ETV Bharat / state

ಶಾಪವಾದ ಮಳೆ: ಕೈಗೂಡದ ಬೆಳೆ ಸಮೀಕ್ಷೆಯಿಂದ ಕಂಗಾಲಾದ ರೈತರು

author img

By

Published : Oct 20, 2020, 4:38 PM IST

Farmers Upset about crop survey
ಬೆಳೆ ಸಮೀಕ್ಷೆಯ ವಿಳಂಬ ನೀತಿಗೆ ಅಸಮಾಧಾನ ವ್ಯಕ್ತಪಡಿಸುತ್ತಿರುವ ರೈತರು

ರಾಜ್ಯ ಸರ್ಕಾರ ಈ ಕೂಡಲೇ ಬೆಳೆ ಸಮೀಕ್ಷೆ ಮಾಡಿ ವರದಿ ಕಳುಹಿಸಲು ಸೂಚಿಸಿದ್ದರೂ ಅಧಿಕಾರಿಗಳು ಮಾತ್ರ ಸಮೀಕ್ಷೆ ನಡೆಸುವಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಮುದ್ದೇಬಿಹಾಳ ತಾಲೂಕಿನ ರೈತರು ಅಸಮಾಧಾನ ಹೊರಹಾಕಿದ್ದಾರೆ.

ಮುದ್ದೇಬಿಹಾಳ : ತಾಲೂಕಿನಲ್ಲಿ ಕಳೆದೊಂದು ತಿಂಗಳಿನಿಂದ ಸುರಿಯುತ್ತಿರುವ ಭಾರಿ ಮಳೆಯಿಂದ ಸಾವಿರಾರು ರೈತರ ಜಮೀನುಗಳಲ್ಲಿ ಬಿತ್ತನೆ ಮಾಡಿದ್ದ ಬೆಳೆ ಸಂಪೂರ್ಣ ನಾಶವಾಗಿದೆ. ಸಾಲದೆಂಬಂತೆ ಬೆಳೆ ಸಮೀಕ್ಷೆ ಮಾಡಬೇಕಿದ್ದ ಸಂಬಂಧಿತ ಅಧಿಕಾರಿಗಳು ವಿಳಂಬ ಧೋರಣೆ ಅನುಸರಿಸುತ್ತಿರುವುದರಿಂದ ಸ್ಥಳೀಯ ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬಿಟ್ಟು ಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ಈಗಾಗಲೇ ನಮ್ಮ ಬೆಳೆಗಳು ನೆಲಕಚ್ಚಿವೆ. ಬಿತ್ತನೆ ಮಾಡಿದ್ದ ಫಸಲು ಕೈಗೆ ಬರುತ್ತದೆ ಎಂಬ ಆಸೆಯಿಂದ ಕುಳಿತಿದ್ದ ನಮಗೆ ಮಳೆ ಒಂದೆಡೆ ಶಾಪವಾಗಿ ಕಾಡಿದರೆ, ಬೆಳೆ ಸಮೀಕ್ಷೆ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸಬೇಕಾದ ಅಧಿಕಾರಿಗಳ ವಿಳಂಬ ನೀತಿ ನಮ್ಮನ್ನು ಮತ್ತಷ್ಟು ಸಂಕಷ್ಟಕ್ಕೆ ತಳ್ಳಿದೆ. ಇದರಿಂದ ಕಂಗಾಲಾಗಿರುವ ನಮ್ಮ ಪಾಡು ಹೇಳ ತೀರದಾಗಿದೆ ಎಂದು ಸ್ಥಳೀಯ ರೈತ ಮುಖಂಡರು ತಮ್ಮ ಅಳಲು ತೋಡಿಕೊಂಡಿದ್ದಾರೆ.

ರಾಜ್ಯ ಸರ್ಕಾರ ಈ ಕೂಡಲೇ ಬೆಳೆ ಸಮೀಕ್ಷೆ ಮಾಡಿ ವರದಿ ಕಳುಹಿಸಲು ಸೂಚಿಸಿದ್ದರೂ ಅಧಿಕಾರಿಗಳು ಮಾತ್ರ ಸಮೀಕ್ಷೆ ನಡೆಸುವಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ. ಕೃಷಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಜಂಟಿಯಾಗಿ ಬೆಳೆಹಾನಿ ಸಮೀಕ್ಷೆ ಮಾಡಬೇಕಿತ್ತು. ಆದರೆ, ಎರಡೂ ಇಲಾಖೆಯ ಅಧಿಕಾರಿಗಳು ಅವರಿವರ ಮೇಲೆ ಹಾಕುತ್ತಿರುವುದರಿಂದ ಈ ಕಾರ್ಯ ಸಂಪೂರ್ಣ ಹಿನ್ನಡೆ ಅನುಭವಿಸಿದೆ. ಇದರಿಂದ ಹಿಂಗಾರು ಬಿತ್ತನೆ ಮಾಡಬೇಕಾದ ರೈತರು ಬೆಳೆಹಾನಿ ಪರಿಹಾರಕ್ಕಾಗಿ ಸಮೀಕ್ಷಾ ತಂಡದ ಆಗಮನಕ್ಕೆ ಕಾದು ಕುಳಿತುಕೊಳ್ಳುವಂತಾಗಿದೆ ಎಂದು ರೈತರು ಆರೋಪಿಸುತ್ತಿದ್ದಾರೆ.

ಬೆಳೆ ಸಮೀಕ್ಷೆಯ ವಿಳಂಬ ನೀತಿಗೆ ಅಸಮಾಧಾನ ವ್ಯಕ್ತಪಡಿಸುತ್ತಿರುವ ರೈತರು

ಎರಡೂ ಇಲಾಖೆಯಲ್ಲೂ ಸಿಬ್ಬಂದಿ ಕೊರತೆ ಇದೆ. ಹಾಗಾಗಿ ಈ ಕಾರ್ಯ ವಿಳಂಬವಾಗುತ್ತಿದೆ. ಈ ಬಗ್ಗೆ ಶೀಘ್ರದಲ್ಲೇ ಸಂಬಂಧಿತ ಅಧಿಕಾರಿಗಳ ಜೊತೆ ಸಭೆ ನಡೆಸಿ ಒಂದು ತೀರ್ಮಾನಕ್ಕೆ ಬರಲಾಗುತ್ತದೆ ಎಂದು ತಹಶೀಲ್ದಾರ್​​ ಜಿ.ಎಸ್.ಮಳಗಿ ಭರವಸೆ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.