ETV Bharat / state

ಕಾಂಗ್ರೆಸ್ ಸರ್ಕಾರದಲ್ಲಿ ಏನೋ ಗಡಿಬಿಡಿ ಇದೆ, ಅದನ್ನು ಹೇಳುವ ಪರಿಸ್ಥಿತಿಯಲ್ಲಿ ನಾನೂ ಇಲ್ಲ: ಯತ್ನಾಳ್

author img

By ETV Bharat Karnataka Team

Published : Sep 1, 2023, 5:17 PM IST

ಶಾಸಕ ಬಸನಗೌಡ ಪಾಟೀಲ ಯತ್ನಾಳ್
ಶಾಸಕ ಬಸನಗೌಡ ಪಾಟೀಲ ಯತ್ನಾಳ್

ಕಾಂಗ್ರೆಸ್​ ಸರ್ಕಾರದ ಬಹಳಷ್ಟು ಜನಪ್ರತಿನಿಧಿಗಳಿಗೆ ಅಸಮಾಧಾನವಿದೆ ಎಂಬುದು ಮೇಲ್ನೋಟಕ್ಕೆ ಕಾಣಿಸುತ್ತಿದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.

ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹೇಳಿಕೆ

ವಿಜಯಪುರ : ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಏನೋ ಗಡಿಬಿಡಿ ಇದೆ ಎಂದು ಮೊದಲಿನಿಂದಲೇ ಹೇಳಿಕೊಂಡು ಬಂದಿದ್ದೇನೆ. ಇದನ್ನು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್​ ಅವರ ಹೇಳಿಕೆ ಪುಷ್ಟೀಕರಿಸುತ್ತಿದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್​ ಹೇಳಿದ್ದಾರೆ.

ವಿಜಯಪುರ ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ 40-45 ಶಾಸಕರು ಸಂಪರ್ಕದಲ್ಲಿದ್ದಾರೆ ಎನ್ನುವ ಬಿ.ಎಲ್.ಸಂತೋಷ್ ಹೇಳಿಕೆ ಸಮರ್ಥಿಸಿಕೊಂಡ ಅವರು, ನಾನು ಹೇಳಿದಂತೆ ಏನೋ ಗಡಿಬಿಡಿ ಇದೆ. ಆದರೆ ಸದ್ಯ ಅದನ್ನು ಹೇಳುವ ಪರಿಸ್ಥಿತಿಯಲ್ಲಿ ನಾನೂ ಸಹ ಇಲ್ಲ ಎಂದರು.

ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಸಾಕಷ್ಟು ಜನಪ್ರತಿನಿಧಿಗಳಿಗೆ ಅಸಮಾಧಾನವಿದೆ. ಸಚಿವರು ಬೆಲೆ ಕೊಡುತ್ತಿಲ್ಲ. ಗ್ಯಾರಂಟಿ ಯೋಜನೆಗೆ ಪ್ರತಿ ತಿಂಗಳು 52 ಸಾವಿರ ಕೋಟಿ ರೂ. ವೆಚ್ಚ ಮಾಡಬೇಕಾಗುತ್ತದೆ. ಅದನ್ನು ಭರ್ತಿ ಮಾಡಲು ವಿವಿಧ ರೀತಿಯ ತೆರಿಗೆ ಹಾಕುತ್ತಿದ್ದಾರೆ. ಈಗಾಗಲೇ ವಿದ್ಯುತ್ ದರ ಪ್ರತಿ ಯೂನಿಟ್​ಗೆ 1 ರೂ. 10 ಪೈಸೆ ಏರಿಸಲಾಗಿದೆ ಎಂದು ದೂರಿದರು.

ಸದ್ಯ ಪರಿಸ್ಥಿತಿ ನೋಡಿದರೆ ವಿರೋಧ ಪಕ್ಷದ ಶಾಸಕರಿಗೆ ಅನುದಾನ ನೀಡುವುದು ದೂರದ ಮಾತು. ತಮ್ಮ ಶಾಸಕರ ಕ್ಷೇತ್ರಕ್ಕೂ ಅನುದಾನ ನೀಡುತ್ತಿಲ್ಲ. ಅಭಿವೃದ್ಧಿ ಸಂಪೂರ್ಣ ಕುಂಠಿತವಾಗಿದೆ. ಗುತ್ತಿಗೆದಾರರ ಬಿಲ್ ಸಹ ಪಾವತಿ ಮಾಡಿಲ್ಲ. ಇದೇ ವಿಷಯವನ್ನು ಬಿಜೆಪಿ ಸರ್ಕಾರವಿದ್ದಾಗ ಕಾಂಗ್ರೆಸ್ ದೊಡ್ಡ ಪ್ರಚಾರ ಮಾಡಿ, ಶೇ. 40ರಷ್ಟು ಕಮಿಷನ್​ ಪಡೆದುಕೊಳ್ಳುವ ಸರ್ಕಾರ ಎಂದು ಟೀಕೆ ಮಾಡಿತ್ತು. ಈಗ ಅವರ ಮೇಲೆಯೇ ಗುತ್ತಿಗೆದಾರರು ಮುಗಿಬಿದ್ದಿದ್ದಾರೆ ಎಂದು ಟೀಕಿಸಿದರು.

