ETV Bharat / bharat

May Day 2024: ಇಂದು ವಿಶ್ವ ಕಾರ್ಮಿಕರ ದಿನ: ಈ ದಿನದ ಮಹತ್ವವೇನು? - May Day 2024

author img

By ETV Bharat Karnataka Team

Published : May 1, 2024, 6:13 AM IST

May Day 2024 The Day Dedicated to Celebrate Working Class
May Day 2024: ಇಂದು ವಿಶ್ವ ಕಾರ್ಮಿಕರ ದಿನ: ಈ ದಿನದ ಮಹತ್ವವೇನು?

ಮೇ ದಿನವನ್ನು ಅಂತಾರಾಷ್ಟ್ರೀಯ ಕಾರ್ಮಿಕರ ದಿನ ಅಥವಾ ಕಾರ್ಮಿಕರ ದಿನ ಎಂದು ಕರೆಯುತ್ತಾರೆ, ಕಾರ್ಮಿಕ ವರ್ಗದ ಕೊಡುಗೆಯನ್ನು ಸ್ಮರಿಸಲು ಮತ್ತು ತೀವ್ರ ಮತ್ತು ಅಸುರಕ್ಷಿತ ಪರಿಸರದಲ್ಲಿ ಕೆಲಸ ಮಾಡುವವರ ಕಷ್ಟಗಳ ಹೋರಾಡಲು ಪ್ರಪಂಚದಾದ್ಯಂತ ಈ ದಿನವನ್ನು ಆಚರಿಸಲಾಗುತ್ತದೆ.

ಹೈದರಾಬಾದ್​: ಶ್ರಮಜೀವಿಗಳ ಕೆಲಸವನ್ನು ಗೌರವಿಸುವ ಹಾಗೂ ಅವರ ಕಷ್ಟಗಳನ್ನು ಸ್ಮರಿಸುವ ಸಲುವಾಗಿ ಮೇ 1ರಂದು ಜಾಗತಿಕವಾಗಿ 'ಅಂತಾರಾಷ್ಟ್ರೀಯ ಕಾರ್ಮಿಕರ ದಿನ'ವನ್ನಾಗಿ ಆಚರಿಸಲಾಗುತ್ತದೆ. ಇದನ್ನು ಮೇ ಡೇ, ಲೇಬರ್‌ ಡೇ ಹಾಗೂ ವರ್ಕರ್ಸ್‌ ಡೇ ಎಂತಲೂ ಕರೆಯಲಾಗುತ್ತದೆ. ಕಾರ್ಮಿಕ ವರ್ಗದ ಶ್ರಮ ಮತ್ತು ಸಮರ್ಪಣೆಯನ್ನು ಗುರುತಿಸುವುದು, ಕಾರ್ಮಿಕರ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಶೋಷಣೆಯಿಂದ ರಕ್ಷಿಸುವುದು ಕಾರ್ಮಿಕ ದಿನದ ಉದ್ದೇಶವಾಗಿದೆ,

ಈ ಆಚರಣೆ ಶುರುವಾಗಿದ್ದು ಹೇಗೆ?: 1886ರಲ್ಲಿ ಅಮೆರಿಕದಲ್ಲಿ ಮೊದಲ ಬಾರಿಗೆ ಕಾರ್ಮಿಕರ ದಿನ ಆಚರಿಸಲಾಯಿತು. ದಿನಕ್ಕೆ ಕಾರ್ಮಿಕರಿಗೆ 8 ಗಂಟೆ ಕೆಲಸದ ಅವಧಿಯನ್ನು ನಿಗದಿ ಮಾಡಬೇಕು ಎಂಬ ಆಗ್ರಹದೊಂದಿಗೆ ಶುರುವಾದ ಚಳವಳಿಗೆ ಯಶಸ್ಸು ಸಿಕ್ಕಿತ್ತು. ಇದೇ ಹೋರಾಟದ ಕಿಚ್ಚಿನಲ್ಲಿ ಉದಯಿಸಿದ್ದೇ ಕಾರ್ಮಿಕರ ದಿನಾಚರಣೆ. ಭಾರತದಲ್ಲಿ ಈ ಆಚರಣೆ ಆರಂಭವಾಗಿದ್ದು 1923ರಲ್ಲಿ. ವಿಶ್ವದ ನಾನಾ ಭಾಗಗಳಲ್ಲಿ ಕಾರ್ಮಿಕರ ದಿನಾಚರಣೆಯನ್ನು ಆಚರಿಸುವ ಮೂಲಕ ಶ್ರಮಜೀವಿಗಳಿಗೆ ಕೃತಜ್ಞತೆ ಸಲ್ಲಿಸಲಾಗುತ್ತದೆ.

