ETV Bharat / state

ಅಂದು ಕಾರ್ಮಿಕ.. ಇಂದು ಕೆಲಸ ಕೊಡುವ ಸಾಹುಕಾರ: ಇದು ಕಲಬುರಗಿ ರೈತನ ಯಶೋಗಾಥೆ

author img

By

Published : Feb 24, 2023, 2:14 PM IST

Farmer Success Story
ಗುಲಾಬಿ ಕೃಷಿ ಮಾಡಿ ಯಶಸ್ವಿಯಾದ ರೈತ

ಆತ ಒಂದು ಕಾಲದಲ್ಲಿ ಕೂಲಿ ಕಾರ್ಮಿಕ. ಆದರೆ ಇಂದು ಹತ್ತಾರು ಕೈಗಳಿಗೆ ಕೂಲಿ ಕೊಡುವ ಸಾಹುಕಾರ. ಗುಲಾಬಿ ಕೃಷಿ ಮಾಡಿ ಯಶಸ್ವಿಯಾದ ರೈತನ ಕತೆಯಿದು.

ಗುಲಾಬಿ ಕೃಷಿ ಮಾಡಿ ಯಶಸ್ವಿಯಾದ ರೈತ

ಕಲಬುರಗಿ: ಸಾಧಿಸುವ ಚಲ, ಅಚಲವಾದ ನಿರ್ಧಾರವಿದ್ದರೆ ಏನನ್ನಾದರೂ ಸಾಧಿಸಬಹುದು ಎಂಬುವುದಕ್ಕೆ ಈ ರೈತ ಸಾಕ್ಷಿ. ದಿನವಿಡೀ ಉಗ್ರಾಣದಲ್ಲಿ ಕೂಲಿ ಕೆಲಸ ಮಾಡಿ ಸಂಜೆ ಸಂಬಳಕ್ಕೆ ಕಾಯುತ್ತಿದ್ದ ವ್ಯಕ್ತಿ ಇದೀಗ ಯಶಸ್ವಿ ರೈತನಾಗಿದ್ದಾರೆ. ಕೂಲಿ ಕೆಲಸ ಮಾಡಿ ಸಂಗ್ರಹಿಸಿಟ್ಟ ಹಣದಲ್ಲಿ ಭೂಮಿ ಖರೀದಿಸಿ ಈಗ ತಾನೇ ಹತ್ತು ಜನರ ಕೈಗೆ ಕೆಲಸ ಕೊಡುವ ಸ್ವತಂತ್ರ ಜೀವಿಯಾಗಿದ್ದಾರೆ‌‌‌. ಅಲ್ಪ ಹೊಲದಲ್ಲಯೇ ವಾಣಿಜ್ಯ ಬೆಳೆ ಗುಲಾಬಿ ಬೆಳೆದು ಅಂದಿನ ಕೂಲಿಕಾರ ಇಂದಿನ ಯಶಸ್ವಿ ರೈತನಾಗಿ ಜೀವನ ನಡೆಸುತ್ತಿದ್ದಾರೆ.

ಗುಲಾಬಿ ಹೆಣ್ಣು ಮಕ್ಕಳ ಅಚ್ಚುಮೆಚ್ಚಿನ ಹೂವು. ವರ್ಷ ಪೂರ್ತಿ ಆದಾಯ ತಂದು ಕೊಡುವ ಇಂತಹ ಗುಲಾಬಿ ಹೂವು ಬೆಳೆದು ಲಕ್ಷ ಲಕ್ಷ ಆದಾಯ ಗಳಿಸುತ್ತಿರುವ ರೈತನ ಯಶೋಗಾಥೆ ಇದು. ಇವರು ಬಸವರಾಜ ಮಾಲಿ ಪಾಟೀಲ್. ಕಲಬುರಗಿ ಜಿಲ್ಲೆ ಕಮಲಾಪುರ ತಾಲೂಕಿನ ಓಕಳಿ ಗ್ರಾಮದವರು. ಕಳೆದ ಹತ್ತು ವರ್ಷದ ಹಿಂದೆ ಬಸವರಾಜ ಉಗ್ರಾಣವೊಂದರಲ್ಲಿ ಕೂಲಿ ಕೆಲಸ ಮಾಡಿ ಬರುವ ಹಣದಲ್ಲಿ ಜೀವನ ಸಾಗಿಸುತ್ತಿದ್ದರು. ಅದರಲ್ಲಿಯೇ ಪ್ರತಿದಿನ ಅಲ್ಪ ಸ್ವಲ್ಪ ಉಳಿತಾಯ ಮಾಡ್ತಿದ್ರು. ಹನಿ ಹನಿ ಕೂಡಿದರೆ ಹಳ್ಳ, ಬಿಡಿಗಾಸು ಜಮಾ ಇಡುತ್ತಾ ಕೊನೆಗೆ 4 ಎಕರೆ ಜಮೀನು ಖರೀದಿಸುವಷ್ಟು ಹಣ ಸಂಗ್ರಹಿಸಿ ಓಕಳಿ ಗ್ರಾಮದಲ್ಲಿ ಜಮೀನು ಖರೀದಿಸಿದ್ದಾರೆ. ಹೀಗೆ ಹೊಲ ಖರೀದಿ ಮಾಡಿದವರು ಕೆಂಪು ಗುಲಾಬಿ ಬೆಳೆ ತೆಗೆದು ಆದಾಯ ಗಳಿಸುತ್ತಿದ್ಧಾರೆ.