ಶಾಸಕರು ಫೋನ್​ ಮಾಡಿದರೂ ಸಚಿವರು ಸ್ವೀಕರಿಸುತ್ತಿಲ್ಲ. ಶಾಸಕರಿಗೆ ಮಂತ್ರಿಗಳಾಗಲಿಲ್ಲ ಎಂದು ಅಸಮಾಧಾನವಿದೆ. ಹೀಗಾಗಿ ಕಾಂಗ್ರೆಸ್​ನಿಂದ ಆಹ್ವಾನ ಬಂದಿದೆ ಎಂದು ಗಡಿಬಿಡಿಯಲ್ಲಿ ಹೋಗಬೇಡಿ. ಲೋಕಸಭೆ ಚುನಾವಣೆಯನ್ನು ಒಟ್ಟಿಗೆ ಎದುರಿಸೋಣ. ಚುನಾವಣೆಯಲ್ಲಿ ಏನಾಗುತ್ತೋ, ಆಗಲಿದೆ. ಅದು ಬಿಟ್ಟು ನೀವು ಕಾಂಗ್ರೆಸ್​ಗೆ ಹೋದರೆ, ನಿಮ್ಮ ರಾಜಕೀಯವೇ ಮುಗಿಯುತ್ತದೆ ಎಂದು ಕಿವಿಮಾತು ಹೇಳಿದ್ದಾರೆ.

ಸಭೆಯಲ್ಲಿ ಯಾವ ಶಕ್ತಿ ಪ್ರದರ್ಶನವೂ ಇರಲಿಲ್ಲ. ನಾವು 12 ವಿಧಾನಸಭಾ ಕ್ಷೇತ್ರದಿಂದ 5000 ಮತಗಳಿಗಿಂತ ಕಡಿಮೆ ವೋಟಿನಲ್ಲಿ ಸೋತಿದ್ದೇವೆ. ಅಂತಹ ವಿಚಾರದ ಕುರಿತು ಆತ್ಮಾವಲೋಕನವಾಯಿತು. ಶಕ್ತಿ ಪ್ರದರ್ಶನ ಮಾಡುವ ಅಗತ್ಯ ಬಿಜೆಪಿಯವರಿಗೆ ಇಲ್ಲ ಎಂದರು.

ನಾಳೆ ಶ್ರೀಲಂಕಾದಲ್ಲಿ ನಡೆಯಲಿರುವ ಏಷ್ಯಾ ಕಪ್ ಕ್ರಿಕೆಟ್‌ ಪಂದ್ಯಾವಳಿಯಲ್ಲಿ ಭಾರತ ತಂಡವು ಪಾಕಿಸ್ತಾನ ವಿರುದ್ಧ ಗೆಲ್ಲಬೇಕು ಎಂದು ನಾನು ಹಾರೈಸುತ್ತೇನೆ. ಅಷ್ಟಾಗಿ ನಾನು ಕ್ರಿಕೆಟ್ ಪಂದ್ಯಾವಳಿ ನೋಡುವುದಿಲ್ಲ. ಮನೆಯಲ್ಲಿ ಕ್ರಿಕೆಟ್ ಪಂದ್ಯ ನೋಡುತ್ತಿದ್ದರೆ, ಚಾನೆಲ್ ಬದಲಿಸುತ್ತೇನೆ ಎಂದ ಯತ್ನಾಳ್, ಸೂರ್ಯ ಚಂದ್ರ ಇರುವವರೆಗೂ ಇಂಡಿಯಾ ಮ್ಯಾಚ್ ಗೆಲ್ಲುತ್ತದೆ. ಒಬ್ಬ ದೇಶ ಭಕ್ತನಾಗಿ ಪಾಕಿಸ್ತಾನ ವಿರುದ್ಧ ಭಾರತ ಗೆಲುವು ಸಾಧಿಸಲೆಂದೇ ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಹೇಳಿದರು.

ಇದನ್ನೂ ಓದಿ: ಕಾಂಗ್ರೆಸ್ ಸರ್ಕಾರದ ನೂರು ದಿನದ ಸಾಧನೆ ಅಂದ್ರೆ ಅದು ವರ್ಗಾವಣೆ ಮಾತ್ರ : ಶಾಸಕ ಬಸನಗೌಡ ಪಾಟೀಲ್ ಯತ್ನಾಳ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.