ಮೇ 1 ರಂದು ಸಮಾಜಕ್ಕಾಗಿ ಕಾರ್ಮಿಕರ ಕೊಡುಗೆ ಹಾಗೂ ತ್ಯಾಗವನ್ನು ಸ್ಮರಿಸಲಾಗುತ್ತದೆ. ಭಾರತದಲ್ಲಿ ಇದನ್ನು 'ಮೇ ದಿನ' ಎಂದು ಕರೆಯುತ್ತಾರೆ. ದೇಶದಲ್ಲಿ ಮೊದಲ ಕಾರ್ಮಿಕ ದಿನವನ್ನು ಮೇ 1, 1923 ರಂದು ಮದ್ರಾಸಿನಲ್ಲಿ ಆಚರಿಸಲಾಯಿತು. ಇದನ್ನು ಕಾಮ್ರೇಡ್ ಸಿಂಗರವೇಲರ್ ನೇತೃತ್ವದ ಲೇಬರ್ ಕಿಸಾನ್ ಪಾರ್ಟಿ ಆಫ್ ಹಿಂದೂಸ್ತಾನ್ ಆರಂಭಿಸಿತ್ತು. ಅಂದಿನಿಂದ ಈವರೆಗೆ ಭಾರತದಲ್ಲಿ ಕಾರ್ಮಿಕರ ದಿನವನ್ನು ಆಚರಿಸಲಾಗುತ್ತಿದೆ ಮತ್ತು ರಾಷ್ಟ್ರೀಯ ರಜೆ ಘೋಷಿಸಲಾಗಿದೆ. ಇದು 141ನೇ ವರ್ಷದ ಅಂತಾರಾಷ್ಟ್ರೀಯ ಕಾರ್ಮಿಕರ ದಿನವಾಗಿದೆ.

ಭಾರತದ ವಿವಿಧ ರಾಜ್ಯಗಳಲ್ಲಿ ವಿವಿಧ ಹೆಸರುಗಳಲ್ಲಿ ಕಾರ್ಮಿಕ ದಿನವನ್ನು ಆಚರಿಸಲಾಗುತ್ತದೆ. ಉದಾಹರಣೆಗೆ ಹಿಂದಿಯಲ್ಲಿ 'ಅಂತಾರಾಷ್ಟ್ರೀಯ ಶ್ರಮಿಕ್ ದಿವಸ್', ಕಾರ್ಮಿಕ ದಿನಚರಣೆ (ಕನ್ನಡ), ಕಾರ್ಮಿಕ ದಿನೋತ್ಸವಮ್ (ತೆಲುಗು), ಕಮ್‌ಗರ್ ದಿವಸ್ (ಮರಾಠಿ), ಉಜೈಪಾಲರ್ ದೀನಂ (ತಮಿಳು), ತೊಝಿಲಾಲಿ ದಿನಂ (ಮಲಯಾಳಂ), ಮತ್ತು ಶ್ರೋಮಿಕ್ ದಿಬೋಶ್ (ಬಂಗಾಳಿ) ಎಂದು ಕರೆಯುತ್ತಾರೆ.

ಕಾರ್ಮಿಕ ದಿನದ ಇತಿಹಾಸ: ಅಮೆರಿಕದ ಕಾರ್ಮಿಕರು, ಕಠೋರ ಕಾರ್ಮಿಕ ನಿಯಮ, ಕಾರ್ಮಿಕರ ಹಕ್ಕುಗಳ ಉಲ್ಲಂಘನೆ ಮತ್ತು ಭಯಾನಕ ಕೆಲಸದ ವೇಳೆಯ ವಿರುದ್ಧ ಪ್ರತಿಭಟನೆ ಆರಂಭಿಸಿದರು. ದಿನಕ್ಕೆ 8 ಗಂಟೆ ಕೆಲಸ ನಿಗದಿಗೊಳಿಸಬೇಕೆಂಬ ಈ ಚಳವಳಿ 1860ರಿಂದ ಆರಂಭವಾಯಿತು. ಚಳವಳಿಗಾಗಿ ಅಮೆರಿಕ ಹಾಗೂ ಕೆನಡಾದಲ್ಲಿ ಹಲವು ಕಾರ್ಮಿಕ ಸಂಘಟನೆಗಳು ಅಸ್ತಿತ್ವಕ್ಕೆ ಬಂದವು.

