ETV Bharat / state

ದೇವರಾಜೇಗೌಡರಿಗೂ ನನಗೂ ಸಂಬಂಧ ಇಲ್ಲ, ಸಾಮಾನ್ಯರೂ ಇಂತಹ ಕೆಲಸ ಮಾಡಲ್ಲ: ಸಚಿವ ಚಲುವರಾಯಸ್ವಾಮಿ - Minister Chaluvarayaswamy

author img

By ETV Bharat Karnataka Team

Published : May 18, 2024, 1:42 PM IST

Updated : May 18, 2024, 4:14 PM IST

ಅತ್ಯಾಚಾರ ಆರೋಪ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ವಕೀಲ, ಬಿಜೆಪಿ ಮುಖಂಡ ದೇವರಾಜೇಗೌಡರಿಗೂ ನನಗೂ ಸಂಬಂಧ ಇಲ್ಲ ಎಂದು ಸಚಿವ ಚಲುವರಾಯಸ್ವಾಮಿ ಸ್ಪಷ್ಟನೆ ನೀಡಿದ್ದಾರೆ.

chaluvarayaswamy
ಚಲುವರಾಯಸ್ವಾಮಿ (ETV Bharat)

ಸಚಿವ ಚಲುವರಾಯಸ್ವಾಮಿ (ETV Bharat)

ಬೆಂಗಳೂರು: ''ದೇವರಾಜೇಗೌಡ ಹಾಗೂ ನನಗೂ ಯಾವುದೇ ಸಂಬಂಧ ಇಲ್ಲ. ಇಂತಹ ಕೆಲಸವನ್ನು ನಾವಲ್ಲ, ಸಾಮಾನ್ಯರಂತಹ ಸಾಮಾನ್ಯರೂ ಮಾಡಲ್ಲ'' ಎಂದು ಸಚಿವ ಚಲುವರಾಯಸ್ವಾಮಿ ಸ್ಪಷ್ಟಪಡಿಸಿದರು.

ನಗರದ ಸೆವೆನ್ ಮಿನಿಸ್ಟರ್ ಕ್ವಾಟ್ರಸ್​​ನಲ್ಲಿ ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ''ಒಬ್ಬ ಆರೋಪಿ ಏನೋ ಒಂದು ಹೇಳಿದರೆ ಅದನ್ನು ಹಾಕುವುದು ಎಷ್ಟರ ಮಟ್ಟಿಗೆ ಸರಿ. ದೇವರಾಜೇಗೌಡರಿಗೆ ಮಹತ್ವ ಕೊಡುವುದು ಎಷ್ಟು ಸರಿ? ಮಾಧ್ಯಮದವರಿಗೆ ಇಷ್ಟು ಕೋಟಿ ರೂ. ಕೊಟ್ಟಿದ್ದಾರೆ ಎಂದು ಹೇಳಿದರೆ ನೀವು ಹಾಕುತ್ತಿರಾ?. ಈ ಪ್ರಕರಣದಲ್ಲಿ ನಾವು ಮೂವರು ಮಂತ್ರಿಗಳು, ನಾನು ಭಾಗಿಯಾಗಿದ್ದೇವೆ ಎಂದು ಗೊತ್ತಾದರೆ ರಾಜ್ಯದ ಜನರ ಕ್ಷಮೆಯಾಚಿಸುತ್ತೇನೆ. ಡಿಕೆಶಿ ಆಗಲಿ, ಮೂವರು ಮಂತ್ರಿಗಳು ಕೂಡ ಇದರಲ್ಲಿ ಭಾಗಿಯಾಗಿಲ್ಲ. ಅದರ ಬಗ್ಗೆ ಯಾವುದೇ ಸಂಬಂಧ ಇಲ್ಲ. ದೇವೇಗೌಡರಿಗೆ ಗೌರವಯುತವಾಗಿ ನಡೆದುಕೊಂಡಿದ್ದೇವೆ'' ಎಂದರು.

