ETV Bharat / state

ಹಿಂದೂ ಮಹಾಮಂಡಳದ ಗಣೇಶನ ನಿಮಜ್ಜನ ಮೆರವಣಿಗೆಗೆ ಸಜ್ಜಾದ ಶಿವಮೊಗ್ಗ: ಕೇಸರಿಮಯವಾದ ನಗರದಲ್ಲಿ ಗಮನ ಸೆಳೆಯುತ್ತಿರುವ ಉಗ್ರನರಸಿಂಹ

author img

By ETV Bharat Karnataka Team

Published : Sep 27, 2023, 7:55 PM IST

Updated : Sep 28, 2023, 11:32 AM IST

ಶಿವಮೊಗ್ಗ ನಗರವು ಇಂದು ನಡೆಯಲಿರುವ ಹಿಂದೂ ಮಹಾಮಂಡಳದ ಗಣೇಶನ ನಿಮಜ್ಜನ ಮೆರವಣಿಗೆಗೆ ಸಿದ್ಧಗೊಂಡಿದೆ.

ಶಿವಮೊಗ್ಗ ನಗರ
ಶಿವಮೊಗ್ಗ ನಗರ

ಎಸ್​ಪಿ ಮಿಥುನ್​ಕುಮಾರ್

ಶಿವಮೊಗ್ಗ: ಜಿಲ್ಲೆಯ ಹಿಂದೂ ಮಹಾ ಮಂಡಳದ ಗಣೇಶನ ನಿಮಜ್ಜನ ಮೆರವಣಿಗೆಯು ಗುರುವಾರ ನಗರದಲ್ಲಿ ಅತ್ಯಂತ ವೈಭವಯುತವಾಗಿ ನಡೆಯಲಿದೆ. ಇದಕ್ಕಾಗಿ ಶಿವಮೊಗ್ಗ ನಗರವನ್ನು ಕೇಸರಿಮಯವನ್ನಾಗಿ ಮಾಡಲಾಗಿದೆ.

ಸ್ವಾತಂತ್ರ್ಯ ಪೂರ್ವದಿಂದಲೂ ಗಣೇಶನನ್ನು ಪ್ರತಿಷ್ಠಾಪಿಸಿಕೊಂಡು ಬಂದಿರುವ ಹಿಂದೂ ಮಹಾಸಭಾದ ಅಂಗ ಸಂಸ್ಥೆ ಹಿಂದೂ ಮಹಾ ಮಂಡಳವು ಪ್ರತಿ ವರ್ಷ ಅದ್ಧೂರಿ ಮೆರವಣಿಗೆಯನ್ನು ನಡೆಸುತ್ತದೆ. ಶಿವಮೊಗ್ಗದ ಎಸ್​ಪಿಎಂ ರಸ್ತೆಯ ತುಂಗಾ ನದಿ ತಟದ ಭೀಮೇಶ್ವರ ದೇವಾಲಯದಲ್ಲಿ ಕಳೆದ 79 ವರ್ಷಗಳಿಂದ ಗಣೇಶನನ್ನು ಪ್ರತಿಷ್ಠಾಪಿಸಲಾಗುತ್ತಿದೆ. ಗುರುವಾರ ಗಣಪತಿ ನಿಮಜ್ಜನ ಮೆರವಣಿಗೆ ನಡೆಯಲಿದೆ. ಭೀಮೇಶ್ವರ ದೇವಾಲಯದಿಂದ ಮೆರವಣಿಗೆ ಬೆಳಗ್ಗೆ 11 ಗಂಟೆಗೆ ಪ್ರಾರಂಭವಾಗಲಿದೆ. ಮೆರವಣಿಗೆ ನಗರದೆಲ್ಲೆಡೆ ಸಂಚರಿಸಿ ಪುನಃ ಭೀಮೇಶ್ವರ ದೇವಾಲಯದ ಬಳಿ ಬಂದು ತುಂಗಾ ನದಿಯ ಭೀಮ ಮಡುವಿನಲ್ಲಿ ರಾತ್ರಿ 1 ಗಂಟೆಯ ಸುಮಾರಿಗೆ ನಿಮಜ್ಜನ ಮಾಡಲಾಗುತ್ತದೆ.

