ETV Bharat / state

1.5 ಲಕ್ಷ ಸಂಬಳ ಕೊಟ್ರೂ ಡಾಕ್ಟರ್ ಸಿಗ್ತಿಲ್ಲ, ಇಲ್ಲಿ ಶಿಕ್ಷಣ ಪಡೆದು ವಿದೇಶದಲ್ಲಿ ಕೆಲಸ ಮಾಡ್ತಾರೆ: ಸಚಿವ ಎಸ್​.ಟಿ.ಸೋಮಶೇಖರ್

author img

By

Published : May 24, 2021, 7:49 AM IST

ಸಚಿವ ಎಸ್​.ಟಿ.ಸೋಮಶೇಖರ್
ಸಚಿವ ಎಸ್​.ಟಿ.ಸೋಮಶೇಖರ್

ರಾಜ್ಯದಲ್ಲಿ ವೈದ್ಯರು, ನರ್ಸ್‌ಗಳ ಕೊರತೆ ಇದೆ. ಲಕ್ಷಾತಂರ ರೂಪಾಯಿ ಸಂಬಳ ಕೊಟ್ಟರೂ ಸೇವೆ ಸಿಗುತ್ತಿಲ್ಲ. ಹೀಗಾಗಿ, ಸರ್ಕಾರಿ ಕಾಲೇಜಿನಲ್ಲಿ ಶಿಕ್ಷಣ ಪಡೆಯುವಂತಹ ವಿದ್ಯಾರ್ಥಿಗಳು ಶಿಕ್ಷಣದ ಬಳಿಕ 5 ವರ್ಷಗಳ ಕಾಲ ಗ್ರಾಮೀಣ ಪ್ರದೇಶಗಳಲ್ಲಿ ಕೆಲಸ ಮಾಡಬೇಕು. ಈ ರೀತಿ ನಿಯಮ ಮಾಡುವಂತೆ ಮುಖ್ಯಮಂತ್ರಿಗಳಿಗೆ ತಿಳಿಸಿರುವುದಾಗಿ ಸಚಿವ ಎಸ್‌.ಟಿ ಸೋಮಸೇಖರ್ ಮೈಸೂರಿನಲ್ಲಿ ತಿಳಿಸಿದರು.

ಮೈಸೂರು: ಒಂದೂವರೆ ಲಕ್ಷ ಸಂಬಳ ಕೊಟ್ಟರೂ ಡಾಕ್ಟರ್ ಸಿಗ್ತಿಲ್ಲ. 50 ಸಾವಿರ ಕೊಟ್ಟರೂ ನರ್ಸ್ ಸಿಗುತ್ತಿಲ್ಲ. ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಕರ್ನಾಟಕ ಸರ್ಕಾರ ಮೆಡಿಕಲ್ ಕಾಲೇಜು ಶುರು ಮಾಡಿದೆ. ಇಲ್ಲಿ ಶಿಕ್ಷಣ ಪಡೀತಾರೆ ವಿದೇಶದಲ್ಲಿ ಕೆಲಸ ಮಾಡಲು ಹೋಗ್ತಾರೆ ಎಂದು ಸಚಿವ ಎಸ್​.ಟಿ.ಸೋಮಶೇಖರ್ ಬೇಸರ ವ್ಯಕ್ತಪಡಿಸಿದ್ದಾರೆ.

ಸರ್ಕಾರಿ ಕಾಲೇಜಿನಲ್ಲಿ ಶಿಕ್ಷಣ ಪಡೆಯುವಂತಹ ವಿದ್ಯಾರ್ಥಿಗಳು ಶಿಕ್ಷಣದ ಬಳಿಕ 5 ವರ್ಷಗಳ ಕಾಲ ಗ್ರಾಮೀಣ ಪ್ರದೇಶಗಳಲ್ಲಿ ಕೆಲಸ ಮಾಡಬೇಕು. ಈ ರೀತಿ ನಿಯಮ ಮಾಡುವಂತೆ ಮುಖ್ಯಮಂತ್ರಿಗಳ ಗಮನ ಸೆಳೆದಿರುವುದಾಗಿ ಸಚಿವರು ತಿಳಿಸಿದರು.