ಹೊರ ರಾಜ್ಯಕ್ಕೆ ಮಾರಾಟ: ಬಸವರಾಜ ಅವರು ಪ್ರಮುಖ ಕೃಷಿಯಾಗಿ ಗುಲಾಬಿ ಬೆಳೆದರೆ, ಇದರ ಜೊತೆಗೆ ಒಂದು ಎಕ್ಕರೆಯಲ್ಲಿ ಇರುಳ್ಳಿ ಕೂಡಾ ಹಾಕಿದ್ದಾರೆ. ಮೂರು ಎಕರೆಯಲ್ಲಿ ಗುಲಾಬಿ ಹಾಗೂ ಜರ್ಮನಿ ಚೆಂಡು ಹೂವು, ಸುಗಂಧರಾಜದಂತಹ ಲಾಭದಾಯಕ ಐದು ತರಹೇವಾರಿ ಹೂವು ಬೆಳೆಯುತ್ತಿದ್ದಾರೆ‌. ಬೆಳೆದ ಹೂವುಗಳನ್ನ ಕಲಬುರಗಿ, ಬೀದರ್ ಸೇರಿ ಹೊರ ರಾಜ್ಯಕ್ಕೆ ಮಾರಾಟ ಮಾಡುತ್ತಿದ್ದಾರೆ. ಎಲ್ಲ ಖರ್ಚು ವೆಚ್ಚ ತೆಗೆದು ತಿಂಗಳಿಗೆ ಸರಾಸರಿ 80 ಸಾವಿರದಿಂದ 1 ಲಕ್ಷ ರೂಪಾಯಿ ಆದಾಯ ಪಡೆಯುತ್ತಿದ್ದಾರೆ‌. ಬಸವರಾಜ ಅವರ ಪತ್ನಿ ಸಿದ್ದಮ್ಮ‌ ಕೂಡಾ ಗಂಡನಿಗೆ ಹೆಗಲು ಕೊಟ್ಟು ಜೋಡಿ ಎತ್ತಿನಂತೆ ದುಡಿಯುತ್ತಿದ್ದಾರೆ‌.

ಉದ್ಯೋಗ ಖಾತ್ರಿ ಯೋಜನೆ ನೆರವು: ಸರ್ಕಾರದ ಯೋಜನೆಗಳನ್ನು ಕೂಡಾ ಬಸವರಾಜ ಪಡೆದಿದ್ದಾರೆ. ಉದ್ಯೋಗ ಖಾತ್ರಿ ಯೋಜನೆ ನೇರವು ಪಡೆದು ಹೂವು ನಾಟಿ ಮಾಡಿದ್ದಾರೆ. ರಸ ಗೊಬ್ಬರ ಗುಂಡಿ ತೋಡಿಸಿಕೊಂಡಿದ್ದಾರೆ. ಜಮೀನು ಖರೀದಿ ಆರಂಭದಲ್ಲಿ ಗೊಂದಲಕ್ಕೆ ಒಳಗಾಗದೆ ಬೆಂಗಳೂರಿಗೆ ಹೋಗಿ ಗುಲಾಬಿ ಹೂವಿನ ವಿವಿಧ ತಳಿಯ ಸಸಿಗಳನ್ನು ತಂದು ನಾಟಿ ಮಾಡಿದರು. ಹೀಗೆ ಆರಂಭವಾದ ಬಸವರಾಜ ಅವರ ಪುಷ್ಪ ಕೃಷಿ ಪಯಣ ಇಂದು ಎಂಟರಿಂದ ಹತ್ತು ಜನರಿಗೆ ಉದ್ಯೋಗ ನೀಡುವ ಮಟ್ಟಿಗೆ ಬೆಳೆದು ನಿಂತಿದೆ. ಮೈತುಂಬಾ ಕೆಲಸ ಕೈತುಂಬ ಆದಾಯವನ್ನು ದಂಪತಿ ಪಡೆಯುತ್ತಿದ್ದಾರೆ. ಅಲ್ಲದೇ ತಮ್ಮ ಮಗನನ್ನು ಬಿಇ ಸಿವಿಲ್ ಓದಿಸುತ್ತಿದ್ದಾರೆ‌.

ಒಟ್ಟಿನಲ್ಲಿ ಬಸವರಾಜ ದಂಪತಿಯ ಮುಂದಾಲೋಚನೆ ಮತ್ತು ಹಣ ಉಳಿತಾಯ ಮಾಡುವ ಗುಣವೇ ಅವರ ಕೈಹಿಡಿದಿದೆ. ತಮ್ಮ ಕೈಯಿಂದ ಏನೂ ಸಾಧ್ಯವಿಲ್ಲ ಎಂದು ಸುಮ್ಮನೆ ಕೂತಿದ್ದರೆ ಹಮಾಲಿ ಕೆಲಸ ಮಾಡುತ್ತಿದ್ದ ಬಸವರಾಜ ಬದುಕು ಬದಲಾಗುತ್ತಲೇ ಇರಲಿಲ್ಲ. ಒಂದು ಕಾಲದ ಕೂಲಿ ಇಂದು ಹತ್ತಾರು ಕೈಗಳಿಗೆ ಕೆಲಸ ಕೊಡುವಷ್ಟು ಎತ್ತರಕ್ಕೆ ಬೆಳೆದಿರುವುದು ನಿಜವಾಗಿಯೂ ಶ್ಲಾಘನೀಯ.

ಇದನ್ನೂ ಓದಿ: ಕಡಿಮೆ ಬಂಡವಾಳದಲ್ಲಿ ಸೀತಾಫಲ ಬೆಳೆದ ನಿವೃತ್ತ ಶಿಕ್ಷಕನ ಯಶೋಗಾಥೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.