ಶಾಸಕ ಚನ್ನಬಸಪ್ಪ

ಹಿಂದೂ ಮಹಾಮಂಡಳದ ಗಣೇಶನ ಮೆರವಣಿಗೆಯಲ್ಲಿ ಹಿಂದೆಲ್ಲಾ ಅನೇಕ ಗಲಾಟೆಗಳು ನಡೆದಿವೆ. ಇದಕ್ಕಾಗಿ ನಗರದಲ್ಲಿ ಪೊಲೀಸ್ ಇಲಾಖೆಯು ಭಾರಿ ಬಂದೋಬಸ್ತ್ ವ್ಯವಸ್ಥೆ ಮಾಡಿದೆ.

ಮೆರವಣಿಗೆ ಮಾರ್ಗ: ಗುರುವಾರ ಬೆಳಗ್ಗೆ 11 ಗಂಟೆಗೆ ಭೀಮ ದೇವಾಲಯದಿಂದ ಮೆರವಣಿಗೆ ಪ್ರಾರಂಭವಾಗಲಿದೆ. ನಂತರ ಎಸ್​ಪಿಎಂ ರಸ್ತೆ, ರಾಮಣ್ಣ ಶ್ರೇಷ್ಠಿ ಪಾರ್ಕ್, ಗಾಂಧಿ ಬಜಾರ್, ಶಿವಪ್ಪ ನಾಯಕ ವೃತ್ತ, ನೆಹರು ರಸ್ತೆ, ಟಿ ಎಸ್ ಶೀನಪ್ಪ‌ಶೆಟ್ಟಿ ವೃತ್ತ, ದುರ್ಗಿಗುಡಿ ಮುಖ್ಯ ರಸ್ತೆ, ಡಾ. ಅಂಬೇಡ್ಕರ್ ವೃತ್ತ, ಕುವೆಂಪು ರಸ್ತೆ, ಶಿವಮೂರ್ತಿ ವೃತ್ತ, ಸರ್.ಎಂ ವಿಶ್ವೇಶ್ವರಯ್ಯ ರಸ್ತೆ, ಮಹಾವೀರ ವೃತ್ತ, ಡಿ.ವಿ.ಎಸ್ ವೃತ್ತ, ಕಾರ್ಮೆಂಟ್ ರಸ್ತೆ, ಬಿ. ಹೆಚ್ ರಸ್ತೆ, ಕೋಟೆ ರಸ್ತೆಯ ಮೂಲಕ ಪುನಃ ಭೀಮನ ಮಡುವಿಗೆ ಬಂದು ನಿಮಜ್ಜನ ಆಗಲಿದೆ.

