ETV Bharat / state

ಕುರುಬೂರು ರಸ್ತೆ ಅಪಘಾತ: ಮರಣೋತ್ತರ ಪರೀಕ್ಷೆ ಬಳಿಕ ಸ್ವಗ್ರಾಮಕ್ಕೆ ಮೃತದೇಹಗಳ ರವಾನೆ

author img

By

Published : May 30, 2023, 11:49 AM IST

ಟಿ.ನರಸೀಪುರ ಬಳಿ ನಿನ್ನೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟ 10 ಜನರ ಶವಗಳ ಮರಣೋತ್ತರ ಪರೀಕ್ಷೆ ನಡೆಸಿ ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ.

ಕುರುಬೂರು ರಸ್ತೆ ಅಪಘಾತ
ಕುರುಬೂರು ರಸ್ತೆ ಅಪಘಾತ

ಮೈಸೂರು: ಟಿ.ನರಸೀಪುರ ಸಮೀಪದ ಕುರುಬೂರು ಗ್ರಾಮದ ಹೆದ್ದಾರಿಯಲ್ಲಿ ಖಾಸಗಿ ಬಸ್ ಮತ್ತು ಕಾರ್ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಹತ್ತು ಜನ ಸಾವನ್ನಪ್ಪಿದ್ದರು. ಮೃತದೇಹಗಳ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಮುಂಜಾನೆ ಸ್ವಗ್ರಾಮಕ್ಕೆ ರವಾನೆ ಮಾಡಲಾಯಿತು.

ಸೋಮವಾರ ಮಧ್ಯಾಹ್ನ ಟಿ.ನರಸೀಪುರದ ಕುರುಬೂರು ಗ್ರಾಮದ ರಾಷ್ಟ್ರೀಯ ಹೆದ್ದಾರಿಯಲ್ಲಿ ಖಾಸಗಿ ಬಸ್ ಮತ್ತು ಇನ್ನೋವಾ ಕಾರಿನ ನಡುವೆ ನಡೆದ ಅಪಘಾತದಲ್ಲಿ ಬಳ್ಳಾರಿ ಮೂಲದ ಸಂಗನಕಲ್ಲು ಗ್ರಾಮದ 9 ಹಾಗೂ ಕಾರಿನ ಚಾಲಕ ಸೇರಿ 10 ಜನರು ದಾರುಣವಾಗಿ ಸಾವನ್ನಪ್ಪಿದ್ದರು. ಇನ್ನೂ ಮೂವರು ಅಪಘಾತದಲ್ಲಿ ಗಾಯಗೊಂಡು ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಕಳೆದ ರಾತ್ರಿ ಕೆ.ಆರ್.ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿತ್ತು. ಇಂದು ಬೆಳಗಿನ ಜಾವ ಬಳ್ಳಾರಿ ಜಿಲ್ಲೆಯ ಸಂಗನಕಲ್ಲು ಗ್ರಾಮಕ್ಕೆ ಆಂಬುಲೆನ್ಸ್ ಮೂಲಕ ಕಳಿಸಲಾಯಿತು.

ಮೈಸೂರಿಗೆ ಆಗಮಿಸಿದ ಸಚಿವ ನಾಗೇಂದ್ರ : ಕಳೆದ ರಾತ್ರಿಯೇ ಮೈಸೂರಿಗೆ ಆಗಮಿಸಿದ ಬಳ್ಳಾರಿ ಗ್ರಾಮಾಂತರ ಕ್ಷೇತ್ರದ ಶಾಸಕ ಹಾಗೂ ಸಚಿವ ನಾಗೇಂದ್ರ, ಕೆ.ಆರ್.ಆಸ್ಪತ್ರೆಗೆ ಆಗಮಿಸಿ, ಗಾಯಾಳುಗಳ ಯೋಗಕ್ಷೇಮ ವಿಚಾರಿಸಿದರು. ಆ ಬಳಿಕ ಶವಾಗಾರದಲ್ಲಿದ್ದ ಮೃತದೇಹಗಳನ್ನು ರಾತ್ರಿಯೇ ಮರಣೋತ್ತರ ಪರೀಕ್ಷೆ ನಡೆಸುವಂತೆ ಮನವಿ ಮಾಡಿದ್ದರು. ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಮೃತದೇಹಗಳನ್ನು ಬಳ್ಳಾರಿಗೆ ತೆಗೆದುಕೊಂಡು ಹೋಗುವ ವ್ಯವಸ್ಥೆಯನ್ನು ರಾತ್ರಿಯೇ ಸಚಿವರು ಮಾಡಿದ್ದರು.

