಂದ ತೋಟದಲ್ಲಿ ನೀರು ನುಗ್ಗಿ ಟೊಮೆಟೊ ಬೆಳೆ ಕೊಳೆಯುವ ಹಂತಕ್ಕೆ ಬಂದಿದೆ. ಇನ್ನು ತೋಟದಲ್ಲಿ ಕಳೆ ಬೆಳೆದು ಕೀಟಬಾಧೆಗೆ ತುತ್ತಾಗುವ ಹಂತ ತಲುಪಿದೆ. ಇದರಿಂದಾಗಿ ಸಾಧಾರಣ ಟೊಮೆಟೊಗೆ ಸ್ಥಳೀಯವಾಗಿ 40 ರಿಂದ 50 ರೂ. ದರವಿದ್ದು, ಇಳುವರಿ ಕುಂಠಿತದಿಂದ ದರ ಹೆಚ್ಚಳವಾಗುವ ಸಾಧ್ಯತೆ ಇದೆ.

ಕೊಳೆತ ಸೊಪ್ಪು : ಇನ್ನು ಪಾಲಕ್, ದಂಟು, ಕೀರೆ, ಮೆಂತೆ ಸೊಪ್ಪು ಬೆಳೆ ಕೂಡ ಮಳೆಗೆ ಕೊಳೆಯುವ ಹಂತದಲ್ಲಿದೆ. ತಾಲೂಕಿನಲ್ಲಿ ಹೆಚ್ಚು ಸೊಪ್ಪು ಬೆಳೆಯುವ ಹುಣಸನಹಳ್ಳಿ, ಕಾಲಿಕೆರೆ, ಬಾಣಗಹಳ್ಳಿ ಸುತ್ತಮುತ್ತಲಿನ ಗ್ರಾಮದ ರೈತರು ಸಂಕಷ್ಟದ ಪರಿಸ್ಥಿತಿ ಅನುಭವಿಸುವಂತಾಗಿದೆ.

ಮೇವಿನ ಕೊರತೆ ಭೀತಿ: ಬೇಸಿಗೆಯಲ್ಲಿ ತಮ್ಮ ರಾಸುಗಳ ಮೇವಿಗಾಗಿ ಪರಿತಪಿಸಿದ ರೈತರು, ಹತ್ತಾರು ಕಿ.ಮೀ. ದೂರದಿಂದ ದುಪ್ಪಟ್ಟು ದರಕ್ಕೆ ಮೇವು ಖರೀದಿಸಿ ತರುತ್ತಿದ್ದರು. ಹೈನುಗಾರರಿಗೆ ಈಗ ಬಿಡುವಿಲ್ಲದೆ ಸುರಿಯುತ್ತಿರುವ ಮಳೆಯಿಂದಾಗಿ ತಮ್ಮ ಜಮೀನುಗಳನ್ನು ಉಳುಮೆ ಮಾಡಿ, ಮೇವಿನ ಬೀಜ ಬಿತ್ತನೆ ಮಾಡಲು ಸಾಧ್ಯವಾಗುತ್ತಿಲ್ಲ.

ಕನಿಷ್ಠ ಒಂದು ವಾರ ಮಳೆ ಬಿಡುವು ಕೊಟ್ಟರೆ ಉಳುಮೆ ಮಾಡಿ ಜೋಳ ಬಿತ್ತಲು ಸಾಧ್ಯವಾಗಲಿದೆ. ಆದರೆ ಮಳೆ ಸುರಿಯುತ್ತಲೇ ಇರುವುದರಿಂದ ಮುಂದಿನ ದಿನಗಳಲ್ಲಿ ರಾಸುಗಳ ಮೇವಿಗೆ ತತ್ವಾರ ಬರಲಿದೆ ಎನ್ನುವುದು ರೈತರ ಅಭಿಪ್ರಾಯವಾಗಿದೆ. ಇನ್ನು ಸದ್ಯ ಇರುವ ಮೇವಿನ ಬೆಳೆ ಕೂಡ ಬಿರುಗಾಳಿ ಮಳೆಗೆ ಮಣ್ಣು ಪಾಲಾಗುತ್ತಿದೆ. ಹೈನುಗಾರರು ಮೇವನ್ನು ತೊಳೆದು, ಒಣಗಿಸಿ ಹಾಕುವ ದೃಶ್ಯಗಳು ಅಲ್ಲಲ್ಲಿ ಕಂಡು ಬರುತ್ತಿವೆ.