ಸಾರ್ವಜನಿಕರಾದ ಮೇಘನಾ

ಉಗ್ರ ನರಸಿಂಹನ ಅವತಾರ - ಕೇಸರಿಮಯ: ಹಿಂದೂ ಮಹಾಮಂಡಳ ಗಣಪನ ಮೆರವಣಿಗೆ ಅಲಂಕಾರ ಸಮಿತಿ ರಚನೆ ಮಾಡಲಾಗಿದೆ. ಈ ಸಮಿತಿಯು ಗಣಪನ ಮೆರವಣಿಗೆ ಸಾಗುವ ಎಲ್ಲಾ ರಸ್ತೆಗಳನ್ನು ಕೇಸರಿಮಯ ಮಾಡಿದ್ದಾರೆ. ಅಲ್ಲಲ್ಲಿ ಹಲವು ಫ್ಲೆಕ್ಸ್​​ ಹಾಕಲಾಗಿದೆ. ನೆಹರು ರಸ್ತೆಗೆ ಸನಾತನ ಧರ್ಮದ ದ್ವಾರ ಮಾಡಲಾಗಿದೆ. ಅಲ್ಲೇ ಇರುವ ವೃತ್ತದಲ್ಲಿ ಈ ಭಾರಿ ಚಂದ್ರಯಾನ ನಡೆಸಿದ ರಾಕೆಟ್​ ಹಾಗೂ ಲ್ಯಾಂಡರ್ ವಿಕ್ರಮ್​ನ ಪ್ರತಿಕೃತಿ ನಿರ್ಮಾಣ ಮಾಡಲಾಗಿದೆ. ಅದೇ ರೀತಿ ಗಾಂಧಿ ಬಜಾರ್ ಪ್ರವೇಶದಲ್ಲಿ ಉಗ್ರ ನರಸಿಂಹ ಅವತಾರವನ್ನು ನಿರ್ಮಾಣ ಮಾಡಲಾಗಿದೆ. ಇದು ವಿಷ್ಣುವಿನ ದಶವತಾರಗಳಲ್ಲಿ ಒಂದಾಗಿದೆ. ಇದನ್ನು 40 ಅಡಿ ಎತ್ತರ ದ್ವಾರದಲ್ಲಿ ಇಡಲಾಗಿದೆ. ಉಗ್ರ ನರಸಿಂಹ ಹಿರಣ್ಯ ಕಶಿಪುನನ್ನು ಸಂಹಾರ ಮಾಡುವ ಆಕೃತಿ ರಚನೆ ಮಾಡಲಾಗಿದೆ. ಇದಕ್ಕೆ ಸ್ಪೆಷಲ್ ಎಫೆಕ್ಟ್ ಕೊಡಲಾಗಿದೆ.

ಅಲಂಕಾರ ಸಮಿತಿ ದಿನದಯಾಳ್

ಇಲ್ಲಿ ಉಗ್ರ ನರಸಿಂಹನ ತಲೆ, ಕೈ ಅಲುಗಾಡುವಂತೆ ಹಾಗೂ ಉಗ್ರ ನರಸಿಂಹನ ಹಿಂದೆ ಹಾವಿನ ಆಕೃತಿ ನಿರ್ಮಾಣ ಮಾಡಲಾಗಿದೆ.‌ ಇದು ಎಲ್ಲರ ಆಕರ್ಷಣೆಯ ಕೇಂದ್ರವಾಗಿದೆ. ಇದಾದ ನಂತರ ಶಿವಪ್ಪ ನಾಯಕ ವೃತ್ತದಲ್ಲಿ ಶ್ರೀರಾಮ, ಶಿವಾಜಿ ಹಾಗೂ ಹನುಮಂತನ ಪುತ್ಥಳಿ ಮಾಡಲಾಗಿದೆ. ಉಳಿದಂತೆ ಎಲ್ಲಾ ರಸ್ತೆಯಲ್ಲೂ ಅನೇಕ ದ್ವಾರಗಳನ್ನು ‌ನಿರ್ಮಾಣ ಮಾಡಲಾಗಿದೆ. ಉಗ್ರ ನರಸಿಂಹ ಅವತಾರವನ್ನು ನೋಡಲು ತಂಡೋಪ ತಂಡದಲ್ಲಿ ಬಂದು ವೀಕ್ಷಿಸುತ್ತಿದ್ದಾರೆ. ಈ ವರ್ಷ ಉಗ್ರ ನರಸಿಂಹನ ಅವತಾರ ಚೆನ್ನಾಗಿ ಮೂಡಿ ಬಂದಿದೆ. ನಗರವೆಲ್ಲಾ ಕೇಸರಿ ಬಂಟಿಂಗ್ಸ್, ಫ್ಲೆಕ್ಸ್​ಗಳನ್ನು ಹಾಕಲಾಗಿದೆ. ಲಕ್ಷಾಂತರ ಜನ ಆಗಮಿಸಲಿದ್ದಾರೆ. ಮೆರವಣಿಗೆಯು ಶಾಂತಿಯುತವಾಗಿ ನಡಯಲಿ ಎನ್ನುವುದು ನಗರದ ನಾಗರಿಕರ ಕೋರಿಕೆಯಾಗಿದೆ.