''ಒಂದು ವರ್ಷದಿಂದ ಅದೇ ದೇವರಾಜೇಗೌಡ ರೇವಣ್ಣ ಕುಟುಂಬಕ್ಕೆ ಹಾನಿ ಮಾಡುತ್ತೇನೆ ಎಂದು ಹೇಳಿಕೆ ಕೊಟ್ಟಿದ್ದಾನೆ. ಅವನಿಗೆ ಪೆನ್ ಡ್ರೈವ್ ಬಂದ ಬಳಿಕ‌ ಕೋರ್ಟ್​​ಗೂ ಸಲ್ಲಿಕೆ ಮಾಡಿಲ್ಲ, ಪೊಲೀಸ್​​ಗೂ ಕೊಟ್ಟಿಲ್ಲ. ಅದನ್ನು ಒಂದು ವರ್ಷ ಏಕೆ ತನ್ನ ಜೊತೆ ಇಟ್ಟಿದ್ದ? ನಮಗೂ ಅವರಿಗೂ ಏನು ಸಂಬಂಧ? ಇದರಿಂದ ರಾಜಕೀಯ ಲಾಭ ಪಡೆಯುವುದಾದರೆ ಇದನ್ನು 15 ದಿನಗಳ ಮುಂಚೆನೇ ಮಾಡಬಹುದಿತ್ತು. ಲಾಭ ಪಡೆಯುವುದಿದ್ದರೆ ಈ ರೀತಿ ಮಾಡಲು ಸಾಧ್ಯವೇ?'' ಎಂದು ಪ್ರಶ್ನಿಸಿದರು.

''ಜೆಡಿಎಸ್ ನಾಯಕರು ನ್ಯಾಯ ಸಿಗಬೇಕು ಅಂದಿದ್ದಾರೆ. ಹೀಗಿರುವಾಗ ಇದನ್ನು ಡೈವರ್ಟ್ ಮಾಡುವ ಅಗತ್ಯವಿಲ್ಲ. ಸಂತ್ರಸ್ತರಿಗೆ ನ್ಯಾಯ ಸಿಗುವ ಕೆಲಸ ಆಗಬೇಕು. ಇದು ಗೌರವಸ್ಥ ಕುಟುಂಬದ ವಿಚಾರ. ಪ್ರಜ್ವಲ್ ರೇವಣ್ಣ ದೇಶಕ್ಕೆ ಮರಳಿ ಶರಣಾಗು ಎಂದು ಹೇಳಬೇಕಿತ್ತು. ಪ್ರಜ್ವಲ್ ರೇವಣ್ಣರನ್ನು ಕರೆಯಿಸಿ ಶರಣಾಗುವಂತೆ ಮಾಡಬೇಕು. ಆ ತರಹ ಮಾಡಿದರೆ ಸಂತ್ರಸ್ತೆಯರಿಗೆ ನ್ಯಾಯ ಸಿಗುತ್ತದೆ. ಇದರಲ್ಲಿ ಡಿಕೆಶಿ, ಸಚಿವರ ಪಾತ್ರ ಇದೆ ಎನ್ನುವುದು ಸರಿಯಲ್ಲ. ಈ ಬಗ್ಗೆ ಡಿಕೆಶಿ ಜೊತೆ ಸಭೆ ಮಾಡಿರುವುದಾಗಲಿ, ದೇವರಾಜೇಗೌಡ ಜೊತೆ ಮಾತುಕತೆ ಮಾಡಿರುವುದು ಯಾವುದೂ ಇಲ್ಲ. ನನಗೆ ದೇವೇರಾಜೇಗೌಡ ಬಗ್ಗೆ ಟಿವಿ ನೋಡಿದ ಮೇಲೆಯೇ ಗೊತ್ತಾಗಿದ್ದು. ಅವನಿಗೂ ಕಾಂಗ್ರೆಸ್​​ಗೂ ಸಂಬಂಧ ಇಲ್ಲ'' ಎಂದರು.

''ಶಿವರಾಮೇಗೌಡರನ್ನು ನಾವು ಒಪ್ಪಲ್ಲ. ಅವರು ಏಕೆ ದೂರವಾಣಿ ಕರೆ ಮಾಡಿದರು ಎಂಬುದು ಗೊತ್ತಿಲ್ಲ. ನನಗೆ ವೈಯ್ಯಕ್ತಿಕವಾಗಿ ಶಿವರಾಮೇಗೌಡ ಜೊತೆ ಸಂಬಂಧ ಇಲ್ಲ. ನಾನು ಅವರ ವಿರುದ್ಧ ಹೋರಾಟ ಮಾಡಿದವನು, ಜವಾವ್ದಾರಿಯುತ ಡಿಸಿಎಂ ಇದರ ಬಗ್ಗೆ ಮಾಹಿತಿ ಕೊಡಲು ಆ ಸನ್ನಿವೇಶದಲ್ಲಿ ಮಾತನಾಡಿರಬಹುದು. ಅದರ ಬಗ್ಗೆ ಅವರು ಸ್ಪಷ್ಟನೆ ನೀಡಬೇಕು. ಅವರು ಪಕ್ಷದ ಅಧ್ಯಕ್ಷರಾಗಿ ಯಾವ ಸನ್ನಿವೇಶದಲ್ಲಿ ಮಾತನಾಡಿದರು ಎಂದು ಗೊತ್ತಿಲ್ಲ. ಅಗತ್ಯ ಬಿದ್ದರೆ ಆ ಸಂಬಂಧವೂ ಎಸ್​​ಐಟಿ ತನಿಖೆ ಮಾಡುತ್ತದೆ'' ಎಂದು ಚಲುವರಾಯಸ್ವಾಮಿ ತಿಳಿಸಿದರು.

