ETV Bharat / state

ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ನಾನೇ ಅಂತಿಮ ತೀರ್ಮಾನ ತೆಗೆದುಕೊಳ್ಳೋದು.. ಸಿ ಎಂ ಇಬ್ರಾಹಿಂಗೆ ಹೆಚ್​ಡಿಕೆ ಬ್ರೇಕ್​

author img

By

Published : Mar 14, 2023, 1:45 PM IST

Former Chief Minister HD Kumaraswamy
ಮಾಜಿ ಮುಖ್ಯಮಂತ್ರಿ ಹೆಚ್​ ಡಿ ಕುಮಾರಸ್ವಾಮಿ

ಶ್ರೀನಿವಾಸ ಅವರನ್ನು ಜೆಡಿಎಸ್​ಗೆ ವಾಪಸ್ ಕರೆತರುವ ವಿಚಾರಕ್ಕೆ ಸಿಎಂ ಇಬ್ರಾಹಿಂ ಅವರ ಹೇಳಿಕೆಗೆ ಕುಮಾರಸ್ವಾಮಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಹಾಸನ : ಗುಬ್ಬಿ ಕ್ಷೇತ್ರದ ಶಾಸಕ ಶ್ರೀನಿವಾಸ ಅವರನ್ನು ಜೆಡಿಎಸ್​ಗೆ ವಾಪಸ್ ಕರೆತರುವ ವಿಚಾರದಲ್ಲಿ ತಪ್ಪು ಹೇಳಿಕೆ ಕೊಟ್ಟಿದ್ದಾರೆ ಎಂಬ ಕಾರಣಕ್ಕೆ ಜೆಡಿಎಸ್ ರಾಜ್ಯಾಧ್ಯಕ್ಷ ಸಿ ಎಂ ಇಬ್ರಾಹಿಂ ಅವರಿಗೆ ಮಾಜಿ ಮುಖ್ಯಮಂತ್ರಿ ಹೆಚ್​ ಡಿ ಕುಮಾರಸ್ವಾಮಿ ಕೆಲ ಸಲಹೆಗಳನ್ನು ನೀಡಿದ್ದಾರೆ. ಅಭ್ಯರ್ಥಿ ವಿಚಾರದಲ್ಲಿ ನಾನೇ ಅಂತಿಮ ತೀರ್ಮಾನ ತೆಗೆದುಕೊಳ್ಳುವುದು. ಅಕಸ್ಮಾತ್ ಸಿ ಎಂ ಇಬ್ರಾಹಿಂ ಹೇಳಿಕೆ ಕೊಟ್ಟಿದ್ದರೆ ಅದು ತಪ್ಪು. ಅದರಿಂದ ಕಾರ್ಯಕರ್ತರು ಗೊಂದಲಕ್ಕೀಡಾಗುತ್ತಾರೆ. ನನ್ನ ಗಮನಕ್ಕೆ ಬಾರದೆ ಯಾರು ಯಾವುದೇ ಹೇಳಿಕೆಯನ್ನು ಕೊಡಬಾರದು ಎಂದರು.

ಈ ಕುರಿತು ಏನಾದರೂ ಹೇಳಿಕೆ ಕೊಟ್ಟಿದ್ದರೆ ಅದು ತಪ್ಪು. ನಾನು ಅಭ್ಯರ್ಥಿ ಘೋಷಣೆ ಮಾಡುವ ಅಧಿಕಾರವನ್ನು ಯಾರಿಗೂ ಕೊಟ್ಟಿಲ್ಲ, ಕಳೆದ ಒಂದು ವರ್ಷದಿಂದ ನಾಗರಾಜ್ ಎಂಬ ಅಭ್ಯರ್ಥಿ ಕೆಲಸ ಮಾಡುತ್ತಿದ್ದಾರೆ. ಹೀಗಿರುವಾಗ ಯೋಚಿಸಿ ಹೇಳಿಕೆ ಕೊಡಬೇಕು ಇಂತಹ ವಿಚಾರದಲ್ಲಿ ಹುಡುಗಾಟ ಆಡಬಾರದು ಎಂದು ಬಹಳ ಖಾರವಾಗಿಯೇ ಹೆಚ್​ಡಿಕೆ ನುಡಿದರು.

ಕಾರ್ಯಕರ್ತರ ಪರವಾಗಿ ಈಗಾಗಲೇ ನಾಗರಾಜ್​ ಕೆಲಸ ಕೆಲಸ ಮಾಡುತ್ತಿದ್ದಾರೆ. ಗುಬ್ಬಿ ಕ್ಷೇತ್ರದಲ್ಲಿ ಜೆಡಿಎಸ್​ ಅಭ್ಯರ್ಥಿಯನ್ನು ಘೋಷಣೆ ಮಾಡಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಪಕ್ಷಕ್ಕೆ ಬಾರಪ್ಪ ಅಂತ ಯಾರು ಅರ್ಜಿ ಹಾಕಿ ಶ್ರೀನಿವಾಸ್​ ಅವರನ್ನು ಕರೆದಿಲ್ಲ. ಹಾಗಾಗಿ ಇಂಥ ಹೇಳಿಕೆ ಕೊಡುವಾಗ ಯೋಚನೆ ಮಾಡಿ ಕೊಡಬೇಕು ಎಂದು ಪಕ್ಷದ ರಾಜ್ಯಾಧ್ಯಕ್ಷರಿಗೆ ಹೆಚ್​ಡಿಕೆ ಸಲಹೆ ನೀಡಿದರು.

