ETV Bharat / bharat

ಪರೇಡ್​​​ನಲ್ಲಿ ಬಿಎಸ್​ಎಫ್​ನ ಮಹಿಳಾ​ ಒಂಟೆ ತುಕಡಿ ಆಕರ್ಷಣೆ.. ಗಮನ ಸೆಳೆದ ಕನ್ನಡತಿ ಪುಣ್ಯ ಪೊನ್ನಮ್ಮ ನೇತೃತ್ವದ ಗರ್ಲ್ಸ್​ ಮಾರ್ಚಿಂಗ್

author img

By ETV Bharat Karnataka Team

Published : Jan 26, 2024, 5:03 PM IST

Updated : Jan 26, 2024, 6:11 PM IST

Female riders on decorated camels participate in R-Day parade
ಗಣರಾಜ್ಯೋತ್ಸವ ಪರೇಡ್​: ಬಿಎಸ್​ಎಫ್​ ಒಂಟೆ ತುಕಡಿಯಿಂದ ಆಕರ್ಷಕ ಪಥಸಂಚಲನ

ಕರ್ನಾಟಕ ಮತ್ತು ಗೋವಾ ನಿರ್ದೇಶನಾಲಯದ ಹಿರಿಯ ಅಧೀನ ಅಧಿಕಾರಿ ಪುಣ್ಯ ಪೊನ್ನಮ್ಮ ನೇತೃತ್ವದ ಗರ್ಲ್ಸ್​ ಮಾರ್ಚಿಂಗ್​ ಕಾಂಟಿಜೆಂಟ್​ (ಸೇನೆ)ನಲ್ಲಿ 148 ಕೆಡೆಟ್​ಗಳು ಭಾಗವಹಿಸಿದ್ದರು.

ನವದೆಹಲಿ: 75ನೇ ಗಣರಾಜ್ಯೋತ್ಸವ ಹಿನ್ನೆಲೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇಂದು ಐತಿಹಾಸಿಕ ಪರೇಡ್​ ನಡೆಯಿತು. ಇಂದು ನಡೆದ ಪಥ ಸಂಚಲನದಲ್ಲಿ ಮಹಿಳೆಯರದ್ದೇ ಪ್ರಾಬಲ್ಯವಿತ್ತು. ದೆಹಲಿಯ ಕರ್ತವ್ಯ ಪಥದಲ್ಲಿ ನಡೆದ ಆಕರ್ಷಕ ಪರೇಡ್​ನಲ್ಲಿ ಗಡಿ ಭದ್ರತಾ ಪಡೆಯ (BSF) ಒಂಟೆ ತುಕಡಿಯ ಪರೇಡ್​ ವಿಶೇಷವಾಗಿ ಅತಿಥಿಗಳ ಗಮನ ಸೆಳೆಯಿತು. ಬಹುವರ್ಣದ ಸ್ಯಾಡಲ್​ಗಳನ್ನು ಧರಿಸಿ, ಅಲಂಕೃತಗೊಂಡಿದ್ದ ಒಂಟೆಗಳ ಮೇಲೆ ಮಹಿಳಾ ಹಾಗೂ ಪುರುಷ ಸವಾರರು ಪರೇಡ್​ನಲ್ಲಿ ಸಾಗಿದರು.

