ETV Bharat / state

'ನನ್ನನ್ನೂ ಹತ್ಯೆ ಮಾಡಿ'.. ಮೈಸೂರಲ್ಲಿ ಸಚಿವ ಅಶ್ವತ್ಥನಾರಾಯಣ್ ವಿರುದ್ಧ ಬೃಹತ್ ಪ್ರತಿಭಟನೆ

author img

By

Published : Feb 25, 2023, 8:59 PM IST

Updated : Feb 25, 2023, 11:06 PM IST

protest against Minister Ashwath Narayan in mysuru
ಮೈಸೂರು: ಸಚಿವ ಅಶ್ವತ್ಥ್ ನಾರಾಯಣ್ ವಿರುದ್ಧ ಬೃಹತ್ ಪ್ರತಿಭಟನೆ

ಸಿದ್ದರಾಮಯ್ಯ ಕುರಿತು ಸಚಿವ ಡಾ ಸಿ ಎನ್ ಅಶ್ವತ್ಥ್ ನಾರಾಯಣ್ ವಿವಾದಾತ್ಮಕ ಹೇಳಿಕೆ - ಮೈಸೂರಿನಲ್ಲಿ ಸ್ವಾಭಿಮಾನಿ ಹೋರಾಟ ಸಮಿತಿಯಿಂದ ಬೃಹತ್ ಪ್ರತಿಭಟನೆ - ನನ್ನನ್ನೂ ಹತ್ಯೆ ಮಾಡಿ ಎಂಬ ಫಲಕ ಪ್ರದರ್ಶನ

ಮೈಸೂರಲ್ಲಿ ಸಚಿವ ಅಶ್ವತ್ಥನಾರಾಯಣ್ ವಿರುದ್ಧ ಬೃಹತ್ ಪ್ರತಿಭಟನೆ

ಮೈಸೂರು: ಟಿಪ್ಪು ಸುಲ್ತಾನ್​ನನ್ನು ಹೊಡೆದು ಹಾಕಿದಂತೆ, ಇವರನ್ನೂ ಹೊಡೆದು ಹಾಕಿ ಎಂದು ಮಂಡ್ಯ ಜಿಲ್ಲೆಯ ಜನತೆಯನ್ನು ಸಿದ್ದರಾಮಯ್ಯ ವಿರುದ್ಧ ಎತ್ತಿಕಟ್ಟುವ ಹೇಳಿಕೆ ನೀಡಿದ್ದ ಸಚಿವ ಡಾ. ಸಿ.ಎನ್. ಅಶ್ವತ್ಥ ನಾರಾಯಣ್ ವಿರುದ್ಧ ಮೈಸೂರಿನಲ್ಲಿ ಸ್ವಾಭಿಮಾನಿ ಹೋರಾಟ ಸಮಿತಿ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು. ನಗರದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನ ಮುಂಭಾಗ ಜಮಾಯಿಸಿದ ಪ್ರತಿಭಟನಾಕಾರರು, ನನ್ನನ್ನೂ ಹತ್ಯೆ ಮಾಡಿ ಎಂಬ ಫಲಕಗಳನ್ನು ಹಿಡಿದು, ಅಲ್ಲಿಂದ ಬೃಹತ್ ಪ್ರತಿಭಟನೆ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿ ತಲುಪಿ, ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ್ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಜಿಲ್ಲಾಧಿಕಾರಿ ಕಚೇರಿ ಬಳಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಹಿರಿಯ ರಂಗಕರ್ಮಿ ಬಿ. ಬಸವಲಿಂಗಯ್ಯ ಅವರು, ಸರ್ವಜನಾಂಗದ ಶಾಂತಿಯ ತೋಟದಲ್ಲಿ ವಿಕೃತ ಕೋತಿಗಳು ನುಗ್ಗಿವೆ. ಹೆಂಡ ಹಾಗೂ ಮಾಂಸ ತಿಂದು ಮಾತನಾಡುತ್ತಿವೆ, ಏನೆಲ್ಲ ಅವರು ಮಾಡುವುದಿಲ್ಲವೋ ಅದನ್ನು ಬೇರೆಯವರಿಗೆ ಹೇಳುತ್ತಾರೆ ಎಂದು ಹರಿಹಾಯ್ದರು.

ಭಾರತ ಚರಿತ್ರೆಯನ್ನು ಬದಲಾವಣೆ ಮಾಡುವ ಸಾಧ್ಯತೆ ಇದೆ: ರಾಜ್ಯದ 7 ಕೋಟೆ ಜನರೆಲ್ಲಾ ನನ್ನನ್ನು ಕೊಲ್ಲಿ ಎಂದು ಹೇಳಿದರೆ ಇವರು ಏನೂ ಮಾಡಕ್ಕೆ ಆಗಲ್ಲ. ಅಲ್ಲದೇ, ಯಾವ ನಾಯಕನನ್ನು ಹತ್ತಿಕ್ಕಲು ಆಗುವುದಿಲ್ಲ, ಗಾಂಧಿ ಹಿಂದೆ ಹೇಗೆ ಜನ ಹೊರಟರೋ, ಅದೇ ರೀತಿಯಲ್ಲಿ ಈ ಹೋರಾಟ ನಾಂದಿಯಾಗಬೇಕು. ಕರ್ನಾಟಕದ ಮುಂದಿನ ಚುನಾವಣೆ ಭಾರತ ಚರಿತ್ರೆಯನ್ನು ಬದಲಾವಣೆ ಮಾಡುವ ಸಾಧ್ಯತೆ ಇದೆ. ಪಾದಕ್ಕೆ ನಮಸ್ಕಾರ ಮಾಡುವ ನೆಪದಲ್ಲಿ ಗಾಂಧೀಜಿ ಅವರನ್ನು ಕೊಲ್ಲಲಾಯಿತು. ಅಂತರ್ಜಾತಿ ವಿವಾಹ ಮಾಡಿದರು ಎಂಬ ಕಾರಣಕ್ಕೆ ಬಸವಣ್ಣನವರು ಪುರೋಹಿತ ಶಾಹಿಗಳಿಂದ ಕೊಲ್ಲಲ್ಪಟ್ಟರು. ವಿರೋಧ ಪಕ್ಷಗಳನ್ನು ನಿರ್ಮೂಲನೆ ಮಾಡುವುದಾಗಿ ಹೀಗೆ ಮಾತಾಡುತ್ತಾರೆ. ಇದು ದ್ವೇಷದ ಭಾಷೆಯಾಗಿದೆ ಎಂದು ವಾಗ್ದಾಳಿ ನಡೆಸಿದರು.

