ETV Bharat / state

ಉತ್ತರ ಕನ್ನಡದಲ್ಲಿ ಮಳೆಯೋ ಮಳೆ: ಹಳ್ಳದಲ್ಲಿ ಕೊಚ್ಚಿ‌‌‌ ಹೋಗಿ ಇಬ್ಬರು ಸಾವು, ವಿವಿಧೆಡೆ ಹಾನಿ

author img

By

Published : Jul 7, 2023, 8:08 AM IST

Updated : Jul 7, 2023, 8:59 AM IST

ಉತ್ತರ ಕನ್ನಡದ
ಉತ್ತರ ಕನ್ನಡದ

ಕರಾವಳಿ ಜಿಲ್ಲೆ ಉತ್ತರ ಕನ್ನಡದಲ್ಲಿ ಗುರುವಾರ ಭಾರಿ ಮಳೆ ಸುರಿದಿದ್ದು, ಮಳೆರಾಯನ ಆರ್ಭಟ ಶುಕ್ರವಾರವೂ ಮುಂದುವರೆದಿದೆ.

ಕಾರವಾರ (ಉತ್ತರ ಕನ್ನಡ): ಉತ್ತರ ಕನ್ನಡ ಜಿಲ್ಲೆಯಲ್ಲಿ ‌ಶುಕ್ರವಾರವೂ ಮಳೆ ಅಬ್ಬರ ಮುಂದುವರಿದಿದೆ‌. ಭಾರಿ ಮಳೆಗೆ ಕಾಲು ಜಾರಿ ಬಿದ್ದು ಹಳ್ಳದಲ್ಲಿ ಕೊಚ್ಚಿ ಹೋಗುತ್ತಿದ್ದ ವ್ಯಕ್ತಿಯ ರಕ್ಷಣೆಗೆ ಮುಂದಾದ ಇನ್ನೊಬ್ಬ ವ್ಯಕ್ತಿಯೂ ಕೊಚ್ಚಿ ಹೋಗಿ ಸಾವನ್ನಪ್ಪಿದ ಘಟನೆ ಕುಮಟಾದ ಬೆಟ್ಕುಳಿಯಲ್ಲಿ ನಡೆದಿದೆ. ಕುಮಟಾ ಬೆಟ್ಕುಳಿ ಮೂಲದ ಸತೀಶ ಪಾಂಡುರಂಗ ನಾಯ್ಕ (38) ಮತ್ತು ಉಲ್ಲಾಸ ಗಾವಡಿ (50) ಮೃತರು.

ಇಬ್ಬರು ಹಳ್ಳದಂಚಿನ ಜಮೀನಿನಲ್ಲಿ ಬೇಲಿ ಕಟ್ಟುತ್ತಿರುವಾಗ ಓರ್ವ ಕಾಲು ಜಾರಿ ಹಳ್ಳಕ್ಕೆ ಬಿದ್ದಿದ್ದಾರೆ. ಅವರ ರಕ್ಷಣೆಗೆ ಧಾವಿಸಿದ ಇನ್ನೋರ್ವ ಕೂಡ ಕೊಚ್ಚಿ ಹೋಗಿದ್ದರು. ಕಣ್ಮರೆಯಾದವರಿಗೆ ಶೋಧ ನಡೆಸಿದ್ದ ಗ್ರಾಮಸ್ಥರಿಗೆ ಕೆಲವು ಗಂಟೆಗಳ ಬಳಿಕ ಇಬ್ಬರೂ ಶವವಾಗಿ ಪತ್ತೆಯಾಗಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗೋಕರ್ಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆಸ್ಪತ್ರೆಗೆ ತೆರಳಲು ಪರದಾಟ: ಕುಸಿದ ಅಪಾಯಕಾರಿ ಸೇತುವೆ ಮೇಲೆ ಅನಾರೋಗ್ಯಕ್ಕೊಳಗಾದ ವ್ಯಕ್ತಿಯೋರ್ವರನ್ನು ಗ್ರಾಮಸ್ಥರು ಹೊತ್ತು ಸಾಗಿಸಿದ ಘಟನೆ ಜೋಯಿಡಾ ತಾಲೂಕಿನ ಕಾತೇಲಿ ಗ್ರಾಮದಲ್ಲಿ ನಡೆಯಿತು. ಇಲ್ಲಿನ ನದಿಗೆ ತಾತ್ಕಾಲಿಕವಾಗಿ ನಿರ್ಮಾಣ ಮಾಡಲಾಗಿದ್ದ ಸೇತುವೆಯ ಒಂದು ಬದಿಯ ಸ್ಲ್ಯಾಬ್ ಮುರಿದು ಹೋಗಿದೆ. ಈ ಸೇತುವೆ ಕಾತೇಲಿ, ಕೆಲೋಲಿ ಗ್ರಾಮಗಳ ನಡುವಿನ ಸಂಪರ್ಕ ಕೊಂಡಿಯಾಗಿದೆ. ಜಿಲ್ಲಾ ಪಂಚಾಯತ್‌ನಿಂದ 45 ಲಕ್ಷ ರೂಪಾಯಿ ಅನುದಾನದಲ್ಲಿ ಇದನ್ನು ನಿರ್ಮಿಸಿತ್ತು. ಇದೀಗ ಕುಸಿದಿದ್ದರಿಂದ ಗ್ರಾಮಕ್ಕೆ ಸಂಪರ್ಕ ಇಲ್ಲದಂತಾಗಿದೆ.

