ETV Bharat / state

Monsoon: ಕರಾವಳಿಯಲ್ಲಿ ಭಾರಿ ಮಳೆ.. ಜನಜೀವನ ಅಸ್ತವ್ಯಸ್ತ, ನಾಳೆ ಕೊಡಗಿನಲ್ಲಿ ಶಾಲಾ ಕಾಲೇಜುಗಳಿಗೆ ರಜೆ

author img

By

Published : Jul 6, 2023, 6:29 PM IST

Updated : Jul 6, 2023, 8:15 PM IST

ಕರಾವಳಿಯಲ್ಲಿ ಭಾರೀ ಮಳೆಯಾಗುತ್ತಿದ್ದು, ಮನೆ, ಅಂಗಡಿ ಮುಗ್ಗಟ್ಟುಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಉಡುಪಿಯಲ್ಲಿ ಭಾರಿ ಮಳೆಯಿಂದಾಗಿ ಕೃತಕ ನೆರೆ ಸೃಷ್ಟಿಯಾಗಿ ಜನರು ಪರದಾಡುವಂತಾಗಿದೆ. ಕೊಡಗಿನಲ್ಲಿ ನಾಳೆ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.

Monsoon Rain
ಕರಾವಳಿಯಲ್ಲಿ ಭಾರಿ ಮಳೆ

Monsoon Rain: ಕರಾವಳಿಯಲ್ಲಿ ಭಾರಿ ಮಳೆ.. ಜನಜೀವನ ಅಸ್ತವ್ಯಸ್ತ, ನಾಳೆ ಕೊಡಗಿನಲ್ಲಿ ಶಾಲಾ ಕಾಲೇಜುಗಳಿಗೆ ರಜೆ

ಉಡುಪಿ : ಕಳೆದ ಕೆಲವು ದಿನಗಳಿಂದ ರಾಜ್ಯಾದ್ಯಂತ ಭಾರಿ ಮಳೆಯಾಗುತ್ತಿದೆ. ಕರಾವಳಿ ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಧಾರಾಕಾರ ಮಳೆಯಿಂದಾಗಿ ಜಿಲ್ಲೆಯ ಹಲವು ಕಡೆಗಳಲ್ಲಿ ಕೃತಕ‌ ನೆರೆ ಸೃಷ್ಟಿಯಾಗಿದೆ. ಬಹುತೇಕ ನದಿಗಳ ನೀರಿನ ಮಟ್ಟ ಏರಿಕೆ ಕಂಡಿದ್ದು, ಹಲವೆಡೆ ಜನವಸತಿ ಪ್ರದೇಶಗಳಿಗೆ ಮತ್ತು ಜಮೀನಿಗೆ ನೀರು ನುಗ್ಗಿ ಹಾನಿ ಸಂಭವಿಸಿದೆ.

ಜೂನ್ ತಿಂಗಳಲ್ಲಿ ವಾಡಿಕೆಗಿಂತ ಮಳೆ ಕಡಿಮೆಯಾಗಿದ್ದರೂ ಜುಲೈ ತಿಂಗಳ ಆರಂಭದಿಂದಲೇ ಉತ್ತಮ‌ ಮಳೆಯಾಗುತ್ತಿದೆ. ಇದರ ಪರಿಣಾಮವಾಗಿ ಉಡುಪಿ ಆಸುಪಾಸಿನ‌ ಹಲವೆಡೆ ಕೃತಕ ನೆರೆ ಉಂಟಾಗಿದೆ. ಬೈಲಕೆರೆ, ರಾಜಾಂಗಣ ಪಾರ್ಕಿಂಗ್, ಮೂಡನಿಡಂವೂರು, ಬನ್ನಂಜೆ ಸೇರಿದಂತೆ ಹಲವು ಪ್ರದೇಶಗಳು ಜಲಾವೃತಗೊಂಡಿದ್ದು, ಜನರು ಸಂಚರಿಸಲು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ನಗರಸಭೆ ವ್ಯಾಪ್ತಿಯ ಬನ್ನಂಜೆ ತಗ್ಗು ಪ್ರದೇಶದಲ್ಲಿ ವರ್ಷಂಪ್ರತಿ‌ ನೆರೆ ಸಾಮಾನ್ಯವಾಗಿದೆ. ಈ ಬಾರಿಯೂ ಕೃತಕ ನೆರೆ ಉಂಟಾಗಿದ್ದು, ಹಲವು ಮನೆಗಳ ಸಂಪರ್ಕ ಕಡಿತಗೊಂಡಿದೆ. ಅಲ್ಲದೆ ಗರಡಿಯಲ್ಲೂ ಬಹುತೇಕ ಪ್ರದೇಶಗಳು ಜಲಾವೃತಗೊಂಡಿದೆ. ಭಾರಿ ಮಳೆ ಹಿನ್ನೆಲೆ ಶಾಲೆ ಮತ್ತು ಪದವಿಪೂರ್ವ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಭಾರಿ ಮಳೆಯಿಂದಾಗಿ ಕಡಲತೀರಗಳಲ್ಲಿ ಬೃಹತ್ ಅಲೆಗಳು ನಿರ್ಮಾಣವಾಗಿವೆ.