ಉಗ್ರನರಸಿಂಹನ ಅವತಾರ
ಉಗ್ರನರಸಿಂಹನ ಅವತಾರ

'ಗುರುವಾರ ಹಿಂದೂ ಮಹಾ ಮಂಡಳದ ಮೆರವಣಿಗೆಯು ಬೆಳಗ್ಗೆ 11 ಗಂಟೆಗೆ ಪ್ರಾರಂಭವಾಗಲಿದೆ. ನಂತರ ಶಿವಮೊಗ್ಗದ ಪ್ರಮುಖ ರಸ್ತೆಗಳಲ್ಲಿ ಸಾಗಲಿದೆ. ಶಿವಮೊಗ್ಗದ ಹಿಂದೂ ಮಹಾ ಮಂಡಳದ ಉತ್ಸವ ಹಾಗೂ ನಿಮಜ್ಜನ ಮೆರವಣಿಗೆಗೆ ಯಾವ ರೀತಿಯ ಅಲಂಕಾರ ಮಾಡಲಿದೆ ಎಂದು ಪ್ರಪಂಚವೇ ಕುತೂಹಲದಿಂದ ಕಾಯುತ್ತಿರುತ್ತದೆ. ಅಷ್ಟು ವಿಶೇಷವಾಗಿ, ಇಲ್ಲಿ ಅಲಂಕಾರ ಮಾಡಲಾಗುತ್ತದೆ. ಈ ಬಾರಿ ಉಗ್ರ ನರಸಿಂಹನ ಅವತಾರವನ್ನು ನಿರ್ಮಾಣ ಮಾಡಲಾಗಿದೆ. ಸುಮಾರು 20 ಅಡಿ ಎತ್ತರ ಪುತ್ಥಳಿ ನಿರ್ಮಿಸಲಾಗಿದೆ. ಹಿಂದೆ ಗೋಮಾತೆ, ಶಿವಾಜಿ, ಭಗದ್ಗೀತೆಯಲ್ಲಿ ಶ್ರೀ ಕೃಷ್ಣ ಅರ್ಜುನನಿಗೆ ಭೋಧನೆ ಮಾಡುವ ಕಲಾಕೃತಿಯನ್ನು ನಿರ್ಮಾಣ ಮಾಡಲಾಗಿತ್ತು. ಗುರುವಾರದ ಮೆರವಣಿಗೆಯಲ್ಲಿ ಲಕ್ಷಾಂತರ ಜನ ಭಾಗಿಯಾಗಲಿದ್ದಾರೆ. ಮೆರವಣಿಗೆಯಲ್ಲಿ ಎಲ್ಲಾ ಹಿಂದೂ ಬಾಂಧವರು ಭಾಗಿಯಾಗಬೇಕೆಂದು' ಅಲಂಕಾರ ಸಮಿತಿಯ ದಿನದಯಾಳ್ ವಿನಂತಿಸಿಕೊಂಡಿದ್ದಾರೆ.

ಚಂದ್ರಯಾನ ನಡೆಸಿದ ರಾಕೆಟ್​ ಹಾಗೂ ಲ್ಯಾಂಡರ್ ವಿಕ್ರಮ್​ನ ಪ್ರತಿಕೃತಿ
ಚಂದ್ರಯಾನ ನಡೆಸಿದ ರಾಕೆಟ್​ ಹಾಗೂ ಲ್ಯಾಂಡರ್ ವಿಕ್ರಮ್​ನ ಪ್ರತಿಕೃತಿ