ಬಿಎಸ್​ಎಫ್​ ಮಹಿಳಾ ತುಕಡಿಯ ಡೆಪ್ಯುಟಿ ಕಮಾಂಡೆಂಟ್​ ಮನೋಹರ್​ ಸಿಂಗ್​ ಖೀಚೀ ಈ ಪರೇಡ್​ನ ನೇತೃತ್ವ ವಹಿಸಿದ್ದರು. ಇನ್ಸ್​​ಪೆಕ್ಟರ್​ ​ಶೈತಾನ್ ಸಿಂಗ್​ ಹಾಗೂ ಇಬ್ಬರು ಸಬ್​ ಇನ್ಸ್​​ಪೆಕ್ಟರ್​ ಶ್ರೇಣಿಯ ಅಧಿಕಾರಿಗಳು ಸಹಕರಿಸಿದರು.​ ಕೇಂದ್ರೀಯ ಸಶಸ್ತ್ರ ಪೊಲೀಸ್​ ಪಡೆ(ಸಿಎಪಿಎಫ್​) ಮತ್ತು ದೆಹಲಿ ಪೊಲೀಸರ ತುಕಡಿಗಳನ್ನು ಮಹಿಳಾ ಸಿಬ್ಬಂದಿ ಮುನ್ನಡೆಸಿದರೆ, ಬಿಎಸ್​ಎಫ್​ ಕವಾಯತು ತಂಡವನ್ನು ಅಸಿಸ್ಟೆಂಟ್​ ಕಮಾಂಡೆಂಟ್​ ಮೋನಿಕಾ ಲಾಕ್ರಾ ಮುನ್ನಡೆಸಿದರು. ಈ ತುಕಡಿಯು ಮಹಿಳಾ ಒಂಟೆ ಸವಾರರನ್ನು ಹೆಚ್ಚು ಹೊಂದಿದ್ದು, ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರ ಪರಾಕ್ರಮವನ್ನು ಪ್ರತಿನಿಧಿಸಿತು.

ಒಂಟೆ ಪಡೆಗಳ ಮಹತ್ವ ಏನು?: ಈ ಶಿಪ್ಸ್​ ಆಫ್​ ದಿ ಡೆಸರ್ಟ್​ (ಒಂಟೆಗಳು) ರಾಜಸ್ಥಾನದ ಥಾರ್​ ಮರುಭೂಮಿ ಹಾಗೂ ರಾನ್​ ಆಫ್​ ಕಚ್​ನ ನಿರಾಶ್ರಿತ ಭೂಪ್ರದೇಶದಲ್ಲಿರುವ ಗಡಿ ಪಡೆಗಳ ಸಿಬ್ಬಂದಿಯ ವಿಶ್ವಾಸಾರ್ಹ ಸಹಚರರಾಗಿದ್ದಾರೆ. ರಾಜಸ್ಥಾನ ಹಾಗೂ ಗುಜರಾತ್​ ಗಡಿಗಳಲ್ಲಿ ಕಳ್ಳಸಾಗಣೆದಾರರು ಹಾಗೂ ಉಗ್ರಗಾಮಿಗಳನ್ನು ಯಶಸ್ವಿಯಾಗಿ ಪತ್ತೆ ಹಚ್ಚುವಲ್ಲಿ ಒಂಟೆ ಸವಾರಿ ಪಡೆಗಳು ಪ್ರಮುಖ ಪಾತ್ರವಹಿಸಿವೆ. ಭಾರತದಲ್ಲಿ ನಡೆದ ಜಿ-20 ಶೃಂಗಸಭೆಯಲ್ಲಿ ಬಿಎಸ್​ಎಫ್​ ಒಂಟೆ ತುಕಡಿಯ ಕಾರ್ಯಕ್ಷಮತೆಯನ್ನು ವಿದೇಶಿ ಪ್ರತಿನಿಧಿಗಳು ಸಹ ಶ್ಲಾಘಿಸಿದ್ದರು. ಪ್ರಪಂಚದಲ್ಲಿ ಈ ರೀತಿಯ ಏಕೈಕ ಬ್ಯಾಂಡ್​ ಆಗಿರುವ ಬಿಎಸ್​ಎಫ್​ ಒಂಟೆ ದಳ ಪರೇಡ್​ನಲ್ಲಿ "ಹಮ್​ ಹೈ ಸೀಮಾ ಸುರಕ್ಷಾ ಬಲ್​, ಬಹದುರೊ ಕಾ ದಳ್​" ಹಾಡನ್ನು ಮೊಳಗಿಸಿದವು. ಬಿಎಸ್​ಎಫ್​ ಒಂಟೆ ದಳ 1990ರ ಗಣರಾಜ್ಯೋತ್ಸವ ಪರೇಡ್​ನಲ್ಲಿ ಮೊದಲ ಬಾರಿಗೆ ಭಾಗವಹಿಸಿತ್ತು.

