ETV Bharat / state

ಸುಮಲತಾ ಮಹಾನ್ ನಾಯಕಿ, ಅವರ ಬಗ್ಗೆ ಮಾತನಾಡುವಷ್ಟು ನಾನು ಬೆಳೆದಿಲ್ಲ: ಹೆಚ್‌ಡಿಕೆ

author img

By

Published : Apr 30, 2023, 6:38 PM IST

Former CM HD Kumaraswamy
ಮಾಜಿ ಸಿಎಂ ಹೆಚ್​.ಡಿ ಕುಮಾರಸ್ವಾಮಿ

ಆದಿಚುಂಚನಗಿರಿಯಲ್ಲಿ ಸಂಸದೆ ಸುಮಲತಾ ವಿರುದ್ದ ಹೆಚ್​.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

ಶ್ರೀ ಕ್ಷೇತ್ರ ಆದಿ ಚುಂಚನಗಿರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಹೆಚ್.ಡಿ.ಕುಮಾರಸ್ವಾಮಿ.

ಮಂಡ್ಯ : ಸಂಸದೆ ಸುಮಲತಾ ಅಂಬರೀಶ್ ಅವರು ಜೆಡಿಎಸ್ ವಿರುದ್ದ ವಾಗ್ದಾಳಿ ನಡೆಸಿದ ವಿಚಾರವಾಗಿ ಪ್ರತಿಕ್ರಿಯಿಸಿದ ಮಾಜಿ ಸಿಎಂ ಹೆಚ್​.ಡಿ.ಕುಮಾರಸ್ವಾಮಿ, ಅವರು ಮಹಾನ್ ನಾಯಕಿ. ದೇಶದಲ್ಲಿ ಇಂತಹ ನಾಯಕಿ ಹಿಂದೆ ಉದ್ಭವವಾಗಿರಲಿಲ್ಲ ಎಂದು ಟೀಕಿಸಿದರು. ಇಂದು ಶ್ರೀ ಕ್ಷೇತ್ರ ಆದಿ ಚುಂಚನಗಿರಿಗೆ ಭೇಟಿ ಕೊಟ್ಟು ಕಾಲಭೈರವೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿದ ಕುಮಾರಸ್ವಾಮಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದರು.

ಅವರು ದೊಡ್ಡ ಪಕ್ಷದವರು. ನಾವು ಚಿಕ್ಕ ಪಕ್ಷದವರು. ಅವರ ಬಗ್ಗೆ ನಾವು ಮಾತನಾಡಲು ಆಗಲ್ಲ. ನಾವು ಚಿಕ್ಕವರು‌ ಒಂದು ಅವಕಾಶಕ್ಕೆ ಕಾಯುತ್ತಿದ್ದೇವೆ. ಈ ಹಿಂದೆ ಸಿಎಂ ಆದಾಗ ಹಲವು ಒಳ್ಳೆಯ ಕೆಲಸ ಮಾಡಿದ್ದೇವೆ. ಲಾಟರಿ, ಸಾರಾಯಿ ಎಲ್ಲವನ್ನೂ ನಿಷೇಧ ಮಾಡಿದ್ದೇ ನಾನು. ಜನರು ಎಲ್ಲ ಮಾತಿಗೂ ತೀರ್ಪು ಕೊಡ್ತಾರೆ ಎಂದು ಹೇಳಿದರು.

ಚುಂಚನಗಿರಿ ಸಮಾಜದ ಧಾರ್ಮಿಕ ಕ್ಷೇತ್ರ. ನಮ್ಮ ಕುಟುಂಬಗಳ ರಕ್ಷಕ ಕಾಲಭೈರವನ ದರ್ಶನ ಪಡೆದಿದ್ದೇನೆ. ದೇವರ ಅನುಗ್ರಹ ಪಡೆಯಲು ಭೇಟಿ ಕೊಟ್ಟಿದ್ದೇನೆ. ಅಮಾವಾಸ್ಯೆ ದಿನ ಬರಲು ಆಗಿರಲಿಲ್ಲ. ಮತದಾನಕ್ಕಿಂತ ಮೊದಲು ಬರಬೇಕೆಂಬ ಅಪೇಕ್ಷೆ ಇತ್ತು. ನಾಳೆಯಿಂದ ರಾಜ್ಯಾದ್ಯಂತ ಪ್ರವಾಸ ಮಾಡ್ತಿದ್ದೇನೆ. ಈ ಹಿನ್ನೆಲೆಯಲ್ಲಿ ಇಂದು ದರ್ಶನ ಪಡೆದು ದೇವರ ಅನುಗ್ರಹ, ಶಕ್ತಿ ಪಡೆಯಲು ವಿಶೇಷ ಪೂಜೆ ಸಲ್ಲಿಸಿದ್ದೇನೆ. ಮುಂದಿನ 10 ದಿನಗಳ ಕಾಲದ ಹೋರಾಟಕ್ಕೆ ಪ್ರಾರ್ಥನೆ ಮಾಡಿದ್ದೇನೆ. ನಾಡಿನ ಜನತೆಗೆ ಕೊಟ್ಟಿರುವ ಭರವಸೆ ಈಡೇರಿಸಲು ಸ್ಪಷ್ಟ ಬಹುಮತ ಸರ್ಕಾರ ತರಲು ಕಾಲಭೈರವನ ಅನುಗ್ರಹ ಬೇಡಿದ್ದೇನೆ ಎಂದು ಕುಮಾರಸ್ವಾಮಿ ತಿಳಿಸಿದರು.