ದಿನಕ್ಕೆ 10 ರಿಂದ 14 ಗಂಟೆಗಳ ಕಾಲ ಬಲವಂತವಾಗಿ ದುಡಿಸಿಕೊಳ್ಳುವುಕ್ಕೆ ವಿವಿಧ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿದವು. ಷಿಕಾಗೋ ನಗರ ಸಾವಿರಾರು ಕಾರ್ಮಿಕ ಸಂಘಟನೆಗಳ ಕೇಂದ್ರವಾಗಿ ಮಾರ್ಪಟ್ಟಿತು. 1886 ಮೇ 1 ಕಾರ್ಮಿಕ ಹೋರಾಟದ ಇತಿಹಾಸದಲ್ಲಿ ಒಂದು ಮಹತ್ವದ ಘಟ್ಟ. ಲಕ್ಷಾಂತರ ಮಂದಿ ಕಾರ್ಮಿಕರು 8 ಗಂಟೆಗಳ ಕೆಲಸದ ನಿಗದಿಗೆ ಪ್ರತಿಭಟನೆ ಪ್ರಾರಂಭಿಸಿದ್ದರು. ಈ ಹೋರಾಟದಲ್ಲಿ ಎಷ್ಟೋ ಕಾರ್ಮಿಕರು ಪ್ರಾಣ ತ್ಯಾಗ ಮಾಡಬೇಕಾಯಿತು. ಹೀಗಾಗಿ 1916 ರವರೆಗೂ ಅಮೆರಿಕ 8 ಗಂಟೆಗಳ ಕೆಲಸ ಸಮಯವನ್ನು ನಿಗದಿಗೊಳಿಸಿತು. ಕಾರ್ಮಿಕ ಹೋರಾಟಕ್ಕೆ ಸಿಕ್ಕ ಯಶಸ್ಸಿನ ನೆನಪಿಗಾಗಿ ಹಾಗೂ ಮೃತ ಕಾರ್ಮಿಕರ ಗೌರವಾರ್ಥವಾಗಿ ಮೇ 1 ರಂದು ಕಾರ್ಮಿಕರ ದಿನವಾಗಿ ಆಚರಿಸಲಾಗುತ್ತಿದೆ. ಈ ಬಲಿದಾನಗಳ ಫಲವಾಗಿ ಕೆಲಸದ ಅವಧಿ ಇಂದು ವಿಶ್ವದ ಅನೇಕ ದೇಶಗಳಲ್ಲಿ 8 ಗಂಟೆಗಳಿಗೆ ಮಿತಿಗೊಂಡಿದೆ.

ಕಾರ್ಮಿಕರ ದಿನದ ಶುಭ ಸಂದೇಶಗಳು ಇಲ್ಲಿವೆ:

  • ಕಠಿಣ ಪರಿಶ್ರಮ ನಿಮ್ಮನ್ನು ಎಂದಿಗೂ ಸೋಲುವುದಕ್ಕೆ ಬಿಡುವುದಿಲ್ಲ.
  • ಕಠಿಣ ಪರಿಶ್ರಮ ಮತ್ತು ಸಮರ್ಪಣಾ ಭಾವದಿಂದ ಕೆಲಸ ಮಾಡುವ ಪ್ರತಿಯೊಬ್ಬರಿಗೂ ಗೌರವ ಸಲ್ಲಿಸುವ ದಿನ ಇದಾಗಿದೆ.
  • ಒಬ್ಬ ಕಾರ್ಮಿಕ ಪ್ರತಿ ರಾಷ್ಟ್ರಕ್ಕೂ ದೊಡ್ಡ ಆಸ್ತಿ ಮತ್ತು ಅದ್ಭುತಗಳ ನಿರ್ಮಾತೃ.
  • ದುಡಿಮೆ ಮನುಷ್ಯನ ಘನತೆ ಮತ್ತು ಸೃಜನಶೀಲತೆಯನ್ನು ವ್ಯಕ್ತಪಡಿಸುವ ಏಣಿ. ಜೀವನದ ಕಠಿಣ ಸವಾಲುಗಳನ್ನು ಮೆಟ್ಟಿ ನಿಂತು ಶ್ರಮದಲ್ಲಿಯೇ ಬದುಕಿನ ಖುಷಿ ಕಾಣುವ ಎಲ್ಲ ಕಾರ್ಮಿಕರಿಗೂ ನಿಮ್ಮ ದಿನದ ಶುಭಾಶಯಗಳು.

ಇದನ್ನು ಓದಿ: ಜಗದೀಶ್ ಶೆಟ್ಟರ್ ಗೆಲ್ಲಿಸಿದರೆ ಕೇಂದ್ರ ಸಚಿವರಾಗುತ್ತಾರೆ: ಗಾಲಿ ಜನಾರ್ಧನ ರೆಡ್ಡಿ - Janardhana Reddy

ETV Bharat Logo

Copyright © 2024 Ushodaya Enterprises Pvt. Ltd., All Rights Reserved.