ಉಡುಪಿ ನಗರದ ತಗ್ಗುಪ್ರದೇಶಗಳಿಗೆ ನುಗ್ಗಿದ ನೀರು: ಉಡುಪಿ ನಗರದ ತಗ್ಗುಪ್ರದೇಶಗಳಿಗೆ ನೀರು ನುಗ್ಗಿದ್ದು, ಮನೆಗಳು, ಅಂಗಡಿ ಮುಂಗಟ್ಟುಗಳು ಜಲಾವೃತಗೊಂಡಿವೆ. ಮಠದ ಆಸುಪಾಸಿನಲ್ಲೂ ಕೃತಕ ನೆರೆ ಸೃಷ್ಟಿಯಾಗಿದೆ. ಕೃಷ್ಣಮಠದ ಪಾರ್ಕಿಂಗ್ ಜಾಗವು ಸಂಪೂರ್ಣ ನೀರಿನಿಂದ ಆವೃತಗೊಂಡಿದೆ.

ನೀರಿನ ಮಟ್ಟ ಏರಿಕೆಯಾದ ಹಿನ್ನೆಲೆ ಅಗ್ನಿಶಾಮಕ ಸಿಬ್ಬಂದಿಗಳು ರಕ್ಷಣಾ ಕಾರ್ಯಾಚರಣೆ ನಡೆಸಿದರು. ನೆರೆಯಲ್ಲಿ ಸಿಲುಕಿದ್ದ ಶ್ರೀಕೃಷ್ಣ ಮಠಕ್ಕೆ ಆಗಮಿಸಿದ್ದ ಭಕ್ತರನ್ನು ಉಡುಪಿ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಎಂ ಹಾಕೆ ಅವರ ನೇತೃತ್ವದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸಲಾಯಿತು. ದೋಣಿಗಳನ್ನು ಬಳಸಿ ಮಹಿಳೆಯರು, ಮಕ್ಕಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಯಿತು.

ಕುಂದಾಪುರದಲ್ಲಿ ಇಬ್ಬರು ಸಾವು : ವ್ಯಕ್ತಿಯೊಬ್ಬರು ರಸ್ತೆಯ ಪಕ್ಕದ ಕೆರೆಗೆ ಬಿದ್ದು ಮೃತಪಟ್ಟರೆ, ಮತ್ತೊಬ್ಬರು ಕಾಲುಸಂಕ ದಾಟುವ ವೇಳೆ ಆಯತಪ್ಪಿ ಬಿದ್ದು ಸಾವನ್ನಪ್ಪಿರುವ ಘಟನೆ ಕುಂದಾಪುರ ತಾಲೂಕಿನಲ್ಲಿ ನಡೆದಿದೆ. ಮೃತರನ್ನು ದಿನಕರ ಶೆಟ್ಟಿ (53), ಶೇಷಾದ್ರಿ ಐತಾಳ್ (71) ಎಂದು ಗುರುತಿಸಲಾಗಿದೆ.

