ಇಂದು ಸಿಎಂ ಯೋಗಿ ಆದಿತ್ಯನಾಥ್ ಜನ್ಮದಿನ: ಗೋರಕನಾಥ ದೇವಾಲಯದಲ್ಲಿ ವಿಶೇಷ ಪ್ರಾರ್ಥನೆ

By

Published : Jun 5, 2023, 10:04 AM IST

thumbnail

ಗೋರಖ್‌ಪುರ(ಉತ್ತರ ಪ್ರದೇಶ): ಇಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಜನ್ಮದಿನ. ಈ ಹಿನ್ನೆಲೆ ಗೋರಖ್‌ಪುರದ ಗೋರಕನಾಥ ದೇವಾಲಯದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. 5 ಜೂನ್ 1972 ರಂದು ಜನಿಸಿದ ಯೋಗಿ ಆದಿತ್ಯನಾಥ್ ಅವರು ಭಾರತೀಯ ಹಿಂದೂ ಸನ್ಯಾಸಿ ಮತ್ತು ರಾಜಕಾರಣಿ. 19 ಮಾರ್ಚ್ 2017 ರಿಂದ ಉತ್ತರ ಪ್ರದೇಶದ 22 ನೇ ಮತ್ತು ಪ್ರಸ್ತುತ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. 2022 ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯ ಸಾಧಿಸಿದ ನಂತರ ಅವರು ಎರಡನೇ ಅವಧಿಗೆ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದರು.

ಯೋಗಿ ಆದಿತ್ಯನಾಥ್ ಬಗ್ಗೆ ಕೆಲವು ಕುತೂಹಲಕಾರಿ ಸಂಗತಿಗಳು ಇಲ್ಲಿವೆ:

