ETV Bharat / state

ಕಾಂಗ್ರೆಸ್ ಸೇರ್ಪಡೆ ವದಂತಿ.. ಬಿಎಸ್​​ವೈ ಆಪ್ತ ಕಾ.ಪು ಸಿದ್ದಲಿಂಗಸ್ವಾಮಿ ಸ್ಪಷ್ಟನೆ

author img

By

Published : Apr 28, 2023, 10:53 AM IST

kapu Siddalingaswamy
ಕಾ.ಪು ಸಿದ್ದಲಿಂಗಸ್ವಾಮಿ

ಯಾವುದೇ ಕಾರಣಕ್ಕೂ ಬಿಜೆಪಿ ತೊರೆಯುವುದಿಲ್ಲ. ಕಾಂಗ್ರೆಸ್ ಸೇರ್ಪಡೆ ವದಂತಿಗೆ ಬಿಎಸ್​ವೈ ಆಪ್ತ ಕಾ.ಪು.ಸಿ ಸ್ಪಷ್ಟನೆ.

ಕಾ.ಪು ಸಿದ್ದಲಿಂಗಸ್ವಾಮಿ ಸ್ಪಷ್ಟನೆ ನೀಡಿರುವುದು..

ಮೈಸೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ಆಪ್ತ ಕಾ.ಪು ಸಿದ್ದಲಿಂಗಸ್ವಾಮಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಗೊಳ್ಳಲಿದ್ದಾರೆ ಎಂಬ ವದಂತಿ ಹಬ್ಬಿತ್ತು. ಈ ವದಂತಿಗೆ ಸ್ವತಃ ಕಾ.ಪು.ಸಿ ಸ್ಪಷ್ಟನೆ ನೀಡಿದ್ದಾರೆ. "ವಿಡಿಯೋ ಮೂಲಕ ಮಾಹಿತಿ ನೀಡಿರುವ ಅವರು ಯಾವುದೇ ಕಾರಣಕ್ಕೂ ಬಿಜೆಪಿ ತೊರೆಯುವುದಿಲ್ಲ" ಎಂದು ಹೇಳಿದ್ದಾರೆ.

ಕಾ.ಪು. ಸಿದ್ದಲಿಂಗಸ್ವಾಮಿ 2013ರ ಚುನಾವಣೆಯಲ್ಲಿ ಕೆಜೆಪಿ ಅಭ್ಯರ್ಥಿಯಾಗಿ ವರುಣ ವಿಧಾನಸಭಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ವಿರುದ್ಧ ಸ್ಪರ್ಧಿಸಿದ್ದರು. ಈ ಬಾರಿ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ವರಿಷ್ಠರು ಮಾಜಿ ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಅವರನ್ನು ಕಣಕ್ಕಿಳಿಸಿದ್ದಾರೆ. ಟಿಕೆಟ್ ಘೋಷಣೆಯಾದ ತಕ್ಷಣ ವಿ. ಸೋಮಣ್ಣ ಕಾ.ಪು. ಸಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು.

"ಬಿಜೆಪಿಯಿಂದ ನನಗೆ ಯಾವುದೇ ರೀತಿಯ ಅನ್ಯಾಯವಾಗಿಲ್ಲ. ಹೀಗಿರುವಾಗ ನಾನು ಏಕೆ ಪಕ್ಷ ತೊರೆಯಬೇಕು. ಈ ಕುರಿತು ಕೆಲವರು ವದಂತಿ ಹಬ್ಬಿಸಿದ್ದು, ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು. ಯಡಿಯೂರಪ್ಪ ಅವರು ನನಗೆ ದೇವರ ಸಮಾನ. ನಾನು ಎಂದಿಗೂ ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷವಾಗಲಿ ಅಥವಾ ಬೇರಾವುದೇ ಪಕ್ಷವನ್ನು ಸೇರುವ ಪ್ರಶ್ನೆಯೇ ಇಲ್ಲ" ಎಂದು ವಿಡಿಯೋ ಮೂಲ ಸ್ಪಷ್ಟಪಡಿಸಿದ್ದಾರೆ.

ಮಾತುಕತೆ ನಡೆಸಿದ ಬಿಎಸ್​ವೈ: ಪಕ್ಷ ತೊರೆಯುವ ವದಂತಿ ಹಿನ್ನೆಲೆ ಮಾಜಿ ಸಿಎಂ ಬಿಎಸ್​ವೈ ಸಿದ್ದಲಿಂಗಸ್ವಾಮಿಗೆ ಕರೆ ಮಾಡಿ ಮಾತುಕತೆ ನಡೆಸಿದರು. ಈ ಬಾರಿ ವರುಣದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಲು ಶ್ರಮಿಸಬೇಕು ಎಂದು ಯಡಿಯೂರಪ್ಪ ಸೂಚನೆ ನೀಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಕಾ.ಪು ಸಿದ್ದಲಿಂಗಸ್ವಾಮಿ ಕ್ಷೇತ್ರದಲ್ಲಿ ಬಿಜೆಪಿಗೆ ಗೆಲ್ಲುವ ವಾತಾವರಣ ಇದ್ದು, ನಾನು ಸಹ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದೇನೆ ಎಂದು ತಿಳಿಸಿದ್ದಾರೆ.

