ETV Bharat / state

ಅದ್ಧೂರಿಯಾಗಿ ನಡೆದ ಶಿವಮೊಗ್ಗ ದಸರಾ: ರಾವಣ ದಹನ, ಜನರ ಸಂಭ್ರಮ

author img

By ETV Bharat Karnataka Team

Published : Oct 24, 2023, 10:31 PM IST

Updated : Oct 24, 2023, 10:47 PM IST

ಶಿವಮೊಗ್ಗದ ವಿಜಯದಶಮಿ
ಶಿವಮೊಗ್ಗದ ವಿಜಯದಶಮಿ

ಮೈಸೂರಿನಂತೆ ಶಿವಮೊಗ್ಗದಲ್ಲೂ ದಸರಾ ಮೆರವಣಿಗೆ ಸಡಗರ ಸಂಭ್ರಮದಿಂದ ನಡೆಯಿತು.

ಶಿವಮೊಗ್ಗ ದಸರಾ ಮೆರವಣಿಗೆ ಸಡಗರ

ಶಿವಮೊಗ್ಗ: ಶಿವಮೊಗ್ಗದಲ್ಲಿ ದಸರಾದ ಕೊನೆಯ ದಿನ ನಡೆಯುವ ವಿಜಯದಶಮಿ ಕಾರ್ಯಕ್ರಮ ಅತ್ಯಂತ ಅದ್ಧೂರಿಯಾಗಿ ನಡೆದಿದೆ. ನಗರದ ಫ್ರೀಡಂ ಪಾರ್ಕ್​ನಲ್ಲಿ ನಡೆಯುವ ಬನ್ನಿ ಮುಡಿಯುವುದು ಕೂಡ ಅಚ್ಚುಕಟ್ಟಾಗಿ ನಡೆಯಿತು. ರಾವಣನನ್ನು ದಹಿಸಿ ಜಿಲ್ಲೆಯ ಜನರು ಸಂಭ್ರಮಿಸಿದರು.

ಫ್ರೀಡಂ ಪಾರ್ಕ್​ನಲ್ಲಿ ಬನ್ನಿ ಮುಡಿಯುವ ಕಾರ್ಯಕ್ರಮಕ್ಕಾಗಿ ವೇದಿಕೆ ನಿರ್ಮಾಣ ಮಾಡಲಾಗಿದ್ದು, ಶಿವಮೊಗ್ಗ ತಹಶೀಲ್ದಾರ್ ನಾಗರಾಜ್ ಕಾರ್ಯಕ್ರಮ ನಡೆಸಿಕೊಟ್ಟರು.‌ ಮೊದಲು ಕೋಟೆ ಆಂಜನೇಯ ದೇವಾಲಯದ ಅರ್ಚಕ ರಾಮಪ್ರಸಾದ್ ಬನ್ನಿ ಮುಡಿಯುವ ಬಾಳೆ ಮರಕ್ಕೆ ಪೂಜೆ ಸಲ್ಲಿಸಿದರು. ನಂತರ ತಹಶೀಲ್ದಾರ್ ಬಾಳೆಮರಕ್ಕೆ ಮೂರು ಸುತ್ತು ಹಾಕಿ ನಂತರ ತಮ್ಮ ಕೈಯಲ್ಲಿನ ಕತ್ತಿಯಿಂದ ಬಾಳೆಮರ ಕಡಿದರು. ಬಾಳೆಮರ ಕಡಿದ ಮೇಲೆ ಬನ್ನಿ ಮುಡಿಯುವ ಕಾರ್ಯಕ್ರಮ ಮುಕ್ತಾಯವಾಯಿತು. ಈ ಸಂದರ್ಭದಲ್ಲಿ ಜನರು ಬನ್ನಿಯನ್ನು ಒಬ್ಬರಿಗೊಬ್ಬರು ವಿನಿಮಯ ಮಾಡಿಕೊಂಡು ಶುಭಾಶಯ ಕೋರಿದರು.

ದಶಕಂಠ ರಾವಣನ ದಹನ: ಬನ್ನಿ ಮುಡಿಯುವ ಕಾರ್ಯಕ್ರಮ ಮುಗಿಯುತ್ತಿದ್ದಂತೆ ರಾವಣ ದಹನ ಮಾಡಲಾಯಿತು. ರಾವಣ ದೇಹದಲ್ಲಿ ವಿವಿಧ ಪಟಾಕಿಗಳನ್ನಿಟ್ಟು ಸುಡಲಾಯಿತು. ಮನುಷ್ಯ ತನ್ನ ಕೆಟ್ಟತನವನ್ನು ಸುಟ್ಟು ಹಾಕಬೇಕು ಎಂಬ ಸಂದೇಶ ಈ ಸಂಪ್ರದಾಯದ ಹಿಂದಿದೆ.

ಇದಕ್ಕೂ ಮುನ್ನ ನಗರದ ಶಿವಪ್ಪ ನಾಯಕ ಕೋಟೆ ಮುಂಭಾಗದಿಂದ ದಸರಾ ಮೆರವಣಿಗೆ ಪ್ರಾರಂಭವಾಯಿತು. ಮೆರವಣಿಗೆಗೆ ಜಿಲ್ಲಾಧಿಕಾರಿ ಸೆಲ್ವಮಣಿ, ನಂದಿಧ್ವಜಕ್ಕೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು. ನಂತರ ತಾಯಿ ಚಾಮುಂಡೇಶ್ವರಿಗೆ ಸಂಸದ ಬಿ.ವೈ.ರಾಘವೇಂದ್ರ ಪುಷ್ಪಾರ್ಚನೆ ಮಾಡಿದರು. ಶಾಸಕ ಎಸ್.ಎನ್.ಚನ್ನಬಸಪ್ಪ, ಮೇಯರ್ ಶಿವಕುಮಾರ್ ಸೇರಿದಂತೆ ಪಾಲಿಕೆ ಸದಸ್ಯರು ಹಾಜರಿದ್ದರು.

ಮೆರವಣಿಗೆಯು ಕೋಟೆ ರಸ್ತೆಯಿಂದ ಎಸ್ ಪಿ ಎಂ ರಸ್ತೆ, ರಾಮಣ್ಣ ಶ್ರೇಷ್ಠಿ ಪಾರ್ಕ್, ಗಾಂಧಿ ಬಜಾರ್, ಶಿವಪ್ಪ ನಾಯಕ ವೃತ್ತ, ನೆಹರು ರಸ್ತೆ, ದುರ್ಗಿಗುಡಿ ಮುಖ್ಯ ರಸ್ತೆ, ಡಾ.ಅಂಬೇಡ್ಕರ್ ವೃತ್ತ, ಸಂಗೊಳ್ಳಿ ರಾಯಣ್ಣ ರಸ್ರೆಯ ಮೂಲಕ ಫ್ರೀಡಂ ಪಾರ್ಕ್ ತಲುಪಿತು. ಇಲ್ಲಿ ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ಜನರ ಮುಂದೆ ಬನ್ನಿ ಮುಡಿಯಲಾಯಿತು.

ಇದನ್ನೂ ಓದಿ: ಮೈಸೂರು ದಸರಾ: ಜಗತ್ಪ್ರಸಿದ್ಧ ಜಂಬೂ ಸವಾರಿಗೆ ಚಾಲನೆ ನೀಡಿದ ಸಿಎಂ, ಡಿಸಿಎಂ

Last Updated :Oct 24, 2023, 10:47 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.