  • ಯೋಗಿ ಆದಿತ್ಯನಾಥ್ ಅವರು ಉತ್ತರ ಪ್ರದೇಶದ ಪೌರಿ ಗರ್ವಾಲ್‌ನಲ್ಲಿರುವ ಪಂಚೂರ್ ಗ್ರಾಮದಲ್ಲಿ 5 ಜೂನ್ 1972 ರಂದು ಜನಿಸಿದರು. ಅವರ ಮೊದಲ ಹೆಸರು ಅಜಯ್ ಮೋಹನ್ ಬಿಷ್ಟ್.
  • ಗಣಿತಶಾಸ್ತ್ರದಲ್ಲಿ ಪದವಿ ಪಡೆದಿದ್ದಾರೆ.
  • 1990ರ ಸುಮಾರಿಗೆ ಅಯೋಧ್ಯಾ ರಾಮ ಮಂದಿರ ಚಳವಳಿಗೆ ಸೇರಲು ತಮ್ಮ ಮನೆಯನ್ನು ತೊರೆದರು.
  • 1993 ರಲ್ಲಿ ತಮ್ಮ 21 ನೇ ವಯಸ್ಸಿನಲ್ಲಿ ತಮ್ಮ ಕುಟುಂಬವನ್ನು ತ್ಯಜಿಸಿದರು. ನಂತರ ಅವರು ಗೋರಖನಾಥ ಮಠದ ಅಂದಿನ ಪ್ರಧಾನ ಅರ್ಚಕರಾದ ಮಹಂತ್ ಅವೈದ್ಯನಾಥ್ ಅವರ ಶಿಷ್ಯರಾದರು.
  • ಆದಿತ್ಯನಾಥ್ 26ನೇ ವಯಸ್ಸಿನಲ್ಲಿ 12ನೇ ಲೋಕಸಭೆಯ ಕಿರಿಯ ಸದಸ್ಯರಾಗಿದ್ದರು.
  • ಅವರು ಸತತ ಐದು ಬಾರಿ ಗೋರಖ್‌ಪುರದಿಂದ ಸಂಸತ್ತಿಗೆ ಆಯ್ಕೆಯಾಗಿದ್ದಾರೆ (1998, 1999, 2004, 2009 ಮತ್ತು 2014 ಚುನಾವಣೆಗಳಲ್ಲಿ)
  • ಲೋಕಸಭೆಯಲ್ಲಿ ಆದಿತ್ಯನಾಥ್ ಅವರ ಹಾಜರಾತಿ 77%. ಅವರು 284 ಪ್ರಶ್ನೆಗಳನ್ನು ಕೇಳಿದ್ದಾರೆ. 56 ಚರ್ಚೆಗಳಲ್ಲಿ ಭಾಗವಹಿಸಿದ್ದಾರೆ.
  • 16ನೇ ಲೋಕಸಭೆಯಲ್ಲಿ ಮೂರು ಖಾಸಗಿ ಸದಸ್ಯ ಮಸೂದೆಗಳನ್ನು ಮಂಡಿಸಿದ್ದಾರೆ.
  • ದಶಕಕ್ಕೂ ಹೆಚ್ಚು ಕಾಲ ಬಿಜೆಪಿಯೊಂದಿಗೆ ಸಂಬಂಧ ಹೊಂದಿದ್ದಾರೆ.
  • 3 ಜನವರಿ 2016 ರಂದು, ಪಾಕಿಸ್ತಾನಿ ಭಯೋತ್ಪಾದಕರು ಪಠಾಣ್‌ಕೋಟ್‌ನಲ್ಲಿರುವ ಭಾರತೀಯ ವಾಯುನೆಲೆಯ ಮೇಲೆ ಭಯೋತ್ಪಾದಕ ದಾಳಿ ನಡೆಸಿದ ಒಂದು ದಿನದ ನಂತರ, ಆದಿತ್ಯನಾಥ್ ಪಾಕಿಸ್ತಾನವನ್ನು ಸೈತಾನನಿಗೆ ಹೋಲಿಸಿದ್ದರು.
  • 7 ಮುಸ್ಲಿಂ ಬಹುಸಂಖ್ಯಾತ ರಾಷ್ಟ್ರಗಳ ನಾಗರಿಕರು ಯುನೈಟೆಡ್ ಸ್ಟೇಟ್ಸ್‌ಗೆ ಪ್ರವೇಶಿಸುವುದನ್ನು ನಿಷೇಧಿಸಿದ ಆಗಿನ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನಿರ್ಧಾರವನ್ನು ಆದಿತ್ಯನಾಥ್ ಶ್ಲಾಘಿಸಿದ್ದರು ಮತ್ತು ಭಯೋತ್ಪಾದನೆಯನ್ನು ಎದುರಿಸಲು ಭಾರತವು ಇದೇ ರೀತಿಯ ನೀತಿಗಳನ್ನು ಅಳವಡಿಸಿಕೊಳ್ಳುವಂತೆ ಕರೆ ನೀಡಿದ್ದರು.

ಯೋಗಿ ಆದಿತ್ಯನಾಥ್ ಅವರು 1998ರಲ್ಲಿ ಗೋರಖ್‌ಪುರದ ಅತ್ಯಂತ ಕಿರಿಯ ಸಂಸದರಾಗಿ ತಮ್ಮ ರಾಜಕೀಯ ಪ್ರಯಾಣವನ್ನು ಪ್ರಾರಂಭಿಸಿದರು. ಅವರು 1998 ರಿಂದ 2017 ರವರೆಗೆ ಸತತ ಬಾರಿ ಗೋರಖ್‌ಪುರ ಸಂಸದರಾಗಿದ್ದರು. ಆದಿತ್ಯನಾಥ್ ಅವರು ತಮ್ಮ ಪೂರ್ಣ ಐದು ವರ್ಷಗಳ ಅವಧಿಯ ನಂತರ ಸತತವಾಗಿ ಎರಡನೇ ಬಾರಿಗೆ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಜ್ಯದ ಆಡಳಿತದ ಚುಕ್ಕಾಣಿ ಹಿಡಿದಿದ್ದು, ರಾಜಕೀಯದಲ್ಲಿ ತ್ವರಿತ ಪ್ರಗತಿ ಸಾಧಿಸಿದ್ದಾರೆ.  

ಇದನ್ನೂ ಓದಿ: ಕರ್ನಾಟಕ, ಉತ್ತರ ಪ್ರದೇಶದ ಸಂಬಂಧ ರಾಮ-ಹನುಮನ ಸಂಬಂಧ ಇದ್ದಂತೆ: ಯೋಗಿ ಅದಿತ್ಯನಾಥ

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.