ಕೈ ಸೇರ್ಪಡೆಗೊಂಡ ಬಿಎಸ್‌ಪಿ ಮುಖಂಡರು: ವರುಣ ವಿಧಾನಸಭಾ ಕ್ಷೇತ್ರದ ಅಳಗಂಚಿ ಗ್ರಾಮದಲ್ಲಿ ಸುಮಾರು 20ಕ್ಕೂ ಹೆಚ್ಚು ಬಿಎಸ್​​ಪಿ ಮುಖಂಡರು ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆಗೊಂಡರು. ಕಾಂಗ್ರೆಸ್ ಪಕ್ಷದ ಶಲ್ಯವನ್ನು ಹಾಕಿ ಶಾಸಕರು ಪಕ್ಷಕ್ಕೆ ಬರಮಾಡಿಕೊಂಡರು.

ಬಳಿಕ ಮಾತನಾಡಿದ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ "ಸಂವಿಧಾನದ ರಕ್ಷಣೆ ಹಾಗೂ ಉಳಿವಿಗಾಗಿ ಬಿಎಸ್‌ಪಿ ಪಕ್ಷವನ್ನು ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದ ಮುಖಂಡರಿಗೆ ತುಂಬು ಹೃದಯದ ಸ್ವಾಗತ ಕೋರುತ್ತೇನೆ. ಮುಖಂಡರ ಸೇರ್ಪಡೆಯಿಂದ ನಮ್ಮ ಪಕ್ಷಕ್ಕೆ ಮತ್ತಷ್ಟು ಬಲ ಬಂದಂತಾಗಿದೆ. ಕಾಂಗ್ರೆಸ್​​ಗೆ ನಿಮ್ಮ ಸೇವೆ ಬಹಳ ಮುಖ್ಯ. ಡಾ.ಬಿ.ಆರ್ ಅಂಬೇಡ್ಕರ್ ಅವರ ಸಂವಿಧಾನಕ್ಕೆ ಧಕ್ಕೆ ಬರುವಂತ ಸಂದರ್ಭದಲ್ಲಿ ನಾವೆಲ್ಲರೂ ಒಗ್ಗಟ್ಟಾಗಬೇಕಾಗಿದೆ. ದಲಿತ ಸಂಘರ್ಷ ಸಮಿತಿಯವರು ಸೇರಿದಂತೆ ವಿವಿಧ ಪಕ್ಷದವರು ನಮ್ಮ ಪಕ್ಷವನ್ನು ಬೆಂಬಲಿಸಿ ಸೇರ್ಪಡೆಗೊಳ್ಳುತ್ತಿರುವುದು ಮತ್ತಷ್ಟು ಶಕ್ತಿ ಬಂದಿದೆ. ತಾವೆಲ್ಲರೂ ಕಾಂಗ್ರೆಸ್ ಪಕ್ಷದ ಗೆಲುವಿಗೆ ಶ್ರಮಿಸಬೇಕು" ಎಂದು ಮನವಿ ಮಾಡಿದರು.

ಗ್ರಾಮದ ವಕೀಲ ಹಾಗೂ ಪ್ರಭಾವಿ ಮುಖಂಡ ಮಹದೇವಸ್ವಾಮಿ ಮಾತನಾಡಿ "ಬಿಜೆಪಿ ಪಕ್ಷದಿಂದ ಡಾ. ಬಿ.ಆರ್ ಅಂಬೇಡ್ಕರ್ ಅವರ ಸಂವಿಧಾನಕ್ಕೆ ದೊಡ್ಡ ಪೆಟ್ಟು ಬೀಳುತ್ತಿದೆ. ಸಂವಿಧಾನ ರಕ್ಷಣೆಗಾಗಿ, ಉಳಿವಿಗಾಗಿ ನಾವು ಬಿಎಸ್​ಪಿ ಪಕ್ಷವನ್ನು ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡು ಪಕ್ಷದ ಅಭ್ಯರ್ಥಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗೆಲುವಿಗೆ ಶ್ರಮಿಸುತ್ತೇವೆ" ಎಂದು ತಿಳಿಸಿದರು.

ಇದನ್ನೂ ಓದಿ: ಜೆಡಿಎಸ್, ಬಿಜೆಪಿ ಗುಡ್​ ಬೈ ಹೇಳಿ ಕಾಂಗ್ರೆಸ್ ಸೇರಿದ ಚಿಕ್ಕಬಳ್ಳಾಪುರ ನಾಯಕರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.