ETV Bharat / state

ಕೊರೊನಾ​ಗೆ ತತ್ತರಿಸಿದ ಕೋಲಾರ: ಆರೈಕೆಗೆ ಮುಂದಾದ ಕುಟುಂಬಸ್ಥರ ಬೆನ್ನೇರುತ್ತಿದೆ ಮಹಾಮಾರಿ!

author img

By

Published : Jul 8, 2020, 5:51 PM IST

coronavirus-widely-spread-in-kolar
ಕೊರೊನಾ ವೈರಸ್​ಗೆ ತತ್ತರಿಸಿದ ಕೋಲಾರ

ಕೊರೊನಾ ಮಹಾಮಾರಿ ತನ್ನ ಅಟ್ಟಹಾಸವನ್ನು ಭಯಂಕರವಾಗಿ ಮುಂದುವರೆಸಿದ್ದು, ಸೋಂಕಿಗೊಳಗಾದ ತನ್ನ ತಂದೆಯ ಆರೈಕೆಗೆ ಮುಂದಾದ ಮಗಳು ಹಾಗೂ ಮಡದಿ ಸೇರಿ ಎಲ್ಲರನ್ನು ಬಾಚಿ ತಬ್ಬಿಕೊಳ್ಳುತ್ತಿದೆ. ಇದಕ್ಕೆ ಸೂಕ್ತ ಉದಾಹರಣೆಯಂತೆ ಕೋಲಾರದಲ್ಲಿ ಸುಮಾರು 60ರಿಂದ 70 ಕುಟುಂಬಗಳು ಇದೀಗ ವೈರಸ್​ ಹಾವಳಿಗೆ ತತ್ತರಿಸಿವೆ.

ಕೋಲಾರ: ಜಿಲ್ಲೆಯಲ್ಲಿ ಮಹಾಮಾರಿ ಕೊರೊನಾ ವೈರಸ್ ತನ್ನ​​ ಅಟ್ಟಹಾಸ ಮುಂದುವರೆಸಿರುವುದರಿಂದ ವೈರಸ್​ ದಾಳಿಗೆ ತುತ್ತಾದವರು ಕುಟುಂಬ ಸಮೇತರಾಗಿ ಕೋವಿಡ್​ ಆಸ್ಪತ್ರೆಯಲ್ಲಿ ದಾಖಲಾಗಬೇಕಾದ ಪರಿಸ್ಥಿತಿ ಎದುರಾಗಿದೆ.

ಸದ್ಯ ಜಿಲ್ಲೆಯಲ್ಲಿ ಈವರೆಗೆ 194 ಜನರಲ್ಲಿ ಸೋಂಕು ಪತ್ತೆಯಾಗಿದ್ದು, 60ರಿಂದ 70 ಕುಟುಂಬಗಳು ತತ್ತರಿಸಿವೆ. ಜಿಲ್ಲೆಯ ಕೋಲಾರ ನಗರ, ಬಂಗಾರಪೇಟೆ, ಕೆಜಿಎಫ್​, ಮಾಲೂರು ಮತ್ತು ಮುಳಬಾಗಿಲು ತಾಲೂಕುಗಳಲ್ಲಿ ಬಹುತೇಕ ಸೋಂಕಿತರ ಪ್ರಕರಣ ಗಮನಿಸಿದಾಗ ಪ್ರಾಥಮಿಕ ಸಂಪರ್ಕ ಹೊಂದಿದ್ದ ಮಡದಿ, ಮಕ್ಕಳಲ್ಲಿಯೂ ಸೋಂಕು ಪತ್ತೆಯಾಗಿದೆ.

ಕೊರೊನಾ ವೈರಸ್​ಗೆ ತತ್ತರಿಸಿದ ಕೋಲಾರ

ಆರೈಕೆ ಮಾಡಿದ ಮಡದಿ-ಮಗಳಿಗೂ ಸೋಂಕು: ಈ ಮೂಲಕ ಸೋಂಕಿತರು ಕುಟುಂಬ ಸಮೇತರಾಗಿ ತಮ್ಮ ಮನೆ ಮಕ್ಕಳನ್ನು ಬಿಟ್ಟು ಕೋವಿಡ್​ ಆಸ್ಪತ್ರೆಗೆ ಹೋಗಿ ದಾಖಲಾಗುವ ಪರಿಸ್ಥಿತಿ ಎದುರಾಗಿದೆ. ಇದಕ್ಕೆ ಸೂಕ್ತ ಉದಾಹರಣೆಯಂತೆ ಜಿಲ್ಲೆಯ ಕೆಜಿಎಫ್​ನ ಗೌತಮ ನಗರದ ಅನಾರೋಗ್ಯ ಪೀಡಿತ ವ್ಯಕ್ತಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಬಂದ ಹೆಂಡತಿ ಮತ್ತು ಮಕ್ಕಳಲ್ಲೂ ಸೋಂಕು ದೃಢವಾಗಿದೆ. ದುರಂತ ಅಂದ್ರೆ ತಮ್ಮ ಕಣ್ಣೆದುರೇ ಅನಾರೋಗ್ಯದಿಂದ ಬಳಲುತ್ತಿದ್ದ ವ್ಯಕ್ತಿಗೆ ಆರೈಕೆ ಮಾಡಿದ್ದ ಹೆಂಡತಿ ಮತ್ತು ಮಗಳು ಕೂಡಾ ಇಂದು ಕೊರೊನಾ ಸೋಂಕಿತರಾಗಿ ಆಸ್ಪತ್ರೆ ಸೇರುವ ಪರಿಸ್ಥಿತಿ ಎದುರಾಗಿದೆ.