'ಇಂದು ಬೆಳಗ್ಗೆ 11 ಗಂಟೆಗೆ ಗಣಪನಿಗೆ ಮಹಾಮಂಗಳಾರತಿ ಮಾಡುವ ಮೂಲಕ ಮೆರವಣಿಗೆಗೆ ಚಾಲನೆ ಸಿಗಲಿದೆ. ಮೆರವಣಿಗೆಯಲ್ಲಿ ವಿವಿಧ ಕಲಾ ತಂಡಗಳು ಭಾಗಿಯಾಗಲಿವೆ. ಮೆರವಣಿಗೆಯ ಉದ್ದಕ್ಕೂ ವಿವಿಧ ಸಂಘ ಸಂಸ್ಥೆಗಳು, ಪ್ರಸಾದ, ನೀರು ಹಾಗೂ ಊಟ ಸೇರಿದಂತೆ ಸಿಹಿ ಹಂಚಿಕೆ ಮಾಡಲಿದ್ದಾರೆ. ಮೆರವಣಿಗೆಯು ಶಾಂತಿಯುತವಾಗಿ ಸಾಗಬೇಕು ಎಂದು ಪೊಲೀಸರು ವಿಶೇಷ ಭದ್ರತೆ ಮಾಡಿದ್ದಾರೆ. ಗಣಪನ ಮೆರವಣಿಗೆ ಹಾಗೂ ಈದ್ ಮಿಲಾದ್ ಸಹ ಚೆನ್ನಾಗಿ ನಡೆಯಲು ಜಿಲ್ಲಾಡಳಿತ ಎಲ್ಲಾ ಕ್ರಮ ತೆಗೆದುಕೊಂಡಿದೆ' ಎನ್ನುತ್ತಾರೆ ಶಾಸಕರೂ ಆಗಿರುವ ಹಿಂದೂ ಮಹಾ ಮಂಡಳ ಗಣಪತಿ ಸಮಿತಿಯ ಕಾರ್ಯದರ್ಶಿ ಚನ್ನಬಸಪ್ಪ.

'ಹಿಂದೂ ಮಹಾಮಂಡಳದ ಗಣಪನ ಮೆರವಣಿಗೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಲು ಪೊಲೀಸ್ ಇಲಾಖೆ ಸರ್ವ ಸನ್ನದ್ದವಾಗಿದೆ. ಇದಕ್ಕಾಗಿ 5 ಜನ ಎಎಸ್ಪಿ, 14 ಜನ ಡಿವೈಎಸ್ಪಿ, 40 ಸಿಪಿಐ 40, 75 ಪಿಎಸ್​ಐ, 2,500 ಎಎಸ್ಐ, ಹೆಚ್​​ಸಿ, ಪಿಸಿ ಮತ್ತು ಹೋಂ ಗಾರ್ಡ್ ಸಿಬ್ಬಂದಿ, 10 ಡಿಎಆರ್ ತುಕಡಿ, 15 ಕೆಎಸ್ಆರ್​​ಪಿ ತುಕಡಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ. 2 ಆರ್.ಎ.ಎಫ್ ಕಂಪನಿಗಳು 100 ವಿಡಿಯೋ ಕ್ಯಾಮರಾಗಳು ಮತ್ತು 8 ಡ್ರೋಣ್ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಮೆರವಣಿಗೆ ಮಾರ್ಗ ಮತ್ತು ಪ್ರಮುಖ ಸ್ಥಳಗಳಲ್ಲಿ 500ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿರುತ್ತದೆ'ಎಂದು ಎಸ್​​ಪಿ ಮಿಥುನ್ ಕುಮಾರ್ ತಿಳಿಸಿದ್ದಾರೆ.

ಇದನ್ನೂ ಓದಿ: ಸುವರ್ಣ ಮಹೋತ್ಸವ ಹೊಸ್ತಿಲಿನಲ್ಲಿ ಹುಬ್ಬಳ್ಳಿ ಕಾ ರಾಜಾ.. ಈ ಗಣಪತಿ ಪ್ರತಿಷ್ಠಾಪನೆ ಹಿನ್ನೆಲೆ ಏನು ಗೊತ್ತಾ?

Last Updated :Sep 28, 2023, 11:32 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.