ಮನೆ ಮೇಲೆ ಬಿದ್ದಿರುವ ತೆಂಗಿನಕಾಯಿ ಮರ
ಮನೆ ಮೇಲೆ ಬಿದ್ದಿರುವ ತೆಂಗಿನಮರ

ಮನೆ ಮೇಲೆ ಬಿದ್ದ ತೆಂಗಿನ ಮರ: ಹೊನ್ನಾವರದ ಮಾಳ್ಕೋಡ್ ಗ್ರಾಮದಲ್ಲಿ ಗಾಳಿ, ಮಳೆಗೆ ಬೃಹತ್ ಗಾತ್ರದ ತೆಂಗಿನ ಮರ ಬಿದ್ದು ಮನೆಗೆ ಹಾನಿಯಾಗಿದೆ. ಮಾಳ್ಕೋಡ ಗ್ರಾಮದ ನಿವಾಸಿ ಗಣಪತಿ ನಾಯ್ಕ ಎಂಬವರ ಮನೆಯಲ್ಲಿ ಘಟನೆ ನಡೆಯಿತು. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಮರ ಬಿದ್ದ ತೀವ್ರತೆಗೆ ಮನೆಯ ಛಾವಣಿಗೆ ಹಾಕಲಾಗಿದ್ದ ಹೆಂಚುಗಳು ಒಡೆದಿವೆ. ಸ್ಥಳಕ್ಕೆ ಗ್ರಾಮ ಲೆಕ್ಕಾಧಿಕಾರಿ ಭೇಟಿ ನೀಡಿ ಹಾನಿಯ ಪರಿಶೀಲನೆ ನಡೆಸಿದ್ದು ಸೂಕ್ತ ಪರಿಹಾರ ಒದಗಿಸುವ ಭರವಸೆ ನೀಡಿದ್ದಾರೆ.

ಔಷಧ ತಯಾರಿಕಾ ಫ್ಯಾಕ್ಟರಿಯ ಉಪಕರಣಗಳು
ಔಷಧ ತಯಾರಿಕಾ ಫ್ಯಾಕ್ಟರಿಗೆ ಹಾನಿ

ಔಷಧಿ ತಯಾರಿಕಾ ಫ್ಯಾಕ್ಟರಿಗೆ ಹಾನಿ: ಗಾಳಿ, ಮಳೆಗೆ ಕಾರ್ಖಾನೆಯ ಮೇಲ್ಛಾವಣಿ ಹಾರಿ ಔಷಧ ತಯಾರಿಕಾ ಫ್ಯಾಕ್ಟರಿಗೆ ಹಾನಿಯಾದ ಘಟನೆ ಭಟ್ಕಳದ ಶಿರಾಲಿಯಲ್ಲಿ ನಡೆಯಿತು. ಬೇಳೂರ್‌ ಬೈರ್ ಬಯೋಟೆಕ್ ಹೆಸರಿನ ಔಷಧ ತಯಾರಿಕಾ ಕಂಪನಿಯ ಕಟ್ಟಡದ ಸಿಮೆಂಟ್ ಶೀಟ್ ಒಡೆದಿದೆ.

ಗಾಳಿ, ಮಳೆಗೆ ಧರೆಗುರುಳಿದ ಮರಗಳು: ಕುಮಟಾದ ಮಾಸ್ತಿಕಟ್ಟೆ ಸರ್ಕಲ್ ಬಳಿ 20ಕ್ಕೂ ಹೆಚ್ಚು ಮರಗಳು ಧರೆಗುರುಳಿವೆ. ನಾಲ್ಕು ಮನೆ, ಶಾಲಾ ಕೊಠಡಿ ಹಾಗೂ ಸುಮಾರು 20ಕ್ಕೂ ಹೆಚ್ಚು ವಿದ್ಯುತ್ ಕಂಬಗಳಿಗೆ ಹಾನಿಯಾಗಿದೆ. ಇದರಿಂದಾಗಿ ಪಟ್ಟಣದಲ್ಲಿ ವಿದ್ಯುತ್ ಕಡಿತಗೊಂಡಿತು. ಹೆದ್ದಾರಿ ಪಕ್ಕದಲ್ಲಿ ಕಾಲುವೆಗಳು ತುಂಬಿ ಹರಿಯುತ್ತಿವೆ.

