ಆಲಮಟ್ಟಿ ಜಲಾಶಯ ಭರ್ತಿಗೆ ಕ್ಷಣಗಣನೆ : ಅಧಿಕ ಮಾಸದ ಹಿನ್ನೆಲೆ ಬಾಗಿನ ಅರ್ಪಣೆ ವಿಳಂಬ?

By

Published : Aug 7, 2023, 12:43 PM IST

thumbnail

ವಿಜಯಪುರ : ಮಹಾರಾಷ್ಟ್ರದ ಪಶ್ಚಿಮ ಭಾಗದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಜಿಲ್ಲೆಯ ನಿಡಗುಂದಿ ತಾಲೂಕಿನ ಲಾಲ್ ಬಹದ್ದೂರ್ ಶಾಸ್ತ್ರಿ (ಆಲಮಟ್ಟಿ ) ಜಲಾಶಯ ಬಹುತೇಕ ಭರ್ತಿಯಾಗಿದೆ. ಕೇವಲ ಅರ್ಧ ಮೀಟರ್ ನೀರು ಸಂಗ್ರಹವಾದ್ರೆ ಜಲಾಶಯ ಸಂಪೂರ್ಣ ಭರ್ತಿಯಾಗಲಿದೆ. 123.081 ಟಿಎಂಸಿ ಸಾಮರ್ಥ್ಯದ ಜಲಾಶಯದಲ್ಲಿ ಸೋಮವಾರ ಬೆಳಗ್ಗೆಯವರೆಗೆ 519.60 ಮೀಟರ್ ಅಂದರೆ121.262 ಟಿಎಂಸಿ ನೀರು ಸಂಗ್ರಹವಾಗಿದೆ. ಒಳಹರಿವು 66.750 ಕ್ಯೂಸೆಕ್ ಇದ್ದು, ಹೊರ ಹರಿವು ಹೆಚ್ಚಿಸಲಾಗಿದೆ. ಇಂದು ಸಂಜೆಗೆ ಜಲಾಶಯ ಸಂಪೂರ್ಣ ಭರ್ತಿಯಾಗಲಿದೆ ಎಂದು ಕೃಷ್ಣ ಭಾಗ್ಯ ಜಲ ನಿಗಮ ಮಂಡಳಿ ಮೂಲಗಳು ಖಚಿತ ಪಡಿಸಿವೆ.

ಬಾಗಿನ ಅರ್ಪಣೆ ವಿಳಂಬ? : ಸದ್ಯಕ್ಕೆ ಆಲಮಟ್ಟಿ ಜಲಾಶಯ ಭರ್ತಿಗೆ ಕ್ಷಣಗಣನೆ ಆರಂಭವಾಗಿದೆ. ಸಂಪ್ರದಾಯದಂತೆ ನಾಡಿನ ದೊರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದ ಪರವಾಗಿ ಕೃಷ್ಣೆಗೆ ಬಾಗಿನ ಅರ್ಪಿಸಬೇಕು. ಆದರೆ, ಸದ್ಯಕ್ಕೆ ಅಧಿಕ ಮಾಸ ನಡೆಯುತ್ತಿರುವ ಕಾರಣ ಬಾಗಿನ ಅರ್ಪಣೆ ಆಗಸ್ಟ್16 ರ ನಂತರವೇ ಎನ್ನುವ ಮಾತು ಕೇಳಿ ಬರುತ್ತಿದೆ. ಹಾಗೆಯೇ, ಶ್ರಾವಣ ಮಾಸದಲ್ಲಿ ಬಾಗಿನ ಅರ್ಪಿಸುವುದು ಶುಭ ಎನ್ನುವುದು ಜ್ಯೋತಿಷ್ಯರ ಅಭಿಪ್ರಾಯ.  

ಇದನ್ನೂ ಓದಿ : ಕೃಷ್ಣೆಯ ಕಳೆ ಹೆಚ್ಚಿಸಿದ 'ಜಲರಾಶಿ' : ಆಲಮಟ್ಟಿ ಜಲಾಶಯ ಭರ್ತಿಗೆ ದಿನಗಣನೆ

ವಿದ್ಯುತ್ ಉತ್ಪಾದನೆ : ಆಲಮಟ್ಟಿ ಜಲಾಶಯಕ್ಕೆ ಭಾರಿ ಪ್ರಮಾಣದಲ್ಲಿ ನೀರು ಹರಿದು ಬರುತ್ತಿರುವ ಕಾರಣ ಜುಲೈ 21ರಿಂದಲೇ ಜಲಾಶಯದ 6 ವಿದ್ಯುತ್ ಘಟಕಗಳಿಂದ ವಿದ್ಯುತ್ ಉತ್ಪಾದನೆ ಆರಂಭಿಸಲಾಗಿದೆ. ಪ್ರತಿ ದಿನ 42 ಸಾವಿರ ಕ್ಯೂಸೆಕ್ ನೀರು ವಿದ್ಯುತ್ ಉತ್ಪಾದನೆಗೆ ಬಳಕೆಯಾಗುತ್ತಿದೆ. ಜು. 21ರಿಂದ ಆ. 7ರ ವರೆಗೆ ಇಲ್ಲಿಯವರೆಗೆ 80 ಮಿಲಿಯನ್ ಯೂನಿಟ್ ವಿದ್ಯುತ್ ಉತ್ಪಾದನೆ ಮಾಡಲಾಗಿದೆ. ಇದರ ಸಾಮರ್ಥ್ಯ 290 ಮೆಗಾ ವ್ಯಾಟ್ ಇದೆ. ಸದ್ಯಕ್ಕೆ ಉತ್ಪಾದನೆಯಾದ ವಿದ್ಯುತ್, ಪವರ್ ಗ್ರೀಡ್​ಗೆ ಸರಬರಾಜು ಆಗುತ್ತಿದೆ. ಅಲ್ಲಿಂದ ಅವಶ್ಯವಿರುವ ಕಡೆ ಸರಬರಾಜು ಮಾಡಲಾಗುತ್ತಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.