ಮೊಳಕೆಯೊಡೆದ ರಾಗಿ ಬೆಳೆ: ಕೊಳವೆಬಾವಿಯಿಂದ ನೀರು ಪೂರೈಸಿ ರೈತರು ಬೇಸಿಗೆಯಲ್ಲಿ ರಾಗಿ ಬೆಳೆದಿದ್ದರು. ಆದರೆ ಈಗ ಕಟಾವಿಗೆ ಬಂದಿರುವ ರಾಗಿಯು ಮಳೆಯಿಂದಾಗಿ ಮೊಳಕೆ ಆತಂಕ ಕಾಡುತ್ತಿದೆ. ರಾಗಿ ತೆನೆ ಕೊಯ್ಲು ಮಾಡಿದರೂ, ಅದನ್ನು ಒಣಗಿಸಲು ತೊಂದರೆಯಿದೆ. ರಾಗಿ ಮುಗ್ಗಲು ಬರುವ ಅಥವಾ ಕಪ್ಪಾಗುವ ಸಾಧ್ಯತೆಯಿದೆ ಎನ್ನುವುದು ರಾಗಿ ಬೆಳೆಗಾರರ ನೋವಾಗಿದೆ.

ಮಳೆ ಅಬ್ಬರಕ್ಕೆ ಅಪಾರ ಹಾನಿ,‌‌ ಮನೆ ಕುಸಿತ; ಮೈಸೂರು ಜಿಲ್ಲೆಯ ಹುಣಸೂರು ಭಾಗದಲ್ಲಿ ನಾಲ್ಕೈದು ದಿನಗಳಿಂದ ಸುರಿದ ಭಾರೀ ಮಳೆಯಿಂದ ಹಲವು ಗ್ರಾಮಗಳಲ್ಲಿ ಅಪಾರ ನಷ್ಟ ಉಂಟಾಗಿದೆ. ಮಳೆ ಅಬ್ಬರಕ್ಕೆ ಕಾಳೇನಹಳ್ಳಿ ಗ್ರಾಮದಲ್ಲಿ ಶ್ರೀನಿವಾಸ್ ಎಂಬುವರಿಗೆ ಸೇರಿದ ಮನೆ ಕುಸಿದಿದೆ.

house collapsed in Kalenahalli village.
ಹುಣಸೂರು ತಾಲೂಕಿನ ಕಾಳೇನಹಳ್ಳಿ ಗ್ರಾಮದಲ್ಲಿ ಮನೆ ಕುಸಿದಿರುವುದು. (ETV Bharat)

ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಿಲ್ಲ. ಜೋರು ಮಳೆಗೆ ಮನೆಯಲ್ಲಿದ್ದ ವಸ್ತುಗಳೆಲ್ಲ ನೀರುಪಾಲಾಗಿವೆ.
ಕುಟುಂಬವು ವಾಸಕ್ಕೆ ಮನೆಯಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಪರಿಹಾರ ನೀಡುವಂತೆ ಕುಟುಂಬದವರು ತಾಲೂಕು ಆಡಳಿತಕ್ಕೆ ಮನವಿ ಮಾಡಿದ್ದಾರೆ. ಹುಣಸೂರು ಭಾಗದಲ್ಲಿ ಸುರಿದ ಭಾರೀ ಮಳೆಯಿಂದ ಅಪಾರ ಪ್ರಮಾಣದಲ್ಲಿ ಹಾನಿಯಾಗಿದೆ.

ಇದನ್ನೂಓದಿ:ಪೂರ್ವ ಮುಂಗಾರು ಬಿತ್ತನೆ: ರೈತರಿಗೆ ಕೃಷಿ ಇಲಾಖೆ ನಿರ್ದೇಶಕರಿಂದ ಮಹತ್ವದ ಮಾಹಿತಿ - Pre Monsoon Sowing

ETV Bharat Logo

Copyright © 2024 Ushodaya Enterprises Pvt. Ltd., All Rights Reserved.