ಮಂಗಳವಾರ ಸಂಜೆ ವೇಳೆ ಎಡಮೊಗೆ ಗ್ರಾಮದ ಮನೆಯ ಶೇಷಾದ್ರಿ ಐತಾಳ್ (71) ತೋಟಕ್ಕೆ ತೆರಳಿದ್ದರು. ಈ ವೇಳೆ ತೋಟದ ನಡುವೆ ಇದ್ದ ತಾತ್ಕಾಲಿಕ ಮರದ ಕಾಲುಸಂಕ ದಾಟುವ ವೇಳೆ ಆಯತಪ್ಪಿ ನದಿಗೆ ಬಿದ್ದು ಮೃತಪಟ್ಟಿದ್ದರು. ಇನ್ನೊಂದು ಪ್ರಕರಣದಲ್ಲಿ ಮಂಗಳವಾರ ರಾತ್ರಿ 11:30ರ ಸುಮಾರಿಗೆ ಕುಂದಾಪುರ ತಾಲೂಕಿನ ಉಳ್ಳೂರು ಗ್ರಾಮದ ದಿನಕರ ಶೆಟ್ಟಿ (53) ಎಂಬವರು ಮನೆಗೆ ಬರುವ ಸಂದರ್ಭ ಬೈಕ್ ಸ್ಕಿಡ್ ಆಗಿತ್ತು. ಈ ವೇಳೆ ರಸ್ತೆಯ ಪಕ್ಕದ ಕೆರೆಗೆ ಬಿದ್ದು ಮೃತಪಟ್ಟಿರುವುದಾಗಿ ತಿಳಿದುಬಂದಿದೆ.

ಕೊಡಗಿನಲ್ಲಿ ಶಾಲಾ ಕಾಲೇಜುಗಳಿಗೆ ರಜೆ : ಕೊಡಗು ಜಿಲ್ಲೆಯಲ್ಲೂ ಧಾರಾಕಾರ ಮಳೆಯಾಗುತ್ತಿದ್ದು, ನಾಳೆ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಕಳೆದ ಮೂರು ದಿನಗಳಿಂದ ಮಳೆ ನಿರಂತರವಾಗಿ ಸುರಿಯುತ್ತಿದೆ. ಕಾವೇರಿ ಉಗಮಸ್ಥಾನ ತಲಕಾವೇರಿ ಮತ್ತು ಭಾಗಮಂಡಲದಲ್ಲಿ ಭಾರಿ ಮಳೆಯಾಗುತ್ತಿದ್ದು, ಕಾವೇರಿ ನದಿಯ ನೀರಿನ‌ಮಟ್ಟ ಹೆಚ್ಚಾಗಿದೆ.

ಇನ್ನು, ಮಳೆಯಿಂದಾಗಿ ಭಾಗಮಂಡಲದಿಂದ ತಲಕಾವೇರಿಗೆ ತೆರಳುವ ರಸ್ತೆ ಜಲಾವೃತವಾಗಿದೆ. ಇದರಿಂದ ಭಾಗಮಂಡಲದ ಸುತ್ತಮುತ್ತಲಿನ ಪ್ರದೇಶದಲ್ಲಿ ವಾಸ ಮಾಡುವ ಜನರು ಆತಂಕಗೊಂಡಿದ್ದಾರೆ. ಮಳೆಯು ಭಾರಿ ಅವಾಂತರಗಳನ್ನು ಸೃಷ್ಟಿಸಿದ್ದು, ಗಾಳಿ ಮಳೆಗೆ ಹಲವೆಡೆ ಮರಗಳು ಧರಾಶಾಹಿಯಾಗಿವೆ. ಇದರಿಂದಾಗಿ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿದೆ.

ಹೊಸಕೇರಿ ಗ್ರಾಮ ಪಂಚಾಯಿತಿ ಒಳಪಟ್ಟ ಅರೆಕಾಡು ಗ್ರಾಮದ ನೇತಾಜಿ ನಗರ ನಿವಾಸಿಯಾದ ಗುರುರಾಜ್ ಎಂಬವರ ಮನೆ ಮೇಲೆ ಮರಬಿದ್ದು, ಭಾಗಶಃ ಹಾನಿಯಾಗಿದೆ. ಅದೃಷ್ಟವಶಾತ್ ಮನೆಯಲ್ಲಿ ಯಾರೂ ಇರಲಿಲ್ಲ. ಸ್ಥಳೀಯ ಮುಖಂಡರು ಮನೆಗೆ ಭೇಟಿ ನೀಡಿ ನೆರವು ನೀಡಿದ್ದಾರೆ. ಮಳೆಯಿಂದಾಗಿ ಹಾರಂಗಿ ಜಲಾಶಯ ಮತ್ತು ಕೆ ಆರ್ ಎಸ್ ಅಣೆಕಟ್ಟು ತುಂಬುವ ಸಾಧ್ಯತೆ ಇದೆ.

ಇದನ್ನೂ ಓದಿ : ಕರಾವಳಿಯಲ್ಲಿ ಮುಂದುವರಿದ ಮಳೆಯಾರ್ಭಟ; ಸಂಪರ್ಕ ಕಳೆದುಕೊಂಡ ಜನರು

Last Updated : Jul 6, 2023, 8:15 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.