ಇನ್ನು, ಹಾಸನ ಅಭ್ಯರ್ಥಿ ವಿಚಾರವಾಗಿ ಮಾತನಾಡಿದ ಹೆಚ್​ ಡಿ ಕುಮಾರಸ್ವಾಮಿ ಕಾರ್ಯಕರ್ತರ ಆಶಯದಂತೆಯೇ ಅಭ್ಯರ್ಥಿ ಪ್ರಕಟವಾಗುತ್ತದೆ. ಕೆಲವೊಂದು ಅನುಕಂಪದ ಆಧಾರದ ಮೇಲೆ ಗೆಲುವು ಪಡೆಯಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ನಿನ್ನೆ ಸ್ವರೂಪದಲ್ಲಿ ವಿದ್ಯಾಭ್ಯಾಸ ಮಾಡಿರುವುದರಿಂದ ಅವರ ಸ್ನೇಹಿತರು ಟಿಕೆಟ್ ಕೊಡಿ ಅಂತ ಕೇಳಿದರು. ಎಲ್ಲವನ್ನು ದೇವೇಗೌಡರು ತೀರ್ಮಾನ ಮಾಡುತ್ತಾರೆ. ಹಾಸನದ ರಾಜಕೀಯ ನನಗಿಂತ ದೇವೇಗೌಡರಿಗೆ ಚೆನ್ನಾಗಿ ಗೊತ್ತಿದೆ. ಅಂತಿಮವಾಗಿ ದೇವೇಗೌಡರು ಹಾಸನ ಕ್ಷೇತ್ರವನ್ನು ಘೋಷಣೆ ಮಾಡುತ್ತಾರೆ ಎಂದರು.

ಜೆಡಿಎಸ್​ಗೆ ಆಹ್ವಾನಿಸಿದ ಸಿಎಂ ಇಬ್ರಾಹಿಂ : ಗುಬ್ಬಿ ಕ್ಷೇತ್ರದ ಉಚ್ಛಾಟಿತ ಜೆಡಿಎಸ್ ಶಾಸಕ ಎಸ್.ಆರ್. ಶ್ರೀನಿವಾಸ್ ಅವರನ್ನು ಮರಳಿ ಒಳಗೆ ಬಾ ಯಾತ್ರಿಕನೇ ಎಂದು ಹೇಳುವ ಮೂಲಕ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಪಕ್ಷಕ್ಕೆ ಆಹ್ವಾನಿಸಿದ್ದರು. ತುಮಕೂರಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ್ದ ಅವರು, ನಮಗೆ ಯಾರ ಬಗ್ಗೆಯೂ ದ್ವೇಷವಿಲ್ಲ. ಒಂದು ಹಂತದಲ್ಲಿ ಅವರು ನಮ್ಮೊಂದಿಗೆ ಚೆನ್ನಾಗಿದ್ದರೂ ಕೆಟ್ಟ ಕಾಲದಿಂದಾಗಿ ದೂರವಾದರು. ಒಂದು ರೀತಿ ಚೌತಿಯಲ್ಲಿ ಚಂದ್ರನನ್ನು ನೋಡಿದ್ದಕ್ಕೆ ಕೃಷ್ಣನಿಗೂ ಕೆಟ್ಟ ಕಾಲ ಬಂದಿತ್ತು ಎಂದರು.

ವಾಪಸ್ ಜೆಡಿಎಸ್ ಪಕ್ಷಕ್ಕೆ ಬರಲು ದೇವರು ಎಸ್.ಆರ್. ಶ್ರೀನಿವಾಸ್‌ಗೆ ಒಳ್ಳೆಯ ಬುದ್ಧಿ ಕೊಡಲಿ. ಅವರ ಪತ್ನಿ, ಮಗ ಕೂಡ ಒಳ್ಳೆಯವರಿದ್ದಾರೆ. ಮೊದಲು ಮನೆಯಲ್ಲಿ ಕುಳಿತು ಚಿಂತನೆ ಮಾಡಲಿ ಎಂದು ಹೇಳಿದ್ದರು. ಇದೀಗ ಪಕ್ಷದ ರಾಜ್ಯಾಧ್ಯಕ್ಷರ ಹೇಳಿಕೆಗೆ ಹೆಚ್​ ಡಿ ಕುಮಾರಸ್ವಾಮಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇನ್ಮುಂದೆ ಹೇಳಿಕೆ ನೀಡುವಾಗ ಯೋಚಿಸಿ ನೀಡುವಂತೆ ಪಕ್ಷದ ಎಲ್ಲಾ ಮುಖಂಡರಿಗೆ ಸೂಚಿಸಿದ್ದಾರೆ.

ಇದನ್ನೂ ಓದಿ :'ಕೈ ಮುಗಿದು ಕೇಳಿಕೊಳ್ಳುವೆ, ಮರಳಿ ಬಾ ಯಾತ್ರಿಕ': ಗುಬ್ಬಿ ಶಾಸಕ ಶ್ರೀನಿವಾಸ್‌ಗೆ ಸಿಎಂ ಇಬ್ರಾಹಿಂ ಆಹ್ವಾನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.