ಉಳಿದಂತೆ ಭಾರತೀಯ ಸೇನಾ ಪ್ರದರ್ಶನದ ಜೊತೆಗೆ ವಿವಿಧ ರಾಜ್ಯಗಳ ವಿಶೇಷ ಥೀಮ್​ಗಳನ್ನು ಹೊಂದಿದ್ದ ಟ್ಯಾಬ್ಲೋಗಳ ಪ್ರದರ್ಶನ ನಡೆಯಿತು. ಅದರಲ್ಲಿ DRDO ಟ್ಯಾಬ್ಲೋದಲ್ಲಿ ವಿಭಿನ್ನ ಥೀಮ್​ಗಳನ್ನು ಪ್ರದರ್ಶಿಸಲಾಯಿತು. ಟ್ಯಾಬ್ಲೋಗಳಲ್ಲಿ ಮ್ಯಾನ್ ಪೋರ್ಟಬಲ್ ಆಂಟಿ - ಟ್ಯಾಂಕ್ ಗೈಡೆಡ್ ಮಿಸೈಲ್ (MPATGM), ಆ್ಯಂಟಿ ಸ್ಯಾಟಲೈಟ್​ (ASAT) ಕ್ಷಿಪಣಿ, ಅಗ್ನಿ-5, ಮೇಲ್ಮೈಯಿಂದ ಮೇಲ್ಮೈಗೆ ಬ್ಯಾಲಿಸ್ಟಿಕ್ ಕ್ಷಿಪಣಿ, ಅತಿ ಕಡಿಮೆ ವ್ಯಾಪ್ತಿಯ ವಾಯು ರಕ್ಷಣಾ ವ್ಯವಸ್ಥೆ (VSHORADS), ನೌಕಾ ವಿರೋಧಿ ಹಡಗು ಕ್ಷಿಪಣಿ, ಸಣ್ಣ ಶ್ರೇಣಿ (NASM-SR), ಆ್ಯಂಟಿ ಟ್ಯಾಂಕ್ ಮಾರ್ಗದರ್ಶಿ ಕ್ಷಿಪಣಿ 'ಹೆಲಿನಾ', ತ್ವರಿತ ಪ್ರತಿಕ್ರಿಯೆ ಸರ್ಫೇಸ್​ ಟು ಏರ್​ ಕ್ಷಿಪಣಿ (QRSAM), ಅಸ್ಟ್ರಾ, ಲಘು ಯುದ್ಧ ವಿಮಾನ 'ತೇಜಸ್', 'ಉತ್ತಮ್' ಸಕ್ರಿಯ ಎಲೆಕ್ಟ್ರಾನಿಕ್ ಸ್ಕ್ಯಾನ್ಡ್ ಅರೇ ರಾಡಾರ್ (AESAR) , ಸುಧಾರಿತ ಎಲೆಕ್ಟ್ರಾನಿಕ್ ವಾರ್‌ಫೇರ್ ಸಿಸ್ಟಮ್ 'ಶಕ್ತಿ', ಸೈಬರ್ ಸೆಕ್ಯುರಿಟಿ ಸಿಸ್ಟಮ್ಸ್, ಕಮಾಂಡ್ ಕಂಟ್ರೋಲ್ ಸಿಸ್ಟಮ್ಸ್ ಮತ್ತು ಸೆಮಿ ಕಂಡಕ್ಟರ್ ಫ್ಯಾಬ್ರಿಕೇಶನ್ ಫೆಸಿಲಿಟಿ ಕುರಿತ ಮಾದರಿಗಳನ್ನು ಪ್ರದರ್ಶಿಸಲಾಯಿತು.

ಈ ಬಾರಿಯ ಪರೇಡ್​ನಲ್ಲಿ ನಾರೀ ಶಕ್ತಿ ಪ್ರದರ್ಶನ ಹೆಚ್ಚು ಗಮನ ಸೆಳೆದಿದ್ದು, ರಕ್ಷಣಾ ಸಂಶೋಧನೆಯ ಪ್ರಮುಖ ಕ್ಷೇತ್ರಗಳಲ್ಲಿ ಡಿಆರ್​ಡಿಒದ ಮಹಿಳಾ ವಿಜ್ಞಾನಿಗಳ ಅಮೂಲ್ಯ ಕೊಡುಗೆಯನ್ನು ಸಹ ಪ್ರದರ್ಶಿಸಲಾಯಿತು. ಇದರೊಂದಿಗೆ, ಎನ್‌ಸಿಸಿಯ ವಿವಿಧ ತುಕಡಿಗಳು ಸಹ ಮಹಿಳಾ ಪ್ರಾತಿನಿಧ್ಯಕ್ಕೆ ಸಾಕ್ಷಿಯಾದವು.