ಸಚಿವ ಎಸ್​.ಟಿ.ಸೋಮಶೇಖರ್

ಇನ್ನು, ಕೋವಿಡ್ ಸಂಬಂಧ ಟಾಸ್ಕ್ ಫೋರ್ಸ್ ಸಮಿತಿ ಮಾಡಿ ಚರ್ಚಿಸಲಾಗಿದೆ. ಇನ್ನೂ ಎರಡು-ಮೂರು ಬಾರಿ ಸಭೆ ಮಾಡಲಾಗುವುದು‌. ಮಕ್ಕಳ ಆಸ್ಪತ್ರೆ ತೆರೆಯುವುದು ಮತ್ತು ಅಗತ್ಯ ಔಷಧೋಪಚಾರ, ಯಂತ್ರೋಪಕರಣಗಳು ಬೇಕಾಗುತ್ತದೆ. ಸರ್ಕಾರದ ಮಟ್ಟದಲ್ಲಿ ಏನು ಮುಂಜಾಗ್ರತೆ ತೆಗೆದುಕೊಳ್ಳಬಹುದು ಎಂಬುದನ್ನು ಇನ್ನು ಎರಡು-ಮೂರು ಸಲ ಚರ್ಚೆ ಬಳಿಕ ತೀರ್ಮಾನ ಮಾಡಲಾಗುವುದು ಎಂದರು.

ಹಳ್ಳಿಗಳಲ್ಲಿ ಕೊರೊನಾ ಹೆಚ್ಚಳ ವಿಚಾರವಾಗಿ ಮಾತನಾಡಿ, ಮೈಸೂರು ಜಿಲ್ಲೆಯ 6 ಕ್ಷೇತ್ರಗಳಿಗೂ ನಾನು ಭೇಟಿ ನೀಡಿದ್ದೇನೆ‌‌. ಈ ತಿಂಗಳ 31 ರ ಒಳಗೆ ಸರ್ವೆ ಮುಕ್ತಾಯ ಮಾಡಿ ವರದಿ ನೀಡುವಂತೆ ತಿಳಿಸಲಾಗಿದೆ. ಜಿ.ಪಂ ಸಿಇಒ ಅವರನ್ನು ಸಂಚಾಲಕರನ್ನಾಗಿ ಮಾಡಲಾಗಿದೆ. ಪ್ರತಿ ಹಳ್ಳಿಗಳಿಗೆ ಭೇಟಿ ನೀಡಿ ಸರ್ವೆ ವರದಿ ನೀಡುವಂತೆ ಹೇಳಲಾಗಿದೆ ಎಂದು ಹೇಳಿದರು.

ಮೇ 31 ಅಥವಾ ಜೂನ್ 1 ರಿಂದ ಪ್ರತಿ ಹೋಬಳಿ ಮಟ್ಟದ ಒಂದು ಹಳ್ಳಿಗೆ ನಾನು ಭೇಟಿ ನೀಡುತ್ತೇನೆ. ಆಗ ಸಂಪೂರ್ಣ ವರದಿ ನೀಡಿ ಎಂದು ತಿಳಿಸಿದ್ದೇನೆ. ಜೊತೆಗೆ ಆಯಾ ಕ್ಷೇತ್ರದ ಶಾಸಕರು, ಸಂಸದರು, ಎಂಎಲ್​ಸಿಗಳ ಟಾಸ್ಕ್ ಫೋರ್ಸ್ ಮಾಡಿದ್ದೇವೆ ಎಂದರು.

ಗ್ರಾಮೀಣ ಭಾಗಗಳಲ್ಲಿ ವೆಂಟಿಲೇಟರ್, ಆಕ್ಸಿಜನ್ ಎಲ್ಲ ವ್ಯವಸ್ಥೆಯನ್ನು ಮಾಡಲ್ಲಿದ್ದೇವೆ. ಕೆ.ಆರ್ ನಗರದಲ್ಲಿ ಸಾ.ರಾ ಮಹೇಶ್ ತಮ್ಮ ಸ್ವಂತ ಖರ್ಚಿನಲ್ಲಿ ಕೋವಿಡ್ ಕೇರ್ ಸೆಂಟರ್‌ಗೆ ಬಿಲ್ಡಿಂಗ್ ವ್ಯವಸ್ಥೆ ಮಾಡಿದ್ದಾರೆ. ವೈದ್ಯರಿಗೆ ಸಂಬಳ, ಆಸ್ಪತ್ರೆಯ ಖರ್ಚು ಎಲ್ಲವನ್ನೂ ಅವರೇ ಭರಿಸಿದ್ದಾರೆ ಎಂದು ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.