ಯಾವ ನಾಯಕರು ಭ್ರಷ್ಟಾಚಾರದ ವಿರುದ್ಧ ಮಾತಾಡುತ್ತಾರೋ ಅವರನ್ನು ದೈಹಿಕವಾಗಿ ಮುಗಿಸಿ ಎಂದು ಹೇಳುತ್ತಾರೆ. ಇದೇ ರೀತಿ ವಿಚಾರವಾದಿಗಳಾಗಿದ್ದ ಎಂ.ಎಂ. ಕಲ್ಬುರ್ಗಿ, ಗೌರಿ ಲಂಕೇಶ್ ಅವರನ್ನು ಮುಗಿಸಿದರು. ಇವರನ್ನು ಕೊಂದವರು ಯಾರೆಂದು ಗೊತ್ತಿದ್ದರೂ ಸುಮ್ಮನಿದ್ದಾರೆ. ಆದರೆ ಅವರ ಚಿಂತನೆಗಳನ್ನು ಕೊಲ್ಲಲು ಇವರಿಂದ ಸಾಧ್ಯವಿಲ್ಲ. ಚರಿತ್ರೆ, ಪುರಾಣಗಳನ್ನು ತಿರುಚುತ್ತಿದ್ದಾರೆ. ಇದು ಪ್ರಜಾಪ್ರಭುತ್ವಕ್ಕೆ ಶೋಭೆ ತರುವಂತದ್ದಲ್ಲ ಎಂದು ಬಸವಲಿಂಗಯ್ಯ ಹೇಳಿದರು.

ಸಿದ್ದರಾಮಯ್ಯ ಅವರು ಬಿಜೆಪಿಗೆ ಸಿಂಹಸ್ವಪ್ನರಾಗಿದ್ದಾರೆ: ಎಂಎಲ್‌ಸಿ ಡಾ. ಡಿ.ತಿಮ್ಮಯ್ಯ ಮಾತನಾಡಿ, ಸಿದ್ದರಾಮಯ್ಯ ಅವರು ಬಿಜೆಪಿಗೆ ಸಿಂಹಸ್ವಪ್ನರಾಗಿದ್ದಾರೆ, ಆದ್ದರಿಂದ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ್ ಇಂತಹ ಹೇಳಿಕೆ ನೀಡಿದರು. ಅತಿವೃಷ್ಠಿ ಸಮಯದಲ್ಲಿ ಯಾವ ಒಬ್ಬ ನಾಯಕ ಬರಲಿಲ್ಲ, ಯಾವ ಒಬ್ಬ ಶಾ ನೂ ಬರಲಿಲ್ಲ, ಇವತ್ತು ಪ್ರತಿ ವಾರ ಬರುತ್ತಿದ್ದಾರೆ. ಇದು ಸಿದ್ದರಾಮಯ್ಯ ಅವರ ಬಗ್ಗೆ ಇರುವ ಭಯ ಎಂದರು.

ಪ್ರತಿಭಟನೆಯಲ್ಲಿ ನಗರಾಧ್ಯಕ್ಷ ಆರ್. ಮೂರ್ತಿ, ಜಿಲ್ಲಾಧ್ಯಕ್ಷ ಡಾ. ಬಿ. ಜೆ. ಕುಮಾರ್, ಮಾಜಿ ಶಾಸಕರಾದ ವೆಂಕಟೇಶ್, ಎಂ.ಕೆ. ಸೋಮಶೇಖರ್, ಜಿಪಂ ಮಾಜಿ ಅಧ್ಯಕ್ಷ ಕೆ. ಮರಿಗೌಡ, ಬಿ.ಎಂ. ರಾಮು, ಶಿವಣ್ಣ, ನಾಗಭೂಷಣ್, ಕೆ.ಎಸ್. ಶಿವರಾಮು, ಎಂ. ಲಕ್ಷ್ಮಣ್, ಹರೀಶ್ ಗೌಡ, ಡಾ. ಬಿ.ಜೆ. ವಿಜಯಕುಮಾರ್‌, ಇತತರು ಭಾಗವಹಿಸಿದ್ದರು.

ಇದನ್ನೂ ಓದಿ:ಜನರ ಸೇವೆ ಮಾಡುವ ಬಿಜೆಪಿಯನ್ನು ವಿಧಾನಸಭಾ ಚುನಾವಣೆಯಲ್ಲಿ ಆರಿಸಿ ತನ್ನಿ: ಕಟೀಲ್ ಮನವಿ

Last Updated :Feb 25, 2023, 11:06 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.