ಕಾರವಾರದ ಬಿಣಗಾದಲ್ಲಿ ಬಿತ್ತನೆ ಮಾಡಿದ ಭತ್ತ ಕೊಚ್ಚಿ ಹೋಗಿದೆ. ಕಳೆದ 24 ಗಂಟೆಯಲ್ಲಿ ಭಟ್ಕಳದಲ್ಲಿ 2 ಮನೆ ಪೂರ್ಣ ಪ್ರಮಾಣದಲ್ಲಿ, ಶಿರಸಿಯಲ್ಲಿ 1 ಭಾಗಶಃ ಹಾಗೂ ಅಂಕೋಲಾದಲ್ಲಿ 5, ಭಟ್ಕಳ 4, ಹೊನ್ನಾವರ ಹಾಗೂ ಕುಮಟಾದಲ್ಲಿ 5, ಒಂದು ಮನೆಗೆ ಸಣ್ಣ ಪ್ರಮಾಣದಲ್ಲಿ ಹಾನಿಯಾಗಿರುವ ಬಗ್ಗೆ ಜಿಲ್ಲಾಡಳಿತ ಮಾಹಿತಿ ನೀಡಿದೆ.

ಇಂದು ಕರಾವಳಿ ತಾಲೂಕಿನ ಶಾಲಾ, ಕಾಲೇಜುಗಳಿಗೆ ರಜೆ: ಜಿಲ್ಲೆಯಲ್ಲಿ ಭಾರಿ ಮಳೆ ಬೀಳುವ ಮುನ್ಸೂಚನೆಯನ್ನು ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಬೆಂಗಳೂರು ಮಾಹಿತಿ ನೀಡಿದೆ. ಜಿಲ್ಲಾಡಳಿತವು ಮುಂಜಾಗ್ರತೆ ಕ್ರಮವಾಗಿ ಜುಲೈ 7ರಂದು ಜಿಲ್ಲೆಯ ಕರಾವಳಿ ತಾಲೂಕುಗಳಾದ ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ ಮತ್ತು ಭಟ್ಕಳದ ಶಾಲೆ, ಪದವಿ ಪೂರ್ವ ಕಾಲೇಜುಗಳಿಗೆ ರಜೆ ಘೋಷಿಸಿದೆ.

ಜಿಲ್ಲಾ ಉಸ್ತುವಾರಿ ಸಚಿವ ಮಾಂಕಾಳ್ ವೈದ್ಯ ಪರಿಶೀಲನೆ: ಜಿಲ್ಲೆಯ ಕರಾವಳಿ ತಾಲೂಕುಗಳಲ್ಲಿ ಜುಲೈ 5 ರಿಂದ ಭಾರಿ ಪ್ರಮಾಣದಲ್ಲಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಭಟ್ಕಳ ತಾಲೂಕಿನ ಶಿರಾಲಿ, ಭಟ್ಕಳ ಪಟ್ಟಣ, ಮುಟ್ಟಳ್ಳಿ ಭೂ ಕುಸಿತ ಪ್ರದೇಶಗಳಿಗೆ ಗುರುವಾರ ಜಿಲ್ಲಾ ಉಸ್ತುವಾರಿ ಸಚಿವ ಮಂಕಳ್ ವೈದ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಭಟ್ಕಳ ಪಟ್ಟಣದ ಪ್ರವಾಸಿ ಮಂದಿರದಲ್ಲಿ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ ಅವರು, ಮಳೆ ವ್ಯಾಪಕ ಪ್ರಮಾಣದಲ್ಲಿ ಆಗುತ್ತಿರುವುದರಿಂದ ಜನಸಂಚಾರಕ್ಕೆ ವಾಹನ ಸಂಚಾರಕ್ಕೆ ವ್ಯಥೆ ಉಂಟಾಗುತ್ತಿದ್ದು ಮನೆಗಳಿಗೆ ಮಳೆ ನೀರು ನುಗುತ್ತಿದ್ದು ಅಪಾರ ಪ್ರಮಾಣದಲ್ಲಿ ಹಾನಿ ಉಂಟಾಗಿದೆ.