ತಂದೆಯೊಂದಿಗೆ ಮಕ್ಕಳೂ ಆಸ್ಪತ್ರೆ ಪಾಲು: ಮಾಲೂರಿನಲ್ಲಿ ಅಸ್ತಮಾ ಹಾಗೂ ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದ ತನ್ನ ತಂದೆಯನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಮರಳಿದ್ದ ಮೂವರು ಮಕ್ಕಳ ಮೇಲೂ ಕೊರೊನಾ ದಾಳಿ ಮಾಡಿದೆ. ಅನಾರೋಗ್ಯ ಪೀಡಿತ ತಂದೆಗೆ ಕೊರೊನಾ ಸೋಂಕು ತಗುಲಿದ್ದು, ಅವರ ಆರೈಕೆ ಮಾಡಿದ್ದ ಮೂವರು ಮಕ್ಕಳಲ್ಲೂ ಕೊರೊನಾ ಸೋಂಕು ತಗುಲಿ ಈಗ ತಂದೆಯೊಟ್ಟಿಗೆ ಮಕ್ಕಳೂ ಕೂಡಾ ಕೋವಿಡ್​ ಆಸ್ಪತ್ರೆ ಸೇರುವ ಪರಿಸ್ಥಿತಿ ಬಂದಿದೆ.

ತಂದೆ -ತಾಯಿಯ ಬೆನ್ನೇರಿದ ಕೊರೊನಾ: ಇದೇ ರೀತಿಯಲ್ಲಿ ಕೋಲಾರ ನಗರದ ದರ್ಗಾ ಮೊಹಲ್ಲಾದಲ್ಲಿ ಒಬ್ಬನಿಂದ ಕುಟುಂಬದ ಹತ್ತು ಜನರಲ್ಲಿ ಸೋಂಕು ಹರಡಿದೆ. ರೆಹಮತ್​ ನಗರದ ಒಬ್ಬ ವೈದ್ಯನಿಗೆ ಬಂದ ಸೋಂಕು ಕುಟುಂಬದ ನಾಲ್ವರಿಗೆ ವಕ್ಕರಿಸಿ ಆತಂಕಕ್ಕೆ ಕಾರಣವಾಗಿದೆ. ಜೊತೆಗೆ ಕೆಜಿಎಫ್​ ತಾಲೂಕು ಸುಂದರ ಪಾಳ್ಯದಲ್ಲಿ ಹೊರ ಜಿಲ್ಲೆಯಿಂದ ಬಂದಿದ್ದ ಮಗಳಿಗೆ ವಕ್ಕರಿಸಿದ್ದ ಕೊರೊನಾ ಇದೀಗ ಆಕೆಯ ತಂದೆ ಮತ್ತು ತಾಯಿಯ ಬೆನ್ನೇರಿದೆ.

ಎಚ್ಚೆತ್ತುಕೊಂಡ ಆರೋಗ್ಯ ಇಲಾಖೆ ಅಧಿಕಾರಿಗಳು: ಇನ್ನು ಈ ಮೇಲಿನ ಪ್ರಕರಣಗಳನ್ನು ನೋಡಿದಾಗ ಕೊರೊನಾ ಸೋಂಕು ಸೋಂಕಿತರಿಂದ ದಾಟಿ ಸಮುದಾಯಕ್ಕೆ ಹರಡುವತ್ತ ದಾಪುಗಾಲು ಇಡುತ್ತಿದ್ಯಾ ಅನ್ನೋ ಆತಂಕ ಒಂದು ಕಡೆ ಮೂಡುತ್ತಿದೆ. ಹಾಗಾಗಿ ಕೊರೊನಾ ಸೋಂಕು ಪತ್ತೆಯಾದ ತಕ್ಷಣ ಸೋಂಕಿತರನ್ನು ಕುಟುಂಬದಿಂದ ಪ್ರತ್ಯೇಕವಾಗಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ. ಇಷ್ಟು ಬೇಗನೆ ಆರೋಗ್ಯ ಇಲಾಖೆ ಎಚ್ಚೆತ್ತುಕೊಂಡರೂ ಕೂಡಾ ಸೋಂಕು ವೇಗವಾಗಿ ಹರಡುತ್ತಿರುವುದು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಒಂದು ರೀತಿಯ ಆತಂಕ ಮೂಡಿಸುತ್ತಿದೆ. ಇದರಿಂದ ಎಚ್ಚೆತ್ತುಕೊಂಡಿರುವ ಆರೋಗ್ಯ ಇಲಾಖೆ ಅಧಿಕಾರಿಗಳು ಪ್ರಾಥಮಿಕ ಸಂಪರ್ಕ ಹೊಂದಿದವರನ್ನು ಕೂಡಲೇ ಪ್ರತ್ಯೇಕವಾಗಿ ಕ್ವಾರಂಟೈನ್​​ ಮಾಡುವ ಮೂಲಕ ಸೋಂಕು ಹರಡುವಿಕೆ ತಡೆಯುವ ಪ್ರಯತ್ನ ಮಾಡುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.