ಮೃತಪಟ್ಟವರ ಕುಟುಂಬದವರು ಖಾನಾವಳಿಗಳನ್ನು ನಡೆಸಿ ಜೀವನ ನಡೆಸುತ್ತಿದ್ದರು. ಇವರ ಕುಟುಂಬದವರಿಗೆ ವೈಯಕ್ತಿಕ ಪರಿಹಾರ ನೀಡುತ್ತೇನೆ. ಅಂತ್ಯಸಂಸ್ಕಾರವನ್ನು ಅವರ ಊರಿನಲ್ಲೇ ಮಾಡುತ್ತೇವೆ ಎಂದು ಸಚಿವರು ಮಾಹಿತಿ ನೀಡಿದರು.

ಶಾಲೆ ರಜೆ ಇದ್ದ ಕಾರಣ ಪ್ರವಾಸ ಬಂದಿದ್ದ ಕುಟುಂಬ : ಬಳ್ಳಾರಿಯ ಸಂಗನಕಲ್ಲು ಗ್ರಾಮದ ಮೂರು ಕುಟುಂಬಗಳು ಮಕ್ಕಳಿಗೆ ಶಾಲೆ ಆರಂಭವಾಗುವ ಮುನ್ನ, ಮೇ.27 ರಂದು ಮೈಸೂರಿಗೆ ಪ್ರವಾಸಕ್ಕೆ ಬಂದಿದ್ದರು. ಬಳ್ಳಾರಿಯಿಂದ ರೈಲಿನಲ್ಲಿ ಬಂದಿದ್ದ ಕುಟುಂಬ, ಮೈಸೂರಿನ ಪ್ರವಾಸಿ ತಾಣಗಳನ್ನು ನೋಡಿ, ಮೈಸೂರಿನಲ್ಲೇ ಬಾಡಿಗೆ ಕಾರು ಪಡೆದು ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ಸ್ವಾಮಿಯ ದರ್ಶನ ಪಡೆಯಲು ಹೋಗಿದ್ದರು. ನಿನ್ನೆ ದರ್ಶನ ಪಡೆದು ಹಿಂತಿರುಗಿದ ವೇಳೆ ಟಿ.ನರಸೀಪುರ ಬಳಿಯ ಕುರುಬೂರು ಗ್ರಾಮದ ಬಳಿ ಭೀಕರ ರಸ್ತೆ ಅಪಘಾತಕ್ಕೆ ಒಳಗಾಗಿ 10 ಜನ ಸ್ಥಳದಲ್ಲೇ ಮೃತಪಟ್ಟಿದ್ದರು. ಮೃತರ ಬಳ್ಳಾರಿಗೆ ಹೋಗಲೆಂದು ನಿನ್ನೆ ಸಂಜೆ 5 ಗಂಟೆಯ ರೈಲಿಗೆ ಟಿಕೆಟ್ ಸಹ ಬುಕ್ ಮಾಡಿದ್ದರು ಎನ್ನಲಾಗಿದೆ. ಸಮಯ ಮೀರುತ್ತಿದೆ ಎಂದು ವೇಗವಾಗಿ ಬರುತ್ತಿದ್ದರು ಎನ್ನಲಾಗಿದೆ.

ಮೃತ ಹತ್ತು ಜನರಲ್ಲಿ 9 ಜನ ಬಳ್ಳಾರಿ ಮೂಲದ ಸಂಗನಕಲ್ಲು ಗ್ರಾಮದವರಾಗಿದ್ದರೆ, ಮತ್ತೊಬ್ಬ ಕಾರಿನ ಚಾಲಕ ಆದಿತ್ಯ ಶ್ರೀ ರಂಗಪಟ್ಟಣದ ಬಳಿಯ ಗ್ರಾಮದವರು. ಮೂರು ವರ್ಷಗಳಿಂದ ಇನ್ನೊವಾ ಕಾರಿನ ಮಾಲಿಕ ಮಂಜುನಾಥ್ ಎಂಬವರ ಬಳಿ ಕಾರು ಚಾಲಕನಾಗಿ ಕೆಲಸ ಮಾಡಿಕೊಂಡಿದ್ದ ಎನ್ನಲಾಗಿದೆ.

ಇದನ್ನೂ ಓದಿ: ಪ್ರವಾಸಕ್ಕೆ ತೆರಳಿದ್ದ ಮೂರು ಕುಟುಂಬಗಳ ಬದುಕಿನ ಪಯಣ ಅಂತ್ಯ: ಮೈಸೂರು ಭೀಕರ ಅಪಘಾತದ ಕೊನೆ ಕ್ಷಣದ ವಿಡಿಯೋ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.