ಗಮನ ಸೆಳೆದ ಕನ್ನಡತಿ ಪುಣ್ಯ ಪೊನ್ನಮ್ಮ ನೇತೃತ್ವದ ತಂಡ: ಮೊದಲ ಬಾರಿಗೆ, ಉತ್ತರ ಪ್ರದೇಶ ನಿರ್ದೇಶನಾಲಯದ ಹಿರಿಯ ಅಧೀನ ಅಧಿಕಾರಿ ತನು ತೆವಾಟಿಯಾ ನೇತೃತ್ವದ ಎಲ್ಲ ಹುಡುಗಿಯರ ತ್ರಿ - ಸೇವಾ ಮಾರ್ಚಿಂಗ್ ತಂಡ ಈ ಬಾರಿಯ ಗಣರಾಜ್ಯೋತ್ಸವ ಪರೇಡ್​ನಲ್ಲಿ ಭಾಗವಹಿಸಿತ್ತು. ಕರ್ನಾಟಕ ಮತ್ತು ಗೋವಾ ನಿರ್ದೇಶನಾಲಯದ ಹಿರಿಯ ಅಧೀನ ಅಧಿಕಾರಿ ಪುಣ್ಯ ಪೊನ್ನಮ್ಮ ನೇತೃತ್ವದ 148 ಕೆಡೆಟ್​ಗಳ ಗರ್ಲ್ಸ್​ ಮಾರ್ಚಿಂಗ್​ ಕಾಂಟಿಜೆಂಟ್​ (ಸೇನೆ)ಯ ಪಥಸಂಚಲನ ಗಮನ ಸೆಳೆಯಿತು. ಎನ್​ಸಿಸಿ ಬ್ಯಾಂಡ್​ನಲ್ಲೂ ಹುಡುಗಿಯರದೇ ಪಾತಿನಿಧ್ಯವಿತ್ತು. ಹಿರಿಯ ಅಂಡರ್​ ಆಫೀಸರ್​ ಯಶಸ್ವಿಕಾ ಗೌರ್​ ಹಾಗೂ ಅಂಕಿತಾ ನೇತೃತ್ವದಲ್ಲಿ ಬಿರ್ಲಾ ಬಾಲಿಕಾ ವಿದ್ಯಾ ಪೀಠ ಪಿಲಾನಿ, ರಾಜಸ್ಥಾನ ಹಾಗೂ ಈಶಾನ್ಯ ಪ್ರದೇಶದ ಹುಡುಗಿಯರ ಸಂಯೋಜಿತ ಬ್ಯಾಂಡ್​ ಪರೇಡ್​ನಲ್ಲಿ ಪಾಲ್ಗೊಂಡಿತ್ತು.

ರಾಷ್ಟ್ರೀಯ ಸೇವಾ ಯೋಜನೆ (NSS) ತುಕಡಿಯಿಂದ 200 ಮಹಿಳಾ ಸ್ವಯಂ ಸೇವಕರು ಪಥಸಂಚಲನ ಮಾಡಿದರು. ಗುವಾಹಟಿಯ ಎನ್​ಎಸ್​ಎಸ್​ನ ಪ್ರಾದೇಶಿಕ ನಿರ್ದೇಶನಾಲಯದ ಸಿಕ್ಕಿಂನ ರಾಗಿನಾ ತಮಾಂಗ್​ ಇದರ ನೇತೃತ್ವ ವಹಿಸಿದ್ದರು.

ಇದನ್ನೂ ಓದಿ: 75ನೇ ಗಣರಾಜ್ಯೋತ್ಸವ: ಶಿವಮೊಗ್ಗದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದ ಸಚಿವ ಮಧು ಬಂಗಾರಪ್ಪ

Last Updated :Jan 26, 2024, 6:11 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.