ಇವೆಲ್ಲವುಗಳನ್ನು ಖುದ್ದು ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು. ಐಆರ್ಬಿ ಹೆದ್ದಾರಿ ಅಸಮರ್ಪಕ ನಿರ್ವಹಣೆಯಿಂದ ಉಂಟಾಗಿರುವ ಸಮಸ್ಯೆಗಳನ್ನು ಸರಿಪಡಿಸುವಂತೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. ಇಲ್ಲವಾದಲ್ಲಿ ಟೋಲ್ ಬಂದು ಮಾಡಲು ಕ್ರಮ ವಹಿಸಲಾಗುವುದು ಎಂದರು. ಹಾಗೆಯೇ ಸಂಬಂಧಪಟ್ಟ ಅಧಿಕಾರಿಗಳು ಈ ಕುರಿತು ಸಮನ್ವಯ ಸಾಧಿಸಿ ಜಿಲ್ಲೆಯಲ್ಲಿ ಯಾವುದೇ ರೀತಿ ಅನಾಹುತಗಳು ಸಂಭವಿಸದಂತೆ ಕಾರ್ಯನಿರ್ವಹಿಸಬೇಕು ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡದರು.

ಜನತೆಗೆ ತೊಂದರೆ ಆಗದಂತೆ ಸೂಕ್ತ ಕ್ರಮ ಕೈಗೊಳ್ಳಿ- ರೂಪಾಲಿ ಆಗ್ರಹ: ಕಾರವಾರ ತಾಲೂಕಿನ ಅರಗಾ, ಚೆಂಡಿಯಾ, ಬಿಣಗಾ, ಮೂಡಲಮಕ್ಕಿ, ಒಕ್ಕಲಕೇರಿ, ಹೊಸಾಳಿ, ಅಂಕೋಲಾದ ವಿವಿಧೆಡೆ ನೀರು ನುಗ್ಗುತ್ತಿರುವುದರಿಂದ ಜನತೆ ತೊಂದರೆಗೊಳಗಾಗಿದ್ದಾರೆ. ಅವಶ್ಯಕತೆ ಇದ್ದಲ್ಲಿ ಜನರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಬೇಕು ಎಂದು ಮಾಜಿ ಶಾಸಕಿ ರೂಪಾಲಿ ನಾಯ್ಕ ಆಗ್ರಹಿಸಿದ್ದಾರೆ. ಐಆರ್ ಬಿ ನಡೆಸಿದ ಅವೈಜ್ಞಾನಿಕ ಕಾಮಗಾರಿಯಿಂದ ನೀರು ಸರಾಗವಾಗಿ ಹರಿದು ಹೋಗದಂತಾಗಿದೆ. ನೌಕಾನೆಲೆಯಿಂದಲೂ ನೀರಿನ ಹರಿವಿಗೆ ಅಡ್ಡಿ ಉಂಟಾಗಿದೆ.

ಐಆರ್ ಬಿ ಅಧಿಕಾರಿಗಳು ಹಾಗೂ ನೌಕಾನೆಲೆ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ನೀರು ಸರಾಗವಾಗಿ ಹರಿದುಹೋಗಲು ವ್ಯವಸ್ಥೆ ಕಲ್ಪಿಸಬೇಕು. ಇನ್ನು ಮುಂದೆ ನೀರು ನಿಲ್ಲದಂತೆ ಕ್ರಮ ಕೈಗೊಳ್ಳಲು ಕಟ್ಟುನಿಟ್ಟಿನ ಸೂಚನೆ ನೀಡುವಂತೆ ಆಗ್ರಹಿಸಿದ್ದಾರೆ. ಕದ್ರಾ ಜಲಾಶಯದಿಂದಲೂ ನೀರನ್ನು ಒಮ್ಮೆಲೇ ಹೊರಬಿಡದಂತೆ ಹಂತ ಹಂತವಾಗಿ ಬಿಟ್ಟು ಪ್ರವಾಹ ಪರಿಸ್ಥಿತಿ ನಿರ್ಮಾಣ ಆಗದಂತೆ ಕ್ರಮ ಕೈಗೊಳ್ಳಬೇಕು ಎಂದು ರೂಪಾಲಿ ಎಸ್.ನಾಯ್ಕ ಜಿಲ್ಲಾಡಳಿತವನ್ನು ಪ್ರಕಟಣೆ ಮೂಲಕ ಒತ್ತಾಯಿಸಿದ್ದಾರೆ.

ಇದನ್ನೂ ಓದಿ: Monsoon: ಕರಾವಳಿಯಲ್ಲಿ ಭಾರಿ ಮಳೆ.. ಜನಜೀವನ ಅಸ್ತವ್ಯಸ್ತ, ನಾಳೆ ಕೊಡಗಿನಲ್ಲಿ ಶಾಲಾ ಕಾಲೇಜುಗಳಿಗೆ ರಜೆ

Last Updated :Jul 7, 2023, 8:59 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.