ರಾಷ್ಟ್ರೀಯ ಪಕ್ಷ ವಿರುದ್ದ ವಾಗ್ದಾಳಿ: ಎರಡೂ ರಾಷ್ಟ್ರೀಯ ಪಕ್ಷದ ನಾಯಕರು ರಾಜ್ಯಾದ್ಯಂತ ಮತಬೇಟೆ ಮಾಡುತ್ತಿದ್ದಾರೆ. ಬಿಜೆಪಿಯಿಂದ ಪ್ರಧಾನಿ ಮೋದಿ, ಗೃಹ ಸಚಿವರು, ರಕ್ಷಣಾ ಸಚಿವರು, ರಾಷ್ಟ್ರೀಯ ಅಧ್ಯಕ್ಷರು ಸೇರಿ ಹಲವು ಮಂತ್ರಿಗಳು ಠಿಕಾಣಿ ಹೂಡಿದ್ದಾರೆ. ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ, ಉತ್ತರ ಭಾರತದ ಹಲವು ಮುಖಂಡರು ದೊಡ್ಡ ಮಟ್ಟದಲ್ಲಿ ಚುನಾವಣಾ ಪ್ರಚಾರ ಮಾಡುತ್ತಿದ್ದಾರೆ. ಆದರೆ ಎರಡೂ ರಾಷ್ಟ್ರೀಯ ಪಕ್ಷಗಳು ರಾಜ್ಯದ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡುತ್ತಿಲ್ಲ ಎಂದು ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

ಪ್ರಧಾನಿಯನ್ನು ಕಾಂಗ್ರೆಸ್‌ನವರು 91 ಬಾರಿ ಟೀಕೆ ಮಾಡಿದ್ದಾರೆ ಎಂದು ಅವರ ಭಾಷಣದ ಮುಖ್ಯ ಸಾರಾಂಶ ಇಟ್ಟುಕೊಂಡು ಮಾತನಾಡಿದ್ದಾರೆ. ಇನ್ನೊಂದು ಕಡೆ ಎರಡು ಪಕ್ಷಗಳು ವಿಷ ಸರ್ಪ, ವಿಷಕನ್ಯೆ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ. ಇದು ಚುನಾವಣೆಯಲ್ಲಿ ಚರ್ಚೆ ಮಾಡುವ ವಸ್ತುವೇ? ಕನ್ನಡಿಗರ ಮುಂದೆ ವಿಷ ಇಟ್ಟು ಚೆಲ್ಲಾಟವಾಡುತ್ತಿದ್ದಾರೆ ಎಂದರು.

ನೀರಾವರಿ ಸೌಲಭ್ಯಗಳ ಬಗ್ಗೆ ಹಾಗು ಬೆಳಗಾವಿ ವಿವಾದಕ್ಕೆ ಕೇಂದ್ರ ಸರ್ಕಾರ ಮೌನವಾಗಿದೆ. ಜನರ ಬದುಕಿನ ಬಗ್ಗೆ ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಸ್ಪಷ್ಟ ಸಂದೇಶ ಇಲ್ಲ. ಜನರ ಸಮಸ್ಯೆಗಳಿಗೆ ಪರಿಹಾರವೂ ಇಲ್ಲ. ನಾಡಿನ ಸಮಸ್ಯೆಗಳಿಗೆ ಜೆಡಿಎಸ್ ಪರಿಹಾರ. ನಮ್ಮ ಯೋಜನೆಯನ್ನು ಜನರು ಮೆಚ್ಚಿದ್ದಾರೆ ಎಂದು ಹೇಳಿದರು.

ಚನ್ನಪಟ್ಟಣಕ್ಕೆ ಮೋದಿ ಬರುವ ವಿಚಾರ: ದೇಶದ ಪ್ರಧಾನಮಂತ್ರಿಗಳು ಚನ್ನಪಟ್ಟಣಕ್ಕೆ ಬರಬಾರದು ಎನ್ನುವುದೇನಿದೆ. ಇನ್ನೂ ಎರಡು ಮೂರು ಸಲ ಬಂದು ಹೋಗಲಿ ಸಂತೋಷವೇ. ಚನ್ನಪಟ್ಟಣ ಹೇಗಿದೆ ಎಂದು ಒಂದು ಬಾರಿ ನೋಡಿಕೊಂಡು ಹೋಗಲಿ. ಮೋದಿ ಅವರಿಗೆ ಸ್ವಾಗತ ಬಯಸುತ್ತೇನೆ ಎಂದರು.

ಇದನ್ನೂ ಓದಿ : 'ಸಿಎಂ ನೇತೃತ್ವದಲ್ಲಿ ಚುನಾವಣೆಗೆ ಹೋಗುತ್ತೇವೆ'.. ನಡ್ಡಾ ಹೇಳಿಕೆಗೆ 'ನಾನು ಚಿರಋಣಿ' ಎಂದ ಬೊಮ್ಮಾಯಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.