ETV Bharat / bharat

ರೆಬೆಲ್​ ಆಗುತ್ತಿರುವ 'ರೆಮಲ್': ನಾಳೆ ಪಶ್ಚಿಮ ಬಂಗಾಳ, ಬಾಂಗ್ಲಾದೇಶದ ಕರಾವಳಿಗೆ ಅಪ್ಪಳಿಸುವ ನಿರೀಕ್ಷೆ - cyclone remal

author img

By ETV Bharat Karnataka Team

Published : May 25, 2024, 3:50 PM IST

'ರೆಮಲ್' ಚಂಡಮಾರುತ ಭಾನುವಾರ ಬಾಂಗ್ಲಾದೇಶದ ಖೇಪುಪಾರಾ ಮತ್ತು ಪಶ್ಚಿಮ ಬಂಗಾಳದ ಸಾಗರ್ದ್ವೀಪ್ ಪ್ರದೇಶಗಳಿಗೆ ಅಪ್ಪಳಿಸುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

'ರೆಮಲ್' ಚಂಡಮಾರುತ
'ರೆಮಲ್' ಚಂಡಮಾರುತ (ಸಾಂದರ್ಭಿಕ ಚಿತ್ರ (ETV Bharat/ File))

ಕೋಲ್ಕತ್ತಾ(ಪಶ್ಚಿಮ ಬಂಗಾಳ): ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಉಂಟಾಗಿರುವ 'ರೆಮಲ್' ಚಂಡಮಾರುತ ಭಾನುವಾರ ಬಾಂಗ್ಲಾದೇಶದ ಖೇಪುಪಾರಾ ಮತ್ತು ಪಶ್ಚಿಮ ಬಂಗಾಳದ ಸಾಗರ್ದ್ವೀಪ್ ಪ್ರದೇಶಗಳಿಗೆ ಅಪ್ಪಳಿಸುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಸಮಯದಲ್ಲಿ ಗಾಳಿ ಗಂಟೆಗೆ 110 ರಿಂದ 135 ಕಿ.ಮೀ ವೇಗದಲ್ಲಿ ಬೀಸಬಹುದು ಎಂದು ಅಲಿಪುರ್ ಹವಾಮಾನ ಇಲಾಖೆ ಮೊದಲೇ ಎಚ್ಚರಿಕೆಯನ್ನೂ ರವಾನಿಸಿದೆ. ಬಂಗಾಳಕೊಲ್ಲಿಯಲ್ಲಿ ಕೇಂದ್ರೀಕೃತವಾಗಿರುವ ವಾಯುಭಾರ ಕುಸಿತವು ಕ್ರಮೇಣ ತೀವ್ರಗೊಂಡು ಚಂಡಮಾರುತವಾಗಿ ಬದಲಾಗುತ್ತದೆ.

