ETV Bharat / state

ಪ್ರತಾಪ್​ ಸಿಂಹ ಸರ್ವಜ್ಞ ಇದ್ದಂತೆ ಅವರ ಚಿಂತನೆಗಳಿಗೆ ಸರಿಸಾಟಿಯಾಗುವ ರಾಜಕಾರಣಿಗಳು ಇಲ್ಲ: ಲಕ್ಷ್ಮೀ ಹೆಬ್ಬಾಳ್ಕರ್

author img

By

Published : Jun 4, 2023, 3:44 PM IST

Updated : Jun 4, 2023, 10:53 PM IST

ಗೃಹ ಲಕ್ಷ್ಮೀ ಯೋಜನೆ ಕುರಿತು ಪ್ರತಾಪ್​ ಸಿಂಹ ಅವರು ನೀಡಿದ ಹೇಳಿಕೆಗೆ ಲಕ್ಷ್ಮೀ ಹೆಬ್ಬಾಳ್ಕರ್ ಟಾಂಗ್​ ಕೊಟ್ಟಿದ್ದಾರೆ.

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​

ಪ್ರತಾಪ್​ ಸಿಂಹ ನೀಡಿದ ಹೇಳಿಕೆಗೆ ಲಕ್ಷ್ಮೀ ಹೆಬ್ಬಾಳ್ಕರ್ ಟಾಂಗ್​

ಶಿವಮೊಗ್ಗ : ಸಂಸದ ಪ್ರತಾಪ್​ ಸಿಂಹ ಸರ್ವಜ್ಞ ಇದ್ದಂತೆ. ಅವರ ಚಿಂತನೆಗಳಿಗೆ ಹಾಗು ಪ್ರಶ್ನೆಗಳಿಗೆ ಸರಿಸಾಟಿ ಆಗುವ ರಾಜಕಾರಣಿಗಳು ರಾಜ್ಯದಲ್ಲಿ ಮತ್ತು ದೇಶದಲ್ಲಿ ಯಾರೂ ಇಲ್ಲ. ಇದಕ್ಕಾಗಿಯೇ ಜನರು ಅವರನ್ನು ಸುಮ್ಮನಿರಿಸಿದ್ದಾರೆ ಎಂದು ಸಂಸದ ಪ್ರತಾಪ್​ ಸಿಂಹ ಅವರಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​ ತಿರುಗೇಟು ನೀಡಿದ್ದಾರೆ.

ಇಂದು ಭದ್ರಾವತಿ ಪಟ್ಟಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರತಾಪ ಸಿಂಹ ಹೇಳಿಕೆ ಟಾಂಗ್​ ಕೊಟ್ಟರು. ರಾಜ್ಯ ಸರ್ಕಾರದ ಗೃಹ ಲಕ್ಷ್ಮೀ ಯೋಜನೆಯಡಿ ಮುಸ್ಲಿಂ ಸಮುದಾಯದಲ್ಲಿ ಒಂದು ಮನೆಯಲ್ಲಿ 3-4 ಜನ ಹೆಂಡತಿಯರು ಇರುತ್ತಾರೆ. ಅವರಲ್ಲಿ ಯಾರಿಗೆ ಗೃಹ ಲಕ್ಷ್ಮೀ ಯೋಜನೆ ನೀಡುತ್ತಾರೆ. ಸಂಸಾರದಲ್ಲಿ ಜಗಳ ಹಚ್ಚುವ ಕೆಲಸವನ್ನು ರಾಜ್ಯ ಕಾಂಗ್ರೆಸ್​ ಸರ್ಕಾರ ಮಾಡುತ್ತಿದೆ ಎಂದು ಪ್ರತಾಪ್​ ಸಿಂಹ ಶನಿವಾರ ಹೇಳಿದ್ದರು. ಈ ಹೇಳಿಕೆ ಸಂಬಂಧ ಪ್ರತಿಕ್ರಿಯಿಸಿದ ಲಕ್ಷ್ಮೀ ಹೆಬ್ಬಾಳ್ಕರ್, ಯಾವ ರೀತಿ ಆಡಳಿತ ಕೊಡಬೇಕು. ಯಾವ ರೀತಿ ಸಮಾಜ ಕಟ್ಟಬೇಕು ಎಂಬುದು ನಮಗೆ ಗೊತ್ತಿದೆ. ಅದಕ್ಕಾಗಿಯೇ ಜನರು ಅಧಿಕಾರ ಕೊಟ್ಟಿದ್ದಾರೆ. ಹೀಗಾಗಿ ಅವರು ಸ್ವಲ್ಪ ದಿನ ಸುಮ್ಮನಿದ್ದರೆ ಒಳ್ಳೆಯದು ಎಂದರು.

