ETV Bharat / sports

ಟೀಂ ಇಂಡಿಯಾದ ಮುಖ್ಯ ತರಬೇತುದಾರನ ಸ್ಥಾನಕ್ಕೆ ಗಂಭೀರ್ ಸಂಪರ್ಕಿಸಿದ ಬಿಸಿಸಿಐ - New Head Coach

author img

By ETV Bharat Karnataka Team

Published : May 18, 2024, 1:32 PM IST

ಟೀಂ ಇಂಡಿಯಾದ ಮುಖ್ಯ ತರಬೇತುದಾರರಾಗಿರುವ ರಾಹುಲ್ ದ್ರಾವಿಡ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ನಿರ್ಧಾರವನ್ನು ಪ್ರಕಟಿಸಿದ್ದು, ಈ ಹುದ್ದೆಗೆ ಬಿಸಿಸಿಐ ಈಗಾಗಲೇ ಅರ್ಜಿ ಆಹ್ವಾನಿಸಿದೆ. ಅಲ್ಲದೆ, ಗೌತಮ್​ ಗಂಭೀರ್ ಅವರನ್ನು ಸಹ ಸಂಪರ್ಕಿಸಿದೆ.

BCCI approaches KKR Mentor Gautam Gambhir to become the new Indian Head coach
ಭಾರತೀಯ ತಂಡದ ನಾಯಕ ರೋಹಿತ್ ಶರ್ಮಾ ಅವರೊಂದಿಗೆ ಕೋಲ್ಕತ್ತಾ ನೈಟ್ ರೈಡರ್ಸ್ ಮೆಂಟರ್ ಗೌತಮ್ ಗಂಭೀರ್. (IANS)

ನವದೆಹಲಿ: ಟೀಂ ಇಂಡಿಯಾದ ನೂತನ ಮುಖ್ಯ ಕೋಚ್‌ ಆಗಲು ಮಾಜಿ ಕ್ರಿಕೆಟಿಗ, ಕೋಲ್ಕತ್ತಾ ನೈಟ್‌ ರೈಡರ್ಸ್‌ ತಂಡದ ಹಾಲಿ ಮೆಂಟರ್‌ ಗೌತಮ್‌ ಗಂಭೀರ್‌ ಅವರನ್ನು ಬಿಸಿಸಿಐ ಸಂಪರ್ಕಿಸಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ತಂಡದ ಮುಖ್ಯ ತರಬೇತುದಾರರನ್ನಾಗಿ ಆಯ್ಕೆ ಮಾಡಲು ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಆಸಕ್ತಿ ತೋರಿದೆ ಎಂದು ಇತ್ತೀಚಿನ ವರದಿಗಳು ಹೇಳಿವೆ.

ರಾಹುಲ್​​ ದ್ರಾವಿಡ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ನಿರ್ಧಾರವನ್ನು ಪ್ರಕಟಿಸಿದ್ದು, ಈ ಹುದ್ದೆಗೆ ಬಿಸಿಸಿಐ ಈಗಾಗಲೇ ಅರ್ಜಿ ಕೂಡ ಆಹ್ವಾನಿಸಿದೆ. ಈ ಹುದ್ದೆಗೆ ಸ್ವದೇಶಿ ಮತ್ತು ವಿದೇಶಿ ಸೇರಿದಂತೆ ಹಲವು ಆಟಗಾರರ ಹೆಸರುಗಳು ಕೇಳಿ ಬರುತ್ತಿದ್ದು, ಅದರಲ್ಲಿ ಗೌತಮ್ ಗಂಭೀರ್ ಕೂಡ ಒಬ್ಬರು. ಮಾಹಿತಿ ಪ್ರಕಾರ, ಗೌತಮ್ ಗಂಭೀರ್ ಈ ಹುದ್ದೆಗೆ ಬಿಸಿಸಿಐನ ಮೊದಲ ಆಯ್ಕೆಯಾಗಿದೆ ಎಂದು ESPNcricinfo ವರದಿ ಮಾಡಿದೆ.

ಬಿಸಿಸಿಐ ಅಧಿಕಾರಿಗಳು ಈಗಾಗಲೇ ಅವರನ್ನು ಸಂಪರ್ಕಿಸಿ ಮಾತುಕತೆ ನಡೆಸಿದ್ದು, ಐಪಿಎಲ್ ಬಳಿಕ ಕೊನೆಯ ಹಂತದ ಮಾತುಕತೆ ನಡೆಸುವ ನಿರೀಕ್ಷೆ ಇದೆ ಎಂದು ಹೇಳಲಾಗುತ್ತಿದೆ. ದ್ರಾವಿಡ್‌ ಅವರ ನಂತರ ಟೀಂ ಇಂಡಿಯಾ ಮುಖ್ಯ ಕೋಚ್‌ ಹುದ್ದೆ ಅಲಂಕರಿಸುವಂತೆ ಅವರಿಗೆ ಮನವಿ ಕೂಡ ಮಾಡಿರುವುದಾಗಿ ಉನ್ನತ ಮೂಲಗಳು ತಿಳಿಸಿವೆ. ಆದರೆ, ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಐಪಿಎಲ್ ಬಳಿಕ ಬಿಸಿಸಿಐ ಅಧಿಕಾರಿಗಳು ಈ ಬಗ್ಗೆ ಅಧಿಕೃತ ಮಾಹಿತಿ ಬಹಿರಂಗಗೊಳಿಸುವ ಸಾಧ್ಯತೆ ಇದೆ.