ಶನಿವಾರ ಬೆಳಗ್ಗೆ ಐಎಂಡಿ ಅವಲೋಕನಗಳ ಪ್ರಕಾರ, ಪೂರ್ವ - ಮಧ್ಯ ಬಂಗಾಳ ಕೊಲ್ಲಿಯಲ್ಲಿ ಕೇಂದ್ರೀಕೃತವಾಗಿರುವ ಕಡಿಮೆ ಒತ್ತಡವು ಕಳೆದ ಆರು ಗಂಟೆಗಳಿಂದ 15 ಕಿ.ಮೀ ವೇಗದಲ್ಲಿ ಚಲಿಸುತ್ತಿದೆ. ಚಂಡಮಾರುತ ಶನಿವಾರ ಬೆಳಗ್ಗೆ 5: 30 ರ ಸುಮಾರಿಗೆ ಪೂರ್ವ-ಮಧ್ಯ ಬಂಗಾಳ ಕೊಲ್ಲಿಯಲ್ಲಿತ್ತು. ಸದ್ಯ ರೆಮಲ್​ ಬಾಂಗ್ಲಾದೇಶದ ದಕ್ಷಿಣ ಖೇಪುಪಾರಾದಿಂದ 490 ಕಿ.ಮೀ, ಆಗ್ನೇಯ ಸಾಗರದ್ವೀಪದಿಂದ 380 ಕಿ.ಮೀ, ದಕ್ಷಿಣ 24 ಪರಗಣಗಳಲ್ಲಿ ಆಗ್ನೇಯ ಕ್ಯಾನಿಂಗಿನಿಂದ 530 ಕಿ.ಮೀ ದೂರದಲ್ಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ತೀವ್ರ ವಾಯುಭಾರ ಕುಸಿತದಿಂದ ಚಂಡಮಾರುತ ಉತ್ತರದ ಕಡೆಗೆ ಚಲಿಸುತ್ತದೆ ಮತ್ತು ಪೂರ್ವ ಮಧ್ಯ ಬಂಗಾಳ ಕೊಲ್ಲಿ ಮತ್ತು ಉತ್ತರ ಬಂಗಾಳ ಕೊಲ್ಲಿಯಲ್ಲಿ ಶನಿವಾರ ಸಂಜೆ ಚಂಡಮಾರುತ ತೀವ್ರಗೊಳ್ಳುತ್ತದೆ. ನಂತರ ಚಂಡಮಾರುತ ವಾಯುವ್ಯ ಮತ್ತು ಪಕ್ಕದ ಈಶಾನ್ಯ ಬಂಗಾಳ ಕೊಲ್ಲಿಯಲ್ಲಿ ಉಳಿಯುತ್ತದೆ. ಬಳಿಕ ಇದು ಬಾಂಗ್ಲಾದೇಶ ಮತ್ತು ಪಶ್ಚಿಮ ಬಂಗಾಳ ಕರಾವಳಿಯತ್ತ ಸಾಗಲಿದೆ. ಇದರಿಂದ ಪಶ್ಚಿಮ ಬಂಗಾಳದ 24 ಪರಗಣಗಳು ಮತ್ತು ಪೂರ್ವ ಮೇದಿನಿಪುರದಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ಈ ಚಂಡಮಾರುತ ಕೋಲ್ಕತ್ತಾ, ಹೌರಾ, ಹೂಗ್ಲಿ ಮತ್ತು ನಾಡಿಯಾ ಜಿಲ್ಲೆಗಳ ಮೇಲೂ ಪರಿಣಾಮ ಬೀರಲಿದೆ.

ಅಲಿಪುರ್ ಹವಾಮಾನ ಇಲಾಖೆಯು ಭಾನುವಾರ ಮತ್ತು ಸೋಮವಾರ ಎರಡು ದಿನಗಳ ಕಾಲ ತೀವ್ರ ಹವಾಮಾನ ಪರಿಸ್ಥಿಯ ಎಚ್ಚರಿಕೆ ನೀಡಿದೆ. ಚಂಡಮಾರುತವು ಇಂದು ನಡೆಯುತ್ತಿರುವ ಲೋಕಸಭಾ ಚುನಾವಣೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಹವಾಮಾನ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಚಂಡಮಾರುತದಿಂದ ದಕ್ಷಿಣ 24 ಪರಗಣಗಳು ಹೆಚ್ಚು ಬಾಧಿತ ಜಿಲ್ಲೆಯಾಗುವ ಸಾಧ್ಯತೆಯಿದೆ ಮತ್ತು ಹೆಚ್ಚಿನ ಉಬ್ಬರವಿಳಿತದ ಸಮಯದಲ್ಲಿ ಸಮುದ್ರದ ನೀರು ಉಕ್ಕಿ ಹರಿಯುವುದರಿಂದ ಅಣೆಕಟ್ಟುಗಳು ಹಾನಿಗೊಳಗಾಗುವ ಅಪಾಯವಿದೆ.

ಇದನ್ನೂ ಓದಿ: ಗನ್​ಪೌಡರ್​ ಫ್ಯಾಕ್ಟರಿ ಸ್ಫೋಟ, 15ಕ್ಕೂ ಹೆಚ್ಚು ಮಂದಿ ಸಾವು ಶಂಕೆ, ಕಂಪಿಸಿದ ಮನೆಗಳು - Gunpowder Factory Blast

ETV Bharat Logo

Copyright © 2024 Ushodaya Enterprises Pvt. Ltd., All Rights Reserved.