ಭದ್ರಾವತಿಗೆ ಮೊಮ್ಮಗಳನ್ನು ನೋಡಲು ಬಂದಿದ್ದೇನೆ : ನಾನು ಸಚಿವೆಯಾದ ಬಳಿಕ ಇದೇ ಮೊದಲ ಬಾರಿಗೆ ಭದ್ರಾವತಿಗೆ ಬಂದಿದ್ದೇನೆ. ಕಳೆದ ವಾರ ಮೊಮ್ಮಗಳು ಹುಟ್ಟಿದ್ದಳು. ನನ್ನ ಸೊಸೆ ಕೂಡ ಭದ್ರಾವತಿಯವಳು. ಹಾಗೆ ಸಚಿವ ಸಂಪುಟದಲ್ಲಿ ಪ್ರಮಾಣವಚನ ಸ್ವೀಕರಿಸುವ ಸಂದರ್ಭದಲ್ಲಿ ಮಗುವನ್ನು ನೋಡಲು ಸಾಧ್ಯವಾಗಿರಲಿಲ್ಲ. ಹಾಗಾಗಿ ಇಂದು ಬಂದಿದ್ದೇನೆ ಎಂದು ಸಚಿವರು ಹೇಳಿದರು.

ಎಲ್ಲಾ ಗ್ಯಾರಂಟಿ ಯೋಜನೆಯನ್ನು ಜಾರಿ ಮಾಡುತ್ತೇವೆ : ರಾಜ್ಯದಲ್ಲಿ 88% ಜನ ಬಿಪಿಎಲ್ ಮತ್ತು ಎಪಿಎಲ್ ಕಾರ್ಡ್ ಹೋಲ್ಡರ್ಸ್​ ಇದ್ದಾರೆ. ಅವರ ಅಂಕಿ ಅಂಶಗಳನ್ನು ತೆಗೆದುಕೊಂಡು ರಾಜ್ಯ ಸರ್ಕಾರ ಅವರಿಗೆ ಗೃಹಲಕ್ಷ್ಮಿ ಯೋಜನೆ ವಿಸ್ತರಿಸಲಾಗುತ್ತದೆ. ಅದಕ್ಕೆ ಕೆಲ ಸಮಯ ಬೇಕಾಗುತ್ತದೆ. ಆ ಕಾರಣದಿಂದ ಸ್ವಲ್ಪ ವಿಳಂಬವಾಗುತ್ತಿದೆ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದರು.

ಹಿಂದೆ ನಡೆದ ಹಗರಣಗಳ ತನಿಖೆ : ಹಿಂದಿನ ಸರ್ಕಾರದ ಎಲ್ಲಾ ಹಗರಣಗಳನ್ನು ನಮ್ಮ ಸರ್ಕಾರದಲ್ಲಿ ತನಿಖೆ ಮಾಡಲಾಗುತ್ತದೆ ಎಂಬ ವಿಚಾರವನ್ನು ಕ್ಯಾಬಿನೆಟ್ ನಲ್ಲಿ ಚರ್ಚಿಸಲಾಗುತ್ತದೆ. ನಾವು 40% ಭ್ರಷ್ಟಾಚಾರ ವಿರುದ್ಧ ಹೋರಾಟ ಮಾಡಿ ಅಧಿಕಾರಕ್ಕೆ ಬಂದಿದ್ದೇವೆ. ಭ್ರಷ್ಟಾಚಾರ, ಬೆಲೆ ಏರಿಕೆ ತೆಗೆಯುವುದೇ ಕಾಂಗ್ರೆಸ್ ಸರ್ಕಾರದ ಉದ್ದೇಶವಾಗಿದೆ. ರಾಜ್ಯದ ಜನರ ಮನದಲ್ಲಿ ಮಂದಹಾಸ ಮೂಡಿಸುವುದಕ್ಕೆ ನಮ್ಮ ಸರ್ಕಾರದ ಯೋಜನೆಗಳನ್ನು ಜಾರಿಗೆ ತರುತ್ತೇವೆ ಎಂದರು.