ಟೀಂ​ ಇಂಡಿಯಾದ ಮುಖ್ಯ ಕೋಚ್​ ಆಗಿ ಮುಂದುವರೆಯಲು ರಾಹುಲ್ ದ್ರಾವಿಡ್ ನಿರಾಸಕ್ತಿ ತೋರಿದ್ದರಿಂದ ಬಿಸಿಸಿಐ ಜಾಹೀರಾತು ಪ್ರಕಟಿಸಿದೆ. ಮುಂದಿನ ಮೂರೂವರೆ ವರ್ಷಗಳ ಅವಧಿಗೆ (ಜುಲೈ 1, 2024 ರಿಂದ ಡಿಸೆಂಬರ್​ 31, 2027) ಟೀಂ​ ಇಂಡಿಯಾದ ಮುಖ್ಯ ಕೋಚ್​ ಹುದ್ದೆಗೆ ಅರ್ಜಿ ಆಹ್ವಾನಿಸಿದೆ. ಮೇ 27 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ ಎಂದು ಬಿಸಿಸಿಐ ಕಳೆದ ಸೋಮವಾರವೇ ಮಾಧ್ಯಮ ಪ್ರಕಟಣೆ ಹೊರಡಿಸಿದೆ.

ಭಾರತ ತಂಡದ ಭವಿಷ್ಯದ ಮುಖ್ಯ ಕೋಚ್‌ ಹುದ್ದೆಗೆ ಗೌತಮ್ ಗಂಭೀರ್ ಅಲ್ಲದೇ ಸ್ವದೇಶಿ ಮತ್ತು ವಿದೇಶಿ ಸೇರಿದಂತೆ ಹಲವು ಆಟಗಾರರನ್ನು ಬಿಸಿಸಿಐ ಸಂಪರ್ಕಿಸಿದೆ. 17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಗೌತಮ್ ಗಂಭೀರ್‌ ಮಾರ್ಗದರ್ಶನದಲ್ಲಿ ಕೋಲ್ಕತ್ತಾ ನೈಟ್‌ ರೈಡರ್ಸ್‌ ತಂಡ ಅಂಕಪಟ್ಟಿಯ ಅಗ್ರಸ್ಥಾನದೊಂದಿಗೆ ಪ್ಲೇ-ಆಫ್ಸ್‌ಗೆ ಅರ್ಹತೆ ಪಡೆದಿದೆ. ಇದಕ್ಕೂ ಮುನ್ನ ಗಂಭೀರ್ ಅವರು ಲಕ್ನೋ ಸೂಪರ್‌ಜೈಂಟ್ಸ್‌ನ ಮುಂದಾಳತ್ವ ವಹಿಸಿಕೊಂಡಿದ್ದರು. ಆಗಲೂ ಲಕ್ನೋ ತಂಡ ಪ್ಲೇಆಫ್‌ಗೆ ಅರ್ಹತೆ ಪಡೆದಿತ್ತು. ಆದರೆ, ಅಲ್ಲಿಂದ ಹೊರಬಂದ ಬಳಿಕ ಲಕ್ನೋ ತಂಡ ಪ್ಲೇಆಫ್‌ ಅರ್ಹತೆ ಪಡೆಯಲು ಸಾಧ್ಯವಾಗಿಲ್ಲ.

ಗೌತಮ್ ಗಂಭೀರ್ 2007 ರಲ್ಲಿ ಟೀಂ​ ಇಂಡಿಯಾ T20 ವಿಶ್ವಕಪ್ ಗೆಲ್ಲಲು ಮತ್ತು 2011 ರಲ್ಲಿ ಏಕದಿನ ವಿಶ್ವಕಪ್ ಗೆಲ್ಲಲು ಪ್ರಮುಖ ಪಾತ್ರ ವಹಿಸಿದ್ದರು. ಇನ್ನು 2011 ರಿಂದ 2017ರ ವರೆಗೆ ಏಳು ಐಪಿಎಲ್ ಸೀಸನ್‌ಗಳಿಗೆ ಕೋಲ್ಕತ್ತಾ ನೈಟ್ ರೈಡರ್ಸ್ ನಾಯಕತ್ವ ವಹಿಸಿಸಿರುವ ಗಂಭೀರ್, ಈವರೆಗೆ ಐದು ಬಾರಿ ತಂಡವನ್ನು ಪ್ಲೇಆಫ್‌ಗೆ ತೆಗೆದುಕೊಂಡು ಹೋಗಿದ್ದಾರೆ. ಇವರ ನಾಯಕತ್ವದಲ್ಲಿ 2012 ಮತ್ತು 2014ರಲ್ಲಿ ಎರಡು ಬಾರಿ ಪ್ರಶಸ್ತಿ ಕೂಡ ಗೆದ್ದಿದೆ.

ಇದನ್ನೂ ಓದಿ: ಆರ್​ಸಿಬಿ-ಸಿಎಸ್​ಕೆ ಪಂದ್ಯಕ್ಕೆ ವರುಣ ಕಾಡಿದರೇನಂತೆ ಚಿನ್ನಸ್ವಾಮಿಯಲ್ಲಿದೆ ಸಬ್ ಏರ್ ವ್ಯವಸ್ಥೆ - Sub Air System in Chinnaswamy

ETV Bharat Logo

Copyright © 2024 Ushodaya Enterprises Pvt. Ltd., All Rights Reserved.