''ದೇವರಾಜೇಗೌಡ ಹೇಳಿಕೆ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕುವ ಬಗ್ಗೆ ವಕೀಲರಿಗೆ ಪರಿಶೀಲನೆ ಮಾಡಲು ತಿಳಿಸಿದ್ದೇನೆ. ಜೆಡಿಎಸ್​ನವರು ಯಾವತ್ತೂ ಡಿಕೆಶಿ ಬಳಿಕ ಸಿಎಂ, ಚಲುವರಾಯಸ್ವಾಮಿ ಬಗ್ಗೆಯೇ ಮಾತನಾಡುತ್ತಾರೆ. ಬೆಳಗ್ಗೆ ಎದ್ದು ಪೆನ್ ಡ್ರೈವ್ ಬಗ್ಗೆ ಚರ್ಚೆ ಮಾಡುವುದು ಸರಿಯಲ್ಲ. ಪ್ರಜ್ವಲ್ ರೇವಣ್ಣರನ್ನು ಕರೆಸುವುದಕ್ಕಾದರೆ ಕರೆಯಿಸಲಿ. ದೇವೇಗೌಡರ ಬಗ್ಗೆ ನಮಗೆ ಅಪಾರ ಗೌರವ ಇದೆ. ಅವರ ಮನೆಯಲ್ಲೇ ಅರೆಸ್ಟ್ ಆಗುತ್ತಾರೆ, ದೇವೇಗೌಡರಿಗೆ ಎಷ್ಟು ನೋವಾಗಿರಬಹುದು. ರೇವಣ್ಣ ಜೈಲಿನಿಂದ ಹೊರಬಂದ ಬಳಿಕವೂ ದೇವೇಗೌಡರ ಮನೆಗೇ ಹೋಗುತ್ತಾರೆ'' ಎಂದು ತಿಳಿಸಿದರು.

ದೇವೇಗೌಡರಿಗೆ ನೋವಾದ್ರೆ ನಮಗೂ ನೋವಾಗುತ್ತೆ: ''ದೇವೇಗೌಡರು ಈ ದೇಶದ ಆಸ್ತಿ. ಅವರಿಗೆ ನೋವಾದರೆ ನಮಗೂ ನೋವಾಗುತ್ತೆ. ಕುಮಾರಸ್ವಾಮಿಗೆ ಸಹಾಯ ಮಾಡಿದವರಿಗೆ ಥ್ಯಾಂಕ್ಸ್ ಹೇಳುವ ಮನಸ್ಥಿತಿ ಇಲ್ಲ. ನೀನು ಏನಕ್ಕೆ ಸಹಾಯ ಮಾಡಿದೆ. ಯಾವ ತೀಟೆಗೆ ಸಹಾಯ ಮಾಡಿದೆ ಎಂದು ಕೇಳುತ್ತಾರೆ. ಕುಮಾರಸ್ವಾಮಿ ಅಥವಾ ರೇವಣ್ಣ ಆಗಲಿ, ಪ್ರಜ್ವಲ್ ರೇವಣ್ಣರನ್ನು ವಾಪಸ್ ಕರೆಸುವ ಕೆಲಸ ಮಾಡಬೇಕಿತ್ತು. ರೇವಣ್ಣರವರದ್ದು ತಪ್ಪಿಲ್ಲ ಅಂದ್ರೆ ಅವರು ಹೊರಬರುತ್ತಾರೆ. ಯಾರೆಲ್ಲ ಪ್ರಕರಣದಲ್ಲಿ ಇದ್ದಾರೆಯೋ ಅವರ ಮೇಲೆ ಕ್ರಮ ಆಗಲೇಬೇಕು'' ಎಂದು ಚಲುವರಾಯಸ್ವಾಮಿ ಒತ್ತಾಯಿಸಿದರು.