ಗುಣಮಟ್ಟದ ಆಹಾರ ಪೂರೈಕೆ : ಕಳಪೆ ಗುಣಮಟ್ಟದ ಮೊಟ್ಟೆ ವಿತರಣೆಗೆ ಸಂಬಂಧಿಸಿದಂತೆ ನಮ್ಮ ಅಧಿಕಾರಿಗಳ ಜೊತೆ ಚರ್ಚೆ ನಡೆಸಲಾಗಿದೆ. ಈಗಾಗಲೇ ಅನುಭವಸ್ಥರ ಜೊತೆ ಕುಳಿತುಕೊಂಡು ಈ ಇಲಾಖೆ ಬಗ್ಗೆ ತಿಳಿದುಕೊಳ್ಳುವ ಪ್ರಯತ್ನ ಮಾಡಿದ್ದೇನೆ. ಗುಣಮಟ್ಟದ ಆಹಾರ ಪೂರೈಕೆ ಮಾಡುವುದು ನಮ್ಮ ಗುರಿಯಾಗಿದೆ. ಇಲಾಖೆಯಲ್ಲಿ ಎಲ್ಲೆಲ್ಲಿ ನ್ಯೂನತೆಗಳಿವೆಯೋ ಅದನ್ನು ಸರಿ ಮಾಡುತ್ತೇವೆ. ಇಲಾಖೆಯಲ್ಲಿ ಸೋರುವಿಕೆಯನ್ನು ತಡೆಗಟ್ಟಿ ನಾವು ಗುಣಮಟ್ಟದ ಆಹಾರವನ್ನು ಪೂರೈಕೆ ಮಾಡುವತ್ತ ಗಮನ ಹರಿಸುತ್ತೇವೆ. ನಮ್ಮ ಸರ್ಕಾರ ಪೌಷ್ಟಿಕತೆ, ಉತ್ತಮ ಆರೋಗ್ಯದ ಕಡೆ ಗಮನವನ್ನು ಕೊಡುತ್ತೆ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.

ಸಿದ್ದರಾಮಯ್ಯ ಅವರೇ ಐದು ವರ್ಷ ಸಿಎಂ ವಿಚಾರ : ಇನ್ನು ಐದು ವರ್ಷ ಕೂಡ ಸಿಎಂ ಸಿದ್ದರಾಮಯ್ಯ ಅವರೇ ಸಿಎಂ ಆಗಿ ಮುಂದುವರೆಯುತ್ತಾರೆಯೇ ಎಂಬ ಮಾಧ್ಯಮಗಳ ಪ್ರಶ್ನೆಗೆ ಈ ಬಗ್ಗೆ ನನಗೆ ಗೊತ್ತಿಲ್ಲ. ನಾನು ಆ ವಿಷಯ ಮಾತನಾಡುವಷ್ಟು ದೊಡ್ಡವಳಲ್ಲ. ಆ ವಿಷಯವನ್ನು ಹೈಕಮಾಂಡ್ ನೋಡಿಕೊಳ್ಳುತ್ತದೆ ಎಂದರು.

ಯಾವುದೇ ಜಿಲ್ಲೆಯ ಉಸ್ತುವಾರಿ ನೀಡಿದರು ಸಂತೋಷ : ರಾಜ್ಯದ ಜನರ ಆಶೀರ್ವಾದ ಹಾಗೂ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್​ ಅವರ ಆಶೀರ್ವಾದದಿಂದ ನಾನು ಸಚಿವೆಯಾಗಿದ್ದೇನೆ. ನನಗೆ ಯಾವುದೇ ಅಸಮಾಧಾನ ಇಲ್ಲ. ಯಾವುದೇ ಜಿಲ್ಲೆಯ ಉಸ್ತುವಾರಿ ಕೊಟ್ಟರೂ ಜವಾಬ್ದಾರಿಯಿಂದ ನಿರ್ವಹಿಸುತ್ತೇನೆ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಸ್ಪಷ್ಟಪಡಿಸಿದರು.

ಇದನ್ನೂ ಓದಿ : ಟೆಕೆಟ್ ಸಿಕ್ಕಿದ್ದರೆ ಹರಿಹರದಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸುತ್ತಿತ್ತು, ಪಿತೂರಿಯಿಂದ ನನಗೆ ಟಿಕೆಟ್ ಕೈತಪ್ಪಿದೆ: ಎಸ್.ರಾಮಪ್ಪ

Last Updated :Jun 4, 2023, 10:53 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.