''ಪೆನ್ ಡ್ರೈವ್ ಪ್ರಕರಣದ ಮಾಸ್ಟರ್ ಪ್ಲಾನ್ ಒಬ್ಬ ವಿಡಿಯೋ ಮಾಡಿದವರು. ಇನ್ನೊಬ್ಬ ವಿಡಿಯೋ ಹೊರ ಬಿಟ್ಟವರು. ಇನ್ನು ದೇವರಾಜೇಗೌಡ ಬೌರಿಂಗ್ ಕ್ಲಬ್ ಬಗ್ಗೆ ಹೇಳಿದ್ದಾನೆ. ಬೌರಿಂಗ್ ಕ್ಲಬ್​ಗೆ ನಾನೂ ಚುನಾವಣೆಗೆ ಮುನ್ನ ಊಟಕ್ಕೆ ಹೋಗಿದ್ದೆ. ಆ ಬಳಿಕ ಇಲ್ಲಿಯವರೆಗೆ ಅಲ್ಲಿಗೆ ಹೋಗಿಯೇ ಇಲ್ಲ. ಸುಮಾರು ಒಂದು ವರ್ಷದಿಂದ ಅಲ್ಲಿಗೆ ಹೋಗಿಲ್ಲ'' ಎಂದು ಸ್ಪಷ್ಟಪಡಿಸಿದರು.

''ಕುಮಾರಸ್ವಾಮಿ ಪದೇ ಪದೆ ಟಿವಿ ಮುಂದೆ ಹೋಗುವುದರಿಂದ ಇದು ದೊಡ್ಡದಾಗುತ್ತಿದೆ.‌ ಪೆನ್ ಡ್ರೈವ್ ಬಗ್ಗೆ ಬೀದಿ ಬದಿ ಮಾತನಾಡುವ ಅಗತ್ಯ ಇಲ್ಲ. ಡಿಕೆಶಿ ವಿರುದ್ಧ ಅವರು ಬೇರೆ ವಿಚಾರದ ಬಗ್ಗೆ ಮಾತನಾಡಲಿ. ಸರ್ಕಾರದ ಬಗ್ಗೆ ಬೇಕಾದರೆ ಟೀಕೆ ಮಾಡಲಿ. ದೇವೇಗೌಡರಿಗೆ ಡ್ಯಾಮೇಜ್ ಮಾಡುವಲ್ಲಿ ನಾನು ಕೊನೆಯ ವ್ಯಕ್ತಿ. ಡಿಕೆಶಿಯನ್ನು ಪೆನ್ ಡ್ರೈವ್ ವಿಚಾರದಲ್ಲಿ ಎಳೆದು ತರುವುದು ಸರಿಯಲ್ಲ. ಈ ವಿಚಾರದಲ್ಲಿ ಮಾತನಾಡುವುದು ಬಿಡಬೇಕು'' ಎಂದರು.

ಚುನಾವಣೆ ಬಳಿಕ ಜೆಡಿಎಸ್-ಬಿಜೆಪಿ ಶಾಸಕರು ಬರಲಿದ್ದಾರೆ: ಜೆಡಿಎಸ್​​ನಿಂದ ಬರುವವರು ಇದ್ದಾರೆ. ಅದರ ಬಗ್ಗೆ ಈಗ ಏನೂ ಹೇಳಲಾಗಲ್ಲ. ಲೋಕಸಭೆ ಚುನಾವಣೆ ಬಳಿಕ ಒಂದು ಚಿತ್ರಣ ಸಿಗಬಹುದು. ಮಾತನಾಡಿದವರು ಎಲ್ಲರೂ ಬರುತ್ತಾರೆ ಎಂದು ಹೇಳುವುದಕ್ಕಾಗಲ್ಲ. ಕೆಲವರು ಬರಬಹುದು, ಬರದೇ ಇರಬಹುದು. ಚುನಾವಣೆ ಆದ ಬಳಿಕ ರಾಜಕೀಯವಾಗಿ ಕೆಲ ಬಿಜೆಪಿ ಶಾಸಕರು, ಮಾಜಿ ಶಾಸಕರು ಬರುವ ಚರ್ಚೆಯಲ್ಲಿದ್ದಾರೆ. ಆದರೆ, ಅದರ ಬಗ್ಗೆ ಈಗ ನಿಖರವಾಗಿ ಹೇಳಲು ಆಗಲ್ಲ'' ಎಂದರು.

ಇದನ್ನೂ ಓದಿ: ಪೆನ್​ಡ್ರೈವ್​​ ತಯಾರಿಸಿರುವುದೇ ಡಿ.ಕೆ.ಶಿವಕುಮಾರ್: ನನಗೆ 100 ಕೋಟಿ ಆಫರ್​ ಕೊಟ್ಟಿದ್ದರು; ವಕೀಲ ದೇವರಾಜೇಗೌಡ ಆರೋಪ - Pen drive case

Last Updated : May 18, 2024, 4:14 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.